ಆರ್‌ ಕೇಶವಮೂರ್ತಿ

ಚಿತ್ರರಂಗಕ್ಕೆ ಬಂದು ಎಷ್ಟುವರ್ಷಗಳಾದವು?

ನಾನು ಚಿತ್ರರಂಗಕ್ಕೆ ಬಂದಿದ್ದು 2002ರಲ್ಲಿ. ಇಲ್ಲಿಗೆ 17 ವರ್ಷಗಳಾದವು. 11 ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಉಪೇಂದ್ರ ಅವರೊಂದಿಗೆ ‘ಐ ಲವ್‌ ಯೂ’ ನನ್ನ 11ನೇ ಸಿನಿಮಾ. ಇಷ್ಟುವರ್ಷ ಚಿತ್ರರಂಗದಲ್ಲಿ ಉಳಿದ್ದೇನೆ ಎಂದರೆ ನಾನು ಪುಣ್ಯ ಮಾಡಿದ್ದೇವೆ. ಎಲ್ಲರು ಉಳಿಯಕ್ಕೆ ಆಗಲ್ಲ. ಕಲಾ ಸೇವೆ ಅನ್ನೋದು ದೊಡ್ಡದು. ಬೇರೆಯವರನ್ನು ಬೆಳೆಸುವ ಜತೆಗೆ ನಾವೂ ಬೆಳೆಯುವ ಕ್ಷೇತ್ರವಿದು. ಇಲ್ಲಿ ನನಗೆ ಸರಸ್ವತಿ ಹಾಗೂ ಲಕ್ಷ್ಮೀ ಇಬ್ಬರು ಒಲಿದು ಬಂದಿದ್ದಾರೆ.

ನೀವು ಸಿನಿಮಾ ನಿರ್ದೇಶಕರಾಗುವ ಮುನ್ನ ಏನಾಗಿದ್ರಿ?

ಕೋಲಾರ ಜಿಲ್ಲೆಯ ಭಾಗದವನು. ಬಡ ರೈತಾಪಿ ಕುಟುಂಬದಿಂದ ಬಂದ ನಾನು, ಓದು ಮುಗಿಸಿಕೊಂಡು ಕೃಷಿ ಮಾಡಿಕೊಂಡಿದ್ದೆ. ಅತ್ಯುತ್ತಮ ಕೃಷಿಕ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದೇನೆ. ಆದರೆ, ಪಿಯುಸಿಯಲ್ಲಿ ನಾನು ಫೇಲ್‌ ಆದಾಗ ಇನ್ನೂ ವ್ಯವಸಾಯ ಬಿಟ್ಟರೆ ಬೇರೆ ದಾರಿ ಅಂದುಕೊಂಡಿದ್ದವನನ್ನು ಕಾರಿನಲ್ಲಿ ತುಂಬಿಕೊಂಡು ಹೋಗಿ ನಮ್ಮ ತಂದೆ ಬೆಂಗಳೂರಿನಲ್ಲಿ ಬಾರ್‌ ಸಪ್ಲಯರ್‌ ಕೆಲಸಕ್ಕೆ ಸೇರಿಸಿದರು. ಹೀಗೆ ಕೃಷಿ, ಬಾರ್‌ ಕೆಲಸ ಅಂದುಕೊಂಡಿದ್ದವನು ನಾನು.

ನಿರ್ದೇಶಿಸಿದ ಚಿತ್ರಗಳು- 11

ನಿರ್ಮಿಸಿದ ಚಿತ್ರಗಳು - 4

ಐವತ್ತು ದಿನ ಕಂಡ ಚಿತ್ರಗಳು - 11

ನೂರು ದಿನ ಕಂಡ ಚಿತ್ರಗಳು- 5

ಈ ಸಿನಿಮಾ ನಿರ್ದೇಶನದ ಹುಚ್ಚು ಬಂದಿದ್ದು ಹೇಗೆ?

