ಉಪೇಂದ್ರ ಅವರೇ, ನಿಮ್ಮಿಂದ ಬಹಳಷ್ಟು ವಿಚಾರವನ್ನು ಕದ್ದಿದ್ದೇನೆ. ನಿಮ್ಮ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿ ಇದೆ’ ಎಂದಿದ್ದಾರೆ. ಅಲ್ಲದೆ, ಯಾವುದೇ ನಾಚಿಕೆ ಇಲ್ಲದೇ 'ನಾನು ನಿಮ್ಮಿಂದ, ನಿಮ್ಮ ಸಿನಿಮಾಗಳಿಂದ..
ಟಾಲಿವುಡ್ ಖ್ಯಾತ ನಿರ್ದೇಶಕ ಸುಕುಮಾರ್ (Sukumar) ಅವರು ಕನ್ನಡದ ಬಗ್ಗೆ ಮಾತನ್ನಾಡಿದ್ದಾರೆ. ಸುಕುಮಾರ್ ಯಾರು ಅಂತ ಈಗ ಯಾರೂ ಕೇಳೋ ಹಾಗಿಲ್ಲ. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ' ಸಿರೀಸ್ ಸಿನಿಮಾಗಳ ನಿರ್ದೇಶನ ಮಾಡುವ ಮೂಲಕ ಸುಕುಮಾರ್ ಅವರು ಈಗ ವಿಶ್ವಪ್ರಸಿದ್ಧರಾಗಿದ್ದಾರೆ. ಇಂಥ ನಿರ್ದೇಶಕರು ಇತ್ತೀಚೆಗೆ ಕನ್ನಡದ ಬಗ್ಗೆ ಮಾತನ್ನಾಡಿದ್ದಾರೆ. ಎಲ್ಲಿ, ಯಾವಾಗ ಹಾಗೂ ಏನಂದ್ರು ಅನ್ನೋದನ್ನ ಮುಂದೆ ನೋಡಿ..
ಸಾಮಾನ್ಯವಾಗಿ ಹೆಚ್ಚಿನ ಎಲ್ಲಾ ನಿರ್ದೇಶಕರು ಮತ್ತೋರ್ವ ನಿರ್ದೇಶಕನಿಂದ ಸ್ಫೂರ್ತಿ ಪಡೆಯುತ್ತಾರೆ. ಅದೇ ರೀತಿ ಸುಕುಮಾರ್ ಅವರು ಕೂಡ ಕನ್ನಡದ ಒಬ್ಬರು ನಿರ್ದೇಶಕರಿಂದ ಸ್ಪೂರ್ತಿ ಪಡೆದಿದ್ದಾರೆ. ಅಚ್ಚರಿ ಎಂಬಂತೆ ಸುಕುಮಾರ್ ಅವರು ಯಾವುದೇ ನಾಚಿಕೆ, ಅಂಜಿಕೆ ಇಲ್ಲದೇ ಈ ಸಂಗತಿಯನ್ನು ಬಹಿರಂಗವಾಗಿ ಇತ್ತೀಚೆಗೆ ವೇದಿಕೆಯೊಂದರಲ್ಲಿ ಹಂಚಿಕೊಂಡಿದ್ದಾರೆ.
ಕನ್ನಡ ಮೂಲದವರೇ ಆದ ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣಂ’ ಚಿತ್ರದಲ್ಲಿ ಅವರ ಮಗಳು ಐಶ್ವರ್ಯಾ ಅರ್ಜುನ್ ನಟಿಸುತ್ತಿದ್ದಾರೆ. ಈ ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಸುಕುಮಾರ್ ಹಾಗೂ ಕನ್ನಡದ ನಟ ಉಪೇಂದ್ರ ಅತಿಥಿಯಾಗಿ ಭಾಗಿಯಾಗಿದ್ದರು. ತಮ್ಮ ಚಿತ್ರಗಳಿಗೆ ಸ್ಫೂರ್ತಿಯಾಗಿರೋ ಉಪೇಂದ್ರ ಅವರನ್ನು ತಮ್ಮ ಪಕ್ಕದಲ್ಲೇ ನೋಡಿ ಸುಕುಮಾರ್ ಅವರು ಭಾರೀ ಸಂತೋಷಗೊಂಡರು ಹಾಗೂ ಅದನ್ನೂ ಅವರು ಹೇಳಿಕೊಂಡಿದ್ದಾರೆ.
ಉಪೇಂದ್ರ ಹಾಗೂ ಅವರು ಮಾಡಿರೋ ಸಿನಿಮಾಗಳಿಂದ ಸ್ಫೂರ್ತಿ ಪಡೆದು ಚಿತ್ರಕಥೆ ಬರೆಯುತ್ತಿದ್ದಾರೆ. ಇದನ್ನು ಅವರು ಯಾವುದೇ ಅಂಜಿಕೆ ಇಲ್ಲದೆ ಹೇಳಿದ್ದಾರೆ. ಈ ರಹಸ್ಯವನ್ನು ರಿವೀಲ್ ಮಾಡಿದ್ದು ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ.
