ಬೆಂಗಳೂರು (ಆ. 03): ಇತ್ತೀಚಿಗೆ ವಿದೇಶದಿಂದ ಭಾರತಕ್ಕೆ ಬಂದಿದ್ದ ಒಬ್ಬರು, ತಾವು ಎರಡು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡರು. ಇಬ್ಬರು ನಿರ್ದೇಶಕರು ಅವರ ಅಭಿನಯವನ್ನು ಇಷ್ಟಪಟ್ಟು, ಅವರೇ ಆ ಪಾತ್ರಕ್ಕೆ ಹೊಂದಿಕೆಯಾಗುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ಕೊಡಲು ತೀರ್ಮಾನಿಸಿದ್ದರಂತೆ.

ಅವರ ಜೊತೆ ಚಿತ್ರದ ಬಗ್ಗೆ ಮಾತಾಡುತ್ತಿದ್ದಾಗ ಸಂಭಾವನೆಯ ಪ್ರಸ್ತಾಪ ಬಂತು. ಆಗ ಅವರು ಹೇಳಿದರು: ನಾನು ನಟಿಸಿರುವ ನಾಲ್ಕೂ ಸಿನಿಮಗಳ ಪೈಕಿ ಒಂದರಿಂದಲೂ ನನಗೆ ಸಂಭಾವನೆ ಬಂದಿಲ್ಲ. ನಾನೇ ಸ್ವಂತ ಖರ್ಚಲ್ಲಿ ಶೂಟಿಂಗ್ ಇದ್ದಾಗೆಲ್ಲ ನನ್ನ ದೇಶದಿಂದ ಬಂದುಹೋಗಿದ್ದೇನೆ. ಸಂಭಾವನೆಯ ಬಗ್ಗೆ ನಾನೂ ಕೇಳಿಲ್ಲ, ಅವರೂ ಮಾತಾಡಿಲ್ಲ. ಕೇಳುವುದಕ್ಕೆ ನನಗೆ ಸಂಕೋಚ, ಕೊಡುವ ಸೌಜನ್ಯ ಅವರಿಗಿಲ್ಲ ಅಂತ ಹೇಳುವ ಸ್ಥಿತಿಯಲ್ಲೂ ನಾನಿಲ್ಲ, ಯಾಕೆಂದರೆ ನಾನು ಆ ವಿಚಾರವಾಗಿ ಮಾತೇ ಆಡಿಲ್ಲವಲ್ಲ. ಇದು ಕನ್ನಡ ಚಿತ್ರರಂಗದ ಸದ್ಯದ ಪರಿಸ್ಥಿತಿ.

ನೀವೇನಾದರೂ ಹೊಸಬರಾಗಿದ್ದರೆ, ಸಿನಿಮಾಗಳಲ್ಲಿ ನಟಿಸುವುದು ನಿಮ್ಮ ಆಸೆ ಯಾಗಿದ್ದರೆ, ನಿಮಗೆ ಇಲ್ಲಿ ವಿಫುಲ ಅವಕಾಶಗಳು ಸಿಗುತ್ತವೆ. ಹೊಸ ನಮೂನೆಯ ಪಾತ್ರಗಳು ದೊರೆಯುತ್ತವೆ. ಕೈ ತುಂಬ ಕೆಲಸವೂ ಸಿಕ್ಕೀತು. ಆದರೆ ಸಂಭಾವನೆ ಮಾತ್ರ ಸೊನ್ನೆ. ವಾರ ವಾರವೂ ಕನ್ನಡದಲ್ಲಿ ಬಿಡುಗಡೆಯಾಗುವ ಐದಾರು ಸಿನಿಮಾಗಳ ಕತೆ ಹೆಚ್ಚು ಕಮ್ಮಿ ಇದೇ. ಅವೆಲ್ಲ ಸಣ್ಣ ಬಜೆಟ್ಟಿನ ಸಿನಿಮಾಗಳು. ಒಂದರ್ಥದಲ್ಲಿ ಆ ಸಿನಿಮಾಗಳಿಗೆ ಬಜೆಟ್ ಎಂಬುದೇ ಇಲ್ಲ. ನಾಯಕನಟನಿಂದ ಹಿಡಿದು ಸಂಭಾಷಣಾಕಾರನ ತನಕ ಯಾರಿಗೂ ಅಲ್ಲಿ ಗೌರವಧನ ದೊರೆಯುವುದಿಲ್ಲ, ಗೌರವ ದೊರೆತರೆ ಅದೇ ಹೆಚ್ಚು. ಈ ಬಗ್ಗೆ ಸಂಚಾರಿ

