ಜೋಗಿ

ದರೋಡೆಯಾದ ನಿಧಿ, ಅದರ ಬೆನ್ನುಹತ್ತಿದ ಮತ್ತೊಂದು ದರೋಡೆಕೋರರ ತಂಡ, ನಾಪತ್ತೆಯಾದ ನಿಧಿ ಮತ್ತು ಅದರ ಹುಡುಕಾಟ, ಅಮರಾವತಿ ಎಂಬ ಪುಟ್ಟ ಊರು, ಅಲ್ಲೊಂದು ಪತ್ರಿಕೆ, ಅದಕ್ಕೊಬ್ಬ ಸಂಪಾದಕ, ನಿಧಿಶೋಧಕ್ಕೆ ಬರುವ ಸಂಶೋಧಕ, ಕೊನೆಯ ನಾಟಕ ಮಾಡಲು ಕಾಯುತ್ತಿರುವ ತಂಡ, ರಾಮರಾಮ ತುಸು ದಕ್ಷ ವೃತ ಜಾರಿಪಾ ಎಂಬ ಸಂಕೇತವಾಕ್ಯ, ಶ್ರೀಹರಿಗಾಗಿ ಕಾಯುತ್ತಿರುವ ಭಕ್ತರು, ಕೌಬಾಯ್ ಕೃಷ್ಣನ ಬಾರು, ಸತ್ತುಹೋದ ಅಭೀರರ ದೊರೆ ರಾಮರಾಮ, ಅವನ ಮಗ ಜಯರಾಮನ ಕಾರುಬಾರು, ತುಕಾರಾಮನ ಶಾಂತಿಪ್ರಿಯ ಪಕ್ಷ, ಅಚ್ಯುತ ಎಂಬ ಕಾನ್‌ಸ್ಟೇಬಲ್ ಮತ್ತು ಅಡ್ಡಕಸುಬಿ ಇನ್ಸ್‌ಪೆಕ್ಟರ್ ನಾರಾಯಣ!

ಏಕಕಾಲಕ್ಕೆ 400 ಥಿಯೇಟರ್‌ನಲ್ಲಿ 'ಚರಿತ್ರೆ ಸೃಷ್ಟಿಸೋ ಅವತಾರ'ನ ಹವಾ ಶುರು!

ಇಷ್ಟೂ ಕತೆಯನ್ನು ಕಾಲಘಟ್ಟದ ಹಂಗಿಲ್ಲದೇ, ಅದು ಯಾವ ಊರು ಅಂತ ಹೇಳದೇ, ಕಾನೂನಿನ ತಾಕಲಾಟವಿಲ್ಲದೇ, ಮೊಬೈಲ್ ಫೋನಿನ ಸದ್ದಿಲ್ಲದೇ ಹೇಳುತ್ತಾರೆ ನಿರ್ದೇಶಕ ಸಚಿನ್ ರವಿ. ಈ ಕತೆಯನ್ನು ಹೆಣೆದವರು ರಕ್ಷಿತ್ ಶೆಟ್ಟಿ, ವಿಸ್ತರಿಸಿದ್ದು ಸಚಿನ್. ಇಷ್ಟೊಂದು ಪಾತ್ರಗಳನ್ನು ಒಂದು ಸೂತ್ರದೊಳಗೆ ಬೆಸೆದಿರುವ ಶೈಲಿ ಅದ್ಭುತ. ಆ ಕಾರಣಕ್ಕೇ ಇದೊಂದು ಅದ್ಭುತ-ರಮ್ಯ ಚಿತ್ರ. ಕಾಲ್ಪನಿಕ ಜಗತ್ತಿನಲ್ಲಿ ನಮ್ಮನ್ನು ಕರೆದೊಯ್ಯುವ ಸಿನಿಮಾ. ಕಲ್ಪನೆಯಿಂದ ಹೊರಗೆ ಬಂದು ನೋಡುವುದು ಅಪರಾಧ.

