ಶಿಕ್ಷಕರನ್ನು ದೇವರೆಂದು ಪೂಜಿಸುವ ಸಂಪ್ರದಾಯ ನಮ್ಮದು. ಅದರಲ್ಲಿಯೂ ಕೆಲವರನ್ನು ನಾವು ಶತಮಾನಗಳು ಉರುಳಿದರೂ ಇಂದಿಗೂ ಶಿಕ್ಷಕರೆಂದು ಗೌರವಿಸುತ್ತೇವೆ. ಅವರು ಹಾಕಿ ಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತೇವೆ. ಸ್ಯಾಂಡಲ್ ವುಡ್ ಸೆಲಬ್ರಿಟಿಗಳು ತಮ್ಮ ಶಿಕ್ಷಕರನ್ನು ನೆನೆಸಿಕೊಂಡಿದ್ದು ಹೀಗೆ. 

ಅಮ್ಮನೇ ಬೆಸ್ಟ್‌ ಟೀಚರ್‌

ಬಾಲ್ಯದಿಂದ ಕಾಲೇಜು ದಿನಗಳವರೆಗೂ ನಾನು ಶಿಕ್ಷಕರ ನೆಚ್ಚಿನ ಸ್ಟೂಡೆಂಟ್‌. ಸ್ವಲ್ಪ ಬುದ್ದಿವಂತೆ ಅನ್ನೋದು ಅದಕ್ಕೆ ಕಾರಣ. ಓದು, ಸಂಗೀತ, ಭಾಷಣ, ಕ್ರೀಡೆ ಅಂತೆಲ್ಲ ಪ್ರತಿಯೊಂದರಲ್ಲೂ ಮುಂಚೂಣಿಯಲ್ಲಿರುತ್ತಿದ್ದೆ. ಅದು ಅವರಿಗೆ ಇಷ್ಟವಾಗುತ್ತಿತ್ತು. ಅವರು ಹೇಳಿಕೊಟ್ಟಿದ್ದನ್ನೇ ಕಲಿತು ನಾನೀಗ ಒಂದು ಹಂತದಲ್ಲಿದ್ದೇನೆ. ಅವರೇ ನನ್ನನ್ನು ರೂಪಿಸಿದ್ದು ಎನ್ನುವುದು ನನಗೆ ಹೆಮ್ಮೆ. ಆದರೂ ನನಗೆ ಅಮ್ಮನೇ ಬೆಸ್ಟ್‌ ಟೀಚರ್‌. ಯಾಕಂದ್ರೆ, ಮೊದಲು ಮನೆಯಿಂದಲೇ ನನ್ನ ಕಲಿಕೆ ಶುರುವಾಗಿದ್ದು. ಅದು ಓದಿನ ಜತೆಗೆ ಬದುಕಿನ ಪಾಠ ಕಲಿಸಿದ್ದು. ಅದಕ್ಕೆ ಅಮ್ಮನೇ ಗುರು. ಅವರೇ ನನ್ನ ನೆಚ್ಚಿನ ಶಿಕ್ಷಕಿ.

ಭಾರತ ಎಂದೂ ಮರೆಯದ ಶಿಕ್ಷಕರಿವರು!

--ಅದಿತಿ ಪ್ರಭುದೇವ್‌

ನನ್ನಲ್ಲಿ ಕಲೆಗಾರನನ್ನು ಗುರುತಿಸಿದ ಗುರು ಕೆಎಸ್‌ಎಮ್‌

ಪಾಠ ಹೇಳಿಕೊಟ್ಟಪ್ರತಿಯೊಬ್ಬರು ನನ್ನ ನೆಚ್ಚಿನ ಶಿಕ್ಷಕರು. ಇಂತಹವರೇ ಬೆಸ್ಟ್‌ ಅಂತ ಯಾರೋ ಒಬ್ಬರಿಗೆ ಹೇಳುವುದು ತಪ್ಪಾಗುತ್ತದೆ. ಎಂಜಿನಿಯರಿಂಗ್‌ ಓದುವ ದಿನಗಳಲ್ಲಿ ಪ್ರತಿಯೊಬ್ಬರಿಗೂ ನಾನಂದ್ರೆ ಇಷ್ಟವೇ. ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಹೆಚ್ಚಾಗಿ ಪಾಲ್ಗೊಳ್ಳುತ್ತಿದ್ದೆ. ಹಾಗಾಗಿ ಎಲ್ಲರಿಗೂ ನಾನು ಇಷ್ಟವಾಗುತ್ತಿದ್ದೆ. ಆದ್ರೂ ನನಗೆ ಬೆಸ್ಟ್‌ ಟೀಚರ್‌ ಅಂತ ಈಗಲೂ ನೆನಪಾಗುವುದು ಕೆಎಸ್‌ಎಮ್‌.