ಹಾಗಿದ್ರೆ ಪುಷ್ಪ ನಿರ್ದೇಶಕ ಸುಕುಮಾರ್ ಅವರು ಅದೇನು ಹೇಳಿದ್ದಾರೆ? 'ಅಷ್ಟು ಮ್ಯಾಡ್ ಆಗಿರುವ ಮತ್ತೊಬ್ಬರು ನಿರ್ದೇಶಕರನ್ನು ನಾನು ನೋಡಿಲ್ಲ. ಎ, ಓಂ, ಉಪೇಂದ್ರ ಈ ಮೂರು ಸಿನಿಮಾ ಮಾಡಿದ ಯಾವುದೇ ನಿರ್ದೇಶಕನಾದರೂ ನಿವೃತ್ತಿ ಪಡೆಯುತ್ತಿದ್ದರು. ನಾನೇ ಆಗಿದ್ರೆ ಖಂಡಿತವಾಗಿಯೂ ನಿವೃತ್ತಿ ಪಡೆಯುತ್ತಿದೆ. ಅಂತಹ ಕಲ್ಟ್ ಸಿನಿಮಾಗಳು ಅವು. ನನ್ನ ಸಿನಿಮಾಗಳ ಚಿತ್ರಕಥೆ ಇಷ್ಟು ಅದ್ಭುತವಾಗಿ ಇರುತ್ತದೆ ಎಂದರೆ ಅದಕ್ಕೆ ಕಾರಣ ಆ ಮೂರು ಕಲ್ಟ್ ಚಿತ್ರಗಳು.
ಉಪೇಂದ್ರ ಅವರೇ, ನಿಮ್ಮಿಂದ ಬಹಳಷ್ಟು ವಿಚಾರವನ್ನು ಕದ್ದಿದ್ದೇನೆ. ನಿಮ್ಮ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿ ಇದೆ’ ಎಂದಿದ್ದಾರೆ. ಅಲ್ಲದೆ, ಯಾವುದೇ ನಾಚಿಕೆ ಇಲ್ಲದೇ 'ನಾನು ನಿಮ್ಮಿಂದ, ನಿಮ್ಮ ಸಿನಿಮಾಗಳಿಂದ ಸ್ಫೂರ್ತಿ ಪಡೆಯುತ್ತೇನೆ' ಎಂದು ಸುಕುಮಾರ್ ಅವರು ಹೇಳಿದ್ದಾರೆ.
ಉಪೇಂದ್ರ ಅವರು ‘ಓಂ’, ‘ಉಪೇಂದ್ರ’ ಹಾಗೂ ‘ಎ’ ಚಿತ್ರಗಳನ್ನು ನಿರ್ದೇಶನ ಮಾಡಿ ಫೇಮಸ್ ಆದವರು. ಇದಲ್ಲದೆ, ‘ತರ್ಲೆ ನನ್ಮಗ’, ‘ಶ್’ ರೀತಿಯ ಚಿತ್ರಗಳನ್ನು ಕೂಡ ಅವರು ನೀಡಿದ್ದಾರೆ. ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರ ಸಿನಿಮಾಗಳನ್ನು ಅಂದು ಜಗತ್ತೇ ಅಚ್ಚರಿಯಿಂದ ನೋಡಿತ್ತು, ಚಪ್ಪಾಳೆ ತಟ್ಟಿತ್ತು. ಈಗಲೂ ಕೂಡ ಭಾರತವೂ ಸೇರಿದಂತೆ, ವಿಶ್ವದೆಲ್ಲೆಡೆ ಉಪೇಂದ್ರ ನಿರ್ದೇಶನದ ಸಿನಿಮಾಗಳಿಗೆ ಬೇಡಿಕೆ ಹಾಗೂ ಮೆಚ್ಚುಗೆ ಇದೆ. ಕನ್ನಡದ ನಿರ್ದೇಶಕ ಉಪೇಂದ್ರ ಅವರನ್ನು ನೋಡಿದರೆ ಈಗಲೂ ಹಲವರು ಕಾಲಿಗೆ ಬೀಳುತ್ತಾರೆ.
ಅಂದಹಾಗೆ, ನಿರ್ದೇಶಕ ಸುಕುಮಾರ್ ಅವರ ಅನೇಕ ಸಿನಿಮಾಗಳು ಬ್ಲಾಕ್ಬಸ್ಟರ್ ಆಗಿವೆ. ಅದರಲ್ಲೂ ‘ಪುಷ್ಪ 2’ ಚಿತ್ರ ಮಾಡಿರೋ ದಾಖಲೆಗಳು ಒಂದೆರಡಲ್ಲ. ಸುಕುಮಾರ್ ನಿರ್ದೇಶನ ಚಿತ್ರದ ಚಿತ್ರಕಥೆ ಸಾಕಷ್ಟು ಮೆಚ್ಚುಗೆ ಪಡೆಯುವ ರೀತಿಯಲ್ಲಿ ಇರುತ್ತವೆ. ಇದಕ್ಕೆ ಕಾರಣ ಕನ್ನಡದ ಚಿತ್ರಗಳು ಎಂದು ಇದೀಗ ಸುಕುಮಾರ್ ಅವರು ರಿವೀಲ್ ಮಾಡಿದ್ದಾರೆ. ಈ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿದೆ. ತೆಲುಗು ವೇದಿಕೆ ಮೇಲೆಯೇ ಅವರು ಈ ವಿಚಾರ ಹೇಳಿಕೊಂಡಿದ್ದು ಮತ್ತೊಂದು ವಿಶೇಷ.
