ಡಾ ರಾಜ್‌ಕುಮಾರ್‌ ಅವರು ದಿ ಸುಬ್ಬಯ್ಯ ನಾಯ್ಡು ಅವರ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯಲ್ಲಿ ರಾಜ ಪಾತ್ರಧಾರಿಯಾಗಿ ರಂಗಭೂಮಿಯ ಸೇವೆಯನ್ನು ಅತ್ಯಂತ ನಿಷ್ಠೆ ಹಾಗೂ ಭಕ್ತಿಯಿಂದ ಮಾಡುತ್ತಿದ್ದರು.

ಡಾ ರಾಜ್‌ಕುಮಾರ್‌ ಅವರು ದಿ ಸುಬ್ಬಯ್ಯ ನಾಯ್ಡು ಅವರ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿಯಲ್ಲಿ ರಾಜ ಪಾತ್ರಧಾರಿಯಾಗಿ ರಂಗಭೂಮಿಯ ಸೇವೆಯನ್ನು ಅತ್ಯಂತ ನಿಷ್ಠೆ ಹಾಗೂ ಭಕ್ತಿಯಿಂದ ಮಾಡುತ್ತಿದ್ದರು. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ದೂರದೃಷ್ಟಿಹಾಗೂ ಅವರ ಕಲಾಪ್ರೇಮವನ್ನು ವರ್ಣಿಸಲಸಾಧ್ಯ.

ತಮ್ಮ ಮಗ ಪ್ರೈಮರಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದವನನ್ನು ಶಾಲೆ ಬಿಡಿಸಿ ರಂಗಭೂಮಿಯ ಬಾಲ ನಟನನ್ನಾಗಿ ಮಾಡಿ ಅವನನ್ನು ಕಲಾ ಶಾರದೆಯ ಭಕ್ತನನ್ನಾಗಿ ಮಾಡಬೇಕೆಂದೇ ಕಂಕಣ ತೊಟ್ಟು ಮಗನನ್ನು ರಂಗಭೂಮಿಗೆ ಅರ್ಪಿಸಿದ ಅದ್ಭುತ ಕಲಾವಿದ. ಅವರು ಮಗನಲ್ಲಿದ್ದ ಸಂಗೀತ ಜ್ಞಾನವನ್ನು ಅಭಿನಯ ಕಲೆಯನ್ನು ಕನ್ನಡ ನಾಡಿಗೆ ಅರ್ಪಿಸಲು ತೀರ್ಮಾನ ತೆಗೆದುಕೊಂಡ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿಗೆ ಮುತ್ತುರಾಜನನ್ನು ಸೇರಿಸಿದರು.

ತಮ್ಮ ಮಕ್ಕಳಾದ ಮುತ್ತುರಾಜು, ವರದರಾಜು ಹಾಗೂ ಮಗಳು ಶಾರದಮ್ಮನನ್ನು ರಂಗಭೂಮಿಯ ಸೇವೆಗೆ ಅರ್ಪಿಸಿ ಮಕ್ಕಳು ಎರಡು ಹೊತ್ತು ಊಟ ಮಾಡಿಕೊಂಡು ಕಲಾ ಸೇವೆ ಮಾಡಲು ನಾಟಕ ಕಂಪೆನಿಯೇ ಅವರಿಗೆ ಗುರುಕುಲ ಎಂದೇ ಅವರು ತೀರ್ಮಾನಿಸಿದರು. ಅವರು ಅಂದು ದೃಢ ನಿರ್ಧಾರ ತೆಗೆದುಕೊಂಡು ಮುತ್ತುರಾಜ್‌ನನ್ನು ರಂಗ ಕಲಾವಿದನನ್ನಾಗಿ ಮಾಡದಿದ್ದರೆ ಕನ್ನಡ ಚಿತ್ರರಂಗ ಓರ್ವ ಧ್ರುವತಾರೆಯನ್ನು ಕಾಣುತ್ತಲೇ ಇರಲಿಲ್ಲ.