ತಮಾಷೆ ಚಿತ್ರದ ಸ್ಥಾಯಿಭಾವ. ತುಂಟಾಟಗಳಲ್ಲೇ ನಾರಾಯಣ ತನ್ನ ಕಾರ್ಯಸಾಧನೆ ಮಾಡುತ್ತಾ ಹೋಗುತ್ತಾನೆ. ಅವರವರ ನಡುವೆ ಇರುವ ದ್ವೇಷವನ್ನೇ ಆಯುಧವಾಗಿ ಬಳಸಿಕೊಳ್ಳುತ್ತಾನೆ. ಪ್ರತಿಯೊಂದು ಪಾತ್ರಕ್ಕೂ ಇಲ್ಲಿ ಎರಡು ಮುಖ. ಕೆಲವೊಮ್ಮೆ ಮುಖವಾಡವೇ ಮುಖವೂ ಆಗುವುದೂ ಉಂಟು. ಯಾರು ಯಾವಾಗ ಏನು ಮಾಡುತ್ತಾರೆ ಅನ್ನುವುದನ್ನು ಶ್ರೀಮನ್ನಾರಾಯಣನೇ ಬಲ್ಲ. ಅಮರಾವತಿಯ ಚಿತ್ರಮಂದಿರದಲ್ಲಿ ನಡೆಯುವ ಭಕ್ತಪ್ರಹ್ಲಾದ ಚಿತ್ರ ನೋಡುವುದಕ್ಕೆ ಬಂದ ಪ್ರೇಕ್ಷಕರು ಕಂಬ ಒಡೆದು ಪ್ರತ್ಯಕ್ಷನಾಗುವ ಇನ್ಸ್‌ಪೆಕ್ಟರ್ ನಾರಾಯಣನನ್ನು ಕಂಡು ಆಶ್ಚರ್ಯಚಕಿತರಾಗುವಂತೆ, ಶ್ರೀಮನ್ನಾರಾಯಣ ಚಿತ್ರದ ಪ್ರೇಕ್ಷಕ ಕೂಡ ಇದೇನಾಗುತ್ತಿದೆ ಎಂದು ಅಚ್ಚರಿಯಿಂದ ಕೂರುವಂತೆ ಮಾಡುವ ಚಿತ್ರ ಇದು. ಕಾರಣವಿಷ್ಟೇ; ಇದು ನಮ್ಮ ತರ್ಕಕ್ಕೆ ನಿಲುಕುವುದಿಲ್ಲ. ಇದು ನಮ್ಮ ಊಹೆಗೆ ನಿಲುಕುವ ಲೋಕ ಅಲ್ಲವೇ ಅಲ್ಲ. ಇಲ್ಲಿ ಉತ್ಕಟವಾದ ಪ್ರೇಮವಿಲ್ಲ. ಕೆನ್ನೆ ತೋಯಿಸುವ ಕರುಣಾಜನಕ ದೃಶ್ಯಗಳಿಲ್ಲ. ಮನಸ್ಸನ್ನು ಭಾರವಾಗಿಸುವ ಭಾವತೀವ್ರತೆಯಿಲ್ಲ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಹಾಸ್ಯಸರಣಿಯಿಲ್ಲ, ಕತೆಯ ಮುನ್ನೋಟವನ್ನು ಮೊದಲೇ ಗ್ರಹಿಸಲಿಕ್ಕೆ ಸುಳಿವುಗಳಿಲ್ಲ, ಅವರು ಹುಡುಕುತ್ತಿರುವ ನಿಧಿ ನಮಗೆ ಸೇರುವುದೂ ಇಲ್ಲ!

ರಕ್ಷಿತ್ ಶೆಟ್ಟಿ ಯಾವ ರಾಜ್ಯದಲ್ಲಿ ಏನೇನು ಹೇಳಿದರು?

