ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ಪ್ರಮುಖರು ನಟಿಸಿದ ರಾಮಾಯಣ ಪಾರ್ಟ್ 1 ಸಿನಿಮಾ ನವೆಂಬರ್ 5ಕ್ಕೆ ಬಿಡುಗಡೆಯಾಗುತ್ತಿದೆ. ಈ ಕುರಿತು ಮಹತ್ವದ ಘೋಷಣೆ ಮಾಡಿರುವ ಚಿತ್ರತಂಡ ಅಡ್ವಾನ್ಸ್ ಟಿಕೆಟ್ ಬುಕಿಂಗ್ ದಿನಾಂಕ ಘೋಷಿಸಿದೆ.
ಮುಂಬೈ (ಅ.11) ದೇಶವೇ ರಾಮಾಯಣ ಸಿನಿಮಾಗಾಗಿ ಕಾಯುತ್ತಿದೆ. ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಸೇರಿದಂತೆ ಪ್ರಮುಖ ತಾರಾಬಳಗವಿರುವ ಈ ಸಿನಿಮಾ ಭಾರತೀಯ ಇತಿಹಾಸದಲ್ಲೇ ಬಿಗ್ ಬಜೆಟ್ ಸಿನಿಮಾ. ಕಳೆದ ಹಲವು ದಿನಗಳಿಂದ ರಾಮಾಯಾಣ ಸಿನಿಮಾ ಬಿಡುಗಡೆ ಕುರಿತು ಹಲವು ಗೊಂದಲ ನಿರ್ಮಾಣವಾಗಿತ್ತು. ರಾಮಯಾಣ ಪಾರ್ಟ್ 1 ಸಿನಿಮಾ ಬಿಡುಗಡೆ ಮುಂದೂಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಇದರ ಬೆನ್ನಲ್ಲೇ ಇದೀಗ ಸಿನಿಮಾ ತಂಡದ ದಿನಾಂಕ ಘೋಷಣೆ ಮಾಡಿದೆ. ನವೆಂಬರ್ 5ರಂದು ರಾಯಮಾಣ ಪಾರ್ಟ್ 1 ವಿಶ್ವಾದ್ಯಂತ ರಿಲೀಸ್ ಆಗಲಿದೆ ಎಂದು ಖಚಿತಪಡಿಸಿದೆ.
ಅಡ್ವಾನ್ಸ್ ಬುಕಿಂಗ್ ದಿನಾಂಕ ಘೋಷಣೆ
ನಿತೀಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಪಾರ್ಟ್ 1 ಸಿನಿಮಾದ ಅಡ್ವಾನ್ಸ್ ಬುಕಿಂಗ್ ದಸರಾ ಹಬ್ಬಕ್ಕೆ ಆರಂಭಗೊಳ್ಳಲಿದೆ ಎಂದು ಚಿತ್ರತಂಡ ಹೇಳಿದೆ. ಪವಿತ್ರ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಾವು ಹೊಸ ಯುಗ ಆರಂಭದ ಸಂಭ್ರಮದಲ್ಲಿದ್ದೇವೆ. ಇದು ರಾಮನ ಯುಗದ ಆರಂಭ ಎಂದು ಚಿತ್ರತಂಡ ಹೇಳಿದೆ.
ರಣಬೀರ್ ಸೇರಿದಂತೆ ಇಡೀ ತಾರಾಬಳಗವನ್ನೇ ಹಿಂದಿಕ್ಕಿದ ಯಶ್
ರಾಮಾಯಾಣ ಪಾರ್ಟ್ 1 ಸಿನಿಮಾ ಬಿಡುಗಡೆ, ಅಡ್ವಾನ್ಸ್ ಬುಕಿಂಗ್ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ರಾವಣ ಯಶ್ ಎಲ್ಲರನ್ನು ಹಿಂದಿಕ್ಕಿದ್ದಾರೆ. ರಾಮ, ಲಕ್ಷ್ಣಣ ಹಾಗೂ ಸೀತೆ ಜೊತೆಗೆ ಯಶ್ ಆರ್ಭಟದ ರಾವಣನ ಝಲಕ್ ತೋರಿಸಲಾಗಿದೆ. ರಾವಣನ ಗಾಂಭೀರ್ಯ, ಸಾಮ್ರಾಜ್ಯ ಅಧಿಪತಿ ನೋಟ ಎಲ್ಲವನ್ನು ಯಶ್ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.
ಇತ್ತೀಚೆಗೆ ರಾಮಾಯಣ ಸಿನಿಮಾ ರೀಲಿಸ್ ಕುರಿತು ಕೆಲ ಗೊಂದಲ ನಿರ್ಮಾಣವಾಗಿತ್ತು. ಪ್ರಮುಖವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಮಾಯಣ ಸಿನಿಮಾ ಟ್ರೇಲರ್‌ನ್ನು ಸೋನಿ ಪಿಕ್ಚರ್ಸ್ ಹಂಚಿಕೆ ಮಾಡಿತ್ತು. ಈ ವೇಳೆ ರಾಮಾಯಾಣ ಸಿನಿಮಾ ಪಾರ್ಟ್ 1 ನವೆಂಬರ್ 6ಕ್ಕೆ ಬಿಡುಗಡೆಯಾಗಲಿದೆ ಎಂದು ಉಲ್ಲೇಖಿಸಿತ್ತು. ಭಾರತದ ಟ್ರೇಲರ್‌ಗಳಲ್ಲಿ ನವೆಂಬರ್ 5 ಎಂದು ಉಲ್ಲೇಖಿಸಲಾಗಿತ್ತು. ಹೀಗಾಗಿ ಗೊಂದಲ ಸೃಷ್ಟಿಯಾಗಿತ್ತು. ಇದರ ನಡುವೆ ರಾಮಾಯಣ ಸಿನಿಮಾ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಸಿನಿಮಾ ತಂಡದ ಸ್ಪಷ್ಟನೆ ನೀಡಿ ಪೋಸ್ಟರ್ ರಿಲೀಸ್ ಮಾಡಿದೆ.
ಯಾವೆಲ್ಲಾ ಭಾಷೆಗಳಲ್ಲಿ ಸಿನಿಮಾ ರಿಲೀಸ್
ರಾಮಾಯಾಣ ಸಿನಿಮಾ ಎರಡು ಭಾಗವಾಗಿ ಬಿಡುಗಡೆಯಾಗುತ್ತಿದೆ. ಮೊದಲ ಪಾರ್ಟ್ 2026 ನವೆಂಬರ್ 5ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾದರೆ, ಎರಡನೇ ಪಾರ್ಟ್ 2027ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾ ಹಿಂದಿ, ಕನ್ನಡ, ತೆಲುಗು, ಮಲೆಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಭಾರಿ ಕುತೂಹಲ ಹಾಗೂ ನಿರೀಕ್ಷೆ ಹುಟ್ಟುಹಾಕಿರುವ ರಾಮಾಯಣ ಸಿನಿಮಾ ಭಾರತೀಯ ಸಿನಿಮಾ ಇತಿಹಾಸದಲ್ಲೇ ಮೈಲಿಗಲ್ಲಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.