ಎಂಜಿನಿಯರಿಂಗ್‌ ಕಾಲೇಜಿನಲ್ಲಿದ್ದಾಗ ಎಲ್ಲರೂ ಓದಿನ ಬಗ್ಗೆ ಹೇಳುತ್ತಿದ್ದಾಗ, ಕೆಎಸ್‌ಎಮ್‌ ಮಾತ್ರ ನನ್ನೊಳಗಿದ್ದ ಒಬ್ಬ ಕಲೆಗಾರನನ್ನು ಗುರುತಿಸಿದ್ದರು. ನಿನ್ನೊಳಗೊಬ್ಬ ಕಲೆಗಾರ ಇದ್ದಾನೆ, ಆ ಕಡೆ ಹೆಚ್ಚಾಗಿ ಗಮನ ಕೊಟ್ಟರೆ ಎತ್ತರಕ್ಕೆ ಬೆಳೆಯುತ್ತೀಯ ಅಂದಿದ್ದರು. ಒಂದ್ರೀತಿ ನಾನು ಒಬ್ಬ ನಟನಾಗಿದ್ದಕ್ಕೆ ಅವರು ಕೂಡ ಕಾರಣ. ಇವತ್ತು ನಾನು ತೊಡಗಿಸಿಕೊಂಡ ಕ್ಷೇತ್ರಕ್ಕೂ, ಕೆಎಸ್‌ಎಮ್‌ ಅವರ ಸಲಹೆಗೂ ತುಂಬಾ ಕನೆಕ್ಷನ್‌ ಇದೆ. ಹಾಗಾಗಿ ಆಗಾಗ ಅವರು ನೆನಪಾಗುತ್ತಲೇ ಇರುತ್ತಾರೆ.

- ರಿಷಿ

ಬದುಕಿನ ಪಾಠ ಹೇಳಿಕೊಟ್ಟವರು ಉಷಾ ಭಂಡಾರಿ

ಗುರು ದೇವೋ ಭವ ಎನ್ನುವಂತೆ ಬಾಲ್ಯದಿಂದಲೇ ಗುರುಗಳ ಬಗ್ಗೆ ನನ್ನಲ್ಲಿ ಅತೀವ ಗೌರವ ಹುಟ್ಟುವಂತೆ ಮಾಡಿದ್ದು ನನ್ನಪ್ಪ. ಅದೇ ಭಾವನೆ ನನ್ನನ್ನು ಪ್ರತಿಯೊಬ್ಬರ ಶಿಕ್ಷಕರನ್ನು ಗೌರವದಿಂದ ಕಾಣುವಂತೆ ಮಾಡಿತ್ತು. ಕೆಲವರಿಗೆ ನನ್ನ ವಿನಯತೆ ಇಷ್ಟವಾದರೆ, ಇನ್ನು ಕೆಲವರಿಗೆ ನನ್ನೊಳಗಿನ ಒರಟುತನವೂ ಇಷ್ಟವಾಗುತ್ತಿತ್ತು. ಓದಿನಲ್ಲೂ ಬೆಸ್ಟ್‌ ಸ್ಟೂಡೆಂಟ್‌ ಎನಿಸಿಕೊಂಡಿದ್ದೆ.

ಅದು ಬಾಲ್ಯದಿಂದ ಕಾಲೇಜು ದಿನಗಳವರೆಗೂ ಹಾಗೆಯೇ ಇತ್ತು. ಹಾಗಾಗಿ ನನಗೆ ವಿದ್ಯೆ ಕಲಿಸಿದ ಪ್ರತಿಯೊಬ್ಬ ಶಿಕ್ಷಕರು ನಂಗಿಷ್ಟ. ಉಳಿದಂತೆ ನನ್ನ ವೃತ್ತಿ ಬದುಕಿನಲ್ಲಿ ನನ್ನ ಬೆಸ್ಟ್‌ ಟೀಚರ್‌ ಅಂದ್ರೆ ನಟಿ ಉಷಾ ಭಂಡಾರಿ ಅವರು. ಓದಿನ ದಿನಗಳಲ್ಲಿ ನನಗೆ ಗುರುಗಳು ವಿದ್ಯೆ ಕಲಿಸಿದರೂ ನಿಜ, ಆದರೆ ನನಗೆ ಬದುಕಿನ ವಿದ್ಯೆ ಕಲಿಸಿದ್ದು ಉಷಾ ಭಂಡಾರಿ ಅವರು. ಅವರೇ ನನ್ನ ಬೆಸ್ಟ್‌ ಟೀಚರ್‌.