ಕನ್ನಡದ ತಲೆಮಾರುಗಳನ್ನು ರೂಪಿಸಿದ ರಾಜ್ ಜೀವನಯಾತ್ರೆಯಲ್ಲೇ ಅದ್ಭುತ ಸಂದೇಶಗಳಿವೆ

ಭೇಷ್‌ ಪುಟ್ಟಸ್ವಾಮಯ್ಯನವರೇ, ಮುತ್ತುರಾಜು ಶಾಲೆ ಕಾಲೇಜುಗಳ ಮೆಟ್ಟಿಲು ಹತ್ತುವುದುನ್ನು ತಪ್ಪಿಸಿ ಅವರಲ್ಲಿ ಹುದುಗಿದ್ದ ಕಲಾ ಪ್ರೇಮವನ್ನು ಕಲಾ ರಂಗಕ್ಕೆ ಮೀಸಲಿಟ್ಟು ನಟನನ್ನಾಗಿ ಮಾಡಿದ ನಿಮ್ಮನ್ನು ಎಲ್ಲರೂ ಮೆಚ್ಚುತ್ತಾರೆ. ಗುಬ್ಬಿ ಚನ್ನಬಸವೇಶ್ವರ ಥಿಯೇಟ್ರಿಕಲ್ ಕಂಪೆನಿಯಲ್ಲಿ ಮುತ್ತುರಾಜು ಕಲಿತದ್ದು ಅಪಾರವೆಂದು ಹೇಳುತ್ತಿದ್ದ ಪುಟ್ಟಸ್ವಾಮಯ್ಯನವರು ನಂತರ ಖ್ಯಾತ ರಂಗಭೂಮಿ ಕಲಾವಿದ, ಚಿತ್ರನಟ, ಸಂಗೀತಗಾರ ಹುಟ್ಟು ಕಲಾವಿದ ದಿ ಸುಬ್ಬಯ್ಯನಾಯ್ಡುರವರ ಸಾಹಿತ್ಯ ಸಾಮ್ರಾಜ್ಯ ನಾಟಕ ಕಂಪನಿಗೆ ಸೇರಿಸಿದರು.

ಆ ಕಂಪನಿಯೂ ಸಹ ಗುಬ್ಬಿ ಕಂಪನಿಯಂತೆಯೇ ಪೌರಾಣಿಕ, ಐತಿಹಾಸಿಕ ಹಾಗೂ ಭಕ್ತಿ ಪ್ರಧಾನ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಮುತ್ತುರಾಜ್‌ರವರಿಗೆ ಉತ್ತಮ ದೇಹದಾಡ್ರ್ಯ, ಉತ್ತಮ ಕಂಠವಿದ್ದದ್ದು ಸುಬ್ಬಯ್ಯ ನಾಯ್ಡುರವರ ಕಂಪನಿಯ ಶ್ರೇಷ್ಠ ರಾಜಾ ಪಾರ್ಟು ನಟನೆಂದು ಹೆಸರು ಗಳಿಸಲು ಸಹಾಯವಾಗಿತ್ತು. ಸಾಮಾನ್ಯವಾಗಿ ವೃತ್ತಿ ನಾಟಕ ಕಂಪನಿಯವರು ಯಾವುದೇ ಊರಿನಲ್ಲಿ ಕ್ಯಾಂಪ್‌ ಮಾಡಿದರೂ ಒಂದು ಬಾಡಿಗೆ ಮನೆ ಹಿಡಿದು ನಟ, ನಟಿಯರಿಗೆ ಅಲ್ಲಿ ವಸತಿ ಸೌಕರ್ಯ ಏರ್ಪಡಿಸುತ್ತಿದ್ದರು.

ನಾಟಕ ಕಂಪನಿಯವರಿಗೆ ಸಿಗುವ ಮನೆಗಳೋ ದೆವ್ವ ವಾಸವಿದ್ದ ಮನೆಗಳು, ಇಲ್ಲವೇ ಪಾಳು ಬಿದ್ದ ಮನೆಗಳು, ಇಲಿ ಹೆಗ್ಗಣಗಳೇ ವಾಸವಿರುವ ಮನೆಗಳು. ಕಾರಣ ಏನೇ ಇದ್ದರೂ ಅಂತಹ ಮನೆಗಳಲ್ಲಿ ಧೈರ್ಯದಿಂದ ವಾಸ ಮಾಡುವ ಛಾತಿ ರಂಗ ಕಲಾವಿದರುಗಳಿಗೆ ಇರುತ್ತದೆ. ಉಪವಾಸ ವನವಾಸಗಳಿಗೆ ಹೆದರದ ಕಂಪನಿ ನಟರು ದೆವ್ವ ಪಿಶಾಚಿ ಇಲಿ, ಹೆಗ್ಗಣಗಳಿಗೆ ಹೆದರುತ್ತಾರೆಯೇ? ಹಾಗೆಯೇ ಒಂದು ಊರಿನಲ್ಲಿ ಸುಬ್ಬಯ್ಯ ನಾಯ್ಡುರವರ ನಾಟಕ ಕಂಪೆನಿ ಕ್ಯಾಂಪು ಮಾಡಿತ್ತು.