ಹಾಗಿದ್ದರೂ ನಾವು ನಿಧಿ ಹುಡುಕುವವರ ಜೊತೆ ದುರ್ಬೀನು ಹಿಡಿದುಕೊಂಡು ಹೊರಟುಬಿಡುತ್ತೇವೆ. ಯಾವ ಪರ್ವತದ ಯಾವ ಮರದ ಬುಡದಲ್ಲಿ ನಿಧಿಯಿದ್ದೀತು ಎಂದು ಹುಡುಕಾಡುತ್ತೇವೆ. ರಾಮರಾಮ ತುಸು ದಕ್ಷ ವೃತ ಜಾರಿಪಾ ಎಂಬ ಮಾತಲ್ಲಿ ಕ್ಲೂ ಸಿಗುತ್ತದೆಯೇನೋ ಎಂದು ಕಾಯುತ್ತೇವೆ. ಕಾರಣ ಇಷ್ಟೇ; ಈ ಚಿತ್ರ ನಮ್ಮಿಂದೇನೂ ನಿರೀಕ್ಷೆ ಮಾಡುವುದಿಲ್ಲ. ಸುಮ್ಮನೆ ತನಗೆ ತೋಚಿದ ದಾರಿಯಲ್ಲಿ ಸಾಗುತ್ತದೆ. ಇದು ಹೀಗಿರಬೇಕು ಮತ್ತು ಹೀಗೆಯೇ ಇರುತ್ತದೆ ಎಂಬ ನಮ್ಮ ಲೆಕ್ಕಾಚಾರಗಳನ್ನು ಸುಳ್ಳುಮಾಡುತ್ತದೆ. ಕೆಲವೊಮ್ಮೆ ಮುಂದೇನಾಗುತ್ತದೆ ಎಂಬ ಕುತೂಹಲವನ್ನೂ ಪಕ್ಕಕ್ಕೆ ತಳ್ಳಿಬಿಡುತ್ತದೆ. ಕೊನೆಯಿರದ ದಾರಿಯಲ್ಲಿ ಗುಂಪಿನೊಂದಿಗೆ ನಡೆಯುವ ಕೊನೆಯ ಪಯಣಿಗನಂತೆ ನಾವೂ ನಡೆಯುತ್ತಾ ಸುಮ್ಮನೆ ಸಾಗುತ್ತೇವೆ!

ಚಿತ್ರದಲ್ಲೊಂದು ದೃಶ್ಯವಿದೆ. ನಾರಾಯಣ ಮತ್ತು ಲಕ್ಷ್ಮಿಯನ್ನು ಶ್ರೀಹರಿ ಭಕ್ತರು ತಕ್ಕಡಿಯಲ್ಲಿ ಕೂರಿಸಿ ತುಲಾಭಾರ ಮಾಡುತ್ತಾರೆ. ಆಗ ತಕ್ಕಡಿ ಒಂದೇ ಕಡೆಗೆವಾಲುತ್ತದೆ. ಒಂದು ತಕ್ಕಡಿಯಲ್ಲಿ ಕತೆಯನ್ನೂ ಮತ್ತೊಂದು ತಕ್ಕಡಿಯಲ್ಲಿ ಈ ಚಿತ್ರಕ್ಕೆ ಮಾಡಿದ ವೆಚ್ಚವನ್ನೂ ಇಟ್ಟರೆ ಹೀಗೇ ಆಗಬಹುದೇನೋ ಎಂದು ಆಗಾಗ ಅನ್ನಿಸುತ್ತಿರುತ್ತದೆ! ಅದು ಚಿತ್ರದ ಶಕ್ತಿ, ಮಿತಿ ಮತ್ತು ನಾಯಕ ನಟನ ತಲೆಯ ಮೇಲಿಟ್ಟಿರುವ ಮುಳ್ಳಿನ ಕಿರೀಟವೂ ಹೌದು!

ಹಾಗೇ ಯಾರಾದರೂ, ಒಬ್ಬ ನಿರ್ಮಾಪಕನ ಜೀವನ ಚರಿತ್ರೆ ಬರೆದರೆ ಅದರಲ್ಲಿ ಎರಡು ಭಾಗಗಳಿರುತ್ತವೆ. ಒಂದು ಅವನೇ ಶ್ರೀಮನ್ನಾರಾಯಣ ನಿರ್ಮಾಣಕ್ಕೆ ಮೊದಲು, ಮತ್ತೊಂದು ನಿರ್ಮಾಣದ ನಂತರ. ಆ ನಿರ್ಮಾಪಕ ಯಾರು? ಅವರೇ ಪುಷ್ಕರ್ ಮಲ್ಲಿಕಾರ್ಜುನಯ್ಯ!

