ಎಲ್ಲವೂ ಇದ್ದರೂ ರುಚಿಕಟ್ಟಾದ ಅಡುಗೆ ಮಾಡಲು ಆಗದೆ ‘ರೋಗ್‌' ಹೆಸರಿನಲ್ಲಿ ಅವಸರದ ಅಡುಗೆ ಮಾಡಿಟ್ಟಿದ್ದಾರೆ ಪುರಿ.

ರೇಟಿಂಗ್‌ ** 

ಚಿತ್ರ: ರೋಗ್‌
ತಾರಾಗಣ: ಇಶಾನ್‌, ಮನ್ನಾರ ಚೋಪ್ರಾ, ಏಂಜೆಲಾ ಕ್ರಿಸ್ಟಿನಾ, ಸಾಧು ಕೋಕಿಲಾ, ಅವಿನಾಶ್‌, ತುಳಸಿ ಶಿವಮಣಿ, ಸುಬ್ಬರಾಜು, ಅನೂಪ್‌ ಸಿಂಗ್‌ ಠಾಕೂರ್‌
ನಿರ್ದೇಶನ: ಪುರಿ ಜಗನ್ನಾಥ್‌
ನಿರ್ಮಾಣ: ಸಿಆರ್‌ ಮನೋಹರ್‌
ಛಾಯಾಗ್ರಹಣ: ಮುಖೇಶ್‌
ಸಂಗೀತ: ಸುನೀಲ್‌ ಕಶ್ಯಪ್‌

ವರ್ಷಗಳ ಕಾಲ ಕೂತು ಸಿನಿಮಾ ಮಾಡುವುದು ನನಗೆ ಆಗಿ ಬರಲ್ಲ. ಹದಿನೈದು ದಿನದಲ್ಲಿ ಕತೆ ಸಿದ್ಧ ಮಾಡಿಕೊಂಡು ಒಂದು ತಿಂಗಳಲ್ಲಿ ಶೂಟಿಂಗ್‌ ಮುಗಿಸುವುದು ನನ್ನ ಸ್ಟೈಲ್‌... ಹೀಗಂತ ತೆಲುಗಿನ ನಿರ್ದೇಶಕ ಪುರಿ ಜಗನ್ನಾಥ್‌ ಹೇಳಿಕೊಂಡಿದ್ದು ‘ರೋಗ್‌' ಸಿನಿಮಾ ಬಿಡುಗಡೆಯ ಹಿನ್ನೆಲೆಯಲ್ಲಿ. ಈಗ ಚಿತ್ರ ತೆರೆಗೆ ಬಂದಿದೆ. ಸಿನಿಮಾ ನೋಡಿದ ಮೇಲೆ ಪುರಿ ತಮ್ಮ ಮಾತಿಗೆ ಕಟ್ಟು ಬಿದ್ದಿದ್ದಾರೆ ಅನಿಸುತ್ತದೆ. ಒಂದಕ್ಕೊಂದು ಸಂಬಂಧ ಇಲ್ಲದ ದೃಶ್ಯಗಳು, ಜಾಳು ಜಾಳು ನಿರೂಪಣೆ, ಎತ್ತು ಏರಿಗೆಳೆದರೆ ಕೋಣ ನೀರಿಗೆಳೆದಂತೆ ಪಾತ್ರಧಾರಿಗಳ ನಟನೆ, ಎಲ್ಲವೂ ಇದ್ದರೂ ರುಚಿಕಟ್ಟಾದ ಅಡುಗೆ ಮಾಡಲು ಆಗದೆ ‘ರೋಗ್‌' ಹೆಸರಿನಲ್ಲಿ ಅವಸರದ ಅಡುಗೆ ಮಾಡಿಟ್ಟಿದ್ದಾರೆ ಪುರಿ. ಯಾಕೆಂದರೆ ನೋಡಕ್ಕೆ ಲಕ್ಷಣವಾಗಿರುವ ಹುಡುಗ, ಸ್ಕ್ರೀನ್‌ ಅಪೀರೆನ್ಸ್‌ ಸೂಪರ್‌. ಫೈಟ್‌, ಡ್ಯಾನ್ಸ್‌ ಯಾವ ಹೀರೋಗೂ ಕಡಿಮೆ ಇಲ್ಲ. ಕೋಟಿಗಳು ಸುರಿಯುವುದಕ್ಕೆ ಸಿದ್ಧವಾಗಿರುವ ನಿರ್ಮಾಪಕ ಸಿಆರ್‌ ಮನೋಹರ್‌, ನೋಡಿದಷ್ಟು ನೋಡಬೇಕು ಅನಿಸುವ ಇಬ್ಬರು ನಾಯಕಿಯರು... ಇಷ್ಟೆಲ್ಲವೂ ಇದ್ದಾಗ ಒಂದು ಅದ್ಭುತ ಸಿನಿಮಾ ಮಾಡುವ ಸಾಧ್ಯತೆ ಇರಲಿಲ್ಲವೇ? 