ಸಿನಿಮಾ ನೋಡುವಷ್ಟುಹಣ ಇರಲಿಲ್ಲ. ಸಿನಿಮಾ ನೋಡಿದರೆ ಪೋಲಿಗಳು ಅನ್ನೋ ಊರಿನ ಹುಡುಗ. ಬಾರ್‌ ಕೆಲಸಕ್ಕೆ ಸೇರಿಸಿದ್ರು ಅಂತ ಹೇಳಿದ್ನಲ್ಲ ಆಗ ನನಗೆ ತುಂಬಾ ಕೋಪ ಬಂದು ಒಂದೇ ವಾರಕ್ಕೆ ಕೆಲಸ ಬಿಟ್ಟು ಬಂದೆ. ಕೃಷಿ ಮಾಡುತ್ತೇನೆ ಅಂದೆ. ಅಪ್ಪ ಚೆನ್ನಾಗಿ ಬಾರಿಸಿದ್ರು. ಬೇಸಾಯದ ನಂಟು ಬೆಳೆಸಿಕೊಂಡಿದ್ದ ನಾನು ಟೈಮ್‌ ಪಾಸ್‌ಗೆ ಅಂತ ಕತೆ, ಕವನಗಳನ್ನು ಬರೆಯುತ್ತಿದ್ದೆ. ಇದು ನನಗೆ ಕಾಲೇಜಿನಿಂದಲೂ ಬಂದ ಅಭ್ಯಾಸ. ಒಮ್ಮೆ ನಾನು ಶಾಲೆಯಲ್ಲಿ ಬರೆದ ಕವನವನ್ನು ನನ್ನ ಮೇಸ್ಟು್ರ ಮೆಚ್ಚಿಕೊಂಡ್ರು. ನಾನು ಬರೆದಿದ್ದನ್ನು ಬೋರ್ಡ್‌ ಮೇಲೆ ಹಾಕುತ್ತಿದ್ದರು. ಮತ್ತೊಂದು ಕಡೆ ನಾನು ಬರೆದಿದ್ದನು ನಮ್ಮೂರಿನ ಪತ್ರಕರ್ತರೊಬ್ಬರು ಕೋಲಾರ ಪತ್ರಿಕೆಯಲ್ಲಿ ಹಾಕಿಸಿದ್ರು. ಬರವಣಿಗೆ ಕಿಕ್‌ ನನಗೆ ಆಗ ಗೊತ್ತಾಯಿತು. ನಮ್ಮ ಮೇಸ್ಟು್ರ ಕೂಡ ಒಂದು ದಿನ ‘ನಿನ್ನಲ್ಲಿ ಒಳ್ಳೆಯ ಬರವಣಿಗೆ ಇದೆ ಸಿನಿಮಾ ಲ್ಯಾಂಡ್‌ಗೆ ಹೋಗು. ಒಳ್ಳೆಯ ಭವಿಷ್ಯ ಇದೆ’ ಅಂದ್ರು.

ಸಿನಿಮಾ ಕನಸು ಚಿಗುರುಗೊಂಡಾಗ ನಿಮ್ಮ ಬೆನ್ನಿಗೆ ನಿಂತಿದ್ದು ಯಾರು?