ಸಮಾಜ ಮುಖಿ ಕಾರ್ಯಕ್ಕೆ ಸಂಬಳ ಮೀಸಲಿಟ್ಟ ಶಿಕ್ಷಕ

- ಪ್ರಭು ಮುಂಡ್ಕೂರ್‌

ಸಿನಿಮಾ ಕಲಿಸಿದ್ದು ಗಿರೀಶ್‌ ಕಾಸರವಳ್ಳಿ, ಜೇಕಬ್‌ ವರ್ಗೀಸ್‌

ಸ್ಕೂಲು, ಕಾಲೇಜುಗಳಲ್ಲಿ ಕಲಿತಿರುವುದಕ್ಕಿಂತ ನಾನು ಹೆಚ್ಚು ಕಲಿತಿದ್ದು ಸಿನಿಮಾ ಜಗತ್ತಿಗೆ ಬಂದ ಮೇಲೆ. ಇಲ್ಲಿಗೆ ಬಂದ ಮೇಲೆ ಗಿರೀಶ್‌ ಕಾಸರವಳ್ಳಿ ಮತ್ತು ಜೇಕಬ್‌ ವರ್ಗೀಸ್‌ ನನ್ನ ಗುರುಗಳು. ಅವರಿಂದಲೇ ನನ್ನ ಕಲಿಕೆ ಶುರುವಾಯಿತು. ಅವರಿಬ್ಬರ ಬಳಿ ಹೆಚ್ಚು ಕಲಿತಿದ್ದೇನೆ. ಅವರು ಕೂಡ ತುಂಬಾ ಹೇಳಿಕೊಟ್ಟಿದ್ದಾರೆ. ಸ್ಕೂಲು ಮತ್ತು ಕಾಲೇಜು ದಿನಗಳಲ್ಲಿ ಕಲಿತಿರುವುದಕ್ಕಿಂತ ಸಿನಿಮಾ ಜಗತ್ತಿನಲ್ಲಿ ನಾನು ಕಲಿತಿದ್ದು ಬದುಕು ರೂಪಿಸಿತು.

ಸಿನಿಮಾ ನನ್ನ ವೃತ್ತಿ ಆಗಿದೆಯೆಂದರೆ ಅದಕ್ಕೆ ಕಾರಣ ಗಿರೀಶ್‌ ಕಾಸರವಳ್ಳಿ ಮತ್ತು ಜೇಕಬ್‌ ವರ್ಗೀಸ್‌ ಸರ್‌. ಹಾಗಾಗಿ ನನ್ನ ದೃಷ್ಟಿಯಲ್ಲಿ ಏನು ಕಲಿತೆವು ಎನ್ನುವುದಕ್ಕಿಂತ, ಕಲಿತು ಕೊಂಡಿದ್ದರಿಂದ ಹೇಗೆ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುವುದೇ ಮುಖ್ಯ. ಆ ನಿಟ್ಟಿನಲ್ಲೇ ನನಗೆ ಬದುಕು ಕಲಿಸಿದ ಗುರುಗಳು ಇವರು. ಇವರೇ ನನ್ನ ಬೆಸ್ಟ್‌ ಟೀಚರ್‌.

- ಹೇಮಂತ್‌ ರಾವ್‌

ನಾಲ್ವರು ಶಿಕ್ಷಕರು ಕಲಿಸಿದ ಪಾಠ

ನನ್ನ ನೆಚ್ಚಿನ ಶಿಕ್ಷಕರು ನಾಲ್ಕು ಜನ. ನೆಲಮಂಗಳ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಾಠ ಮಾಡುತ್ತಿದ್ದ ಶಾಂತಾ ಮೇಡಮ್‌ ಹಾಗೂ ಪೀಟಿ ಮಾಸ್ಟರ್‌ ಆಗಿದ್ದ ಪೂವಮ್ಮ. ಕಾಲೇಜಿನಲ್ಲಿ ನಾಯಕ್‌ ಹಾಗೂ ನಾಗಲೂರ್‌. ಯಾಕೆ ಇವರು ನನಗೆ ಇಷ್ಟಎಂದರೆ ಶಾಂತಾ ಮೇಡಮ್‌ ಅವರು ನಮಗೆ ಕನ್ನಡ ಶಿಕ್ಷಕಿ ಮಾತ್ರ ಆಗಿರಲಿಲ್ಲ. ನಮ್ಮ ಭಾಷೆಯ ಬಗ್ಗೆ ಅಭಿಮಾನ ಮೂಡಿಸಿದವರು. ಪುಸ್ತಕಗಳ ಆಚೆಗೂ ಅವರು ಹೇಳುತ್ತಿದ್ದ ಕತೆಗಳು ನಮಗೆ ತುಂಬಾ ಇಷ್ಟವಾಗುತ್ತಿದ್ದವು. ನನಗೆ ಈಗಲೂ ನನೆಪಿದೆ ಇವರ ಕ್ಲಾಸ್‌ನಲ್ಲಿ ಹೆಚ್ಚು ಮಕ್ಕಳು ಇರುತ್ತಿದ್ದರು. ಇನ್ನೂ ಪೂವಮ್ಮ ಅವರು ನನ್ನ ಎಲ್ಲ ತರಲೆಗಳನ್ನು ಸಹಿಸಿಕೊಳ್ಳುತ್ತಿದ್ದವರು. ಡ್ರಿಲ್‌ ಮಾಡುವಾಗ ನನ್ನ ತರಲೆಗಳನ್ನು ನೋಡಿ ಹೊಡೆಯುತ್ತಿರಲಿಲ್ಲ, ಬದಲಾಗಿ ಮುಂದಿನ ಸಾಲಿನಲ್ಲಿ ನಿಲ್ಲಿಸುತ್ತಿದ್ದರು. ಹೀಗೆ ಮುಂದೆ ನಿಲ್ಲುವ ಗುಣವನ್ನು ಅಲ್ಲಿಂದಲೇ ನಾನು ಕಲಿತೆ.

