ಗಾಂಧೀನಗರದಲ್ಲಿ ಸಿನಿಮಾಗಳಿಗೆ ಬರವಿಲ್ಲ; ಪ್ರೇಕ್ಷಕರು ಬರಲ್ಲ!

Sandalwood situation today
Highlights

ಮುಹೂರ್ತ, ಟ್ರೈಲರ್, ಆಡಿಯೋ ರಿಲೀಸ್, ರಿಲೀಸ್, ಉಡೀಸ್- ಈ ಐದು ಹಂತಗಳಲ್ಲಿ ಸಿಕ್ಕಿಬಿದ್ದಿರುವ ಕನ್ನಡ ಸಿನಿಮಾ ಎತ್ತ ಸಾಗುತ್ತಿದೆ? ಎಷ್ಟು ದಿನ ಸಾಗುತ್ತದೆ? ಗಾಂಧಿನಗರದಲ್ಲಿ ಸಿನಿಮಾಗಳಿಗೆ ಬರವಿಲ್ಲ. ಸಾಕಷ್ಟು ಸಿನಿಮಾಗಳು ಬರುತ್ತಿವೆ. ಆದರೆ ಪ್ರೇಕ್ಷಕರು ಮಾತ್ರ ಚಿತ್ರ ಮಂದಿರಗಳಿಗೆ ಬರುತ್ತಿಲ್ಲ. ಯಾಕೆ? ಕಾರಣಗಳನ್ನು ನೋಡೋಣ. 

ನಮ್ಮ ಸಿನಿಮಾ ಡಿಫರೆಂಟ್ ಆಗಿದೆ. ಬೇರೆಯೇ ಒಂದು ಕತೆಯಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದೇವೆ. ಹಳ್ಳಿಯ ಸೊಗಡಿನ ಸಿನಿಮಾ ನಮ್ಮದು. ಹಳ್ಳಿಯಿಂದ ಬಂದ ಹುಡುಗನನ್ನು ಪಟ್ಟಣದಲ್ಲಿ ಹೇಗೆ ಶೋಷಣೆ ಮಾಡಲಾಗುತ್ತದೆ ಎಂದು ನಮ್ಮ ಕತೆ ಹೇಳುತ್ತದೆ.

ನಾವು ಪಾಸಿಟಿವ್ ಮತ್ತು ನೆಗೆಟಿವ್ ಶಕ್ತಿಗಳ ಸುತ್ತ ಸಿನಿಮಾ ಮಾಡುತ್ತಿದ್ದೇವೆ. ಪ್ರೇಮಕತೆಯನ್ನು ಥ್ರಿಲ್ಲರ್ ನೆಲೆಯಲ್ಲಿ ಹೇಳುತ್ತಿದ್ದೇವೆ. ಇಂಥ ಸಾಲುಗಳನ್ನು ನೀವು ಸಿನಿಮಾ ವರದಿಯಲ್ಲಿ ಓದುತ್ತಲೇ ಇರುತ್ತೀರಿ. ಇವತ್ತು ಬಿಡುಗಡೆಯಾಗುತ್ತಿರುವ ಚಿತ್ರಗಳ ನಿರ್ಮಾಪಕರೂ ನಿರ್ದೇಶಕರೂ ಇದನ್ನೇ ಹೇಳಿರುವುದನ್ನು ನೀವು ನೋಡಿರಬಹುದು. ಕಳೆದ ಮೂರು ನಾಲ್ಕು ತಿಂಗಳುಗಳಿಂದ ಇಂಥ ಮಾತುಗಳನ್ನು ಚಿತ್ರರಸಿಕರು ಕೇಳುತ್ತಲೇ ಬಂದಿದ್ದಾರೆ.

ಸಿನಿಮಾ ಎನ್ನುವುದು ಹೇಗಾಗಿದೆ ಅನ್ನುವುದನ್ನು ಅವರು ಮಾಡುವ ಕಾರ್ಯ ಕ್ರಮಗಳ ಮೂಲಕವೇ ನೋಡಬಹುದು. ಸಾಮಾನ್ಯವಾಗಿ ಸಿನಿಮಾ ಮುಹೂರ್ತ, ನಂತರ ಟ್ರೈಲರ್ ರಿಲೀಸ್, ಅದಾದ ನಂತರ ಆಡಿಯೋ ರಿಲೀಸ್, ಆಮೇಲೆ ಸಿನಿಮಾ ರಿಲೀಸ್- ಅಲ್ಲಿಗೆ ಒಂದು ಸಿನಿಮಾದ ಕತೆ ಮುಗಿಯುತ್ತದೆ. ಏನಾಯಿತು ಅಂತ ಕಣ್ಣುಬಿಡುವ ಮೊದಲೇ ಮತ್ತೊಂದು ಶುಕ್ರವಾರ ಬಂದಿರುತ್ತದೆ. ಮತ್ತೆ ಏಳೋ ಎಂಟೋ ಸಿನಿಮಾಗಳು ಬಂದು ಚಿತ್ರಮಂದಿರವನ್ನು ಅಪ್ಪಳಿಸುತ್ತವೆ. ಕಳೆದ ವಾರದ ಸಿನಿಮಾಗಳು ಏನಾದವು ಅನ್ನುವುದನ್ನು ಯಾರೂ ಕೇಳುವುದೇ ಇಲ್ಲ.

