ಬೀದಿಗೆ ಬಂದಿದೆ ಸ್ಯಾಂಡಲ್‌ವುಡ್ ಸಂಭಾವನೆ ಜಗಳ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Aug 2018, 1:11 PM IST
Sandalwood Celebrities facing remuneration problem
Highlights

ಕನ್ನಡ ಚಿತ್ರೋದ್ಯಮ ತಂತ್ರಜ್ಞರಿಗೆ ಸಂಭಾವನೆ ಕೊಡುತ್ತಿಲ್ಲ ಎಂದು ಕನ್ನಡಪ್ರಭ ವರದಿ ಮಾಡಿತ್ತು. ಅನೇಕ ನಟರು, ಹೊಸ ನಿರ್ದೇಶಕರು, ಕತೆಗಾರರು ಮತ್ತು ಚಿತ್ರಕತೆಗಾರರಿಗೆ ಚಿಕ್ಕ ಸಿನಿಮಾಗಳು ಸಂಭಾವನೆ ನೀಡದೇ ದುಡಿಸಿಕೊಳ್ಳುತ್ತಿದೆ ಎಂಬುದು ಈಗ ನಿಜವಾಗಿದೆ. ಆರೋಹಣ ಚಿತ್ರದ ನಟ ರೋಹಿತ್ ತನಗೆ ಬರಬೇಕಾದ ಸಂಭಾವನೆ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ. ನಿರ್ದೇಶಕರು ತನ್ನನ್ನು ದನಕಾಯೋನು ಎಂದು ಕರೆದಿದ್ದಾರೆ ಎಂದು ನಿರ್ಮಾಪಕರು ದೂರಿದ್ದಾರೆ. ಗಲಾಟೆ ಜೋರಾಗಿದೆ.

ಬೆಂಗಳೂರು (ಆ. 20): ಸಂಭಾವನೆ ವಿಚಾರದಲ್ಲಿ ‘ಆರೋಹಣ’ ಚಿತ್ರದ ನಿರ್ಮಾಪಕ, ನಿರ್ದೇಶಕ ಹಾಗೂ ಕಲಾವಿದರ ನಡುವಿನ ವೈಮನಸ್ಸು ಬೀದಿಗೆ ಬಿದ್ದಿದೆ. ಮೂರು ತಿಂಗಳಾದರೂ ತಮಗೆ ಪೇಮೆಂಟ್ ನೀಡದೆ ನಿರ್ಮಾಪಕರು ಸತಾಯಿಸುತ್ತಿದ್ದಾರೆ. ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಚಿತ್ರದ ಸಹ ನಟ ರೋಹಿತ್ ಶೆಟ್ಟಿ ಆರೋಪಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಸಾಫ್ಟ್‌ವೇರ್ ಉದ್ಯೋಗಿ ಸುಶೀಲ್ ಕುಮಾರ್ ನಿರ್ಮಿಸಿ, ನಾಯಕರಾಗಿ ನಟಿಸಿರುವ ‘ಆರೋಹಣ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶದಿಂದ ನಿರ್ದೇಶಕ ಶ್ರೀಧರ್ ಶೆಟ್ಟಿ ಚಿತ್ರ ತಂಡದೊಂದಿಗೆ ಪತ್ರಿಕಾಗೋಷ್ಟಿ ಕರೆದಿದ್ದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ ಚಿತ್ರದ ಸಹ ನಟ ರೋಹಿತ್, ‘ಮೊದಲು ಚಿತ್ರದಲ್ಲಿ ಅಭಿನಯಿಸಲು ಎರಡು ಲಕ್ಷ ಸಂಭಾವನೆಗೆ ಒಪ್ಪಿಕೊಂಡಿದ್ದೆ. 50 ಸಾವಿರ ಅಡ್ವಾನ್ಸ್  ಕೊಟ್ಟಿದ್ದರು. ಶೂಟಿಂಗ್ ಮುಗಿಸಿ, ಬಾಕಿ ಪೇಮೆಂಟ್ ಕೇಳಿದರೆ ನಿರ್ಮಾಪಕರು ಬೆದರಿಕೆ ಹಾಕುತ್ತಿದ್ದಾರೆ. ನನಗೆ ಅನ್ಯಾಯವಾಗಿದೆ’ ಎಂದು ಆರೋಪಿಸಿದರು.

ಈ ಆರೋಪಕ್ಕೆ ನಿರ್ಮಾಪಕ ಸುಶೀಲ್ ಕುಮಾರ್, ‘ಇದು ನಿರ್ದೇಶಕರು ಮತ್ತು ರೋಹಿತ್ ನಡುವಿನ ಜಗಳ. ಇವರ ಜಗಳದಿಂದ ಚಿತ್ರಕ್ಕೆ ತೊಂದರೆಯಾಗಿದೆ. ಕೇಳಿದರೆ ನಿರ್ದೇಶಕರೇ ನನಗೇ ದನ ಕಾಯೋನು ಅಂತ ಅವಮಾನಿಸಿದರು’ ಎಂದು ಆರೋಪಿಸಿದರು. ಪಕ್ಕದಲ್ಲಿಯೇ ಕುಳಿತಿದ್ದ ನಿರ್ದೇಶಕ ಶ್ರೀಧರ್ ಸಿಡಿಮಿಡಿಗೊಂಡು ಹಾಗೆಲ್ಲಾ ನಾನು ಮಾತನಾಡಿಲ್ಲ. ಸುಮ್ಮನೆ ಆರೋಪ ಮಾಡಲಾಗುತ್ತಿದೆ ಎಂದು ಸುಶೀಲ್ ತಿರುಗೇಟು ನೀಡಿದರು. ಕಡೆಗೆ ಚಿತ್ರ ತಂಡ ಮಧ್ಯ ಪ್ರವೇಶಿಸಿ ಗಲಾಟೆ ನಿಲ್ಲಿಸಿತು. 

loader