ನಿರ್ದೇಶಕ ಎನ್‌ಟಿ ಜಯರಾಮ ರೆಡ್ಡಿ. ಚಿತ್ರರಂಗಕ್ಕೆ ಹೋಗು ಅಂದ್ರು. ಆದರೆ, ಹೋದ ಮೇಲೆ ಏನಾಗಬೇಕು ಅಂತ ಗೊತ್ತಿಲ್ಲ. ಆಗ ನನ್ನ ಗೆಳೆಯನೊಬ್ಬ ಕೊಟ್ಟಮಾಹಿತಿ ಪಡೆದುಕೊಂಡು ನಿರ್ದೇಶಕ ಎನ್‌ ಟಿ ಜಯರಾಮ ರೆಡ್ಡಿ ಅವರ ಮನೆಗೆ ಹೋದೆ. ಅವರೂ ಕೂಡ ಚಿತ್ರರಂಗದಲ್ಲಿ ಏನಾಗಬೇಕು ಅಂದುಕೊಂಡಿದ್ದಿಯಾ ಅಂತ ಕೇಳಿದರು. ಏನೂ ಆಗಬೇಕು ಅಂತ ಗೊತ್ತಿಲ್ಲ. ನಾನು ಚಿತ್ರರಂಗದಲ್ಲಿದ್ದೇನೆ ಅಂತ ನಮ್ಮೂರಿನವರಿಗೆ ಗೊತ್ತಾಗಬೇಕು ಅಂತ ಹೇಳಿದೆ. ಆಗ ಅವರು ನಿರ್ದೇಶಕ ಎಸ್‌ ನಾರಾಯಣ್‌ ಅವರ ತಂಡದವರು ನಂಬರ್‌ ಕೊಟ್ಟರು. ಸೀದಾ ಬೆಂಗಳೂರಿಗೆ ಬಂದು ನಾರಾಯಣ್‌ ಅವರ ಮುಂದೆ ನಿಂತೆ. ನನಗೆ ಕಾಸು ಬೇಡ. ಕೆಲಸ ಕೊಡಿ ಅಂದೆ. ಅಲ್ಲಿ ನನಗೆ ಕಾಪಿ ರೈಟರ್‌ ಕೆಲಸ ಕೊಟ್ಟರು. ನಾರಾಯಣ್‌ ಅವರು ರೆಡಾರ್ಡ್‌ ಮಾಡಿ ಕೊಟ್ಟಿದ್ದನ್ನು ನಾನು ಬರೆಯುತ್ತಿದ್ದೇನೆ. ಅಲ್ಲಿಂದ ಎ ಆರ್‌ ಬಾಬು ಚಿತ್ರಗಳಿಗೆ ದೃಶ್ಯಗಳನ್ನು ಬರೆಯಕ್ಕೆ ಶುರು ಮಾಡಿದೆ.

ಚಿತ್ರ ವಿಮರ್ಶೆ: ಐ ಲವ್‌ ಯೂ

ಮೊದಲ ಸಿನಿಮಾ ತಾಜ್‌ಮಹಾಲ್‌ ಹುಟ್ಟಿಕೊಂಡಿದ್ದು ಹೇಗೆ?

ಪಿಯುಸಿ ಫೇಲ್‌ ಆಗಿದ್ದೆ. ಅಪ್ಪ ಹೇಳಿದಂತೆ ಬಾರ್‌ನಲ್ಲಿ ಕೆಲಸ ಮಾಡದೆ ಊರಿಗೆ ವಾಪಸ್ಸು ಬಂದಿದ್ದೆ. ಅವರು ನನ್ನ ಬೈಯ್ದು ಹೊಡೆಯುವುದನ್ನು ನೋಡಿ, ನಾನೂ ಏನೂ ಮಾಡಬಕ್ಕೆ ಆಗದೆ ನನ್ನ ಅಪ್ಪನನ್ನೇ ವಿಲನ್‌ ಮಾಡಿ ಬರೆಯಕ್ಕೆ ಶುರು ಮಾಡಿದೆ. ನಾನು ಹೀರೋ. ಅಪ್ಪ ವಿಲನ್‌. ಹಾಗೆ ಬರೆಯುತ್ತ ಕೂತವನಿಗೆ ಗಾಂಧಿನಗರಕ್ಕೆ ಬರುವ ಹುಡುಗನೊಬ್ಬನ ಪಾತ್ರ ಕಂಡಿತು. ಅದು ನಾನೇ ಆದೆ. ಆ ಹುಡುಗನ ಜತೆಗೊಬ್ಬ ಪ್ರೇಮಿ ಕಂಡ. ಆತನೂ ನನ್ನೂರಿನವನಾಗಿಯೇ ಕಂಡ. ಆ ಪ್ರೇಮ ಕತೆ, ಸಿನಿಮಾ ನಿರ್ದೇಶಕನಾಗಬೇಕೆಂದು ಕನಸು ಕಾಣುವ ಹುಡುಗ. ಇವೆರಡೂ ಸೇರಿಕೊಂಡು ‘ತಾಜ್‌ಮಹಾಲ್‌’ ಸಿನಿಮಾದ ಕತೆ ಆಯಿತು.

ನೀವು ಯಾರು ಅಂತ ಗೊತ್ತಿಲ್ಲದ ದಿನಗಳಲ್ಲಿ ನಿಮ್ಮ ಸಿನಿಮಾ ಕನಸುಗಳು ಏನಾಗಿದ್ದವು?