ರಾಜಾಜಿನಗರದಲ್ಲಿ ಆಟೋ ಓಡಿಸುವ 57 ವರ್ಷದ ನಾಗರಾಜ್ ಹೇಳುತ್ತಾರೆ:
ನಾನು ಚಿತ್ರಮಂದಿರಕ್ಕೆ ಹೋಗಿ ನೋಡಿದ ಕೊನೆಯ ಚಿತ್ರ ಸಂಗೊಳ್ಳಿ ರಾಯಣ್ಣ. ಅದಕ್ಕೂ  ಮುಂಚೆ ನೋಡಿದ್ದು ಮುತ್ತಿನ ಹಾರ. ನಾನು ಯೌವನದಲ್ಲಿದ್ದಾಗ ಶುಕ್ರವಾರ ಆಟೋವನ್ನು ಥೇಟರ್ ಪಕ್ಕ ಪಾರ್ಕ್ ಮಾಡಿ ಮಾರ್ನಿಂಗ್ ಶೋ ನೋಡುತ್ತಿದ್ದೆ. ಅದನ್ನು ಯಾವತ್ತೂ ತಪ್ಪಿಸುತ್ತಲೇ ಇರಲಿಲ್ಲ. ಭಾನುವಾರ ಅದೇ ಸಿನಿಮಾವನ್ನು ನನ್ನ ಮನೆಯವರ ಜೊತೆಗೆ ನೋಡುತ್ತಿದ್ದೆ. ಈಗ ನಾನಂತೂ ಚಿತ್ರಮಂದಿರಗಳ ಕಡೆ ತಲೆ ಹಾಕೋದಿಲ್ಲ. ಮನೆಯವರೂ ಕಳೆದ ಹತ್ತು ವರ್ಷಗಳಿಂದ ಸಿನಿಮಾಕ್ಕೆ ಕರಕೊಂಡು ಹೋಗ್ರೀ ಅಂತ ಯಾವತ್ತೂ ಕೇಳೇ ಇಲ್ಲ.

ಇದು ಅವರೊಬ್ಬರ ಕತೆಯಷ್ಟೇ ಅಲ್ಲ. ಆಟೋ ಡ್ರೈವರುಗಳು ವಾರಕ್ಕೊಂದು ಸಿನಿಮಾ ನೋಡುವುದು ಬಿಟ್ಟಿದ್ದಾರೆ. ಒಂದು ಕಾಲದಲ್ಲಿ ಸಿನಿಮಾಕ್ಕೆ ಮೊದಲ ವಾರದ ಪ್ರೇಕ್ಷಕರಾಗಿದ್ದವರು ಹೋಟೆಲ್ ಹುಡುಗರು ಮತ್ತು ಆಟೋ ಡ್ರೈವರುಗಳು. ಆಟೋ ಓಡಿಸುವವರು ಸಿನಿಮಾ ಮಂದಿರದ ಕಡೆ ತಲೆ ಹಾಕುವುದಿಲ್ಲ. ಅವರ ಮನರಂಜನೆಗೆ ಈಗ ಮೊಬೈಲ್ ಫೋನು ಬಂದಿದೆ. ಇನ್ನು ಹೋಟೆಲ್ ಹುಡುಗರ ಪೈಕಿ ನೂರಕ್ಕೆ ಎಪ್ಪತ್ತರಷ್ಟು ಮಂದಿ ಪರಭಾಷೆಯವರು. ಅವರು ಕನ್ನಡ ಸಿನಿಮಾ ನೋಡುವುದಿಲ್ಲ. ಅವರಿಗೆ ಬೇಕಾದ ಹಿಂದಿ ಸಿನಿಮಾಗಳನ್ನು ಅವರು ಮೊಬೈಲಿನಲ್ಲೇ ನೋಡುತ್ತಾರೆ.