ಕಂಪೆನಿ ನಟ ನಟಿಯವರು ಉಳಿದುಕೊಳ್ಳಲು ಇಲಿ ಹೆಗ್ಗಣಗಳು ವಾಸವಿದ್ದ ಮನೆಯನ್ನೇ ಕಂಪನಿಯವರು ಬಾಡಿಗೆಗೆ ತೆಗೆದುಕೊಂಡಿದ್ದರು. ನಟ ನಟಿಯರು ನಾಟಕ ಮುಗಿಸಿಕೊಂಡು 3 ಗಂಟೆ ರಾತ್ರಿಗೆ ಬಂದವರೇ ಹಾಸಿಗೆ ಮೇಲೆ ಮಲಗಿ ನಿದ್ರೆಗೆ ಮನಸೋತರೆ ಅವರ ಮೇಲೆ ಹೆಗ್ಗಣವೇನು, ಹಾವುಗಳೇ ಓಡಾಡಿದರೂ ಯಾರಿಗೂ ಎಚ್ಚರವಾಗುವುದಿಲ್ಲ. ಪಾತ್ರಗಳನ್ನು ಹೇಗೆ ಮೈಮರೆತು ಅಭಿನಯಿಸುತ್ತಾ ತನ್ಮಯರಾಗುತ್ತಾರೋ ಹಾಗೇ ನಿದ್ರೆಯಲ್ಲೂ ತಮ್ಮನ್ನೇ ತಾವು ಮರೆತು ನಿದ್ರೆಗೆ ಜಾರುತ್ತಿದ್ದರು. ಕೆಲವೊಮ್ಮೆ ಮದ್ಯಾಹ್ನದ ಸಮಯದಲ್ಲಿ ಊಟವಾದ ಮೇಲೆ ವಿಶ್ರಾಂತಿ ಪಡೆಯಲು ಮಲಗಿದಾಗ ಮಾತ್ರ ಆ ಮನೆಯಲ್ಲಿರುವ ಹಳೇ ಸದಸ್ಯರುಗಳಾದ ಹೆಗ್ಗಣ, ಇಲಿಗಳು ನಟರ ಮೈಮೇಲೆ ಆಟವಾಡಲು ಬರುತ್ತವೆ .