'ಅವನೇ ಶ್ರೀಮನ್ನಾರಾಯಣ'ನಿಗೆ ಹ್ಯಾಂಡ್ಸಪ್‌! ಶಾನ್ವಿ ಚಾಲೆಂಜ್‌ಗೆ ಸೈ ಎಂದ ಸೆಲಬ್ರಿಟಿಗಳು

ಇವರಿಗೆ ಚಪ್ಪಾಳೆ...

ಈ ಚಿತ್ರದಲ್ಲಿ ನೆನೆಯಬೇಕಾದವರು ಹಲವರು. ಕಲಾನಿರ್ದೇಶಕರಿಗೆ ಮೊದಲ ಚಪ್ಪಾಳೆ, ನಂತರದ್ದು ಛಾಯಾಗ್ರಾಹಕರಿಗೆ. ಅಜನೀಶ್ ಲೋಕನಾಥ್ ಈ ಚಿತ್ರವನ್ನು ನಿಭಾಯಿಸಿರುವ ರೀತಿ ಅದ್ಭುತ. ಪಾತ್ರಧಾರಿಗಳ ಪೈಕಿ ಅಚ್ಯುತ, ಬಾಲಾಜಿ ಮನೋಹರ್, ಪ್ರಮೋದ್ ಶೆಟ್ಟಿ, ಅಶ್ವಿನ್ ಹಾಸನ್, ಶಾನ್ವಿ- ಈ ನಾಲ್ವರಿಗೆ ಆಯಸ್ಸು ಜಾಸ್ತಿ. ವಿಜಯ ಚೆಂಡೂರ್, ರಘು ಕೊಪ್ಪ, ರಿಷಭ್, ಚಂದನ್ ಆಚಾರ್, ಗೋಪಾಲಕೃಷ್ಣ ದೇಶಪಾಂಡೆ, ಎಂಕೆ ಮಠ, ಯೋಗರಾಜ ಭಟ್- ಹೀಗೆ ಚಿತ್ರದುದ್ದಕ್ಕೂ ಒಬ್ಬರನ್ನು ಮೀರಿಸುವಂತೆ ಮತ್ತೊಬ್ಬರು ಸಿಗುತ್ತಾ ಹೋಗುತ್ತಾರೆ. ಮೂರು ವರ್ಷಗಳ ನಂತರ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ ಇಡೀ ಚಿತ್ರವನ್ನು ಮೋಟುಗನ್ನಿನಂತೆ ಹೆಗಲ ಮೇಲೆ ಹೊತ್ತಿದ್ದಾರೆ. ಯಾವುದೇ ನಟನಿಗೆ ಇಂಥ ಬಜೆಟ್ಟು ಮತ್ತು ಪಾತ್ರ ಹಿತವಾದ ಹೊರೆ. ಸುಸ್ತು ಕಾಣದಂತೆ ಅದನ್ನು ನಿಭಾಯಿಸಿದ್ದಾರೆ ರಕ್ಷಿತ್. ಸಂಕೀರ್ಣ ಚಿತ್ರಕತೆಯನ್ನು ಪ್ರೇಕ್ಷಕರಿಗೆ ದಾಟಿಸುವಲ್ಲಿ ಸಂಭಾಷಣೆಕಾರರಾದ ಅಭಿಜಿತ್ ಮಹೇಶ್, ಚಂದ್ರಜಿತ್ ಬೆಳ್ಳಿಯಪ್ಪ, ನಾಗಾರ್ಜುನ ಶರ್ಮಾ, ಅನಿರುದ್ಧ ಕೊಡಗಿ ಅವರ ಕೊಡುಗೆ ಗಮನಾರ್ಹ.