ಯಾಕೆಂದರೆ ಕರ್ನಾಟಕದಲ್ಲಿ  ಪರಭಾಷಾ ಸಿನಿಮಾಗಳ ಪ್ರವೇಶ ದರ ಜಾಸ್ತಿ. ಅಲ್ಲಿಗೆ ಸಿನಿಮಾ ನೋಡುವ ಸಂಭ್ರಮವೇ ಮಾಯವಾಗಿಬಿಟ್ಟಿದೆ. ಕಾಲೇಜು ಹುಡುಗರು ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡುವ ಕಾಲವೂ ಇತ್ತು. ಈಗ ಕಾಲೇಜು ವಿದ್ಯಾರ್ಥಿಗಳು ಚಿತ್ರಮಂದಿರಕ್ಕೆ ಬರುವುದಿಲ್ಲ, ಮಾಲ್‌ಗೆ ಹೋಗುತ್ತಾರೆ. ವಾಟ್ಸಪ್ ಗ್ರೂಪುಗಳಲ್ಲಿ ಕಾಲ ಕಳೆಯುತ್ತಾರೆ. ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸುಗಳಲ್ಲಿ ಸಿನಿಮಾ ನೋಡುತ್ತಾರೆ. ನೆಟ್‌ಫ್ಲಿಕ್ಸ್ ಆಗಸ್ಟ್ ೨೪ರಂದು ಬಿಡುಗಡೆ ಮಾಡಲಿರುವ ಮೂರು ಎಪಿಸೋಡುಗಳ ಘೋಲ್ ಹಾರರ್ ಸೀರೀಸ್‌ನಲ್ಲಿ ರಾಧಿಕಾ ಆಪ್ಟೆ, ಮಾನವ್ ಕೌಲ್ ಮುಂತಾದ ಸ್ಟಾರ್ ನಟರುಗಳಿದ್ದಾರೆ.

ಅನುರಾಗ್ ಕಶ್ಯಪ್ ಇದರ ನಿರ್ಮಾಪಕರಲ್ಲೊಬ್ಬರು. ಸೇಕ್ರೆಡ್ ಗೇಮ್ಸ್ ಬೆನ್ನಿಗೇ ಮತ್ತೊಂದು ಒರಿಜಿನಲ್ ಇಂಡಿಯನ್ ಸರಣಿಯನ್ನು ನೆಟ್‌ಫ್ಲಿಕ್ಸ್ ಆರಂಭಿಸಿದೆ. ಸೈಫ್ ಆಲಿ ಖಾನ್, ನವಾಜುದ್ದೀನ್ ಸಿದ್ದಿಕಿ, ರಾಧಿಕಾ ಆಪ್ಟೆ ಇರುವ ಸೇಕ್ರೆಡ್ ಗೇಮ್ಸ್ ಈಗಾಗಲೇ ಎಲ್ಲರನ್ನೂ ತುದಿಗಾಲಲ್ಲಿ ನಿಲ್ಲಿಸಿದೆ. ಈ ಬೆಳವಣಿಗೆಗಳಿಗೆ ಕನ್ನಡ ಚಿತ್ರರಂಗ ಹೇಗೆ ಪ್ರತಿಕ್ರಿಯಿಸಬೇಕು? ಹೇಗೆ ಇವನ್ನೆಲ್ಲ ಎದುರಿಸಬೇಕು ಅನ್ನುವ ಕುರಿತು ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಮತ್ತು ವಾಣಿಜ್ಯ ಮಂಡಳಿ ಒಟ್ಟಾಗಿ ಕುಳಿತು ಚರ್ಚಿಸಬೇಕಾದ ಅಗತ್ಯವಿದೆ. 

ವಾರವಾರ ಮೂರು ಕಾಸು ಸಂಪಾದನೆಯಿಲ್ಲದೇ ಮುಳುಗಿಹೋಗುತ್ತಿರುವ ಸಿನಿಮಾಗಳು, ಒಂದೇ ಒಂದು ರುಪಾಯಿ ಬಂಡವಾಳವನ್ನೂ ವಾಪಸ್  ಪಡೆಯಲಾಗದ ಮಾರುಕಟ್ಟೆ, ಹೇಗೆ ಪ್ರಚಾರ ಮಾಡಬೇಕು ಅನ್ನುವುದು  ಗೊತ್ತಿಲ್ಲದ ಸ್ಥಿತಿ, ಕೈ ತುಂಬ ದುಡಿಯುತ್ತಿರುವ ಟೀವಿ ಸೀರಿಯಲ್ಲುಗಳು ಮತ್ತು ರಿಯಾಲಿಟಿ ಷೋಗಳು- ಇದು ಇಂದಿನ ಸ್ಥಿತಿಗತಿ. ಇತ್ತೀಚಿಗೆ ಹಿರಿಯ ನಿರ್ದೇಶಕರೊಬ್ಬರು ತಾವೊಂದು ಸಿನಿಮಾ ಮಾಡುತ್ತಿರುವುದಾಗಿ ಘೋಷಿಸಿದರು. ಅದಕ್ಕಾಗಿ ಪಾತ್ರಧಾರಿಗಳು ಬೇಕು ಅಂತ ಕರೆಕೊಟ್ಟರು.