ಕಾಲೇಜಿನಲ್ಲಿ ನಮಗೆ ಕನ್ನಡ ಶಿಕ್ಷರಾಗಿದ್ದ ನಾಗಲೂರ್‌ ಅವರೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ನನ್ನ ವೇದಿಕೆ ಮೇಲೆ ಹತ್ತುವಂತೆ ಮಾಡಿದವರು. ಕಾಲೇಜಿನ ಚಟುವಟಿಕೆಗಳಲ್ಲಿ ಭಾಗವಹಿಸುವಂತ ಮಾಡುವ ಮೂಲಕ ಓದಿನ ಆಚೆಗೂ ನನ್ನ ಪ್ರತಿಭೆಯನ್ನು ಗುರುತಿಸಿದವರು. ಈಗಲೂ ನನಗೆ ಸ್ಟೇಜ್‌ ಭಯ ಇಲ್ಲದೆ ಮಾತನಾಡುತ್ತೇನೆ ಎಂದರೆ ಅದಕ್ಕೆ ಕಾಲೇಜು ದಿನಗಳಲ್ಲಿ ನಮ್ಮ ನಾಗಲೂರ್‌ ಮಾಸ್ಟರ್‌ ಹಾಕಿದ ಬುನಾದಿಯೇ ಕಾರಣ. ನಾಯಕ್‌ ಮಾಸ್ಟರ್‌ ಅವರು ನಮ್ಮ ಎನ್‌ಎಸ್‌ಎಸ್‌ ಗುರುಗಳು. ನನ್ನಲ್ಲಿ ಶಿಸ್ತು ಬೆಳೆಸಿದವರು. ಹೀಗೆ ಬೇರೆ ಬೇರೆ ಕಾರಣಗಳಿಗೆ ಈ ನಾಲ್ಕು ಶಿಕ್ಷಕರು ಸದಾ ನನ್ನ ಮನದಲ್ಲಿ ನೆನಪಿರುತ್ತಾರೆ.

ಶಿಕ್ಷಕರಿಗೆ ಪತ್ರ ಬರೆದು ಶಿಕ್ಷಣ ಸಚಿವರ ಶುಭಾಶಯ

- ಗಣೇಶ್‌, ನಟ

ಅನ್ನಪೂರ್ಣ ಟೀಚರ್‌, ಉಮಾಶಂಕರ್‌ ಮೇಷ್ಟು್ರ ನಂಗಿಷ್ಟ

ನನಗೆ ಐದನೇ ತರಗತಿ ವರೆಗೂ ಬೆಸ್ಟ್‌ ಟೀಚರ್‌ ಅಂದರೆ ಅನ್ನಪೂರ್ಣ ಅವರು. ಉತ್ತರ ಕರ್ನಾಟಕದಿಂದ ಬಂದವರು. ನಾವು ಶಾಲೆ ಓದುವಾಗ ಒಂದು ಸಬ್‌ಜೆಕ್ಟ್ಗೆ ಒಬ್ಬರು ಶಿಕ್ಷಕರು ಅಂತಿರಲಿಲ್ಲ. ನಾಲ್ಕೈದು ಸಬ್‌ಜೆಕ್ಟ್ಗಳನ್ನು ಒಬ್ಬರೇ ಮಾಡುತ್ತಿದ್ದರು. ಹಾಗೆ ಅನ್ನಪೂರ್ಣ ಮೇಡಮ್‌ ಅವರು ನಮ್ಮ ಶಾಲೆಯ ಆಲ್‌ರೌಂಡರ್‌. ಇವರು ನನಗೆ ಇಷ್ಟಆಗಲಿಕ್ಕೆ ಕಾರಣ ಶಾಲೆಯ ಆಚೆಗೂ ನಮ್ಮ ಕುಟುಂಬದ ಜತೆಗೆ ಇದ್ದವರು.

ಅಂದರೆ ಹೊರಗಿನಿಂದ ಬಂದಿದ್ದ ಇವರು ವಾಸ ಮಾಡುತ್ತಿದ್ದು ನಮ್ಮ ಮನೆಯ ಪಕ್ಕದಲ್ಲೇ. ಹೀಗಾಗಿ ಶಾಲೆಯ ಆಚೆಗೂ ನನಗೆ ಪರಿಚಿತರು. ಶಾಲೆಯಲ್ಲಿ ತರಲೆ ಮಾಡಿದರೆ ಅಲ್ಲಿ ಬೈದು ಹೊಡೆಯುವವರು. ಮನೆಗೆ ಬಂದಾಗ ಪ್ರೀತಿಯಿಂದ ಮಾತನಾಡಿಸುವವರು. ವಿದ್ಯಾರ್ಥಿಗಳನ್ನು ಹೇಗೆ ನೋಡಿಕೊಳ್ಳಬೇಕು, ಅವರ ಬೆಳವಣಿಗೆಯಲ್ಲಿ ಹೇಗೆ ಬೆನ್ನೆಲುಬಾಗಿ ನಿಲ್ಲಬೇಕು ಎಂದು ಗೊತ್ತಿದ್ದ ಶಿಕ್ಷಕಿ ಇವರು. ದೀಪಾವಳಿ ಬಂದರೆ ಹಬ್ಬ ಮುಗಿದ ಮರು ದಿನ ಕೂಡ ಶಾಲೆಗೇ ಪಟಾಕಿ ತಂದು ಕೊಡುವವರು.