ಒಂದು ದಿನ ಕೆಲವು ನಟರು ಗೋಣಿ ಚೀಲವನ್ನು ಹಿಡಿದು ಇಲಿ, ಹೆಗ್ಗಣಗಳನ್ನು ಬೇಟೆಯಾಡಲು ಪ್ರಾರಂಭಿಸಿದರು. ಆಗ ಮುತ್ತುರಾಜ್‌ರವರು ಸುಮ್ಮನೆ ಮಲಗಿದ್ದರು. ಕಂಪನಿಯ ಜಾಂಬುವಂತನೆಂದೇ ಹೆಸರಾದ ಹಿರಿಯ ನಟ ರಾಣಿ ಪಾರ್ಟು ರಂಗಪ್ಪ ಎಂಬುವವರು ಕೈಲಿ ಗೋಣಿ ಚೀಲವನ್ನು ಹಿಡಿದು ಇಲಿ ಬೇಟೆಗೆ ಸಿದ್ಧರಾಗಿದ್ದರು. ಮುತ್ತುರಾಜ್‌ ಅವರೂ ನಮ್ಮ ಜತೆ ಇಲಿ ಬೇಟೆಗೆ ಬರಲಿ ಎಂದು ಅವರು ಒತ್ತಾಯಿಸುತ್ತಾ ‘ಏನಯ್ಯಾ ಮುತ್ತುರಾಜು ನಾವೆಲ್ಲ ಇಲಿ, ಹೆಗ್ಗಣಗಳನ್ನು ಬೇಟೆ ಆಡಿ ಅವುಗಳ ಕಾಟ ತಪ್ಪಿಸಿಕೊಳ್ಳಲು ಕಷ್ಟಪಡ್ತಾ ಇದ್ರೆ ನೀನೇನು ಒಬ್ಬನೇ ರಾಜಕುಮಾರನ ಹಾಗೆ ಕಾಲು ನೀಡಿಕೊಂಡು ಮಲಗಿದ್ದೀ’ ಎಂದಾಗ ರಾಜಕುಮಾರ್‌ ಅವರು, ‘ಹೌದು ನಾನು ರಾಜಕುಮಾರನೇ. ನಿಮ್ಮ ಹಾಗೆ ಇಲೀನ ಅಟ್ಟಿಸಿಕೊಂಡು ಹೋಗಿ ಹಿಡಿಯೋನಲ್ಲ ಆ ಕಷ್ಟನಿಮಗೆ ಇರಲಿ, ನಾನು ಕೂತಿದ್ದ ಕಡೆಗೇ ಇಲೀ ಹೆಗ್ಗಣಗಳನ್ನು ಕರೆಸಿಕೊಳ್ತೀನಿ’ ಎಂದರು. ಆಗ ರಂಗಪ್ಪನವರು ‘ಹೇಗೆ ಕರೆಸಿಕೊಳ್ತೀ, ನೀನೇನು ಕಿಂದರಜೋಗೀನೆ’ ಎಂದಾಗ ಮುತ್ತುರಾಜ್‌ ನಗುತ್ತಾ, ‘ಒಂದು ಇಲಿ ಬೋನ್‌ ತಂದು ಎರಡು ರೂಪಾಯಿ ಬೋಂಡ ಸಿಕ್ಕಿಸಿದ್ರೆ ಇಲಿಗಳು ತಾವಾಗೇ ಬಂದು ಬೋನಿನಲ್ಲಿ ಬೀಳುತ್ತವೆ’ ಎಂದು ಮಲಗಿಕೊಂಡರು.

Dr Rajkumar Birthday: ಅಪ್ಪಾಜಿಗೆ ಪುನೀತ್ ಮಾಡಿದ್ದ ಕೊನೆಯ ವಿಶ್ ಹೀಗಿತ್ತು

ರಂಗಪ್ಪನವರಿಗೆ ಕೋಪ ಬಂದು, ‘ಬೋಂಡಕ್ಕೆ ಎರಡು ರೂಪಾಯಿ ಕೊಡೋ ದಾನಿ ಯಾರಿದ್ದಾರೆ ಈ ಕಂಪನೀಲಿ, ಒಂದೇ ಬ್ಲೇಡಿನಲ್ಲಿ 8 ಜನಕ್ಕೆ ಗಡ್ಡ ಕೆರೆದಿದ್ದೀನಿ. ಬೋಂಡಕ್ಕೆ ಎರಡು ರೂಪಾಯಿ ಕೋಡೋನ್ನ ಕನಸಿನಲ್ಲೇ ಕಾಣಬೇಕಷ್ಟೆ’ ಅಂದಾಗ ಮುತ್ತುರಾಜು ನಕ್ಕು, ‘ಅಡಿಗೆ ಭಟ್ಟರನ್ನ ಕೇಳಿ ಎರಡು ಬೋಂಡಾ ಮಾಡಿಕೊಡ್ತಾರೆ’ ಅಂತ ತಿರುಗೇಟು ಕೊಟ್ರು. ಅದಕ್ಕೆ ರಂಗಪ್ಪನವರು ‘ನಾಟಕ ಕಂಪನಿಯಲ್ಲಿರೋ ನಟರು ಥಿಯೇಟರ್‌ ಎದುರಿಗಿರೋ ಹೋಟೆಲ…ನಲ್ಲಿ ತಿಂಡಿ ತಿಂದು ಸಾಲ ಹೇಳಿ ಬರ್ತಾರೆ. ನೀವೆಲ್ಲಾ ಅಡಿಗೆ ಮನೆ ಒಳಕ್ಕೆ ಬರೋಕೆ ನಾಚಿಕೆ ಆಗೋಲ್ವಾ ಅಂತ ಬೈತಾನೆ ಭಟ್ಟ. ರಾತ್ರಿ ರಾಜಾ ಪಾರ್ಟು ಮಾಡಿ ಮೀಸೆ ತಿರುವುತ್ತಿದ್ದ ನಮ್ಮನ್ನ ನಾಯಿ ಹೊಟ್ಟೇಲಿ ಹಾಕಿ, ಹಂದಿ ಹೊಟ್ಟೇಲಿ ತೆಗೀತಾನೆ.