ನಮ್ಮದು ಎರಡು ಎಕರೆ ಜಮೀನು ಇತ್ತು. ಅರ್ಧ ಎಕರೆ ಮಾತ್ರ ಬೇಸಾಯ ಮಾಡುತಿದ್ವಿ. ಯಾಕೆಂದರೆ ನೀರಿನ ಕೊರತೆ. ಜೀವನದಲ್ಲಿ ಹಣ ಸಂಪಾದನೆ ಮಾಡಿ ಜಮೀನಿನಲ್ಲಿ ಒಂದು ಬೋರ್‌ವೆಲ್‌ ಹಾಕಿಸಿ ಅಷ್ಟೂಜಮೀನಿನಲ್ಲಿ ಕೃಷಿ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಯಾಕೆಂದರೆ ಅವತ್ತಿಗೆ ಬೋರ್‌ವೆಲ್‌ ಹಾಕಿಸಬೇಕು ಅಂದರೆ 50 ಸಾವಿರ ಬೇಕಿತ್ತು. ಆಗಿನ ಕಾಲಕ್ಕೆ ಅದು ದೊಡ್ಡ ಮೊತ್ತ.

ನಿಮ್ಮ ಚಿತ್ರಗಳ ಕತೆಗಳು ಹುಟ್ಟು ಎಲ್ಲಿಂದ?

ಮೊದಲ ಸಿನಿಮಾ ಕತೆ ಹುಟ್ಟಿಕೊಂಡಿದ್ದೇ ನನ್ನ ಅಪ್ಪನಿಂದ. ಆ ನಂತರ ನನ್ನ ಪ್ರತಿಯೊಂದು ಚಿತ್ರಕ್ಕೂ ಸಮಾಜದಲ್ಲಿ ನಡೆಯುವ ಘಟನೆಗಳೇ ಕತೆಗಳಾದವು. ಎಲ್ಲರಿಗೂ ಗೊತ್ತಿರುವ ಮತ್ತು ಎಲ್ಲರಿಗೂ ಅನ್ವಯಿಸುವ ಸಂಗತಿಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಕಮರ್ಷಿಯಲ್‌ ಟಚ್‌ ಕೊಟ್ಟಾಗ ನನ್ನ ಸಿನಿಮಾ ಕತೆಗಳು ಜನ್ಮತಾಳುತ್ತವೆ.

ಐ ಲವ್ ಯೂ ಚಿತ್ರದ ಕಲೆಕ್ಷನ್ ಮುಟ್ಟಿತು 22 ಕೋಟಿ

ಇಲ್ಲಿವರೆಗೂ ಬಂದ ನಿಮ್ಮ ಚಿತ್ರಗಳ ಬಗ್ಗೆ ನೀವೇ ಹೇಳುವುದಾದರೆ?

ನನ್ನ ಚಿತ್ರಗಳು ನನಗೆ ಜೀವನ ಕೊಟ್ಟಿವೆ. ಅಮ್ಮ, ತನ್ನ ಮಗನನ್ನು ಸಾಕಿದಂತೆ ನನ್ನ ಚಿತ್ರಗಳು ನನ್ನ ಬೆಳೆಸಿವೆ. ‘ತಾಜ್‌ಮಹಾಲ್‌’ ಚಿತ್ರ ನೋಡಿ ನನ್ನ ಜೀವನ ಬದಲಾಯಿಸಿಕೊಂಡೆ. ನಾನು ನಿಮ್ಮ ದೊಡ್ಡ ಅಭಿಮಾನಿ ಅಂತ ಅಪರಿಚಿತ ದಂಪತಿ ಬಂದು ಹೇಳಿದಾಗ, ಚಾರ್‌ಮಿನಾರ್‌ ಚಿತ್ರವನ್ನು 16 ಸಲ ನೋಡಿದ್ದೇನೆ. ನಿಜವಾದ ಪ್ರೀತಿ ಉಳಿಸಿಕೊಳ್ಳುವುದು ಹೇಗೆಂದು ಹೇಳಿದ್ದೀರಿ ಅಂದಾಗ, ಮೈಲಾರಿ ಸಿನಿಮಾ ನೋಡಿ ನಮ್ಮ ತಂದೆಯನ್ನು ನಾವೇ ಸಾಕುತ್ತಿದ್ದೇವೆ ಎಂದು ಯಾರೋ ಬಂದು ಹೇಳಿದಾಗ, ಐ ಲವ್‌ ಯೂ ಸಿನಿಮಾ ನೋಡಿ ಹೆಂಡತಿಯನ್ನು ಪ್ರೀತಿಸುವುದನ್ನು ಕಲಿತೆ ಎಂದು ಮೆಚ್ಚಿಕೊಂಡಾಗ ಆಗುವ ಸಂಭ್ರಮ ಇದೆಯಲ್ಲ, ಅದರ ಮತ್ತೊಂದು ಪ್ರಶಸ್ತಿ, ಸನ್ಮಾನ ಮತ್ತೊಂದು ಇಲ್ಲ.