ಕಾಲೇಜಿಗೆ ಬಂದ ಮೇಲೆ ಬೆಂಗಳೂರಿನ ಜಯನಗರದ ಬಿಎಂಎಸ್‌ ಕಾಲೇಜಿನ ಆರ್‌ ಪಿ ಉಮಾಶಂಕರ್‌ ನನ್ನ ಅತ್ಯುತ್ತಮ ಶಿಕ್ಷಕರು. ಇವರು ನನಗೆ ಯಾವ ಸಬ್ಜೆಕ್ಟ್ ಕೂಡ ತೆಗೆದುಕೊಳ್ಳುತ್ತಿರಲಿಲ್ಲ. ಆದರೆ, ನಮ್ಮ ರಂಗತಂಡದ ಇನ್‌ಚಾಜ್‌ರ್‍ ಆಗಿದ್ದರು. ಈಗಲೂ ನನಗೆ ಇವರೇ ಅತ್ಯುತ್ತಮ ಫ್ರೆಂಡ್‌ ಹಾಗೂ ಶಿಕ್ಷಕರು. ತುಂಬಾ ರೇಗಿಸುತ್ತಿರುತ್ತೇವೆ. ಆದರೂ ನಮ್ಮನ್ನು ಬೈಯುವುದಿಲ್ಲ. ಕೊನೆಯ ಬೆಂಚ್‌ನ ವಿದ್ಯಾರ್ಥಿ ಆಗಿದ್ದ ನನಗೆ ಕಾಲೇಜು ಪಠ್ಯಗಳ ಆಚೆಗೂ ನನ್ನ ಬೆಳವಣಿಗೆಯನ್ನು ಕಂಡವರು.

- ರಿಷಬ್‌ ಶೆಟ್ಟಿ

ಲೂಸಿ ಮೇಡಂ ನಿಮಗಿದೋ ವಂದನೆ

ನಾನು ಓದಿದ್ದು ಮಂಗಳೂರಿನ ಸೇಂಟ್‌ ಝರೋಜಾದಲ್ಲಿ. ಇಲ್ಲಿ ನನ್ನ ಬೆಸ್ಟ್‌ ಟೀಚರ್‌ ಎಂದರೆ ಲೂಸಿ ಮೇಡಮ್‌. ಯಾಕೆ ಇವರು ನನಗೆ ಅತ್ಯುತ್ತಮ ಶಿಕ್ಷಕರು ಅಂದರೆ ನನ್ನಲ್ಲಿನ ಮೊದಲ ನಟಿಯನ್ನು ಗುರುತಿಸಿದ್ದೇ ಇವರು. ಹಿಂದಿ ಪಾಠ ಮಾಡುತ್ತಿದ್ದವರು ಹ ಮತ್ತು ಹೈ ನಡುವೆ ವ್ಯತ್ಯಾಸ ಹೇಳುವಾಗ ನಾನು ಅವರನ್ನು ಮಿಮಿಕ್ರಿ ಮಾಡಿ ಕಿಂಡಲ್‌ ಮಾಡುತ್ತಿದ್ದೆ. ಲಾಸ್ಟ್‌ ಬೆಂಚ್‌ನಲ್ಲಿ ಕೂತು ಹೀಗೆ ತರಲೆ ಮಾಡುತ್ತಿದ್ದ ನನ್ನ ಅವರು ಲೂಸಿ ಅವರು ಗುರುತಿಸಿದರು. ನಾನು ಒಬ್ಬ ನಟೋರಿಯಸ್‌ ವಿದ್ಯಾರ್ಥಿ ಅಂತ ಮೊದಲೇ ನಿರ್ಧರಿಸಿದ್ದರು.

ಅಂಥ ವಿದ್ಯಾರ್ಥಿಯನ್ನು ನಟಿಯಾಗಿಸಿದ ಮೊದಲ ಗುರು ಇವರೇ. ಒಮ್ಮೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದಾಗ ಒಂದು ನಾಟಕ ಮಾಡಿಸಿದರು. ಆಗ ನನ್ನಿಂದ ಕುಡುಕನ ಪಾತ್ರ ಮಾಡಿಸಿದರು. ಮತ್ತೊಮ್ಮೆ ಅಂಗುಲಿಮಾಲನ ಪಾತ್ರ ಮಾಡಿಸುವ ಮೂಲಕ ನನ್ನ ನಟಿಯಾಗಿ ಮೊದಲು ವೇದಿಕೆ ಹತ್ತಿಸಿದವರು ಲೂಸಿ ಮೇಡಮ್‌. ತರಲೆ ವಿದ್ಯಾರ್ಥಿ ಆಗಿದ್ದ ನನ್ನ ಅವರು ಒಳ್ಳೆಯ ವಿದ್ಯಾರ್ಥಿಯಾಗಿ ಮಾಡಿದರು.

ಮುಂದೆ ನನಗೆ ಅವರು ಬೆಸ್ಟ್‌ ಟೀಚರ್‌ ಆದರು. ಪ್ರತಿ ವರ್ಷ ನನ್ನ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರುತ್ತಾರೆ. ಈಗಲೂ ನಾನು ಕೂಡ ಅವರ ಹುಟ್ಟುಹಬ್ಬಕ್ಕೆ ವಿಷ್‌ ಮಾಡುತ್ತೇನೆ. ಹೀಗಾಗಿ ನನ್ನ ವಿದ್ಯಾಭ್ಯಾಸ ಹಾಗೂ ನಟನೆಯ ಮೊದಲು ಗುರು ಲೂಸಿ ಮೇಡಮ್‌.

