ನಟಿ ಶ್ರುತಿ ಹರಿಹರನ್ ವಿರುದ್ಧದ ಕೆಲವರ ಸಿಟ್ಟು, ಆಕ್ರೋಶ ಇನ್ನು ಕಮ್ಮಿ ಆಗಿಲ್ಲ. ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದರೆಂಬ ಕಾರಣಕ್ಕೆ ಶ್ರುತಿ ಹರಿಹರನ್ ಈ ಹಿಂದೆ ಕೆಲವರ ಆಕ್ರೋಶಕ್ಕೆ ಗುರಿಯಾಗಿದ್ದು ಹಳೇ ಮಾತು. ಅದು ಈಗಲೂ ಬೂದಿ ಮುಚ್ಚಿದ ಕೆಂಡದಂತೆಯೇ ಉಳಿದುಕೊಂಡಿದ್ದು, ಅದರ ಬಿಸಿ ಈಗ ‘ನಾತಿಚರಾಮಿ’ ಚಿತ್ರಕ್ಕೂ ತಟ್ಟಿದೆ. ಚಿತ್ರದಲ್ಲಿ ಶ್ರುತಿ ಹರಿಹರನ್ ಇದ್ದಾರೆನ್ನುವ ಕಾರಣಕ್ಕೆ ಸೋಷಲ್ ಮೀಡಿಯಾದಲ್ಲಿ ಕೆಲವರು ಚಿತ್ರದ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ. ಯಾರದೋ ಮೇಲಿನ ಸಿಟ್ಟು ಇನ್ನಾರದೋ ಮೇಲೆ ಎನ್ನುವಂತಹ ಪರಿಸ್ಥಿತಿಗೆ ಸಿಲುಕಿದೆ ‘ನಾತಿಚರಾಮಿ’ ಚಿತ್ರತಂಡ.

ಯುವ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ ‘ನಾತಿಚರಾಮಿ’. ವಿಭಿನ್ನ ಕಥಾ ಹಂದರದ ಚಿತ್ರ ಎನ್ನುವುದರ ಜತೆಗೆ ನಟ ಸಂಚಾರಿ ವಿಜಯ್, ಶ್ರುತಿ ಹರಿಹರನ್ ಅವರಂತಹ ಪ್ರಶಸ್ತಿ ಪುರಸ್ಕೃತ ಕಲಾವಿದರ ಚಿತ್ರ ಎನ್ನುವುದಕ್ಕೂ ಇದು ತೀವ್ರ ಕುತೂಹಲ ಮೂಡಿಸಿತ್ತು. ಆ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ. ಡಿಸೆಂಬರ್ 28ರಂದು ಚಿತ್ರ ರಾಜ್ಯಾದ್ಯಂತ ತೆರೆ ಕಂಡಿದೆ. ನಿರೀಕ್ಷೆಯಂತೆ ಚಿತ್ರಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.

’ನಾತಿ ಚರಾಮಿ’ ನಿರ್ದೇಶಕನನ್ನು ಗೆಲ್ಲಿಸಿದ್ದು ಪುಸ್ತಕಗಳ ಹುಚ್ಚು!