ಈ ಪಯಣದಲ್ಲಿ ನೀವು ನೆನಪಿಟ್ಟುಕೊಳ್ಳುವ ಸಂಗತಿ- ವ್ಯಕ್ತಿಗಳು ಯಾರು?

ಬೆಂಗಳೂರಿನಲ್ಲಿ ಬಾರ್‌ ಆಂಡ್‌ ರೆಸ್ಟೋರೆಂಟ್‌ ಇಟ್ಟುಕೊಂಡು ಶ್ರೀಮಂತರಾಗಿದ್ದ ನಮ್ಮೂರಿನವರು, ನಾನ್ಯಾಕೆ ಬಾರ್‌ನಲ್ಲಿ ಗ್ಲಾಸ್‌ ತೊಳೆಯಬೇಕು ಅಂತ ಬೆಂಗಳೂರಿನಿಂದ ಊರಿಗೆ ನಡೆದುಕೊಂಡೇ ಬಂದ ಘಚನೆ, ಅಪ್ಪನ ಜತೆ ಜಗಳವಾಡಿಕೊಂಡು ಊರು ಬಿಟ್ಟು ಓಡೋದ ಕ್ಷಣದಲ್ಲಿ ನೆರವಾದ ಎನ್‌ ಟಿ ಜಯರಾಮ ರೆಡ್ಡಿ, ನನ್ನ ‘ತಾಜ್‌ಮಹಾಲ್‌’ ಚಿತ್ರಕ್ಕೆ ಹಣ ಹೂಡಿದ ಅಶೋಕ್‌ ಕುಮಾರ್‌ ಜಿಗಳ, ಎರಡನೇ ಚಿತ್ರಕ್ಕೆ ಕೋಟಿಗಳ ಸಂಭಾವನೆ ಕೊಟ್ಟಕೆ ಎಂ ವಿಶ್ವನಾಥ್‌ ಇವರು ನನ್ನ ಜೀವನದಲ್ಲಿ ಸದಾ ನೆನಪಾಗು ವ್ಯಕ್ತಿಗಳು.

ಒಂದು ಚಿತ್ರದ ಯಶಸ್ಸು ನಿರ್ಧರಿಸುವುದು ಹೇಗೆ?

ಒಂದು ಚಿತ್ರದ ಯಶಸ್ಸನ್ನು ನಿರ್ಧರಿಸುತ್ತದೆ. ಯಾಕೆಂದರೆ ಸಿನಿಮಾ ಅನ್ನೋದು ಉದ್ಯಮ. ಯಾರಿಗೋ ಬುದ್ದಿ ಹೇಳಕ್ಕಲ್ಲ. ಇಲ್ಲಿ ವ್ಯವಹಾರ ಆದರೆ ಯಶಸ್ಸು. ಗಳಿಕೆ ಮೇಲೆ ನಿಂತಿದೆ ಸಿನಿಮಾ ಗೆಲುವು ನಿಂತಿದೆ.

ತಾಜ್‌ಮಹಾಲ್‌, ಚಾರ್‌ಮಿನಾರ್‌ ಚಂದ್ರು ಈಗ ಕಾಣುತ್ತಿಲ್ಲ ಅಂತಾರಲ್ಲ?

