ತಮಿಳು ನಟ ಅಜಿತ್ ಕುಮಾರ್ ಅಭಿನಯದ ನಿರ್ದೇಶಕ ಆದಿಕ್ ರವಿಚಂದ್ರನ್ ಅವರ ‘ಡೇರ್ ಡೆವಿಲ್’ ಸಿನಿಮಾದಲ್ಲಿ ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಖಳನಾಯಕನಾಗಿ ನಟಿಸಲಿದ್ದಾರೆ. ಅಜಿತ್ ಎದುರು ಪವರ್ಫುಲ್..
ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್ ಕುಮಾರ್ ಮತ್ತು ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಒಂದೇ ಸಿನಿಮಾದಲ್ಲಿ ಮುಖಾಮುಖಿಯಾಗುತ್ತಿದ್ದಾರೆ. ಅದೂ ಶಿವಣ್ಣ ನಾಯಕನಾಗಿ ಅಲ್ಲ, ಅಜಿತ್ಗೆ ಪ್ರಬಲ ಎದುರಾಳಿಯಾಗಿ! ಹೌದು, ನಿರ್ದೇಶಕ ಆದಿಕ್ ರವಿಚಂದ್ರನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಅಜಿತ್ ಅವರ ಹೊಸ ಸಿನಿಮಾ ‘ಡೇರ್ ಡೆವಿಲ್’ನಲ್ಲಿ ಶಿವರಾಜ್ಕುಮಾರ್ ಖಳನಾಯಕನಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಎರಡೂ ಚಿತ್ರರಂಗಗಳಲ್ಲಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಶಿವಣ್ಣನಿಗಾಗಿ ಹುಡುಕಾಟ ನಡೆಸಿದ್ದ ಚಿತ್ರತಂಡ!
‘ಡೇರ್ ಡೆವಿಲ್’ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಅಜಿತ್ ಎದುರು ತಾಕತ್ತುಳ್ಳ ಖಳನಾಯಕನ ಪಾತ್ರಕ್ಕೆ ಯಾರು ಬಣ್ಣ ಹಚ್ಚಲಿದ್ದಾರೆ ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡುತ್ತಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಜಿತ್ಗೆ ಎದುರಾಳಿಯಾಗಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.
ಅಜಿತ್ ಅವರ ಮ್ಯಾನೇಜರ್ ಸುರೇಶ್ ಚಂದ್ರ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಿನಿಮಾದಲ್ಲಿ ಖಳನಾಯಕನ ಪಾತ್ರ ಬಹಳ ಶಕ್ತಿಶಾಲಿ ಹಾಗೂ ಕಥೆಗೆ ನಿರ್ಣಾಯಕವಾಗಿದೆಯಂತೆ. ಈ ಪಾತ್ರಕ್ಕಾಗಿ ಚಿತ್ರತಂಡ ಹಲವು ನಟರ ಹೆಸರುಗಳನ್ನು ಪರಿಶೀಲಿಸಿತ್ತು. ಆದರೆ, ಅಜಿತ್ ಅವರಿಗೆ ಶಿವರಾಜ್ಕುಮಾರ್ ಅವರ ಮೇಲೆ ವಿಶೇಷ ಗೌರವ ಮತ್ತು ಅಭಿಮಾನವಿದ್ದ ಕಾರಣ ಕೊನೆಗೆ ಅವರನ್ನೇ ಆಯ್ಕೆ ಮಾಡಲಾಗಿದೆ ಎಂದು ಸುರೇಶ್ ಚಂದ್ರ ತಿಳಿಸಿದ್ದಾರೆ.
ಕಥೆ ಕೇಳಿ ತಕ್ಷಣವೇ ಗ್ರೀನ್ ಸಿಗ್ನಲ್!
ಈ ಸಿನಿಮಾಕ್ಕಾಗಿ ಚಿತ್ರತಂಡ ಸುಮಾರು ಮೂರು-ನಾಲ್ಕು ತಿಂಗಳ ಹಿಂದೆಯೇ ಶಿವಣ್ಣ ಅವರನ್ನು ಸಂಪರ್ಕಿಸಿತ್ತಂತೆ. ನಿರ್ದೇಶಕ ಆದಿಕ್ ರವಿಚಂದ್ರನ್ ಖುದ್ದಾಗಿ ಬಂದು ಚಿತ್ರದ ಕಥೆ ವಿವರಿಸಿದಾಗ ಶಿವಣ್ಣ ಕೂಡಲೇ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ನಂತರ ಅಜಿತ್ ಅವರೂ ಶಿವಣ್ಣ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ನವೆಂಬರ್ 17 ಅಥವಾ 18ರಿಂದ ಶಿವರಾಜ್ಕುಮಾರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಹೈದರಾಬಾದ್ನಲ್ಲಿ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಡಿಸೆಂಬರ್ವರೆಗೂ ಈ ಹಂತದ ಶೂಟಿಂಗ್ ನಡೆಯಲಿದೆ.
ತಮಿಳು ಚಿತ್ರರಂಗದಲ್ಲಿ ಶಿವಣ್ಣನಿಗೆ ಮತ್ತೊಂದು ದೊಡ್ಡ ಜವಾಬ್ದಾರಿ!
ತಮಿಳು ಸಿನಿಮಾಗಳಲ್ಲಿ ಶಿವಣ್ಣನ ಅಬ್ಬರ ಹೊಸದೇನಲ್ಲ. ರಜನಿಕಾಂತ್ ಅಭಿನಯದ ‘ಜೈಲರ್’ನಲ್ಲಿ ನರಸಿಂಹ ಪಾತ್ರದ ಮೂಲಕ ಗಮನ ಸೆಳೆದಿದ್ದ ಅವರು, ಬಳಿಕ ‘ಕ್ಯಾಪ್ಟನ್ ಮಿಲ್ಲರ್’ ಹಾಗೂ ‘ಜೈಲರ್ 2’ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಅಜಿತ್ ಕುಮಾರ್ ಅವರ ಸಿನಿಮಾದಲ್ಲೂ ಪ್ರಮುಖ ಪಾತ್ರದ ಮೂಲಕ ತಮಿಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ‘ಡೇರ್ ಡೆವಿಲ್’ನಲ್ಲಿ ಪ್ರಭು, ಪಾರ್ಥಿಬನ್ ಹಾಗೂ ಶ್ರೀಲೀಲಾ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.
ಇನ್ನು ಅಜಿತ್ ಮತ್ತು ಶಿವಣ್ಣ ಅವರ ನಡುವಿನ ಮುಖಾಮುಖಿ ಸಿನಿಮಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗುವ ನಿರೀಕ್ಷೆಯಿದೆ. ಕನ್ನಡದ ಹ್ಯಾಟ್ರಿಕ್ ಹೀರೋಗೆ ತಮಿಳಿನ ಸ್ಟಾರ್ ನಟ ಅಜಿತ್ ಎದುರಾಳಿಯಾಗುತ್ತಾರೋ ಅಥವಾ ಅಜಿತ್ಗೆ ಶಿವಣ್ಣನ ಖಳನಾಯಕನ ಪಾತ್ರವೇ ಸವಾಲಾಗುತ್ತದೋ ಎಂಬ ಕುತೂಹಲ ಈಗಲೇ ಶುರುವಾಗಿದೆ. ಈ ಇಬ್ಬರು ಸ್ಟಾರ್ಗಳ ಮುಖಾಮುಖಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.