ಅನೇಕರು ಗುಟ್ಟಾಗಿ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು: ನನ್ನ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತೇನೆ. ಆದರೆ ನಾನು ಸಂಭಾವನೆ ಕೊಡುವುದಿಲ್ಲ. ನೀವೇ ನಿಮ್ಮ ಖರ್ಚಿನಲ್ಲಿ ಬಂದು ನಟಿಸಿ
ಹೋಗಬೇಕು. ಪ್ರಶಸ್ತಿ ವಿಜೇತ ನಟರ ಕತೆಯೂ ಇಷ್ಟೇ, ನಟಿಯರ ಕತೆಯೂ ಇದೇ. ಖಾಲಿ ಹೊಡೆಯುತ್ತಿರುವ ಪ್ರೀಮಿಯರ್ ಷೋಗಳು, ಜನವೇ ಬರದ ಸೆಲೆಬ್ರಿಟಿ ಷೋಗಳು, ಮೊದಲ ದಿನ ಆರೋ ಏಳೋ ಪತ್ರಕರ್ತರು ಮಾತ್ರ ಸಿನಿಮಾ ನೋಡುತ್ತಿರುವುದು- ಇವೆಲ್ಲ ಒಂದು ಉದ್ಯಮ ಆರ್ಥಿಕವಾಗಿ ಕುಸಿಯುತ್ತಿರುವುದನ್ನು ಸೂಚಿಸುತ್ತದೆ.

ವರ್ಷಕ್ಕೆ 200 ಸಿನಿಮಾ ತೆರೆಕಂಡಿತು ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ಚಿತ್ರರಂಗ ವರ್ಷಕ್ಕೆ 200 ಕೋಟಿ ಕಳೆದುಕೊಳ್ಳುತ್ತಿದೆ ಅನ್ನುವುದನ್ನು ಮಾತ್ರ ಮುಚ್ಚಿಟ್ಟು, ನಾಳೆ ಎಲ್ಲವೂ ಸರಿಹೋಗುತ್ತದೆ ಎಂಬ ನಂಬಿಕೆಯಲ್ಲಿ ಇದ್ದಂತಿದೆ. ಆದರೆ ನಾಳೆ ಯಾವುದೂ ಸರಿಹೋಗುವುದಿಲ್ಲ ಅನ್ನುವುದನ್ನು ಕುಸಿಯುತ್ತಿರುವ ಸಿನಿಮಾ ಪತ್ರಿಕೆಗಳು, ಟಿಆರ್‌ಪಿ ಬಾರದ ಸಿನಿಮಾ ಪ್ರೋಗ್ರಾಮುಗಳು, ಖಾಲಿಯಾಗುತ್ತಿರುವ ಚಿತ್ರಮಂದಿರಗಳು, ಅಯ್ಯೋ ಯಾರ್ ನೋಡ್ತಾರ‌್ರೀ ಸಿನಿಮಾ ಅಂತ ಆ ಸಿನಿಮಾ ಚೆನ್ನಾಗಿದೆಯೋ ಇಲ್ಲವೋ ಅಂತ ಕೂಡ ಗಮನಿಸದೇ ಹೇಳುವ ಪ್ರೇಕ್ಷಕರು ಸೂಚ್ಯವಾಗಿ ಹೇಳುತ್ತಿದ್ದಾರೆ.

ಮಳೆ ಚೆನ್ನಾಗಿದ್ದರೆ ಬೆಳೆ ಚೆನ್ನಾಗಿರುತ್ತದೆ ಅನ್ನುವುದು ಶುದ್ಧ ಮೂಢನಂಬಿಕೆ ಅನ್ನುವುದನ್ನು ಚಿತ್ರರಂಗ ಅರ್ಥಮಾಡಿಕೊಳ್ಳದೇ ಹೋದರೆ ಕಷ್ಟ ಕಾದಿದೆ. ನಷ್ಟ ಆಗಲೇ ಆಗುತ್ತಿದೆ. 

-ಜೋಗಿ 

loader