ಕನಕ ನೋಡಿದ್ದೀರಲ್ಲ, ಅದು ರಂಗಸ್ಥಳಂ ಸಿನಿಮಾ ರೀತಿಯದ್ದೇ. ಆದರೆ, ಆರ್‌ ಚಂದ್ರು ಹಳ್ಳಿಯಲ್ಲೇ ಇದ್ದಾನೆ ಅಂದವರಿಗೆ ‘ಐ ಲವ್‌ ಯೂ’ ಮಾಡಿ ಉತ್ತರ ಕೊಡಬೇಕಾಯಿತು. ಜನ ಇಷ್ಟಪಟ್ಟರೆ ತಾಜ್‌ಮಹಾಲ್‌ ಆಗುತ್ತದೆ. ಇಲ್ಲ ಅಂದ್ರೆ ಯಾವ ಮಹಾಲು ಆಗಲ್ಲ. ಹೀಗಾಗಿ ನಾನು ಕಳೆದು ಹೋಗಿಲ್ಲ. ಇದ್ದೇನೆ. ಅಪ್‌ಡೇಟ್‌ ಆಗಿದ್ದೇನೆ ಅಂತ ತೋರಿಸಕ್ಕೆ ‘ಐ ಲವ್‌ ಯೂ’ ಸಿನಿಮಾ ಮಾಡಿದೆ.

ಐ ಲವ್‌ ಯು ಚಿತ್ರ ಕಲಿಸಿಕೊಟ್ಟಪಾಠಗಳೇನು?

ಜನ ಯಾವ ರೀತಿ ಕತೆಗಳನ್ನು ಇಷ್ಟಪಡುತ್ತಿದ್ದಾರೆ, ಯಾವ ರೀತಿಯ ಸಿನಿಮಾಗಳನ್ನು ಮಾಡಬೇಕು, ಈಗಿನ ಪ್ರೇಕ್ಷಕರ ಯೋಚನೆಗಳೇನು ಎಂಬುದನ್ನು ತಿಳಿದುಕೊಂಡೆ.

ತೆಲುಗು ಚಿತ್ರರಂಗಕ್ಕ ನಿಮ್ಮನ್ನು ಹೇಗೆ ನೋಡಿತು?

ಬಹಳ ಖುಷಿ ಕೊಟ್ಟವಿಚಾರ. ಕನ್ನಡದಲ್ಲಿ ಎರಡೂ ರಾಜ್ಯ ಪ್ರಶಸ್ತಿಗಳು ಬಂದಿವೆ. ತೆಲುಗು ಚಿತ್ರಕ್ಕೆ ಇಂಟರ್‌ನ್ಯಾಷನಲ್‌ ಅವಾರ್ಡ್‌ ಬಂದಾಗ ಹಿರಿಯ ನಿರ್ದೇಶಕ ದಾಸರಿ ನಾರಾಯಣರಾವ್‌ ಮನೆಗೆ ಕರೆಸಿಕೊಂಡು ಜತೆಗೆ ಊಟ ಮಾಡಿ ನನ್ನ ಸನ್ಮಾನ ಮಾಡಿದರು. ಅದನ್ನು ನಾನು ಯಾವತ್ತಿಗೂ ಮರೆಯಲ್ಲ.

ಕೇವಲ ಸ್ಟಾರ್‌ಗಳಿಗೆ ಸೀಮಿತವಾಗುತ್ತೀರಾ, ಹೊಸಬರಿಗೂ ಸಿನಿಮಾ ಮಾಡುತ್ತೀರಾ?

ಒಳ್ಳೆಯ ಕತೆ ಇದ್ದರೆ ಯಾರಿಗೆ ಬೇಕಾದರೂ ನಾನು ಚಿತ್ರ ನಿರ್ಮಿಸುತ್ತೇನೆ. ಈ ವರ್ಷ ನಾನು ಅಂಥ ಪ್ಲಾನ್‌ ಮಾಡಿಕೊಂಡಿದ್ದೇನೆ. ಖಂಡಿತ ಮುಂದೆ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತೇನೆ.

ಸಿನಿಮಾ ಮಾರುಕಟ್ಟೆಯ ನಿಮ್ಮ ಸೀಕ್ರೆಟ್‌ಗಳೇನು?

