ಖ್ಯಾತ ಗಾಯಕಿ ಜೋಗಿ ಸುನೀತಾ, ತಮ್ಮ ಗೆಳತಿ ಹಾಗೂ ನಿರೂಪಕಿ ದಿವಂಗತ ಅಪರ್ಣಾ ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ಅಪರ್ಣಾ ಅವರ ಆಸೆಯನ್ನು ತಾನು ಮುಂದುವರಿಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ, ಇಂದಿನ ಸಂಗೀತ ಕ್ಷೇತ್ರದ ಸವಾಲುಗಳ ಬಗ್ಗೆಯೂ ಸುನೀತಾ ಮಾತನಾಡಿದ್ದಾರೆ.

ಬೆಂಗಳೂರು: ಗೆಳತಿ ಮತ್ತು ನಿರೂಪಕಿಯಾಗಿದ್ದ ದಿ.ಅಪರ್ಣಾ ಬಗ್ಗೆ ಖ್ಯಾತ ಗಾಯಕಿ ಜೋಗಿ ಸುನೀತಾ ಮಾತನಾಡಿದ್ದಾರೆ. ಯುಟ್ಯೂಬ್ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಜೋಗಿ ಸುನೀತಾ ಮಾತನಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಅನ್ನೋ ಹುಚ್ಚು ಅಪರ್ಣಾಗೆ ಇತ್ತು. ಈ ವಿಷಯವಾಗಿ ನಾನು ಮತ್ತು ಅಪರ್ಣಾ ತುಂಬಾ ಬಾರಿ ಮಾತಾಡಿದ್ದೇವೆ. ನನಗೆ ಶಾರದೆ ಬೇರೆ ಅಲ್ಲ, ಅಪರ್ಣಾ ಬೇರೆ ಅಲ್ಲ. ನಾನು ಅಪರ್ಣಾಳನ್ನು ಪೂಜಿಸಿಲ್ಲ, ಆಕೆಯನ್ನು ಆರಾಧಿಸಿದ್ದೇನೆ ಎಂದು ಸುನೀತಾ ಹೇಳಿದ್ದಾರೆ.

ಅಪರ್ಣಾ ಜೊತೆ ಚರ್ಚೆ

ಅಪರ್ಣಾ ಮೇಲೆ ಅಷ್ಟು ಪ್ರೀತಿ ಮತ್ತು ವಿಶ್ವಾಸ ನನಗಿತ್ತು. ಇವತ್ತಿನ ಕ್ಷಣಕ್ಕೂ ಅಪರ್ಣಾ ಇಲ್ಲ ಎಂದು ನಾನು ಅಂದ್ಕೊಂಡಿಲ್ಲ. ಅಪರ್ಣಾ ನನ್ನ ಹೃದಯದಲ್ಲಿದ್ದಾಳೆ. ಅಪರ್ಣಾ ಎಲ್ಲೇ ಕಾರ್ಯಕ್ರಮಕ್ಕೂ ಹೋದರೂ ಹೊಸಬರಿಗೆ ಅವಕಾಶ ನೀಡಬೇಕು ಅಂತಾ ಹೇಳುತ್ತಿದ್ದಳು. ಹಾಡೋರನ್ನೇ ಪದೇ ಪದೇ ಹಾಡಿಸಬಾರದು ಅಂತಿದ್ದಳು. ಹೀಗೆ ಅವಕಾಶ ನೀಡಿದ್ರೆ ಮಾತ್ರ ಅವರು ನಮ್ಮೆಲ್ಲರನ್ನು ನೆನಪು ಮಾಡಿಕೊಳ್ಳುತ್ತಾರೆ ಅಂತಿದ್ದಳು ಎಂದು ಗೆಳತಿ ಬಗ್ಗೆ ಸುನೀತಾ ಮಾತನಾಡಿದರು.