- ನೀತೂ

ಪ್ರತಿ ಹೆಜ್ಜೆಯಲ್ಲೂ ಗುರುಗಳು ಇದ್ದಾರೆ

ನನ್ನ ಬಾಳಿನ ಪ್ರತಿಯೊಂದು ಹೆಜ್ಜೆಯಲ್ಲೂ ಗುರುಗಳು ಇದ್ದಾರೆ. ಜಯನಗರದ ಆಕ್ಸ್‌ಫರ್ಡ್‌ ಸ್ಕೂಲ್‌ನಲ್ಲಿ ಕೆ.ವಿ. ನಂಜುಂಡಯ್ಯ ಮತ್ತು ಗಾಯಿತ್ರಿ ನಗರದ ಭುವನೇಶ್ವರಿ ವಿದ್ಯಾಸಂಸ್ಥೆಯಲ್ಲಿ ಗಂಗಾಧರಯ್ಯ ಮೇಷ್ಟ್ರು ನನಗೆ ಕನ್ನಡ ಭಾಷೆಯ ಸ್ಪಷ್ಟಉಚ್ಛಾರ ಕಲಿಸಿಕೊಟ್ಟರು. ಅವರು ಕಲಿಸಿಕೊಟ್ಟಭಾಷೆಯ ಮೇಲಿನ ಹಿಡಿತವೇ ಇಂದು ನನ್ನ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಸಂಗೀತಕ್ಕೆ ನನ್ನ ತಾಯಿ ವಿಜಯ ಲಕ್ಷ್ಮೇ ಅವರೇ ನನಗೆ ಗುರು. ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ವಿದ್ವಾನ್‌ ಚನ್ನಕೃಷ್ಣಪ್ಪ, ಸಿನಿಮಾ ರಂಗದಲ್ಲಿ ಹಂಸಲೇಖ, ರಾಜ್‌ ಕುಮಾರ್‌, ಇಳಯರಾಜ, ವಿಷ್ಣುವರ್ಧನ್‌ ಸೇರಿ ಸಾಕಷ್ಟುಮಂದಿ ಗುರುಗಳಿದ್ದಾರೆ.

ನನ್ನ ಪ್ರಕಾರ ಯಾವುದೇ ಗುರುವನ್ನು ಶಿಷ್ಯ ಮೀರಿಸಲು ಸಾಧ್ಯವಿಲ್ಲ. ಗುರುವಿಗೆ ತನ್ನದೇ ಆದ ಗುರುತ್ವ ಮತ್ತು ಗುರುತ್ವಾಕರ್ಷಣ ಶಕ್ತಿ ಇರುತ್ತದೆ. ಅವರ ಮುಂದೆ ನಾವು ಯಾವಾಗಲೂ ಶಿಷ್ಯರಾಗಿರುವುದೇ ಸರಿ. ಇನ್ನು ಸಮಾಜ ಎನ್ನುವ ಸಾಗರದಲ್ಲಿ ನಮಗೆ ಸಿಗುವ ಪ್ರತಿಯೊಬ್ಬ ವ್ಯಕ್ತಿಯೂ ಗುರುವೇ. ನೂರರಲ್ಲಿ ಐವತ್ತರಷ್ಟುಮಂದಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದರೆ, ಉಳಿದ ಇನ್ನು ಐವತ್ತು ಮಂದಿ ಹೇಗೆ ಬದುಕಬಾರದು ಎನ್ನುವುದನ್ನು ಕಲಿಸುತ್ತಾರೆ.

- ಕೆ. ಕಲ್ಯಾಣ್‌

ಶಿಕ್ಷಕರ ದಿನವೆಂದರೆ ನನಗೆ ಎರಡು ಸಂಭ್ರಮ

ನನಗೆ ನನ್ನ ತಂದೆ-ತಾಯಿಯೇ ಮೊದಲ ಗುರುಗಳು. ಸೆಪ್ಟೆಂಬರ್‌ 5 ಶಿಕ್ಷರಕ ದಿನಾಚರಣೆ ಜೊತೆಗೆ ನನ್ನ ತಂದೆ ತಾಯಿಯ ಮದುವೆ ಆನಿವರ್ಸರಿಯೂ ಕೂಡ. ಇದರಲ್ಲಿ ಯಾವುದನ್ನೇ ಆಚರಿಸಿದರೂ ನನಗೆ ಖುಷಿ. ಇನ್ನು ಸುಜಾತ ಮೇಡಂ, ವೇಣಿ ಮೇಡಂ ನನ್ನನ್ನು ಪ್ರಾಥಮಿಕ ಹಂತದಲ್ಲಿ ತಿದ್ದಿ ತೀಡಿದವರು. ಕಾಲೇಜಿನಲ್ಲಿ ನನಗೆ ಚಂದ್ರಮೌಳಿ ಎನ್ನುವ ಶಿಕ್ಷಕರು ಸಿಕ್ಕಿದರು. ಅವರು ನನ್ನಲ್ಲಿ ಶಿಕ್ಷಣಕ್ಕೆ ಕೊಟ್ಟಷ್ಟೇ ಒತ್ತನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಕೊಡುವಂತೆ ಮಾಡಿದರು.

