ಎಲ್ಲಾ ಹೆಣ್ಣುಮಕ್ಕಳ ಪರವಾಗಿ ನಾನು ಹೋರಾಡುತ್ತೇನೆ. ಸೋಷಿಯಲ್ ಮೀಡಿಯಾಗಳಲ್ಲಿ ಅಶ್ಲೀಲ ಸಂದೇಶ ಕಳಿಸುವುದು, ಕೀಳು ಮಟ್ಟದ ಕಾಮೆಂಟ್ ಮಾಡೋದು ನಿಲ್ಲಬೇಕು. ನಾನು ಯಾವತ್ತೂ ಇರೋದಿಲ್ಲ. ಹೆಣ್ಣುಮಕ್ಕಳು ಈಗ ಮಾತ್ರ ಅಲ್ಲ, ಮುಂದೆಯೂ ಇರುತ್ತಾರೆ…

ಸ್ಯಾಂಡಲ್‌ವುಡ್ ನಟಿ ರಮ್ಯಾ (Ramya) ನಟ ದರ್ಶನ್ ಫ್ಯಾನ್ಸ್ (Darshan Thoogudeepa Fans) ವಿರುದ್ಧ ಬೆಂಗಳೂರು ಕಮೀಷನರ್‌ಗೆ ದೂರು ನೀಡಿದ್ದಾರೆ. ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿರುವ ನಟಿ ರಮ್ಯಾ, ನಟ ದರ್ಶನ್ ಅವರು ತಮ್ಮ 'ಫ್ಯಾನ್ಸ್‌'ಗಳಿಗೆ ಬುದ್ಧಿ ಹೇಳಬೇಕು' ಎಂದಿದ್ದಾರೆ. 43 ಜನರ ಬಗ್ಗೆ ನಟಿ ರಮ್ಯಾ ಅವರು ಕಮೀಷನರ್‌ ಬಳಿ ದೂರು ನೀಡಿದ್ದು, ಕಮೀಷನರ್ ನಟಿ ರಮ್ಯಾಗೆ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ದೂರು ನೀಡಿದ ಬಳಿಕ ನಟಿ ರಮ್ಯಾ ಮಾಧ್ಯಮಗಳ ಜೊತೆ ಮಾತನ್ನಾಡುತ್ತ ಹಲವು ಸಂಗತಿಗಳನ್ನು ಹೇಳಿದ್ದಾರೆ.

'ನನಗೆ ಯಾವುದೇ ಭಯವಿಲ್ಲ. ನಾನು ಎಲ್ಲಾ ಹೆಣ್ಣುಮಕ್ಕಳ ಪರವಾಗಿ ಮಾತನ್ನಾಡಲೇಬೇಕು. ದರ್ಶನ್ ಅಭಿಮಾನಿಗಳು ನನಗೆ ಕೀಳುಮಟ್ಟದ ಕಾಮೆಂಟ್ಸ್ ಮಾಡಿದ್ದಾರೆ. ಅದನ್ನೆಲ್ಲ ನಾನು ಉಲ್ಲೇಖಿಸಿಯೇ ದೂರು ನೀಡಿದ್ದೇನೆ. ನನ್ನಂಥವರಿಗೇ ಹೀಗಾದರೆ ಇನ್ನು ಸಾಮಾನ್ಯ ಹೆಣ್ಣುಮಕ್ಕಳ ಗತಿಯೇನು? ನಾನು ಯಾರಿಗೂ ಭಯ ಪಡೋದಿಲ್ಲ. ನನ್ನ ಕಾಳಜಿ ಏನೆಂದರೆ, ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಸುರಕ್ಷತೆ ಇಲ್ಲ. ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಆನ್‌ಲೈನ್‌ನಲ್ಲಿ ಮಹಿಳೆಯರಿಗೆ ತುಂಬಾನೇ ಕಿರುಕುಳ ಆಗುತ್ತಿದೆ.