ಚಿತ್ರ ನೋಡಿದ ಪ್ರೇಕ್ಷಕರು ಒಂದೊಳ್ಳೆಯ ಪ್ರಯತ್ನ ಎನ್ನುವ ಮಾತುಗನ್ನು ಹೇಳಿ ಬೆನ್ನುತಟ್ಟಿದ್ದಾರೆ. ಕತೆಯ ಜತೆಗೆ ಕಲಾವಿದರ ಅಭಿನಯವೂ ಪ್ರೇಕ್ಷಕರಿಗೆ ಹಿಡಿಸಿದೆ. ಆದರೆ, ಬುಕ್ ಮೈ ಷೋನ ಯೂಜರ್ಸ್ ರಿವ್ಯೆವ್‌ನಲ್ಲಿ ಕೆಲವರು ಚಿತ್ರದ ನಾಯಕಿ ಶ್ರುತಿ ಅವರನ್ನು ಗುರಿಯಾಗಿಸಿಕೊಂಡು ಚಿತ್ರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಶ್ರುತಿ ಹರಿಹರನ್ ವಿರುದ್ಧದ ಸಿಟ್ಟನ್ನು ಚಿತ್ರದ ಮೇಲೆ ತೀರಿಸಿಕೊಳ್ಳುತ್ತಿರುವುದು ಚಿತ್ರತಂಡಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಬುಕ್ ಮೈ ಷೋನ ಯೂಸರ್ಸ್ ರಿವ್ಯೆವ್‌ನಲ್ಲಿ ಸಾವಿರಾರು ಕಾಮೆಂಟ್ ದಾಖಲಾಗಿವೆ. ಅದರಲ್ಲಿ ಬಹುತೇಕರು ಶ್ರುತಿ ಅವರನ್ನೇ ಟಾರ್ಗೆಟ್ ಮಾಡಿ ಹೇಳಿಕೆ ದಾಖಲಿಸಿದ್ದಾರೆ. ಮೀಟೂ ಆರೋಪವನ್ನು ಗುರಿಯಾಗಿಸಿಕೊಂಡು ಶ್ರುತಿ ಹರಿಹರನ್ ಕನ್ನಡ ದ್ರೋಹಿ ಅಂತಲೂ ದೂರಿದ್ದಾರೆ. ಅಷ್ಟೇ ಅಲ್ಲ ಅವರಿದ್ದಾರೆನ್ನುವ ಕಾರಣಕ್ಕಾಗಿಯೇ ‘ನಾತಿಚರಾಮಿ’ ಚಿತ್ರದ ವಿರುದ್ಧವೂ ಮಾತನಾಡುತ್ತಿದ್ದಾರೆ. ಇದರ ವಿರುದ್ಧ ಚಿತ್ರತಂಡ ಧ್ವನಿ ಎತ್ತಿದೆ. ‘ಯಾರೋದೋ ಮೇಲಿನ ದ್ವೇಷಕ್ಕೆ ಇನ್ಯಾರನ್ನೋ ಟಾರ್ಗೆಟ್ ಮಾಡುವುದು ಸರಿಯಲ್ಲ. ಕಷ್ಟ ಪಟ್ಟು ಬಂಡವಾಳ ಹಾಕಿ, ಸಿನಿಮಾ ಮಾಡಿವರಿಗೆ ಅವರ ಕಷ್ಟ ಏನು ಅನ್ನೋದು ಮಾತ್ರ ಗೊತ್ತಿರುತ್ತದೆ. ಯಾರೋ ಇನ್ನಾವುದೋ ಸಂದರ್ಭದಲ್ಲಿ ಮಾತನಾಡಿದರು ಎನ್ನುವ ಕಾರಣಕ್ಕೆ ಒಂದು ಚಿತ್ರದ ವಿರುದ್ಧವೇ ಮಾತನಾಡುವುದು, ಚಿತ್ರವೇ ಸರಿಯಿಲ್ಲ, ನೋಡಬೇಡಿ ಅಂತ ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದು ಪ್ರತಿಕ್ರಿಯಿಸಿದೆ.

Film Review: ಬಯಕೆ, ಭಾವನೆಗಳಿಗೆ ಉತ್ತರ ’ನಾತಿಚರಾಮಿ’

‘ಸಿನಿಮಾವನ್ನು ಸಿನಿಮಾವಾಗಿಯೇ ನೋಡಿ, ಚಿತ್ರ ಚೆನ್ನಾಗಿದ್ದರೆ, ಮನಸ್ಸಿಗೆ ಹಿಡಿಸಿದರೆ ಚಿತ್ರಮಂದಿರಕ್ಕೆ ಬಂದು ನೋಡಲಿ. ಒಂದು ವೇಳೆ ಅದು ಕೆಟ್ಟದಾಗಿದ್ದರೆ ತಿರಸ್ಕರಿಸಲಿ. ಅದು ಪ್ರೇಕ್ಷಕರ ಆಯ್ಕೆ. ಅದು ಬಿಟ್ಟು, ಪ್ರೇಕ್ಷಕರಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದಂತಹ ಚಿತ್ರಕ್ಕೆ ಇನ್ನಾರೋ ಇದ್ದಾರೆನ್ನುವ ಕಾರಣಕ್ಕೆ ಸಿನಿಮಾ ನೋಡಬೇಡಿ, ಕೆಟ್ಟದಾಗಿರುವ ಸಿನಿಮಾ ಅಂತೆಲ್ಲ ಅಪ ಪ್ರಚಾರ ಮಾಡುವುದು, ಫಾರ್ಮಾನು ಹೊರಡಿಸುವುದು ಎಷ್ಟರ ಮಟ್ಟಿಗೆ ಸರಿ? ಬಂಡವಾಳ ಹಾಕಿ ಸಿನಿಮಾ ಮಾಡಿದ ನಿರ್ಮಾಪಕರು ಏನು ಮಾಡಬೇಕು? ಕನ್ನಡದ ಪ್ರೇಕ್ಷಕರು ಇದನ್ನು ಅರ್ಥ ಮಾಡಿಕೊಳ್ಳಬೇಕೆಂದು’ ಚಿತ್ರ ತಂಡ ಮನವಿ ಮಾಡಿದೆ.