ಅವರ ಸಹಕಾರ ನನ್ನಲ್ಲಿನ ಪ್ರತಿಭೆ ಹೊರಬರುವುದಕ್ಕೆ ಸಹಾಯ ಮಾಡಿದೆ. ಅನಂತ ಭಾಗವತ್‌ ನನ್ನ ಸಂಗೀತ ಗುರುಗಳು. ಇವರು ನನಗೆ ಹೇಳಿಕೊಟ್ಟಿದ್ದು, ಸಂಗೀತವೇ ಆಗಲಿ, ಯಾವುದೇ ಕೆಲಸವಾಗಲಿ ಶುದ್ಧವಾಗಿ ಮಾಡಿದರೆ ಫಲ ಸಿಕ್ಕೇ ಸಿಕ್ಕುತ್ತದೆ ಎಂದು. ಅದು ನನ್ನ ಬಾಳಿಗೆ ದಾರಿ ತೋರಿದ ಮಾತೂ ಹೌದು.

ನಾನು ಹಾಸ್ಟೆಲ್‌ನಲ್ಲಿ ಹತ್ತನೇ ಕ್ಲಾಸ್‌ ಓದುತ್ತಿರಬೇಕಾದರೆ ಬಿವಿಎಸ್‌ ಎನ್ನುವ ಮೇಷ್ಟು್ರ ಬಯೋಲಜಿ ಪಾಠ ಮಾಡುತ್ತಿದ್ದರು. ಆದರೆ ನನಗೆ ಎಕ್ಸಾಂ ಟೈಮ್‌ಗೆ ಬಯೋಲಜಿ ಸರಿಯಾಗಿ ತಿಳಿಯದೇ ಫೇಲ್‌ ಆಗುತ್ತೇನೆ ಎನ್ನುವ ಭಯ ಕಾಡಿತ್ತು. ಇದನ್ನು ಅವರ ಬಳಿ ಹೇಳಿಕೊಂಡಾಗ ಅವರೇ ಬೆಳಿಗ್ಗೆ ಎಬ್ಬಿಸಿ ವಾರಗಟ್ಟಲೆ ಪಾಠ ಮಾಡಿದರು. ಇದರಿಂದ ನಾನು ಸೈನ್ಸ್‌ನಲ್ಲಿ ಸ್ಕೂಲಿಗೇ ಟಾಪ್‌ ಆದೆ. ಇದರ ಜೊತೆಗೆ ನಾನೂ ಕೂಡ ಒಂದೂವರೆ ವರ್ಷ ಶಿಕ್ಷಕನಾಗಿ ಕೆಲಸ ಮಾಡಿದ್ದೆ. ಈ ಎಲ್ಲಾ ಕಾರಣದಿಂದ ನನಗೆ ಶಿಕ್ಷಕರ ದಿನವೆಂದರೆ ತುಂಬಾ ವಿಶೇಷ.

ರಾಜು ಮೇಷ್ಟ್ರಿನಿಂದ ಕಲಿತದ್ದು ಅಪಾರ

ನನಗೆ ಸಂಗೀತ ಪಾಠದ ಜೊತೆಗೆ ಬದುಕಿನ ಪಾಠ ಹೇಳಿಕೊಟ್ಟವರು ಶಿವಮೊಗ್ಗದ ರಾಜು ಮಾಸ್ಟರ್‌. ನನ್ನಂತಹ ನೂರಾರು ಮಕ್ಕಳಿಗೆ ಅವರು ಸಂಗೀತ ಕಲಿಸಿದ್ದಾರೆ. ಜೊತೆಗೆ ಬದುಕಿನಲ್ಲಿ ಶಿಸ್ತನ್ನೂ ತುಂಬಿದ್ದಾರೆ. ಅವರು ಮೊದಲು ಸೇನೆಯಲ್ಲಿ ಇದ್ದವರು. ಅಲ್ಲಿಂದ ನಿವೃತ್ತಿಯಾದ ಬಳಿಕ ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದರು. ಅಪ್ರತಿಮ ದೇಶ ಭಕ್ತರಾಗಿದ್ದ ಅವರನ್ನು ನೆನೆಸಿಕೊಂಡರೆ ನನಗೆ ಇಡೀ ಬದುಕೇ ನೆನಪಾಗುತ್ತದೆ.

