ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ರಂಗಾಯಣ ರಘು ಕೂಡ ಒಬ್ಬರು. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅವರು, ಇತ್ತೀಚೆಗೆ 'ಪ್ರೇಮದ ಊರಲ್ಲಿ' ಚಿತ್ರದ ಯಶಸ್ಸಿನಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ನಡುವೆ ಅವರ ಪತ್ನಿ ಮಂಗಳ ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಲ್ಲಿ ರಂಗಾಯಣ ರಘು ಕೂಡ ಒಬ್ಬರು. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಅವರು, ಇತ್ತೀಚೆಗೆ 'ಪ್ರೇಮದ ಊರಲ್ಲಿ' ಚಿತ್ರದ ಯಶಸ್ಸಿನಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ನಡುವೆ ಅವರ ಪತ್ನಿ ಮಂಗಳ ಅವರು ತಮ್ಮ ದಾಂಪತ್ಯ ಜೀವನ, ರಂಗಾಯಣ ರಘು ಅವರ ವ್ಯಕ್ತಿತ್ವ ಹಾಗೂ ಸಿನಿಮಾ ಪ್ರಯಾಣದ ಕುರಿತು ಹಲವು ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಮಂಗಳ, ರಂಗಾಯಣ ರಘು ಅವರೊಂದಿಗಿನ ಪರಿಚಯದಿಂದ ಹಿಡಿದು 37 ವರ್ಷಗಳ ಸುದೀರ್ಘ ಒಡನಾಟದವರೆಗಿನ ಹಲವು ನೆನಪುಗಳನ್ನು ಮೆಲುಕು ಹಾಕಿದ್ದಾರೆ.
10 ವರ್ಷಗಳ ಪರಿಚಯದ ಬಳಿಕ ಮದುವೆ
ರಂಗಾಯಣ ರಘು ಮತ್ತು ಮಂಗಳ ಅವರ ಪರಿಚಯವಾಗಿದ್ದು 1989ರಲ್ಲಿ. ಇಬ್ಬರೂ ರಂಗಾಯಣಕ್ಕೆ ಸೇರಿದ ಸಂದರ್ಭದಲ್ಲಿ ಪರಿಚಯವಾಗಿದ್ದರು. ಬಳಿಕ ಸುಮಾರು 10 ವರ್ಷಗಳ ಒಡನಾಟದ ನಂತರ 1999ರಲ್ಲಿ ವಿವಾಹವಾದರು. ಈ ಬಗ್ಗೆ ಮಾತನಾಡಿದ ಮಂಗಳ, ಆಗ ಇಬ್ಬರಿಗೂ ಕೆಲಸವೇ ಮುಖ್ಯವಾಗಿತ್ತು. ಬೆಳಗ್ಗೆ 5.45ಕ್ಕೆ ಯೋಗ ತರಗತಿಯಿಂದ ಆರಂಭವಾಗುತ್ತಿದ್ದ ದಿನಚರಿ, ರಾತ್ರಿ 10.30ರವರೆಗೂ ಕೆಲಸದಲ್ಲಿ ಕಳೆಯುತ್ತಿತ್ತು. ಹೀಗಾಗಿ ವೈಯಕ್ತಿಕ ಜೀವನಕ್ಕಿಂತ ವೃತ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೆವು. ಕೆಲಸ ಮುಗಿಸಿ ಸ್ವಲ್ಪ ವಿರಾಮ ತೆಗೆದುಕೊಂಡ ಬಳಿಕ ಮದುವೆಯಾದೆವು ಎಂದು ಹೇಳಿದ್ದಾರೆ.
ಪತಿಯಲ್ಲಿ ಇಷ್ಟವಾಗುವ ಗುಣ ಯಾವುದು?
