ಹೆಚ್ಚು ಕಡಿಮೆ ಎರಡು ವರ್ಷವೇ ಆಗಿ ಹೋಗಿದೆ. ದಶರಥ, ಬಕಾಸುರ ಹಾಗೂ ರಾಜೇಂದ್ರ ಪೊನ್ನಪ್ಪ ಚಿತ್ರಗಳಿಗೆ ಏಕಕಾಲದಲ್ಲೇ ಮುಹೂರ್ತ ಮುಗಿದಿತ್ತು. ಈ ಮೂರು ಚಿತ್ರಗಳು ರವಿಚಂದ್ರನ್ ಅವರದ್ದೇ. ಕರ್ವ ಚಿತ್ರದ ಖ್ಯಾತಿಯ ನವನೀತ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ಪ್ರಮುಖ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು. ಆ ಚಿತ್ರ ನಿಗದಿತ ಅವಧಿಯಲ್ಲಿ ಚಿತ್ರೀಕರಣಗೊಂಡು, ಬಿಡುಗಡೆಯೂ ಆಯಿತು. ಎಂ.ಎಸ್. ರಮೇಶ್ ನಿರ್ದೇಶನದಲ್ಲಿ ಮೂಡಿ ಬಂದ ‘ದಶರಥ ’ ರಿಲೀಸ್ ರೆಡಿ ಆಗಿದೆ. ಈ ನಡುವೆ ರವಿಚಂದ್ರನ್ ನಿರ್ದೇಶನದಲ್ಲಿ ಶುರುವಾಗಿದ್ದ ‘ರಾಜೇಂದ್ರ ಪೊನ್ನಪ್ಪ ’ ಚಿತ್ರದ ಕತೆ ಎಲ್ಲಿಗೆ ಬಂತು ಎನ್ನುವುದು ನಿಗೂಢವಾಗಿಯೇ ಉಳಿದಿದೆ.

ಗಾಂಧಿನಗರದಲ್ಲಿ ಈ ಸಿನಿಮಾ ಬಗ್ಗೆ ಹಲವು ಉಹಾಪೋಹಗಳು ಶುರುವಾಗಿವೆ. ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ಚಿತ್ರೀಕರಣ ಅರ್ಧದಲ್ಲೇ ನಿಂತಿದೆ. ರವಿಚಂದ್ರನ್ ಅವರೇ ಆ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಸಿನಿಮಾ ತೆರೆಗೆ ಬರುವುದು ಯಾಕೋ ಅನುಮಾನ ಎನ್ನುವಂತಹ ಮಾತುಗಳು ಅದರ ನಿಗೂಢತೆಯ ಸುತ್ತ ಗಿರಕಿ ಹೊಡೆಯುತ್ತಿವೆ. ಆದರೆ ಆ ಸಿನಿಮಾ ಬರುತ್ತೋ ಇಲ್ಲವೋ ಎನ್ನುವುದು ಯಾರಿಗೂ ಗೊತ್ತಿಲ್ಲ. ಅದು ಗೊತ್ತಿರುವುದು ರವಿಚಂದ್ರನ್ ಅವರಿಗೆ ಮಾತ್ರ. ಈ ಬಗ್ಗೆ ಅವರು ಯಾವುದೇ ಮಾಹಿತಿ ಹಂಚಿಕೊಳ್ಳಲು ರೆಡಿಯಿಲ್ಲ. ಸಿನಿಮಾ ಸೆಟ್ಟೇರಿದ್ದಾಗಿನಿಂದ ಆ ಸಿನಿಮಾ ಬಗ್ಗೆ ಮಾಡನಾಡುವುದಕ್ಕೂ ಅವರು ಮಾಧ್ಯಮದ ಮುಂದೆ ಬಂದಿಲ್ಲ. ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಆಯ್ಕೆಯಾದರು, ಸಿನಿಮಾ ಚಿತ್ರೀಕರಣ ಶುರುವಾಯಿತು ಎನ್ನುವ ಸುದ್ದಿ ಬಿಟ್ಟರೆ, ಸದ್ಯದ ಸ್ಥಿತಿ ಯಾರಿಗೂ ತಿಳಿದಿಲ್ಲ. ಹೀಗಾಗಿ ‘ರಾಜೇಂದ್ರ ಪೊನ್ನಪ್ಪ’ ಚಿತ್ರದ ಸುತ್ತ ಊಹಾಪೋಹಗಳು ಹಬ್ಬುತ್ತಿರುವುದು ಸುಳ್ಳಲ್ಲ.

ಹಾಗಂತ ರವಿಚಂದ್ರನ್ ಸುಮ್ಮನೆ ಕುಳಿತಿಲ್ಲ. ನಿರ್ದೇಶನಕ್ಕೆ ತಲೆ ಕೆಡಿಸಿಕೊಳ್ಳದಿದ್ದರೂ, ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ನಟನಾಗಿ ಇಷ್ಟೆಲ್ಲ ಬ್ಯುಸಿಯಾಗಿದ್ದರೂ, ನಿರ್ದೇಶನಕ್ಕೆ ಯಾಕೆ ಮನಸ್ಸು ಮಾಡುತ್ತಿಲ್ಲ, ‘ರಾಜೇಂದ್ರ ಪೊನ್ನಪ್ಪ ’ ಯಾಕೆ ಅರ್ಧದಲ್ಲಿ ನಿಂತಿದೆ ಎನ್ನುವುದು ಮಾತ್ರ ಕುತೂಹಲದ ಸಂಗತಿ.