ಅವರ ಪಾಠದ ವಿಧಾನವೇ ಭಿನ್ನವಾಗಿತ್ತು. ನನ್ನ ಇಂದಿನ ಕೆಲಸ ಕಾರ್ಯಗಳೆಲ್ಲದರ ಮೇಲೆ ಅವರ ಪ್ರಭಾವ ಇದೆ. ಸಿನಿಮಾದಲ್ಲಿ ಕೆಲಸ ಮಾಡುತ್ತೇನೆ ಎಂದು ಬೆಂಗಳೂರಿಗೆ ಹೊರಟು ನಿಂತಾಗ ತುಂಬು ಹೃದಯದಿಂದ ಆಶೀರ್ವಾದ ಮಾಡಿ ಕಳಿಸಿದವರು ಅವರು. ಈಗಲೂ ನಾನು ಯಾವುದೇ ಸಿನಿಮಕ್ಕೆ ಕೆಲಸ ಮಾಡುವಾಗ ಅವರು ನನ್ನೊಳಗೆ ನಿಂತುಕೊಂಡು ಕೆಲಸ ಮಾಡಿಸುವಂತೆ ಭಾಸವಾಗುತ್ತದೆ. ಒಬ್ಬ ಕಂಪೋಸರ್‌ ಮ್ಯೂಸಿಕ್‌ ಅನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು. ಸಂಗೀತದ ಪ್ರಾಥಮಿಕ ಪಟ್ಟುಗಳೇನು ಎನ್ನುವುದನ್ನು ಅವರು ನಮಗೇ ಗೊತ್ತಿಲ್ಲದ ಹಾಗೆ ನಮ್ಮೊಳಗೆ ತುಂಬಿದ್ದರು. ಅದುವೇ ಇಂದು ನನಗೆ ಸಹಾಯಕ್ಕೆ ಬರುತ್ತಿರುವುದು. 1998ರಿಂದ 2003ರ ವರೆಗೂ ನಾನು ಅವರೊಂದಿಗೇ ಇದ್ದು ಕಲಿತದ್ದು ಅಪಾರ.

- ಅಜನೀಶ್‌ ಲೋಕನಾಥ್‌

ಎಲ್ಲಾ ಗುರುಗಳೂ ಬದುಕೆನ್ನುವ ಗುರುವಿನ ಹತ್ತಿರ ತಂದು ಬಿಡುತ್ತಾರೆ

ಶಿಕ್ಷಕರು ಎಂದ ತಕ್ಷಣ ಪಟ್ಟಿಬೆಳೆಯುತ್ತಾ ಹೋಗುತ್ತದೆ. ನನಗೆ ಮೊದಲಿಗೆ ಮೃದಂಗ ಪಾಠ ಹೇಳಿಕೊಟ್ಟಕೃಷ್ಣ ಸ್ವಾಮಿ ನಾಯ್ಡು ಅಪರೂಪದ ಗುರುಗಳು. ವಿದ್ಯೆ ಎನ್ನುವುದು ಎಲ್ಲರೂ ಕಲಿಯಬೇಕಾದ ಸಾಧನ ಎನ್ನುವುದನ್ನು ಅವರು ಯಾವಾಗಲೂ ಹೇಳುತ್ತಿದ್ದರು. ಇನ್ನೊಂದು ನಿಟ್ಟಿನಲ್ಲಿ ನನಗೆ ಮನೆಯೇ ಮೊದಲ ಪಾಠ ಶಾಲೆ. ಅಲ್ಲಿ ಕಲಿದದ್ದು ಸಾವಿರ. ನಾವು ಶಿಷ್ಯರಾಗಲು ಸಿದ್ಧವಿದ್ದರೆ, ಕಲಿಯುವ ಮನಸ್ಸು ಇದ್ದರೆ ಎಲ್ಲರೂ ಗುರುಗಳಾಗುತ್ತಾರೆ.

ಎಸ್‌ಜೆಆರ್‌ಸಿ ಕಾಲೇಜಿನಲ್ಲಿ ನಾನು ಓದುತ್ತಿರಬೇಕಾದರೆ ಶ್ರೀನಿವಾಸ್‌ ಎನ್ನುವ ಪಿಟಿ ಮಾಸ್ಟರ್‌ ಇದ್ದರು. ಅವರ ಬಗ್ಗೆ ಆಗ ಕೋಪ ಇದ್ದರೂ ಈಗ ಅವರು ಕಲಿಸಿದ ಪಾಠ ನಮಗೆ ಎಷ್ಟುಉಪಯುಕ್ತವಾಗಿದೆ ಎನ್ನಿಸುತ್ತದೆ. ಅವರು ಕೊಟ್ಟಷ್ಟುಏಟುಗಳನ್ನು ಮತ್ಯಾರೂ ಕೊಟ್ಟಿಲ್ಲ.

ಅವರ ಕೊಟ್ಟಏಟುಗಳು ಇಂದು ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸುವಲ್ಲಿ ಸಹಾಯ ಮಾಡಿವೆ. ಗುರುರಾಜ್‌, ಮಾರುತಿ ಮಿರಜ್ಕರ್‌ ಮೊದಲಾದವರು ನನಗೆ ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ನೀಡಿದ್ದಾರೆ. ಎಲ್ಲಾ ಹಂತದಲ್ಲಿಯೂ ಸಿಕ್ಕುವ ಗುರುಗಳು ನಮ್ಮಿಂದ ಒಂದೊಂದೇ ಮೆಟ್ಟಿಲು ಹತ್ತಿಸಿ ಬದುಕು ಎನ್ನುವ ದೊಡ್ಡ ಗುರುವಿನ ಹತ್ತಿರ ತಂದು ಬಿಡುತ್ತಾರೆ. ಆಮೇಲೆ ನಾವು ಈಚುತ್ತಾ ಸಾಗಬೇಕು. ಕಲಿಯುತ್ತಾ ಹೋಗಬೇಕು.