ತೆರೆಯ ಮೇಲೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ರಂಗಾಯಣ ರಘು ನಿಜ ಜೀವನದಲ್ಲಿ ಹೇಗಿರುತ್ತಾರೆ ಎಂಬ ಪ್ರಶ್ನೆಗೆ ಮಂಗಳ ಬಹಳ ಸರಳವಾಗಿ ಉತ್ತರಿಸಿದ್ದಾರೆ. "ಅವರು ತುಂಬಾ ಒಳ್ಳೆಯ ಮನುಷ್ಯ. ಮನೆಯಲ್ಲಿ ಬಹಳ ಸಹಜವಾಗಿ ಇರುತ್ತಾರೆ. ಸಿನಿಮಾದಲ್ಲಿ ಮಾಡುವ ಪಾತ್ರಗಳಂತೆ ವರ್ತಿಸುವುದಿಲ್ಲ. ಮನುಷ್ಯರಾಗಿ ರಘು, ರಘುವಾಗಿಯೇ ಇರುತ್ತಾರೆ. ಅವರ ಈ ಸಹಜ ಸ್ವಭಾವ ನನಗೆ ಇಷ್ಟ" ಎಂದು ಹೇಳಿದ್ದಾರೆ. ಅಲ್ಲದೆ, ರಂಗಾಯಣ ರಘು ಅವರು ಅನಗತ್ಯವಾಗಿ ಕೋಪ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಮನೆಯಲ್ಲಿದ್ದಾಗ ಆರಾಮವಾಗಿ ಟಿವಿ ನೋಡುವುದು, ಸಿನಿಮಾ ವೀಕ್ಷಿಸುವುದು ಹಾಗೂ ಸಣ್ಣಪುಟ್ಟ ಸಂಗತಿಗಳಲ್ಲೇ ಖುಷಿ ಕಾಣುವುದನ್ನು ಕಲಿತುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಪಾತ್ರದಲ್ಲೂ ಹೊಸತನ ಹುಡುಕುವ ರಂಗಾಯಣ ರಘು
ರಂಗಾಯಣ ರಘು ಅವರ ನಟನೆಯ ಬಗ್ಗೆ ಮಾತನಾಡಿದ ಮಂಗಳ, ಅವರ ವೃತ್ತಿಪರ ಬದ್ಧತೆಯನ್ನು ಮೆಚ್ಚಿಕೊಂಡಿದ್ದಾರೆ. 1989ರಲ್ಲಿ ವೃತ್ತಿ ಆರಂಭಿಸಿದಾಗಿನಿಂದಲೂ ರಘು ಅವರು ತಮ್ಮ ಅಭಿನಯ ಕಲೆಗೆ ಶೇ.100ರಷ್ಟು ಶ್ರಮ ಹಾಕುತ್ತಿದ್ದಾರೆ. ಅವರು ಯಾವಾಗಲೂ ನಟನೆಯ ಮೇಲೆಯೇ ಗಮನ ಕೇಂದ್ರೀಕರಿಸಿದ್ದಾರೆ. ಪ್ರತಿ ಬಾರಿ ಯಾವುದೇ ಪಾತ್ರ ಸಿಕ್ಕರೂ ಅದರಲ್ಲಿ ಹೊಸತೇನಾದರೂ ಮಾಡಬೇಕು ಎಂಬ ಆಲೋಚನೆ ಅವರಲ್ಲಿರುತ್ತದೆ ಎಂದು ಹೇಳಿದ್ದಾರೆ.
"ಅವರು ಸಾಕಷ್ಟು ಸಿನಿಮಾಗಳಲ್ಲಿ ತಂದೆಯ ಪಾತ್ರ ಮಾಡಿದ್ದಾರೆ. ಆದರೆ ಎಲ್ಲ ಅಪ್ಪಂದಿರೂ ಒಂದೇ ರೀತಿ ಇರುವುದಿಲ್ಲ. ಪ್ರತಿಯೊಂದು ಕುಟುಂಬದಲ್ಲೂ ತಂದೆಯ ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಸಿಕ್ಕ ಪಾತ್ರವನ್ನು ಇನ್ನಷ್ಟು ಹೊಸದಾಗಿ, ಫ್ರೆಶ್ ಆಗಿ ಹೇಗೆ ಮಾಡಬಹುದು ಎನ್ನುವುದೇ ಅವರ ನಿರಂತರ ಪ್ರಯತ್ನ" ಎಂದು ಮಂಗಳ ವಿವರಿಸಿದ್ದಾರೆ.
