ಹೊಸಬರ ಸಿನಿಮಾಗಳು ಓಡುತ್ತಿಲ್ಲ, ಸ್ಟಾರ್ ಸಿನಿಮಾಗಳು ಥಿಯೇಟರ್‌ಗಳಿಗೆ ಬರುತ್ತಲೇ ಇಲ್ಲ. ಬಂದ ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಓಡುತ್ತಿಲ್ಲ ಎಂಬ ಕೂಗು ಸಿನಿಮಾ ವಲಯದಲ್ಲಿ ಕೇಳಿಬರುತ್ತಿರುವಾಗಲೇ ಮತ್ತೊಂದು ಸ್ಟಾರ್ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ.
ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರ ಮುಂದಿನ ಸಿನಿಮಾ ಯಾವುದು ಅನ್ನೋದಕ್ಕೆ ಉತ್ತರ ಸಿಕ್ಕಿದೆ. 'ಯುಐ' ಸಿನಿಮಾದ ಬಳಿಕ ನಟ ಉಪೇಂದ್ರ ಅವರು ರಜನಿಕಾಂತ್ ನಾಯಕತ್ವದ 'ಕೂಲಿ' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಅದಕ್ಕೂ ಮೊದಲು ನಟ ಉಪೇಂದ್ರ ಅವರು 'ಬುದ್ಧಿವಂತ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದರು. ಇದೀಗ ಹೊಸ ಸುದ್ದಿ ಸಿಕ್ಕಿದ್ದು, ಅದು ಅರವಿಂದ್ ಕೌಶಿಕ್ ನಿರ್ದೇಶನ ಹಾಗು ತರುಣ್ ಶಿವಪ್ಪ ನಿರ್ಮಾಣದಲ್ಲಿ ನಟ ಉಪೇಂದ್ರ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಈ ಸುದ್ದಿ ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ.
ಹೌದು, ತರುಣ್ ಶಿವಪ್ಪ ನಿರ್ಮಾಣದ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಅದೊಂದು ಪೋಸ್ಟರ್ ಬಿಡುಗಡೆ ಆಗಿದೆ. ನಾಣ್ಯದ ಮೇಲೆ ಉಪೇಂದ್ರ ಫೋಟೋ ಹಾಕಲಾಗಿದ್ದು, ಮೇಲೆ ಅರವಿಂದ್ ಸ್ಟುಡಿಯೋ ಎಂದು ಬರೆಯಲಾಗಿದೆ. ಜೊತೆಗೆ, ಉಪೇಂದ್ರ ನೆಕ್ಸ್ಟ ಲೆವೆಲ್ (NXT LVL) ಎಂದು ಉಪ್ಪಿ ಧರಿಸಿರುವ ಗಾಗಲ್ ಮೇಲೆ ಬರೆಯಲಾಗಿದ್ದು, ಕೆಳಗೆ 'ಆ್ಯನ್ ಅರವಿಂದ್ ಕೌಶಿಕ್ ಫಿಲಂ' ಎಂದು ಬರೆಯಲಾಗಿದೆ. ಈ ವಿಭಿನ್ನ ಪೋಸ್ಟರ್ ಅನ್ನು ನಿರ್ಮಾಪಕ ತರುಣ್ ಶಿವಪ್ಪ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಯುಐ ಸಿನಿಮಾವನ್ನು ಮನೋಹರ್ ನಾಯ್ದು ಅವರ 'ಲಹರಿ ಫಿಲ್ಮ್ಸ್' ಮತ್ತು ಕೆಪಿ ಶ್ರೀಕಾಂತ್ 'ವೀನಸ್ ಎಂಟರ್‌ಟೈನರ್ಸ್' ಅಡಿಯಲ್ಲಿ ಜಂಟಿಯಾಗಿ ನಿರ್ಮಿಸಿದ್ದಾರೆ. ಈ ಸಿನಿಮಾ ಸಿನಿರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿತ್ತು. ಆ ಬಳಿಕ ನಟ ಉಪೇಂದ್ರ ಅವರು ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ನಾಯಕತ್ವದ 'ಕೂಲಿ' ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಒಪ್ಪಿಕೊಳ್ಳುವ ಮೂಲಕ ತಾವು ಎಲ್ಲಾ ಕಡೆ ಸಲ್ಲುವ ಪ್ಯಾನ್ ಇಂಡಿಯಾ ನಟ ಎಂಬುದನ್ನು ಮತ್ತೊಮ್ಮೆ ನೆನಪಿಸಿದ್ದರು. ಇದೀಗ, ಹೊಸ ಪ್ರಾಜೆಕ್ಟ್ ಮೂಲಕ 'ನೆಕ್ಸ್ಟ್ ಲೆವಲ್'ಗೆ ಹೋಗುವ ಪ್ಲಾನ್ ಮಾಡುತ್ತಿದ್ದಾರೆ.
ಸದ್ಯ, ಕನ್ನಡದ ಸಿನಿಮಾಗಳು ಓಡುತ್ತಿಲ್ಲ ಎಂಬ ಕೂಗು ಮತ್ತೆ ಜೋರಾಗಿದೆ. ಅಂದ್ರೆ, ಹೊಸಬರ ಸಿನಿಮಾಗಳು ಓಡುತ್ತಿಲ್ಲ, ಸ್ಟಾರ್ ಸಿನಿಮಾಗಳು ಥಿಯೇಟರ್‌ಗಳಿಗೆ ಬರುತ್ತಲೇ ಇಲ್ಲ. ಬಂದ ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಓಡುತ್ತಿಲ್ಲ ಎಂಬ ಕೂಗು ಸಿನಿಮಾ ವಲಯದಲ್ಲಿ ಕೇಳಿಬರುತ್ತಿರುವಾಗಲೇ ಮತ್ತೊಂದು ಸ್ಟಾರ್ ಸಿನಿಮಾ ಸೆಟ್ಟೇರಲು ಸಜ್ಜಾಗಿದೆ. ಘೋಷಣೆ ಆಗಿರುವ ಈ ಸಿನಿಮಾ ಬಗ್ಗೆ ನಿರೀಕ್ಷೆಯಂತೂ ಮನೆಮಾಡಿದೆ. ಯಾವತ್ತು ಶೂಟಿಂಗ್ ಶುರು, ನಾಯಕಿ ಯಾರು? ಉಳಿದ ತಾರಾಬಳಗ ಯಾರು ಎಂಬ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಅಂದಹಾಗೆ, ನಟ, ರಿಯಲ್ ಸ್ಟಾರ್ ಉಪೇಂದ್ರ ಅವರ ಬುದ್ಧಿವಂತ ಸಿನಿಮಾವನ್ನು ಜೈರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಈ ಮೊದಲು 'ಅಯೋಗ್ಯ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಟಿಆರ್ ಚಂದ್ರಶೇಖರ್ ಅವರು ನಿರ್ಮಾಪಕರು. ಈ ಸಿನಿಮಾ ಶೂಟಿಂಗ್ ಹಂತದಲ್ಲಿದ್ದು, ಈ ಸಿನಿಮಾದ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗ ಆಗಬೇಕಿದೆ.
