ನಿತೇಶ್ ತಿವಾರಿ ನಿರ್ದೇಶನದ ರಾಮಾಯಣದಲ್ಲಿ ರಾವಣನಾಗಿ ಯಶ್ ಮಿಂಚಿದ್ದು, ಅವರ ಲುಕ್ ಮತ್ತು ಕಾಸ್ಟ್ಯೂಮ್ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಕೆಜಿಎಫ್ನ ರಾಕಿಭಾಯ್ ಮತ್ತು ರಾವಣನ ಪಾತ್ರಗಳ ನಡುವಿನ ಹೋಲಿಕೆ ಮತ್ತು ವ್ಯತ್ಯಾಸಗಳ ಕುರಿತು ಕಾಸ್ಟ್ಯೂಮ್ ಡಿಸೈನರ್ ಸಾನಿಯಾ ಸರ್ಧಾರಿಯಾ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು ( ನವೆಂಬರ್ 16) : ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಭರ್ಜರಿ ಯಶಸ್ಸು ಕಾಣ್ತಿದೆ. ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಮಿಂಚಿದ್ದಾರೆ.
ಈ ಸಿನಿಮಾದ ಅದ್ದೂರಿತನ ಹಿಂದೆ ಲಂಕಾಧಿಪತಿ ರಾವಣನ ಪಾತ್ರ ನಿಭಾಯಿಸಿದ್ದ ಯಶ್ ಅವರ ಪಾತ್ರ ತುಂಬಾನೇ ಮುಖ್ಯವಾಗಿದೆ. ರಾಮನ ಪಾತ್ರಕ್ಕಿಂತ ರಾವಣನ ಪಾತ್ರದ ಬಗ್ಗೆಯೇ ಹೆಚ್ಚು ಚರ್ಚೆ ಆಗ್ತಿದೆ. ಯಶ್ ಅವರ ಲುಕ್, ಆಕರ್ಷಕ ಆಭರಣ, ಕಾಸ್ಟ್ಯೂಮ್, ಅವರ ನಟನೆ ಸೇರಿದಂತೆ ಈ ಎಲ್ಲಾ ವಿಚಾರಗಳ ಬಗ್ಗೆಯೂ ವಿಮರ್ಶೆ ನಡೆಯುತ್ತಿದೆ. ಇನ್ನು, ಚಿತ್ರದಲ್ಲಿ ಯಶ್ ವೇಷಭೂಷಣ ಹಾಗೂ ಕಾಸ್ಟ್ಯೂಮ್ ಡಿಸೈನ್ಗೆ ಸಂಬಂಧಿಸಿದಂತೆ ಆಸಕ್ತಿದಾಯಕ ಸಂಗತಿ ಸಿಕ್ಕಿದೆ.
ಯಶ್ ರಾಮಾಯಣಕ್ಕೆ Costume Design ಮಾಡಿದ್ದು ಸಾನಿಯಾ ಸರ್ಧಾರಿಯಾ! ಸಾನಿಯಾ ಸರ್ಧಾರಿಯಾ ಅವರು ಯಶ್ ಅಭಿನಯದ ಕೆಜಿಎಫ್, ಟಾಕ್ಸಿಕ್ ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ಅವರು ಇತ್ತೀಚೆಗೆ Variety India ಜೊತೆ ಮಾತನಾಡುವ ವೇಳೆ ಆಸಕ್ತಿದಾಯ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ತ್ರೇತಾಯುಗದ ರಾವಣ, ಕಲಿಯುಗದ ರಾಕಿ
ರಾಕಿ ಭಾಯ್ ಮತ್ತು ರಾವಣನ ಪಾತ್ರಗಳ ಕಾಸ್ಟ್ಯೂಮ್ಗಳಲ್ಲಿ ವ್ಯತ್ಯಾಸ ತೋರಿಸೋದು ನಿಮಗೆ ಕಷ್ಟವಾಯಿತಾ ಎಂಬ ಪ್ರಶ್ನೆ ಉತ್ತರಿಸಿರುವ ಸಾನಿಯಾ.. ಆ ಎರಡು ಪಾತ್ರಗಳ ನಡುವೆ ವ್ಯತ್ಯಾಸ ತೋರಿಸಲು ಹೆಚ್ಚು ಕಷ್ಟಪಡಲಿಲ್ಲ. ಯಾಕೆಂದರೆ ಅವೆರಡೂ ಸಂಪೂರ್ಣವಾಗಿ ಬೇರೆ ಬೇರೆ ಕಾಲಘಟ್ಟದ ಕಥೆಗಳಾಗಿದ್ದವು. ರಾಮಾಯಣ ತ್ರೇತಾಯುಗದಲ್ಲಿ ನಡೆದರೆ.. ಕೆಜಿಎಫ್ ಕಲಿಯುಗದ ಕಥೆ ಆಗಿದೆ. ಆ ಕಾಲಘಟ್ಟವೇ ಅವೆರಡನ್ನೂ ವಿಭಿನ್ನ ಪ್ರಪಂಚಗಳನ್ನಾಗಿ ಮಾಡಿಬಿಡುತ್ತದೆ ಎಂದಿದ್ದಾರೆ.
