ನನ್‌ ಭಾನು ಸಿಕ್ತಾಳಾ?- ಮನ ಕಲುಕುವಂತೆ ಚಿತ್ರದ ಉದ್ದಕ್ಕೂ ಕೇಳುವ ಈ ಪ್ರಶ್ನೆ ಬರೀ ಪ್ರಶ್ನೆಯಲ್ಲ. ಹಸು ಮತ್ತು ಸಮೀರನ ನಡುವಿನ ಪ್ರೀತಿ, ಭಾವನಾತ್ಮಕ ಸಂಬಂಧ, ಅದನ್ನು ಬಿಟ್ಟಿರಲಾರದ ಆತನ ನೋವು, ಅದನ್ನು ಕಳೆದುಕೊಂಡ ಸಂಕಟ, ಇನ್ನು ಸಿಗುವುದಿಲ್ಲವೇ ಎನ್ನುವ ಯಾತನೆ ಅದು. ಅದರ ಹಿಂದೆ ಪ್ರಾಣಿ ಮತ್ತು ಮನುಷ್ಯ ಸಂಬಂಧದ ನೀತಿ ಕತೆಯಿದೆ. ಆ ಕತೆ ವರ್ತಮಾನದ ಬದುಕಿನ ತಾಕಲಾಟ, ಪರದಾಟ, ಹೊಡೆದಾಟ, ಗುದ್ದಾಟ ಎಲ್ಲವನ್ನು ಧ್ವನಿಸುತ್ತದೆ. ಹೇಳುವುದಕ್ಕೆ ಅದು ‘ಒಂದಲ್ಲಾ ಎರಡಲ್ಲಾ’.

ಸಮೀರ ಮುಗ್ಧ ಮತ್ತು ತುಂಟ ಹುಡುಗ. ಆತನ ಪ್ರೀತಿಯ ಹಸುವಿನ ಹೆಸರು ಭಾನು. ಒಂದು ದಿನ ಭಾನು ಕಾಣೆ ಆದಳು. ಆಕೆಯನ್ನು ಹುಡುಕುತ್ತಾ ಮನೆ ಬಿಟ್ಟು ಪೇಟೆಗೆ ಬಂದ ಆತನೂ ಅಲ್ಲಿ ಕಳೆದು ಹೋದ. ಈಗ ಅವರಿಬ್ಬರನ್ನು ಹುಡುಕುವ ಸರದಿ, ಹಳ್ಳಿಯಲ್ಲಿದ್ದ ಆತನ ತಂದೆ, ತಾಯಿ ಮತ್ತು ಪೋಷಕರದ್ದು. ಅವರ ಜತೆಗೆ ಸಮೀರನನ್ನು ತುಂಬಾನೆ ಪ್ರೀತಿಸುತ್ತಿದ್ದ ಪಕ್ಕದ ಮನೆಯ ರಾಜಣ್ಣ ಮತ್ತವನ ಹೆಂಡತಿಯೂ ಪೇಟೆಗೆ ಬಂದರು. ಪೇಟೆ ಬೀದಿ, ರಫೀಕನ ಬಾಳೆ ಮಂಡಿ, ಚಚ್‌ರ್‍ ಪಕ್ಕದ ಡೇವಿಡ್‌ ಮನೆ, ಜತೆಗೆ ಪೋಲೀಸ್‌ ಠಾಣೆ..ಹೀಗೆ ಇಡೀ ಪೇಟೆಯನ್ನೇ ಸುತ್ತು ಹಾಕಿದ ನಂತರ ಅವರಿಗೆ ಸಮೀರ ಸಿಕ್ಕ. ಆದರೆ ಸಮೀರ ಹುಡುಕಿ ಬಂದ ಭಾನು ಆತನಿಗೆ ಸಿಕ್ಕಳೇ? ಅದು ಚಿತ್ರದ ಕ್ಸೈಮ್ಯಾಕ್ಸ್‌. ಹಾಗಾದ್ರೆ, ಇಲ್ಲಿ ನಿರ್ದೇಶಕರು ಹೇಳಹೊರಟಿದ್ದು ಇಷ್ಟೇನಾ?

ಅಸಲಿಗೆ, ಇದು ಟ್ರೇಲರ್‌ ಮಾತ್ರ. ಅದು ಸಮೀರ ಮತ್ತು ಹಸು ಭಾನು ನಡುವಿನ ಪುಣ್ಯಕೋಟಿಯ ಕತೆ. ಅದರ ಸುತ್ತ ಸಮೀರ, ಭಾನು, ರಫೀಕ, ರಾಜಣ್ಣ, ಹುಲಿ, ಡೇವಿಡ್‌ ಅವರನ್ನೊಳಗೊಂಡ ಒಂದು ಜಗತ್ತು ಇದೆ. ಅವರ ಬದುಕಿನ ಹಲವು ಉಪಕತೆಗಳಿವೆ. ‘ಮಗು ಮನಸ್ಸಿನ ಬದುಕು ಬೇಕು, ಆ ಬದುಕೇ ನಿಜವಾದ ಜಗತ್ತು’ ಅಷ್ಟುಉಪಕತೆಗಳ ಮೂಲಕ ಹೊರಡುವ ಒಟ್ಟು ಹೂರಣ. ಅದೇ ಸಿನಿಮಾದ ವಿಶೇಷ ಮತ್ತು ಅದ್ಭುತ. ಸಿನಿಮಾ ಅಂದ್ರೆ ರಂಜನೆ, ಸಿನಿಮಾ ಅಂದ್ರೆ ಸಂದೇಶ ಹೇಳುವ ಮಾಧ್ಯಮ ಎನ್ನುವ ಮುಗಿಯದ ಜಿಜ್ಞಾಸೆಯ ನಡುವೆಯೂ ರಂಜನೆ ಮತ್ತು ಸಂದೇಶ ಎರಡು ಈ ಸಿನಿಮಾದಲ್ಲಿವೆ.