ವಿಜಯ್ ಅವರನ್ನು ಕೇಳಿದಾಗ ಅವರು ಹೇಳಿದ್ದಿಷ್ಟು:
ಈ ಬಗ್ಗೆ ಮಾತಾಡಲು ನನಗೆ ಗೊತ್ತಾಗುತ್ತಿಲ್ಲ. ನನಗೆ ಅಂಥ ತೊಂದರೆಯೇನೂ ಆಗಿಲ್ಲ. ರಂಗಪ್ಪ ಹೋಗ್‌ಬಿಟ್ನಾ ಸಿನಿಮಾದಲ್ಲಿ ಮಾತ್ರ ನನಗೆ ಮೋಸವಾಯಿತು. ಇಡೀ ಸಿನಿಮಾದಲ್ಲಿ ಕೆಲಸ ಮಾಡಿಸಿಕೊಂಡು ಕೊನೆಗೆ ಐನೂರು ರುಪಾಯಿ ಕೊಟ್ಟರು. ಹೋಗಿ ಬರುವ ಖರ್ಚೂ ನಾನೇ ಭರಿಸಿದ್ದೆ. ಮಿಕ್ಕಂತೆ ಈಗ ನಾನು ಮಾಡುತ್ತಿರುವ ಅನೇಕ ಸಿನಿಮಾಗಳ ಬಗ್ಗೆ ಅದೇ ಮಾತು ಹೇಳುವಂತಿಲ್ಲ. ಇಲ್ಲಿ ಸಂಭಾವನೆ ಕೇಳುವುದು, ಕೊಡುವುದು ಮುಂತಾದ ಸಂಪ್ರದಾಯವೇ ಇದ್ದಂತಿಲ್ಲ.

ನಾನಾಗಿಯೇ ಕೇಳುವುದಿಲ್ಲ, ಅವರಾಗಿಯೇ ಕೊಡುವುದಿಲ್ಲ. ಕೇಳದೇ ಇದ್ದ ಮೇಲೆ ಕೊಡಬೇಕು ಅಂತ ನಿರೀಕ್ಷೆ ಮಾಡುವುದೂ ತಪ್ಪಲ್ಲವೇ? ಕೆಲವೊಮ್ಮೆ ಹದಿನೈದೋ ಇಪ್ಪತ್ತೈದೋ ಸಾವಿರ ಕೊಡುತ್ತಾರೆ. ಮತ್ತೆ ಕೆಲವು ಸಿನಿಮಾಗಳು ಶುರುವಾಗಿ, ಅರ್ಧ ಶೂಟಿಂಗ್ ಮುಗಿಯುತ್ತಿದ್ದಂತೆ ಲೆಕ್ಕಾಚಾರ ತಪ್ಪಿಹೋಗಿ, ನಿಲ್ಲುವ ಸ್ಥಿತಿಗೆ ಬರುತ್ತವೆ. ಅಂಥ ಹೊತ್ತಲ್ಲಿ, ಮೊದಲು ಸಿನಿಮಾ ಮುಗಿಸಿ ಮಾರಾಯ್ರೇ ಅಂತ ನಾವೇ ಹೇಳುತ್ತೇವೆ. ಹೇಗೋ ಸಿನಿಮಾ ಮುಗಿಯುತ್ತದೆ. ಅವರಿಗೆ ನಷ್ಟವಾಗಿರುತ್ತದೆ. ಸಂಭಾವನೆಯ ಮಾತಾಡಲು ಮನಸ್ಸೇ ಬರುವುದಿಲ್ಲ. ಹೀಗಾಗಿ ಸಂಭಾವನೆ ಅನ್ನೋದು ಲಾಟರಿ ಹೊಡೆದಂತೆ. 

ಅದೃಷ್ಟ ಇದ್ದರೆ ಬರುತ್ತದೆ ಎಂಬಂಥ ಪರಿಸ್ಥಿತಿ ಇದೆ. ಅದೇ ಮೊದಲ ಸಿನಿಮಾ ಹರಿವು ಮಾಡಿದಾಗ, ಅವರೇ ಕರೆದು ಸಂಭಾವನೆ ಕೊಟ್ಟರು. ಮತ್ತೊಂದು ಸಿನಿಮಾದಲ್ಲಿ ಸಿನಿಮಾ ಮುಗಿಯುತ್ತಿದ್ದಂತೆ ಮನೆಗೇ
ಒಂದು ಮೊತ್ತ ಕಳಿಸಿಕೊಟ್ಟರು. ನಾಲ್ಕೈದು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ಪ್ರತಿಭಾವಂತೆಯೊಬ್ಬರ ಕತೆಯೂ ಇದೇ. ಸಿನಿಮಾದ ಕತೆ ಹೇಳ್ತಾರೆ. ಪಾತ್ರ ಚೆನ್ನಾಗಿರುತ್ತೆ. ಆದರೆ ಸಂಭಾವನೆ ಕೊಡುವ ಶಕ್ತಿಯಿಲ್ಲ ಅಂತ ಹೇಳುತ್ತಾರೆ. ಸಿನಿಮಾ ಗೆದ್ದರೆ ಸಂಭಾವನೆ ಕೊಡುತ್ತೇವೆ ಎಂದು ಮಾತು ಕೊಡುತ್ತಾರೆ. ನಮಗೂ ಅವಕಾಶ ಇಲ್ಲದೇ ಇರುವ ಕಾರಣ ಒಪ್ಪಿಕೊಳ್ಳುತ್ತೇವೆ.