ಆದರೆ ಎರಡೂ ಪಾತ್ರಗಳು ಬೇರೆ ಬೇರೆ ಪ್ರಪಂಚಕ್ಕೆ ಸೇರಿದ್ದರೂ, ಅಭಿಮಾನಿಗಳು ಯಾಕೆ ರಾವಣ ಮತ್ತು ರಾಕಿಯನ್ನು ಹೋಲಿಕೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಇಬ್ಬರ ಹಿನ್ನೆಲೆ ಒಂದೇ ರೀತಿ ಇರುವುದು ಇದಕ್ಕೆ ಕಾರಣ ಇರಬಹುದು. ರಾವಣ ಮತ್ತು ರಾಕಿ ಭಾಯ್ ಇಬ್ಬರೂ ತುಳಿತಕ್ಕೊಳಗಾದ ಹಿನ್ನೆಲೆಯಿಂದ ಬಂದು, ತಮ್ಮದೇ ಆದ ಬದುಕನ್ನು ಕಟ್ಟಿಕೊಂಡವರು. ಇಬ್ಬರಲ್ಲೂ ದೊಡ್ಡದಾಗಿ ಬೆಳೆಯಬೇಕೆಂಬ ಮಹತ್ವಾಕಾಂಕ್ಷೆ, ಛಲ ಮತ್ತು ಅಧಿಕಾರದ ಉನ್ನತಿಗೆ ಏರುವ ಗುಣ ಇದೆ ಎಂದಿದ್ದಾರೆ.
ಲಂಕೆಯಲ್ಲಿ ರಾವಣನಾಗಲಿ ಅಥವಾ ಕೆಜಿಎಫ್ನಲ್ಲಿ ರಾಕಿಯಾಗಲಿ.. ಇಬ್ಬರೂ ತಮ್ಮ ಜನರ ಬಗ್ಗೆ ಕಾಳಜಿ ಹೊಂದಿದ್ದಾರೆ. ತಾವು ಬೆಳೆಯುವುದರ ಜೊತೆಗೆ ತಮ್ಮ ಜನರೂ ಬೆಳೆಯಬೇಕು, ಅಭಿವೃದ್ಧಿ ಹೊಂದಬೇಕು ಮತ್ತು ಸುಖವಾಗಿರಬೇಕು ಎಂದು ನೋಡಿಕೊಳ್ಳುವ ಗುಣ ಇಬ್ಬರಲ್ಲೂ ಇದೆ. ರಾಕಿ ಜೀವನದಲ್ಲಿ ಹೇಗೆ ಬೆಳೆಯುತ್ತಾ ಹೋದ ಎಂಬುದನ್ನು ಆತನ ಕಾಸ್ಟ್ಯೂಮ್ ಮತ್ತು ಲುಕ್ ಬದಲಾಗುವ ಮೂಲಕ ನಾವು ತೋರಿಸಿದ್ದೆವು. ಒಟ್ಟಿನಲ್ಲಿ ರಾವಣ ಮತ್ತು ರಾಕಿ ನಡುವಿನ ಹೋಲಿಕೆ ಇರುವುದು ಅವರ ಬಟ್ಟೆಗಳಿಗಿಂತ ಹೆಚ್ಚಾಗಿ ಆ ಪಾತ್ರಗಳ ಗುಣಲಕ್ಷಣಗಳು ಮತ್ತು ಅವರ ಬದುಕಿನ ಜರ್ನಿಯಲ್ಲಿ ಎಂದು ವಿವರಿಸಿದ್ದಾರೆ.










