ರೆಬಲ್ ಸ್ಟಾರ್ ಅಂಬರೀಷ್ ಅವರ 8ನೇ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪತ್ನಿ ಸುಮಲತಾ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಸಾರ್ವಜನಿಕರಿಗೆ ಅನ್ನದಾನ ಮಾಡಿದರು. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಷ್ ನಮ್ಮನ್ನ ಅಗಲಿ ಇವತ್ತಿಗೆ 8 ವರ್ಷ. ಅಂಬಿ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಮಾಜಮುಖಿ ಕಾರ್ಯದಲ್ಲಿ ಬ್ಯುಸಿ ಆಗಿದ್ದರು. ಇತ್ತ, ಬೆಂಗಳೂರಿನಲ್ಲಿ ಸುಮಲತಾ ಅಂಬರೀಷ್ ಹಾಗೂ ಕುಟುಂಬಸ್ಥರು ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿತು.
ಕಂಠೀರವ ಸ್ಟುಡಿಯೋದಲ್ಲಿರುವ ಡಾ.ಅಂಬರೀಷ್ ಸ್ಮಾರಕವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿತ್ತು. ಸುಮಲತಾ ಅಂಬರೀಷ್, ಪುತ್ರ ಅಭಿಷೇಕ್ ಅಂಬರೀಷ್ ಹಾಗೂ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಗಣ್ಯರು ಸಮಾಧಿಗೆ ಬಂದು ಪೂಜೆ ಸಲ್ಲಿಸಿದರು.
ಅನ್ನದಾನ ಮಾಡಿದ ಸುಮಲತಾ
ಇನ್ನು ಪುಣ್ಯಸ್ಮರಣೆಗೆ ಆಗಮಿಸಿದ್ದ ನೂರಾರು ಅಭಿಮಾನಿಗಳು ಮತ್ತು ಸಾರ್ವಜನಿಕರಿಗೆ ಸುಮಲತಾ ಅಂಬರೀಷ್ ಅನ್ನದಾನ ಮಾಡಿದರು. ಸುಮಲತಾ ಅವರಿಗೆ ರಾಕ್ಲೈನ್ ವೆಂಕಟೇಶ್ ಸಾಥ್ ನೀಡಿದರು. ಸ್ವತಃ ಸುಮಲತಾ ಅವರೇ ಅಭಿಮಾನಿಗಳಿಗೆ ಊಟವನ್ನು ಬಡಿಸಿದರು. ಇನ್ನು, ಸುಮಲತಾ ಅವರು ಅನ್ನದಾನ ಮಾಡುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಪತಿ ನೆನೆದು ಭಾವುಕರಾದ ಪತ್ನಿ ಸುಮಲತಾ
ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಶೇರ್ ಮಾಡಿದರು. ಎಂಟು ವರ್ಷಗಳು ಕಳೆದರೂ, ನಿಮ್ಮ ನೆನಪಿಲ್ಲದೆ ಕಳೆದ ದಿನವೇ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ನಗು, ಜೊತೆಯಾಗಿ ಕಳೆದ ಆ ಸುಂದರ ಕ್ಷಣಗಳೆಲ್ಲವೂ ಇಂದಿಗೂ ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿವೆ. ಕಾಲ ಮುಂದುವರಿದರೂ, ನನ್ನ ಬದುಕಿನಲ್ಲಿ ನಿಮ್ಮ ಸ್ಥಾನ ಎಂದಿಗೂ ಬದಲಾಗದು. ಸದಾ ನಿಮ್ಮ ನೆನಪಿನಲ್ಲಿ, ನಿಮ್ಮ ಪ್ರೀತಿಯಲ್ಲಿ... ಎಂದೆಂದಿಗೂ. ಎಂದು ಸೋಶಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಅಂಬರೀಷ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ರಾಜಕಾರಣಿಯಾಗಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದಲ್ಲಿ 1952ರ ಮೇ 29ರಂದು ಜನಿಸಿದರು. ತಮ್ಮ ಖಡಕ್ ನಟನೆ, ಆಕ್ಷನ್ ಮತ್ತು ವಿಶಿಷ್ಟ ವ್ಯಕ್ತಿತ್ವದಿಂದ 'ರೆಬಲ್ ಸ್ಟಾರ್' ಎಂಬ ಬಿರುದು ಪಡೆದರು. ನಾಯಕ, ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದರು.
ಅಂಬರೀಷ್ ಅವರು 2018ರ ನವೆಂಬರ್ 24ರಂದು ಹೃದಯಾಘಾತದಿಂದ (Cardiac Arrest) ನಿಧನರಾದರು. ಅವರ ನಿಧನದ ಸುದ್ದಿ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ತೀವ್ರ ದುಃಖವನ್ನುಂಟು ಮಾಡಿತ್ತು. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಅವರ ಅಂತಿಮ ದರ್ಶನಕ್ಕೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಸಾವಿರಾರು ಅಭಿಮಾನಿಗಳು ಆಗಮಿಸಿದ್ದರು. ತಮ್ಮ ವಿಶಿಷ್ಟ ವ್ಯಕ್ತಿತ್ವ, ಸ್ನೇಹಪರತೆ ಮತ್ತು ಸಿನಿಮಾಗಳ ಮೂಲಕ ಅಂಬರೀಶ್ ಇಂದಿಗೂ ಕನ್ನಡಿಗರ ಮನದಲ್ಲಿ ಜೀವಂತವಾಗಿದ್ದಾರೆ.
