ನಮ್ಮದೇ ಖರ್ಚಿನಲ್ಲಿ ಮೇಕಪ್, ನಮ್ಮದೇ ಕಾಸ್ಟ್ಯೂಮ್, ನಮ್ಮದೇ ಓಡಾಟದ ಖರ್ಚು- ಕೊನೆಗೆ ಸಿನಿಮಾ ರಿಲೀಸ್ ಯಾವಾಗ ಆಗುತ್ತದೆ ಅನ್ನುವುದೂ ನಮಗೆ ಗೊತ್ತಾಗುವುದಿಲ್ಲ. ನಾವೇನಾದರೂ ಬೇರೆ ಊರಿಗೆ ಹೋಗಿದ್ದರೆ, ವಾಪಸ್ ಬರುವ ಹೊತ್ತಿಗೆ ಸಿನಿಮಾ ಬಂದು ಹೋಗಿರುತ್ತದೆ. ಮತ್ತೆ ಯಾರೂ ನಮ್ಮ ಕೈಗೆ ಸಿಗುವುದಿಲ್ಲ.

ಒಂದು ಕತೆ ಕೊಡಿ, ಚಿತ್ರಕತೆ ಬರೆದುಕೊಡಿ, ಸಂಭಾಷಣೆ ಮಾಡಿಕೊಡಿ, ಹಾಡು ಬರೀರಿ ಅಂತ ಹೇಳಿಕೊಂಡು ಬರುವ ಬಹುತೇಕ ನಿರ್ಮಾಪಕ, ನಿರ್ದೇಶಕರು ಈ ಯಾವ ತಂತ್ರಜ್ಞರಿಗೂ ಸಂಭಾವನೆ ಕೊಡುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ನಿರ್ಮಾಪಕರನ್ನು ನಮಗೆ ಪರಿಚಯಿಸುವುದೂ ಇಲ್ಲ. ನಿರ್ದೇಶಕರೇ ಮುಂದಾಳತ್ವ ವಹಿಸುತ್ತಾರೆ. ಆಮೇಲೆ ಗೊತ್ತಾಗುತ್ತದೆ, ಅವರಿಗೂ ಸಂಭಾವನೆ ಸಿಕ್ಕಿಲ್ಲ ಅನ್ನುವುದು. ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದು ಎಂದರೆ ಕಿರುಚಿತ್ರಗಳಲ್ಲೋ ನಾಟಕದಲ್ಲೋ ನಟಿಸಿದಂತೆ ಆಗಿದೆ. ನಮ್ಮ ಕೈಲಿ ದುಡ್ಡಿದ್ದರೆ ಮಾತ್ರ ನಟನೆಯ ಕನಸಿರಬೇಕು ಅನ್ನೋದು ಬಹುತೇಕ ಅಭಿಪ್ರಾಯ.

ಚಿತ್ರರಂಗ ಶ್ರೀಮಂತವಾಗಿದೆ ಎಂಬುದು ಕೇವಲ ಭ್ರಮೆ ಮಾತ್ರ. ಇಲ್ಲಿ ಅವಕಾಶಗಳಿಗೆ ಕೊರತೆಯಿಲ್ಲ, ಬಿಡುಗಡೆಯಾಗುವ ಸಿನಿಮಾಗಳಿಗೆ ಲೆಕ್ಕವಿಲ್ಲ, ಕೆಲಸ ಕೊಡುವವರೂ ಸಾಕಷ್ಟು ಸಿಗುತ್ತಾರೆ. ಅಂತಿಮವಾಗಿ ಏನಾಗುತ್ತದೆ ಎಂದರೆ ಒಂದ್ನಿಮಿಷ ಪುರುಸೊತ್ತಿಲ್ಲ, ಒಂದ್ರುಪಾಯಿ ಉತ್ಪತ್ತಿ ಇಲ್ಲ! ಸಂಭಾವನೆ ಸಿಗುವುದು ಪ್ರಸಿದ್ಧ ನಟರಿಗೆ ಮಾತ್ರ. ಅದೂ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ನಟಿಸುವವರಿಗಷ್ಟೇ. ಮಿಕ್ಕಂತೆ ಪ್ರೊಫೆಷನಲ್ ಆಗಿರುವ ಕೆಲವು ಸಂಸ್ಥೆಗಳು ನಿಯತ್ತಾಗಿ ಸಂಭಾವನೆ ಕೊಡುತ್ತವೆ. ಮಿಕ್ಕಂತೆ ಒಂದು ಸಿನಿಮಾ ಮಾಡೋಣ ಅಂತ ಹೊರಡುವವರಿಗೆ ಸಂಭಾವನೆ ಅಂದರೇನು ಎನ್ನುವುದು ಗೊತ್ತಿರುವುದಿಲ್ಲ!

-ಜೋಗಿ