ಪ್ರೀತಿ- ಪ್ರೇಮವನ್ನು ಟಿಶ್ಯೂ ಪೇಪರ್‌ನಂತೆ ನೋಡುವ ಚೆಂದದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಾನೆ ನಾಯಕ. ಆಕೆಗೆ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಜತೆಗೆ ಮದುವೆ ನಿಶ್ಚಯವಾಗುತ್ತದೆ. ಇತ್ತ ನಾಯಕ ಜೈಲಿಗೆ ಹೋಗಿ ಬಂದಿರುತ್ತಾನೆ. ಆದರೆ, ಆತ ಜೈಲಿಗೆ ಹೋಗುವ ಮುನ್ನ ಮಾಡಿರುವ ಅನಾಹುತದಿಂದ ಒಂದು ಕುಟುಂಬ ಸಂಕಷ್ಟಕ್ಕೀಡಾಗಿರುತ್ತದೆ. ಈಗ ಆ ಕುಟುಂಬದ ನೆರವಿಗೆ ಹೊರಡುವಾಗ ಅಲ್ಲಿ ಮತ್ತೊಬ್ಬ ನಾಯಕಿ ಎಂಟ್ರಿ. ಹುಡುಗಿ ಅಂದ್ರೆನೇ ಕಂಡರಾಗದವನಿಗೆ ಮತ್ತೊಬ್ಬಳನ್ನು ಕೈ ಹಿಡಿಯುತ್ತಾನೆಯೇ? ಈತನ ನೆರವನ್ನು ಆ ಹುಡುಗಿ ಕುಟುಂಬ ಒಪ್ಪಿಕೊಳ್ಳುತ್ತದೆಯೇ? ಇಡೀ ಸಿನಿಮಾ ಕೊಲ್ಕತ್ತ ಪರಿಸರದಲ್ಲಿ ನಡೆಯುತ್ತದೆ. ಜತೆಗೆ ಆಗಾಗ ಪಾತ್ರಧಾರಿಗಳು ಹಿಂದಿಯನ್ನೇ ಹೆಚ್ಚು ನೆಚ್ಚಿಕೊಳ್ಳುತ್ತವೆ. ನಾಯಕಿ ಹಾಗೂ ಚಿತ್ರೀಕರಣದ ಲೋಕೇಶನ್‌'ಗಳು ಪುರಿ ಜಗನ್ನಾಥ್‌ ಅಭಿರುಚಿಗೆ ತಕ್ಕಂತಿದ್ದರೆ, ಡ್ಯಾನ್ಸ್‌, ಫೈಟ್‌'ನಲ್ಲಿ ಇಶಾನ್‌ ಮಿಂಚಿದ್ದಾರೆ. ಹೀಗಾಗಿ ಇಶಾನ್‌ ಅವರನ್ನು ಬಳಸಿಕೊಂಡರೆ ಒಳ್ಳೆಯ ನಟನಾಗುವ ಭರವಸೆ ಮೊದಲ ಚಿತ್ರದಲ್ಲೇ ಮೂಡಿಸಿದ್ದಾರೆ. ಜತೆಗೆ ಎರಡು ಹಾಡು ಕೇಳುವಂತಿದೆ.

- ಆರ್.ಕೇಶವಮೂರ್ತಿ, ಕನ್ನಡಪ್ರಭ