ಹಾರ್ಡ್‌ ವರ್ಕ್ ಮಾಡಿದರೆ ಜೋಗಿ ಪ್ರೇಮ್‌ ಆಗುತ್ತಾರೆ. ರಾಜ್‌ಮೌಳಿ ಆಗುತ್ತಾರೆ. ಆರ್‌ ಚಂದ್ರು ಆಗುತ್ತಾರೆ. ಕಾರಲ್ಲಿ ಬಂದು ಚೇರ್‌ನಲ್ಲಿ ಕೂತು ಆ್ಯಕ್ಷನ್‌ ಕಟ್‌ ಹೇಳಿ, ಸಂಜೆ ನಾಳೆ ಸೀನ್‌ಗಳ ಬಗ್ಗೆ ರೆಡಿ ಮಾಡಿ ಅಂತ ಅಸೋಸೆಟ್‌ಗಳಿಗೆ ಹೇಳಿ ಹೋಗೋ ನಿರ್ದೇಶಕನಲ್ಲ ನಾನು. ಪ್ಯಾಶನ್‌ ಇರಬೇಕು. ಅದೇ ನನ್ನ ಸೀಕ್ರೇಟ್‌. ಈಗ ‘ಐ ಲವ್‌ ಯೂ’ ಸಿನಿಮಾ 40 ಚಿತ್ರಮಂದಿರಗಳಲ್ಲಿ 50 ದಿನ ಕಂಡಿದೆ. 15 ಚಿತ್ರಮಂದಿರಗಳಲ್ಲಿ ನೂರು ದಿನ ಆಗುತ್ತದೆ.

ಯಶಸ್ವಿ ನಿರ್ದೇಶಕ ಆರ್‌ ಚಂದ್ರು ಬಗ್ಗೆ ಗೊತ್ತಿಲ್ಲದ ಸಂಗತಿಗಳೇನು?

ನಾನು ಬಂದಿದ್ದು ಕೃಷಿ ಕುಟುಂಬ. ನನ್ನ ಮೊದಲ ಅದ್ಯತೆ ಕೃಷಿಗೆ. 25 ನೀರಾವರಿ ಜಮೀನು ಇಟ್ಟುಕೊಂಡಿದ್ದೇನೆ. ಪ್ರತಿ ಶನಿವಾರ, ಭಾನುವಾರ ನಾನೇ ಜಮೀನಿನಲ್ಲಿ ನಿಂತು ಕೃಷಿ ಮಾಡುತ್ತೇನೆ. ಇದನ್ನೂ ಈಗಲೂ ಮುಂದುವರಿಸಿದ್ದೇನೆ. ವಾರದಲ್ಲಿ ಎರಡು ದಿನ ನಾನು ಕೃಷಿಕ. ಸೋಪ್ಪು, ತರಕಾರಿ, ರೇಷ್ಮೆ ಬೆಳೆಗಾರ ನಾನು. ಸುತ್ತಮುತ್ತಲಿನ ಹಳ್ಳಿಗಳಿಂದ ನನ್ನ ನೋಡಕ್ಕೆ ಬರುತ್ತಾರೆ. ಕೃಷಿ ಬಗ್ಗೆ ಮಾತನಾಡುತ್ತಾರೆ. ರೇಷ್ಮೆ ಉದ್ಯಮದಲ್ಲಿ ಗುರುತಿಸಿಕೊಳ್ಳುವ ಗುರಿಯೊಂದಿಗೆ ವ್ಯವಸಾಯ ಮಾಡುತ್ತಿದ್ದೇನೆ. ಹೀಗಾಗಿ ನಾನು ಸಿನಿಮಾ ಕಟ್ಟುವ ಕೆಲಸವನ್ನೂ ಕೃಷಿ ರೀತಿ ಮಾಡುತ್ತೇನೆ. ಜಮೀನಿನ್ನಷ್ಟೇ ಚಿತ್ರರಂಗವನ್ನೂ ಆರಾಧಿಸುತ್ತೇನೆ. ನನಗೆ ಕೃಷಿ ಮತ್ತು ಸಿನಿಮಾ ಹಾರ್ಟು ಮತ್ತು ಬೀಟು ಇದ್ದಂತೆ.