ನನಗೆ ದರ್ಶನ್ ಬಗ್ಗೆ ಅಥವಾ ಅವರ ಅಭಿಮಾನಿಗಳ ಬಗ್ಗೆ ಯಾವುದೇ ದ್ವೇಷವಿಲ್ಲ. ನನಗೆ ಸಿನಿಮಾರಂಗದಲ್ಲಿ ಎಷ್ಟು ಅಗತ್ಯವೋ ಅಷ್ಟು ಮಾತ್ರ ನಟ ದರ್ಶನ್ ಜೊತೆಗೆ ಆತ್ಮೀಯತೆ ಇದೆ. ಆದರೆ, ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ನನಗೆ ಸ್ನೇಹವಿದೆ. ದರ್ಶನ್ ಅಭಿಮಾನಿಗಳು ಸಮಾಜದಲ್ಲಿ ಇಂತಹ ಕೀಳುಮಟ್ಟಕ್ಕೆ ಇಳಿದರೆ ಅದರಿಂದ ಯಾರಿಗೆ ಕೆಟ್ಟ ಹೆಸರು? ನಟ ದರ್ಶನ್ ತಮ್ಮ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕು. ರೇಣುಕಾಸ್ವಾಮಿ ಮೆಸೇಜ್‌ಗೂ ದರ್ಶನ್ ಫ್ಯಾನ್ಸ್ ಮೆಸೇಜ್‌ಗೂ ಯಾವುದೇ ವ್ಯತ್ಯಾಸವಿಲ್ಲ' ಎಂದಿದ್ದಾರೆ.

'ವಿಜಯಲಕ್ಷ್ಮಿ ನನ್ನ ವಿರುದ್ಧ ಮಾತನಾಡಿಲ್ಲ, ರಕ್ಷಿತಾ ಕೂಡ ನನ್ನ ಬಗ್ಗೆ ಕೆಟ್ಟದಾಗಿ ಮಾತನ್ನಾಡಿಲ್ಲ' ಎಂದಿದ್ದಾರೆ ನಟಿ ರಮ್ಯಾ. ಆದರೆ, ನನ್ನ ಬಗ್ಗೆ ಕೆಟ್ಟದಾಗಿ ಸೋಷಿಯಲ್ ಮೀಡಿಯಾದಲ್ಲಿ ಮಾತನ್ನಾಡಿದ್ದು ತಪ್ಪು. ನನ್ನ ಬಗ್ಗೆ ಮಾತ್ರ ಅಲ್ಲ, ಯಾವುದೇ ಹೆಣ್ಣುಮಕ್ಕಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೀಳುಮಟ್ಟದಲ್ಲಿ ಕಾಮೆಂಟ್ ಮಾಡಬಾರದು. ನನ್ನ ಹೇಳಿಕೆಯಿಂದ ಯಾರಿಗಾದರೂ ಸಮಸ್ಯೆ ಆಗಿದ್ದರೆ ಅದಕ್ಕಾಗಿ ಅವರು ಕಾನೂನು ದಾರಿಯಲ್ಲಿ ಹೋರಾಟ ಮಾಡಬಹುದು. ಆದರೆ, ಅವರ ಅಭಿಪ್ರಾಯಕ್ಕೆ ಯಾರಾದರೂ ಮಾತನ್ನಾಡಿದ್ದರೆ ಅದಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ-ಕೊಳಕು ಕಾಮೆಂಟ್ಸ್ ಹಾಕೋದು ತಪ್ಪು'

ಎಲ್ಲಾ ಹೆಣ್ಣುಮಕ್ಕಳ ಪರವಾಗಿ ನಾನು ಹೋರಾಡುತ್ತೇನೆ. ಸೋಷಿಯಲ್ ಮೀಡಿಯಾಗಳಲ್ಲಿ ಅಶ್ಲೀಲ ಸಂದೇಶ ಕಳಿಸುವುದು, ಕೀಳು ಮಟ್ಟದ ಕಾಮೆಂಟ್ ಮಾಡೋದು ನಿಲ್ಲಬೇಕು. ನಾನು ಯಾವತ್ತೂ ಇರೋದಿಲ್ಲ. ಹೆಣ್ಣುಮಕ್ಕಳು ಈಗ ಮಾತ್ರ ಅಲ್ಲ, ಮುಂದೆಯೂ ಇರುತ್ತಾರೆ. ಅವರೆಲ್ಲರ ಪರವಾಗಿ ನಾನು ಮಾತನ್ನಾಡುತ್ತಿದ್ದೇನೆ' ಎಂದಿದ್ದಾರೆ ನಟಿ ರಮ್ಯಾ.