ಹೊಸ ಪ್ರತಿಭೆಗಳಿಗೆ ಅವಕಾಶ ಸಿಗಬೇಕು

ನಾನು ಕನ್ನಡ ಕೋಗಿಲೆ ರಿಯಾಲಿಟಿ ಶೋನ ಮಕ್ಕಳನ್ನು ಕಾರ್ಯಕ್ರಮಗಳಿಗೆ ಕರೆದುಕೊಂಡು ಬರುತ್ತಿದ್ದೆ. ನಾದಿರಾ ಬಾನು, ಪಾರ್ಥ ಚಿರಂತ, ಗಣೇಶ್ ಕಾರಂತ್ ಹೀಗೆ ಹಲವರನ್ನು ನನ್ನ ಕಾರ್ಯಕ್ರಮಗಳಿಗೆ ಕರೆದುಕೊಂಡು ಹೋಗಿದ್ದೇನೆ. ಸಿಂಗಾಪುರ ಕಾರ್ಯಕ್ರಮಕ್ಕೆ ಗಣೇಶ್ ಕಾರಂತ್ ಅವರನ್ನು ಕರ್ಕೊಂಡು ಹೋಗಿದೆ. ಯಾಕೆ ಪದೇ ಪದೇ ಅವರನ್ನೇ ಕರೆಯಬೇಕು ಅನ್ನೋದು ನನ್ನ ಅಭಿಪ್ರಾಯ.

ಹೊಸಬರಿಗೆ ಅವಕಾಶ ನೀಡಬೇಕು ಅನ್ನೋ ಹುಚ್ಚನ್ನು ಹಿಡಿಸಿದ್ದು ಅಪರ್ಣಾ. ರಾಜ್ಯದ ಪ್ರತಿಯೊಂದು ಊರಿಗೆ ಹೋಗಿ ಕನ್ನಡ ಚಿತ್ರಗೀತೆಗಳನ್ನು ಹಾಡುವ ಕಾರ್ಯಕ್ರಮ ಮಾಡಬೇಕೆಂಬ ಆಸೆ ಇದೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ನಾನು ಮಾಡುತ್ತೇನೆ. ಈ ತಂಡದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತೇನೆ ಎಂದು ಸುನೀತಾ ಹೇಳಿಕೊಂಡಿದ್ದಾರೆ.

ಇದೇ ವೇಳೆ ಮೈಸೂರು ಮೃಗಾಲಯಕ್ಕೆ ಹೋದಾಗ ಸಿಕ್ಕ ಪ್ರತಿಭೆ ದೇವು ಬಗ್ಗೆಯೂ ಸುನೀತಾ ಮಾತನಾಡಿದ್ದಾರೆ. ವೇದಿಕೆ ಮೇಲೆ ದೇವು ನನ್ನೊಂದಿಗೆ ಹಾಡಿದ್ದಾನೆ. ಇದಾದ ನಂತರ ಆತನಿಗೆ ಅವಕಾಶಗಳು ಬಂದಿವೆ. ಚಿಕ್ಕಮಗಳೂರಿನಲ್ಲಿ ಒಬ್ಬ ಹುಡುಗನಿದ್ದಾನೆ. ಆತನಿಗೂ ನಾನು ಹಾಡಿಸಬೇಕು ಮತ್ತು ಹಾಡಿಸುತ್ತೇನೆ ಎಂದರು.

ಇಂದು ಸಂಗೀತ ಕಲಾವಿದರ ಬದುಕು ಹೇಗಿದೆ?

ಗಾಯಕರು ಮತ್ತು ಮ್ಯೂಸಿಯೇಷನ್ ಬದುಕೋದು ಕಷ್ಟ. AI ಬಂದ ನಂತರ ಸಂಗೀತ ಕ್ಷೇತ್ರದಲ್ಲಿ ಹಲವು ಸವಾಲುಗಳು ಎದುರಾಗಿವೆ. ನನ್ನ ವಿದ್ಯಾರ್ಥಿಗಳಿಗೂ ಸಂಗೀತವನ್ನು ಹವ್ಯಾಸವಾಗಿ ತೆಗೆದುಕೊಳ್ಳಿಯೇ ಹೊರತು ವೃತ್ತಿಯಾಗಿ ಪರಿಗಣಿಸದಂತೆ ಸಲಹೆ ನೀಡುತ್ತೇನೆ. ಇಂದು ಜನರು ಸಹ ಯಾರು ಹಾಡುತ್ತಾರೆ ಸೇರಿದಂತೆ ಎಲ್ಲಾ ಅಂಶಗಳನ್ನು ಗಮನಿಸಿ ಕಾರ್ಯಕ್ರಮ ಬರುತ್ತಾರೆ. ಯಾರೋ ಹಾಡ್ತಾರೆ ಅಂದ್ರೆ ಬರಲ್ಲ ಎಂದು ಇಂದಿನ ಗಾಯಕರ ಬದುಕಿನ ಬಗ್ಗೆಯೂ ಸುನೀತಾ ಮಾತನಾಡಿದರು.