ನೀನು ಸುಮ್ಮನೆ ಗೋಣಿಚೀಲ ಹಿಡೀಬಾರಪ್ಪ ಒಂದೆರಡು ಇಲೀನಾದ್ರೂ ಹಿಡಿಯೋಣ’ ಅಂದಾಗ ಮುತ್ತುರಾಜು, ‘ಹೋಟೆಲ್‌ನಲ್ಲಿ ಸಾಲಾ ಹೇಳಿ ಇಡ್ಲಿ ತಿಂತೀರಲ್ಲ, ಅಲ್ಲೇ ಬೋಂಡಾನೂ ಸಾಲ ತಂದು ಇಲಿ ಬೋನಿಗೆ ಚುಚ್ಚಿ’ ಅಂತ ನಕ್ಕು ಹೇಳಿದಾಗ ರಂಗಪ್ಪನವರು, ‘ಇಡ್ಲಿ ಸಾಲ ಸಿಕ್ಕೋದು ಬೆಳಗಿನ ಹೊತ್ತು. ಆವಾಗ ಹೋಟೆಲಿಗೆ ಹೋದ್ರೆ ಒಂದು ಅರ್ಥ ಇದೆ, ಮಧ್ಯಾಹ್ನ ಹೋಗಿ ಬೋಂಡಾ ಕೇಳಿದ್ರೆ ನೀವು ನಾಟಕ ಕಂಪನಿಯವರು ಮಧ್ಯಾಹ್ನವೂ ಸಾಲಾ ತಿನ್ನೋಕೆ ಬರ್ತೀರಾ’ ಅಂತ ಹೋಟೆಲ್ ನವನ ಕೈಲಿ ಯಾಕೆ ಎರಡೆರಡು ಸಾರಿ ಬೈಸಿಕೊಳ್ಳಬೇಕು ಅಂದ್ರು.

ಆಗ ಮುತ್ತುರಾಜು ‘ಹೋಗ್ಲಿ ಅವನು ಬೈದ್ರೂ ಸಹ ಬೆಳಿಗ್ಗೆ ನಿಮಗೆ ಟಿಫನ್‌ ಸಾಲ ಕೊಡ್ತಾನಲ್ಲ ಅದಕ್ಕೆ ಅವನಿಗೆ ನೀವು ಕೃತಜ್ಞರಾಗಿರಬೇಕು’ ಅಂದ್ರು. ‘ಅದೇನೋ ಬೆಳಿಗ್ಗೆ ನಡೆಯೋ ದೃಶ್ಯ ಈಗ ಬೋಂಡಾಂತ ಹೇಳ್ತಿದ್ದೀಯಲ್ಲ. ಇದಕ್ಕೆ ಬಂಡವಾಳ ಹಾಕೋರು ಯಾರು ಅದ್ಹೇಳು ಅಂದಾಗ ರಾಮಚಂದ್ರರಾಯರು ಅನ್ನೋ ಹಿರಿ ನಟರು ರಂಗಪ್ಪೋರ ಶೈಲಿ ಒಂದು ಕಂದ ಪದ್ಯ ಹಾಡಿಸು ಇಲಿಗಳೇ ಇವರನ್ನ ಅಟ್ಟಿಸಿಕೊಂಡು ಬರುತ್ತೆ. ಆಗ ಇವರು ಗೋಣಿಚೀಲ ಹಿಡೀಲಿ’ ಅಂತ ಮಾತು ಮುಗಿಸಿದರು.

- ಸಿ ವಿ ಶಿವಶಂಕರ್, ಬೆಂಗಳೂರು