‘ಪ್ರದೇಶ ಸಮಾಚಾರ’,‘ಮೈಸೂರು ಮಸಾಲಾ’,‘ಲವ್‌ ಮೊಕ್ಟೈಲ್‌’,‘ಆರ್ಕೇಸ್ಟ್ರಾ’ ಹಾಗೂ ‘ಫ್ಲೈ’ ಸೇರಿದಂತೆ ಐದು ಸಿನಿಮಾಗಳಿಗೆ ಹಾಡಿ, ಸಂಗೀತ ನಿರ್ದೇಶಕರಾಗಿ , ಇದೀಗ ‘ನಿನ್ನ ಸನಿಹಕೆ’ ಎನ್ನುವ ಹೊಸಬರ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡುತ್ತಿರುವ ರಘು ದೀಕ್ಷಿತ್‌ ಹೊಸ ಕನಸು ಕಾಣುತ್ತಿದ್ದಾರೆ. ನಾಲ್ಕು ಭಾಷೆಗಳಲ್ಲಿ ಹತ್ತು ಹಾಡುಗಳ ಆಡಿಯೋ ಅಲ್ಬಮ್‌ ತರಲಿದ್ದಾರೆ.

‘ಇದು ನನ್ನ ಬಹುದಿನದ ಕನಸು. ತಮಿಳು, ತೆಲುಗಿನಲ್ಲೂ ಈಗಾಗಲೇ ಆಡಿಯೋ ಸಾಂಗ್ಸ್‌ ಆಲ್ಬಂ ತಂದಿದ್ದೇನೆ. ಮೂರ್ನಾಲ್ಕು ಸಿನಿಮಾಗಳಿಗೂ ಹಾಡಿದ್ದೇನೆ. ಆದರೆ ಅವೆಲ್ಲ ಆಗಿ ನಾಲ್ಕೈದು ವರ್ಷ ಕಳೆದು ಹೋಗಿವೆ. ಹಿಂದಿಯಲ್ಲೂ ಒಂದಷ್ಟುವರ್ಷ ಗ್ಯಾಪ್‌ ಆಗಿದೆ. ಅದಕ್ಕಾಗಿಯೇ ಹತ್ತು ಹಾಡುಗಳನ್ನು ಹತ್ತು ಬಗೆಯಲ್ಲೂ ತರುವ ಯೋಚನೆಯಿದೆ. ಈಗಾಗಲೇ ಹಿಂದಿ, ಕನ್ನಡದ ಕೆಲಸಗಳು ಒಂದು ಹಂತಕ್ಕೆ ತಲುಪಿವೆ’ ಎನ್ನುತ್ತಾರೆ ರಘು.

ಕನ್ನಡದ ಮೂವರು ಪ್ರತಿಭೆಗಳು ಪರಭಾಷೆಗೆ ಎಂಟ್ರಿ

ಕನ್ನಡಕ್ಕೆ ಕಿರಣ್‌ ಕಾವೇರಪ್ಪ ಗೀತೆ ರಚನೆ ಮಾಡುತ್ತಿದ್ದಾರೆ. ಜತೆಗೆ ಬೇಂದ್ರೆ ಹಾಗೂ ಶಿಶುನಾಳ ಷರೀಪ್‌ ಅವರ ಗೀತೆಯನ್ನು ಬಳಸಿಕೊಳ್ಳಲಾಗುತ್ತಿದೆಯಂತೆ. ಇನ್ನು ಹಿಂದಿಯಲ್ಲಿ ಧೀರಜ್‌ ಅವರ ಸಾಹಿತ್ಯವಿದೆ. ತಮಿಳಿನಲ್ಲಿ ವೈರ ಮುತ್ತು ಅವರ ಪುತ್ರ ಮದನ್‌ ಕಾರ್ಕೆ, ತೆಲುಗಿನಲ್ಲಿ ರಾಕೆಂದು ಮೌಳಿ ಅವರ ಸಾಹಿತ್ಯಕ್ಕೆ ರಘು ದೀಕ್ಷಿತ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಶೇಷವಾಗಿ ಕನ್ನಡದ ಗೀತೆಗಳನ್ನೇ ಬೇರೆ ಭಾಷೆಗೂ ಭಾಷಾಂತರ ಮಾಡಿಸುವುದಕ್ಕೂ ಯೋಚಿಸುತ್ತಿದ್ದಾರಂತೆ. ಆ ಕಾರಣದಿಂದಲೇ ಆಲ್ಬಂ ಕೆಲಸ ಸ್ವಲ್ಪ ತಡವಾಗಿದೆ’ಎನ್ನುತ್ತಾರೆ ರಘುದೀಕ್ಷಿತ್‌.