ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾ ಇನ್ನೂ ತೆರೆಕಾಣಬೇಕಿದೆ. ಆದರೆ, ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರುಕ್ಮಿಣಿ ವಸಂತ್ ಮಾತ್ರ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್‌’ ಸಿನಿಮಾ ಇನ್ನೂ ತೆರೆಕಾಣಬೇಕಿದೆ. ಆದರೆ, ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರುಕ್ಮಿಣಿ ವಸಂತ್‌ ಮಾತ್ರ ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೇಲರ್‌ ಗ್ಲಿಂಪ್ಸ್‌ನಲ್ಲಿ ಅವರ ಮೆಲಿಸ್ಸಾ ಪಾತ್ರದ ಲುಕ್‌ ಗಮನ ಸೆಳೆದಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

‘ಟಾಕ್ಸಿಕ್‌’ನಲ್ಲಿ ರುಕ್ಮಿಣಿ ವಸಂತ್‌ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಸದ್ಯದ ಪ್ರಮುಖ ಕುತೂಹಲ. ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಬಿಗ್‌ ಬಜೆಟ್‌ ಸಿನಿಮಾದಲ್ಲಿ ಯಶ್‌ ಜೊತೆಗಿನ ಅವರ ಕಾಂಬಿನೇಷನ್‌ ಹೇಗಿರಲಿದೆ ಎಂಬ ಚರ್ಚೆಯೂ ಜೋರಾಗಿದೆ. ಟ್ರೇಲರ್‌ ಗ್ಲಿಂಪ್ಸ್‌ನಲ್ಲೇ ಅವರ ಲುಕ್‌ಗೆ ಸಿಕ್ಕಿರುವ ಪ್ರತಿಕ್ರಿಯೆ ಇದಕ್ಕೆ ಸಾಕ್ಷಿ.

‘ಟಾಕ್ಸಿಕ್‌’ ಬಳಿಕ ಏರಿದ ರುಕ್ಮಿಣಿ ರೇಂಜ್‌!

ಚಿತ್ರಕ್ಕಾಗಿ ರುಕ್ಮಿಣಿ ವಸಂತ್‌ ಸುಮಾರು 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ವರದಿಗಳು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿವೆ. ‘ಟಾಕ್ಸಿಕ್‌’ನಂತಹ ಬಿಗ್‌ ಬಜೆಟ್‌ ಸಿನಿಮಾದ ಭಾಗವಾಗಿರುವುದು ಮಾತ್ರವಲ್ಲದೆ, ಚಿತ್ರದ ಪ್ರಚಾರದ ಹಂತದಲ್ಲೇ ಸಿಗುತ್ತಿರುವ ಗಮನವೂ ಅವರ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದೆ ಎನ್ನಲಾಗುತ್ತಿದೆ.

ಇದರ ಬೆನ್ನಲ್ಲೇ ದಕ್ಷಿಣ ಭಾರತದ ವಿವಿಧ ಚಿತ್ರರಂಗಗಳಿಂದ ರುಕ್ಮಿಣಿ ಅವರನ್ನು ಹುಡುಕಿಕೊಂಡು ಹೊಸ ಹೊಸ ಆಫರ್‌ಗಳು ಬರುತ್ತಿವೆ ಎಂಬ ಮಾತು ಕೇಳಿಬರುತ್ತಿದೆ. ಬಹುಭಾಷಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಯರ ಸಾಲಿನಲ್ಲಿ ರುಕ್ಮಿಣಿ ಕೂಡ ಪ್ರಮುಖ ಹೆಸರಾಗಿ ಹೊರಹೊಮ್ಮುತ್ತಿದ್ದಾರೆ.

ಹಿಟ್‌ ಮೇಲೆ ಹಿಟ್‌.. ಈಗ ಪ್ಯಾನ್‌ ಇಂಡಿಯಾ ಡಿಮ್ಯಾಂಡ್‌!

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ರುಕ್ಮಿಣಿ ವಸಂತ್‌ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತ್ತು. ಆ ಸಿನಿಮಾದ ಅಭಿನಯದಿಂದ ಗಮನ ಸೆಳೆದಿದ್ದ ಅವರು, ಬಳಿಕ ‘ಕಾಂತಾರ: ಚಾಪ್ಟರ್‌ 1’ ಮೂಲಕ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. ಈಗ ಯಶ್‌ ಅಭಿನಯದ ‘ಟಾಕ್ಸಿಕ್‌’ ಜೊತೆಗೆ ಜೂನಿಯರ್‌ ಎನ್‌ಟಿಆರ್‌ ಅಭಿನಯದ ‘ಡ್ರ್ಯಾಗನ್‌’ ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರುಕ್ಮಿಣಿ ವಸಂತ್‌ ಅವರ ಮುಂದಿನ ಹೆಜ್ಜೆಯತ್ತ ದಕ್ಷಿಣ ಭಾರತದ ಸಿನಿರಂಗವೇ ಕಣ್ಣಿಟ್ಟಿದೆ.

ಆಗಸ್ಟ್‌ 26ಕ್ಕೆ ‘ಟಾಕ್ಸಿಕ್‌’ ಧಮಾಕಾ

ಗೀತು ಮೋಹನ್‌ದಾಸ್‌ ನಿರ್ದೇಶನದ ‘ಟಾಕ್ಸಿಕ್‌’ ಆಗಸ್ಟ್‌ 26ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಜ್ಜಾಗಿದೆ. ಚಿತ್ರದ ಟ್ರೇಲರ್‌ ಗ್ಲಿಂಪ್ಸ್‌ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ. ಯಶ್‌ ಅವರ ಮಾಸ್‌ ಅವತಾರ ಒಂದು ಕಡೆಯಾದರೆ, ರುಕ್ಮಿಣಿ ವಸಂತ್‌ ಅವರ ಮೆಲಿಸ್ಸಾ ಪಾತ್ರ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

ಸಿನಿಮಾ ತೆರೆಗೆ ಬಂದ ಬಳಿಕ ರುಕ್ಮಿಣಿ ಅವರ ಪಾತ್ರ ಹಾಗೂ ಅಭಿನಯಕ್ಕೆ ಸಿಗುವ ಪ್ರತಿಕ್ರಿಯೆ ಅವರ ವೃತ್ತಿಜೀವನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆಯೇ ಎಂಬ ಕುತೂಹಲ ಇದೀಗ ಅಭಿಮಾನಿಗಳಲ್ಲಿದೆ. ಒಟ್ಟಿನಲ್ಲಿ, ‘ಟಾಕ್ಸಿಕ್‌’ ಸಿನಿಮಾ ತೆರೆಗೆ ಬರುವ ಮುನ್ನವೇ ರುಕ್ಮಿಣಿ ವಸಂತ್‌ ಅವರ ಬೇಡಿಕೆ ಏರುತ್ತಿರುವುದು ಅವರ ಸಿನಿ ಜರ್ನಿಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತಾಗಿದೆ.