ಉಡುಪಿಯಲ್ಲಿ ಹುಟ್ಟಿ ನಿಟ್ಟೆಯಲ್ಲಿ ಇಂಜಿನಿಯರಿಂಗ್ ಮಾಡ್ತಿದ್ದ ಆ ಸಾಮಾನ್ಯ ಹುಡುಗನಲ್ಲಿ ಒಂದು ಅಸಾಮಾನ್ಯ ಕನಸಿತ್ತು. ಕಾಲೇಜ್ನಲ್ಲಿ ನಾಟಿ ಬಾಯ್ ಆಗಿ ಗುರುತಿಸಿಕೊಂಡಿದ್ದ, ಏನೇನೋ ತರಲೆ ಮಾಡಿ ಆಗಾಗ ಸಿಕ್ಕಾಕೊಳ್ತಿದ್ದ. ತನ್ನ ಸೀನಿಯರ್ ಜೊತೆಗೆ ಲವ್ವಲ್ಲಿ ಬಿದ್ದು ರಾತ್ರಿ ನಿದ್ದೆ ಕೆಡಿಸಿಕೊಂಡಿದ್ದ. ಅವನ ಒಟ್ಟಾರೆ ಅಪೀಯರೆನ್ಸ್ ಸಿನಿಮಾದ ಹೀರೋನ ಹಾಗಿತ್ತು. ಈತ ರಿಯಲ್ ಲೈಫಿನಲ್ಲೂ ಹೀರೋ ಆಗಿದ್ದ. ಇಂಥಾ ತುಂಟಾಟಗಳಲ್ಲೇ ಇಂಜಿನಿಯರಿಂಗ್ ಮುಗೀತು, ಆ ಫೀಲ್ಡಿನಲ್ಲಿ 2 ವರ್ಷ ಕೆಲಸನೂ ಮಾಡಾಯ್ತು. ತರ್ಲೆ ಹುಡುಗ ಪ್ರಬುದ್ಧ ಯುವಕನಾಗೋ ಹಾದಿಯಲ್ಲಿದ್ದ. ಅಂಥಾ ಟೈಮ್ನಲ್ಲೇ ಕಚ್ಕೊಳ್ತು ನೋಡಿ ಆ ಕನಸು!

ತನ್ನೂರಿನಲ್ಲೇ ಹುಟ್ಟಿ ಬೆಳೆದು ದೂರದ ಮುಂಬೈಗೆ ಹೋಗಿ ಅಲ್ಲಿ ನಾಟಕ, ಸಿನಿಮಾ ಪಾಠ ಕಲಿತು ಕನ್ನಡ ಚಿತ್ರರಂಗದ ದಂತಕತೆಯಾಗಿ ಕಣ್ಮರೆಯಾದ ಶಂಕರ್ ನಾಗ್‌ ಅವರಂತೆ ತಾನಾಗಬೇಕೆಂಬ ಕನಸು ಅದು.

ಅವನೇ ಶ್ರಿಮನ್ನಾರಾಯಣ ಚಿತ್ರ ವಿಮರ್ಶೆ

ಆ ಹುಡುಗ ಮತ್ಯಾರೂ ಅಲ್ಲ, ಅವನೇ ಶ್ರೀಮನ್ನಾರಾಯಣ ಸಿನಿಮಾದ ಇನ್ಸ್‌ಪೆಕ್ಟರ್ ನಾರಾಯಣ್ ಐ ಮೀನ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಕಂಗಳ ತುಂಬ ಶಂಕರ್ ನಾಗ್ ಕನಸು ಹೊತ್ತು ಬೆಂಗಳೂರಿಗೆ ಬಂದ ರಕ್ಷಿತ್ ಆರಂಭದಲ್ಲಿಯೇ ಹುಚ್ಚು ಹಿಡಿಸಿದ್ದು ಶಾರ್ಟ್ ಫಿಲಂಗಳು. ಅತ್ಯಂತ ಕಡಿಮೆ ಬಜೆಟ್‌ನಲ್ಲಿ ತಮ್ಮ ಆ ಕಾಲದ ಕನಸುಗಳನ್ನು ಶಾರ್ಟ್ ಫಿಲ್ಮ್ ಮೂಲಕ ಹೊರಹೊಮ್ಮಿಸಿದರು ರಕ್ಷಿತ್. 2010ರಲ್ಲಿ 'ನಮ್ ಏರಿಯಾಲೊಂದು ದಿನ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಪಡೆದೇ ಬಿಡುತ್ತಾರೆ. ಆದ್ರೆ ರಕ್ಷಿತ್‌ಗೆ ಬ್ರೇಕ್ ಕೊಟ್ಟಿದ್ದು 'ಸಿಂಪಲ್ಲಾಗೊಂದು ಲವ್ ಸ್ಟೋರಿ'. 'ಉಳಿದವರು ಕಂಡಂತೆ' ಮೂಲಕ ಡೈರೆಕ್ಟರ್ ಹ್ಯಾಟ್ಅನ್ನೂ ಧರಿಸಿದರು. ಉಳಿದವರು ಕಂಡಂತೆ ಸಿನಿಮಾ ರಕ್ಷಿತ್ ಅವರ ದೊಡ್ಡ ಕನಸಾಗಿತ್ತು, ಆದರೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಆದರೆ ತಾನು ಆ ಸಿನಿಮಾದ ಮೂಲಕ ಅನೇಕ ಪಾಠಗಳನ್ನು ಕಲಿತೆ ಅಂತಾರೆ ರಕ್ಷಿತ್. ಒಂದು ರೀತಿಯಲ್ಲಿ ಇದು ಅವರ ಸಿನಿಮಾ ಕೆರಿಯರ್‌ಗೆ ಮಾರ್ಗದರ್ಶಿಯಾದ ಸಿನಿಮಾ. ಸೋಲನ್ನೂ, ಗೆಲುವನ್ನೂ ಹೇಗೆ ಸ್ವೀಕರಿಸಬೇಕು ಅಂತ ಕಲಿಸಿದ ಸಿನಿಮಾ. ಇದಾದ ಮೇಲೆ 'ಕಿರಿಕ್ ಪಾರ್ಟಿ' ಯಶಸ್ಸು ರಕ್ಷಿತ್ ಶೆಟ್ಟಿಯನ್ನು ಬೇರೆ ಲೆವೆಲ್‌ಗೇ ಕೊಂಡೊಯ್ಯುತ್ತೆ. ಸೋಲು, ಗೆಲುವುಗಳೆರಡರ ರುಚಿಯನ್ನೂ ಕಂಡು ಅವುಗಳನ್ನು ಹೇಗೆ ಸ್ವೀಕರಿಸಬೇಕು ಅನ್ನೋದನ್ನೂ ಕಲಿತ ರಕ್ಷಿತ್, ಅದ್ಧೂರಿ ಬಜೆಟ್‌ನ ಪಾನ್ ಇಂಡಿಯಾ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ಬಿಡುಗಡೆಯ ವೇಳೆಗೆ ಭಾವುಕರಾದದ್ದು, ತಮ್ಮ ಈವರೆಗಿನ ಜರ್ನಿಯರು ನೆನೆಸಿಕೊಂಡು. ಶಂಕರ್ ನಾಗ್ ಎಂಬ ಕನಸು ತನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿತಲ್ಲಾ ಅನ್ನುವ ಎಮೋಶನ್ ಅದು.

ರಕ್ಷಿತ್ ಶೆಟ್ಟಿಗೆ ಹೌದೋ ಹುಲಿಯ ಎಂದ ಅಭಿಮಾನಿ

ಶಂಕರ್ ಅವರನ್ನು ಒಂದು ರೋಲ್ ಮಾಡೆಲ್ ಆಗಿಟ್ಟುಕೊಂಡು ಮುಂದುವರಿಯುತ್ತಿರುವ ರಕ್ಷಿತ್ ತನ್ನನ್ನು ಎಂದೂ ಅವರ ಜೊತೆಗೆ ಹೋಲಿಸಿಕೊಂಡವರಲ್ಲ. 'ನಾನು ಸ್ಯಾಂಡಲ್‌ವುಡ್‌ಗೆ ಬಂದು 10 ವರ್ಷ ಆಯ್ತು. ಇಷ್ಟರಲ್ಲಿ ನಾಲ್ಕೈದು ಸಿನಿಮಾ ಅಷ್ಟೇ ಮಾಡಲು ಸಾಧ್ಯ ಆಯ್ತು. ಆದರೆ ಶಂಕರ್ ನಾಗ್ ಈ ಹೊತ್ತಿಗೆ ಅನೇಕ ಸಿನಿಮಾ ಮಾಡಿ, ಮಾಲ್ಗುಡಿ ಡೇಸ್‌ನಂಥಾ ಅತ್ಯುತ್ತಮ ಸೀರಿಯಲ್ಸ್ ಅನ್ನೂ ಕೊಟ್ಟು ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು. ಅವರು ಇದನ್ನೆಲ್ಲ ಹೇಗೆ ಮಾಡಿದ್ರು, ಇದೆಲ್ಲಾ ಹೇಗೆ ಸಾಧ್ಯವಾಯಿತು ಅನ್ನೋದು ನನಗೆ ಯಾವಾಗಲೂ ಅಚ್ಚರಿ, ಅವರನ್ನು ನೆನೆಸಿಕೊಂಡರೆ ಮೈ ಜುಮ್ ಅನ್ನುತ್ತೆ' ಅನ್ನೋದು ಸಿಂಪಲ್ ಸ್ಟಾರ್‌ನ ಸರಳ ಮಾತು.

 ಸದ್ಯಕ್ಕೆ ಅವನೇ ಶ್ರೀಮನ್ನಾರಾಯಣ ಸಕ್ಸಸ್ ಹಾದಿಯಲ್ಲಿದೆ. ಶಂಕರ್ ಕನಸಿನಲ್ಲಿ ರಕ್ಷಿತ್ ಕೆರಿಯರ್ ದಾರಿ ಮುಂದುವರಿಯುತ್ತಿದೆ. " ಇನ್ನು 30 ವರ್ಷ ಬಿಟ್ಟು ನನ್ನ ಮಕ್ಕಳೋ, ಮೊಮ್ಮಕ್ಕಳೋ ಅಥವಾ ಆ ಜನರೇಶನ್ನ ಹುಡುಗರೋ, ನಮ್ಮಪ್ಪ ಆ ಕಾಲಕ್ಕೇ ಎಷ್ಟೊಳ್ಳೆ ಸಿನಿಮಾ ಕೊಟ್ರು.. ಅಂತ ಹೇಳಿದ್ರೆ ನಾನು ಮಾಡಿದ ಕೆಲಸ ಸಾರ್ಥಕ ಅನ್ನೋದು ಇವರ ವಿನಮ್ರತೆಗೆ ಸಾಕ್ಷಿ. ಆಲ್ ದಿ ಬೆಸ್ಟ್ ರಕ್ಷಿತ್, ಶಂಕರ್ ಸ್ಫೂರ್ತಿಯಲ್ಲಿ ನಿಮ್ಮ ಮುಂದಿನ ದಾರಿ ಸಕ್ಸಸ್ನಿಂದ ತುಂಬಿರಲಿ.

ರಕ್ಷಿತ್ ಶೆಟ್ಟಿ ಲೈಫ್‌ಗೆ ಮರಳುತ್ತಾರಾ ರಶ್ಮಿಕಾ?