ಬೆಂಗಳೂರು [ಸೆ.05]: ಮಕ್ಕಳ ಮನಸ್ಸನ್ನು ತಿದ್ದಿ ತೀಡಿ, ಪೋಷಿಸಿ, ಅವರಲ್ಲಿ ಶಿಕ್ಷಣದ ಕಂಪು ತುಂಬಿ ಉತ್ತಮ ಹಾಗೂ ಸದೃಢ ಸಮಾಜದ ನಿರ್ಮಾಣಕ್ಕೆ ತಮ್ಮ ಇಡೀ ಜೀವನವನ್ನು ಧಾರೆ ಎರೆಯುವ ಪವಿತ್ರ ಕಾಯಕದಲ್ಲಿ ತೊಡಗಿರುವ ಎಲ್ಲರಿಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಶುಭಾಶಯ ಕೋರಿದ್ದಾರೆ.

ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರನ್ನು ಉದ್ದೇಶಿಸಿ ಪತ್ರ ಬರೆದಿರುವ ಸಚಿವರು, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನಾಡಿನ ಸಮಸ್ತ ವಿದ್ಯಾರ್ಥಿ ಹಾಗೂ ಶಿಕ್ಷಕ ಸಮುದಾಯಕ್ಕೆ ತಮ್ಮ ಜೊತೆಗಿರುತ್ತೇನೆ ಎಂದು ಭರವಸೆ ನೀಡಿದ್ದಾರೆ.

 

‘ನಮ್ಮಲ್ಲಿ ಚಿಂತನಶೀಲತೆ ಬೆಳೆಸುವವರೇ ನಿಜವಾದ ಶಿಕ್ಷಕರು’ ಎಂಬ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಮಾತಿನಿಂದಲೇ ಶಿಕ್ಷಕ ಸ್ಥಾನ ಮಹತ್ವದ್ದು ಎಂದು ತಿಳಿಯುತ್ತದೆ. ‘ಆಚಾರ್ಯ ದೇವೋಭವ’ ಎಂಬ ಸಂಸ್ಕೃತಿ ನಮ್ಮದಾಗಿದೆ. ಹೆತ್ತ ತಾಯಿ, ಬದುಕು ಕಟ್ಟಿಕೊಟ್ಟತಂದೆ ಹಾಗೆಯೇ ಸಂಸ್ಕಾರ ನೀಡಿದ ಗುರು ಮೂವರನ್ನೂ ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುವುದು ಭಾರತೀಯ ಸಂಸ್ಕೃತಿಯ ಹೆಗ್ಗಳಿಕೆಯಾಗಿದೆ. ಸುಂದರ ಸಮಾಜವೆಂಬ ತೋಟದ ಮಾಲೀಕರೇ ನಿಜವಾದ ಶಿಕ್ಷಕರು ಎಂದು ಬಣ್ಣಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾನು ವಕೀಲ, ಸಮಾಜ ಸೇವಕ, ಶಾಸಕ ಮತ್ತು ಸಚಿವನಾಗುವ ಸ್ಥಾನವನ್ನು ಪಡೆದಿರುವ ಹಿಂದಿನ ಎಲ್ಲಾ ಶಕ್ತಿ ನನ್ನೆಲ್ಲಾ ಶಿಕ್ಷಕ ಬಂಧುಗಳೇ ಆಗಿದ್ದಾರೆ. ಯಾವುದೇ ಶಿಕ್ಷಕ ಕಲಿಸುವುದು ಪಠ್ಯದಿಂದಲ್ಲ, ಅವನ ಹೃದಯದಿಂದ ಎಂಬ ಮಾತೊಂದಿದೆ. ಶಿಕ್ಷಕರೆಂದರೆ ದೇಶ ನಿರ್ಮಾಣದ ಹಾಗೆಯೇ ಸಮಾಜ ಕಟ್ಟುವ ಪವಿತ್ರ ಕಾರ್ಯ ಮಾಡುವವರು ಎಂಬ ಭಾವನೆ ಎಲ್ಲರದ್ದೂ ಆಗಿದೆ. ವ್ಯಕ್ತಿಯ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಈ ಮೂಲಕ ಶುಭಾಶಯ ಕೋರಿದ್ದಾರೆ.