ಸ್ಟಾರ್‌ಗಳೇ ಇಲ್ಲದ ಸಿನಿಮಾವಿದು. ಕತೆಯೇ ಸೂಪರ್‌ ಸ್ಟಾರ್‌. ಪ್ರೇಕ್ಷಕರು ಒಂದು ಕ್ಷಣವೂ ಕದಲದಂತೆ ನೋಡಿಸುವ ಚೆಂದವಾದ ಕತೆ. ಅದಕ್ಕೆ ಪೂರಕವಾಗಿ ಅಷ್ಟೇ, ನುರಿತ ರಂಗಭೂಮಿ ಕಲಾವಿದರ ದಂಡೇ ಇಲ್ಲಿದೆ. ಸಮೀರನ ಪಾತ್ರಕ್ಕೆ ಮಾಸ್ಟರ್‌ ರೋಹಿತ್‌,ಅಕ್ಷರಶಃ ಜೀವ ತುಂಬಿದ್ದಾನೆ. ಆತನ ಮುಖದಲ್ಲಿರುವ ಮುಗ್ಧತೆ, ಕಣ್ಣಲ್ಲಿ ಕಾಣುವ ಪ್ರಾಣಿ ಪ್ರೀತಿ ಪ್ರೇಕ್ಷಕರ ಮನಸ್ಸಿಗೆ ನಾಟುತ್ತದೆ. ಸಾಯಿ ಕೃಷ್ಣ ಕುಡ್ಲ, ಎಂ.ಕೆ. ಮಠ, ಆನಂದ್‌ ನೀನಾಸಂ, ಪ್ರಭುದೇವ ಹೊಸದುರ್ಗ, ಉಷಾ ರವಿಶಂಕರ್‌, ತ್ರಿವೇಣಿ,ಸಂಧ್ಯಾ ಅರಕೆರೆ, ಆನಂದ್‌ ನೀನಾಸಂ, ರಂಜಾನ್‌ ಸಾಬ… ಉಳ್ಳಾಗಡ್ಡಿ ಚಿತ್ರದಲ್ಲಿದ್ದು, ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಾಸುಕಿ ವೈಭವ್‌ ಹಾಗೂ ನೋಬಿನ್‌ ಪೌಲ… ಸಂಗೀತದ ಹಾಡುಗಳು ಇಂಪಾಗಿವೆ. ಡಿ.ಸತ್ಯ ಪ್ರಕಾಶ್‌ ಸಾಹಿತ್ಯ ಅರ್ಥಗರ್ಭಿತವಾಗಿದೆ. ಬಹುತೇಕ ಹಳ್ಳಿಯಲ್ಲಿಯೇ ಈ ಚಿತ್ರ ಚಿತ್ರೀಕರಣಗೊಂಡಿದ್ದು ಕತೆಯ ಜೀವಂತಿಕೆಗೆ ಮತ್ತಷ್ಟುಮೆರಗು ನೀಡಿದೆ. ಸಿನಿಮಾದಲ್ಲಿ ಮನಮುಟ್ಟುವ ಸಂಭಾಷಣೆ ಇದೆ. ಒಂದೊಂದು ದೃಶ್ಯವೂ ಅರ್ಥ ಪೂರ್ಣವಾಗಿದೆ. ಎಷ್ಟುಬೇಕೋ ಅಷ್ಟುಕಾಮಿಡಿ ಇದೆ. ಪ್ರತಿಯೊಬ್ಬರು ನೋಡಲೇ ಬೇಕಾದ ಸಿನಿಮಾ ಇದು.

ಚಿತ್ರ: ಒಂದಲ್ಲಾ ಎರಡಲ್ಲಾ

ತಾರಾಗಣ: ರೋಹಿತ್, ಸಾಯಿ ಕೃಷ್ಠ ಕುಡ್ಲ, ಎಂ.ಕೆ. ಮಠ, ತ್ರಿವೇಣಿ ಎಂ. ವಶಿಷ್ಟ, ಸಂಧ್ಯಾ ಅರಕೆರೆ, ಉಷಾ ರವಿಶಂಕರ್

ನಿರ್ದೇಶನ: ಸತ್ಯ ಪ್ರಕಾಶ್

ರೇಟಿಂಗ್: ****