'ಪ್ರೇಮದ ಊರಲ್ಲಿ' ಯಶಸ್ಸಿನ ಬಗ್ಗೆ ಏನಂದ್ರು?
ಇತ್ತೀಚೆಗೆ ಬಿಡುಗಡೆಯಾದ 'ಪ್ರೇಮದ ಊರಲ್ಲಿ' ಸಿನಿಮಾ ಯಶಸ್ಸು ರಂಗಾಯಣ ರಘು ಅವರಿಗೆ ಖುಷಿ ತಂದಿದೆ. ಈ ಗೆಲುವಿನ ಬಗ್ಗೆ ಮನೆಯಲ್ಲಿ ಹೇಗೆ ಸಂಭ್ರಮಿಸಿದರು ಎಂಬ ಪ್ರಶ್ನೆಗೆ ಉತ್ತರಿಸಿದ ಮಂಗಳ, ಸಿನಿಮಾದ ಯಶಸ್ಸಿನ ಬಳಿಕ ನಿರಂತರವಾಗಿ ಫೋನ್ ಕರೆಗಳು ಬರುತ್ತಿವೆ. ಅವರು ಫೋನ್ನಲ್ಲಿ ಮಾತನಾಡುವುದನ್ನು ನೋಡುತ್ತಾ ನಾನೂ ಖುಷಿಪಡುತ್ತಿದ್ದೇನೆ. ಇವೆಲ್ಲವೂ ಸಣ್ಣಪುಟ್ಟ ಸಂತೋಷಗಳು ಎಂದು ಹೇಳಿದ್ದಾರೆ. ದೊಡ್ಡ ಬಜೆಟ್ ಸಿನಿಮಾಗಳಷ್ಟೇ ಗೆಲ್ಲುತ್ತವೆ ಎಂಬ ಲೆಕ್ಕಾಚಾರ ಚಿತ್ರರಂಗದಲ್ಲಿ ಕೆಲಸ ಮಾಡುವುದಿಲ್ಲ. ಒಳ್ಳೆಯ ಸಿನಿಮಾ ಮಾಡಬೇಕು, ಗೆದ್ದಾಗ ಸಂತೋಷಪಡಬೇಕು, ಸೋತಾಗ ಮತ್ತೆ ಪ್ರಯತ್ನಿಸಬೇಕು ಎಂಬುದು ಅವರ ಅಭಿಪ್ರಾಯ.
'ಕಾಂತಾರ: ಚಾಪ್ಟರ್ 1' ಬಳಿಕ 'ಪಬ್ಬಾರ್' ಸಿನಿಮಾದಲ್ಲೂ ಮಂಗಳ
ನಟಿ ಮಂಗಳ ಅವರು 'ಕಾಂತಾರ: ಚಾಪ್ಟರ್ 1' ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಮತ್ತು ನಂತರ ತಮಗೆ ಸವಾಲು ಎನಿಸುವ ಪಾತ್ರಗಳು ಸಿಕ್ಕಾಗ ಮಾತ್ರ ಸಿನಿಮಾಗಳನ್ನು ಒಪ್ಪಿಕೊಳ್ಳುವುದಾಗಿ ಹೇಳಿದ್ದಾರೆ. ಇದೀಗ ಧೀರೇನ್ ರಾಮ್ಕುಮಾರ್ ನಟನೆಯ 'ಪಬ್ಬಾರ್' ಸಿನಿಮಾದಲ್ಲೂ ಅವರು ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮದು ಸಣ್ಣದಾದರೂ ವಿಶೇಷ ಪಾತ್ರ ಎಂದು ತಿಳಿಸಿದ್ದಾರೆ. ಸಿನಿಮಾದ ಚಿತ್ರೀಕರಣದ ವೇಳೆ ಹಿಮಾಚಲ ಪ್ರದೇಶದ ಸ್ಥಳೀಯ ಜನರೊಂದಿಗೆ ಕೆಲಸ ಮಾಡಿದ ಅನುಭವವೂ ಚೆನ್ನಾಗಿತ್ತು ಎಂದು ಹೇಳಿದ್ದಾರೆ.














