Published : Sep 10 2018, 10:21 AM IST| Updated : Sep 19 2018, 09:17 AM IST
Share this Article
FB
TW
Linkdin
Whatsapp
Punith rajkumar
ಶೀಘ್ರದಲ್ಲೇ ಕಲರ್ಸ್ ವಾಹಿನಿಯಲ್ಲಿ ರಿಯಾಲಿಟಿ ಶೋ ಮಾಡಲಿದ್ದಾರೆ ಪುನೀತ್
ಸಿನಿಮಾದ ಜತೆಗೆ ಕಿರುತೆರೆ ಈಗ ಖಾಯಂ ಆಗಿದೆ. ಕಲರ್ಸ್ ಜತೆಗೆ ಅಂತಹದೊಂದು ಒಡನಾಟ ಇದೆ. ಸದ್ಯಕ್ಕೆ ಅಲ್ಲಿನ ಶೋ ಬಗ್ಗೆ ನಂಗೆ ಗೊತ್ತಿಲ್ಲ. ಅದು ‘ಫ್ಯಾಮಿಲಿ ಪವರ್’ ತರಹದ್ದೋ ಅಥವಾ ಕ್ವಿಜ್ ತರಹದ ಕಾರ್ಯಕ್ರಮವೋ ಯಾವುದು ಕನ್‌ಫರ್ಮ್ ಆಗಿಲ್ಲ. ಆದರೂ, ಇಷ್ಟರಲ್ಲೇ ರಿಯಾಲಿಟಿ ಶೋ ಮೂಲಕ ಮತ್ತೆ ಕಿರುತೆರೆಯಲ್ಲಿ ಬರುವುದು ಖಚಿತ.
ಪಿಆರ್‌ಕೆ ಸಂಸ್ಥೆಯಡಿ ನಾನೂ ಅಭಿನಯಿಸಬೇಕು ಅನ್ನೋ ಆಸೆಯಿದೆ. ಬಹುತೇಕ ಅದು ಇಷ್ಟರಲ್ಲೇ ಕೈಗೂಡಲಿದೆ. ಸದ್ಯಕ್ಕೆ ‘ನಟಸಾರ್ವಭೌಮ’ದಲ್ಲಿ ಬ್ಯುಸಿ ಆಗಿದ್ದೇನೆ. ಇನ್ನು ಹಲವು ದಿನಗಳ ಚಿತ್ರೀಕರಣ ಬಾಕಿಯಿದೆ. ಅದು ಮುಗಿದರೆ ಸಂತೋಷ್ ಆನಂದರಾಮ್ ನಿರ್ದೇಶನದ ಸಿನಿಮಾ ಶುರುವಾಗುತ್ತದೆ. ಅದಾದ ನಂತರ ನಮ್ಮದೇ ಬ್ಯಾನರ್‌ನಲ್ಲಿ ನಟನೆ.
ನವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಉದ್ದೇಶದೊಂದಿಗೆ ಪಿಆರ್‌ಕೆ ಸಂಸ್ಥೆ ಅಸ್ಥಿತ್ವಕ್ಕೆ ಬಂದಿದ್ದು. ಅದರ ಉದ್ದೇಶ ಬಹುತೇಕ ಈಡೇರುತ್ತಿದೆ. ಈಗಾಗಲೇ ನಿರ್ಮಾಣವಾಗಿರುವ ಎರಡು ಚಿತ್ರಗಳಲ್ಲೂ ಬಹುತೇಕ ಹೊಸಬರೇ ಇದ್ದಾರೆ. ಇದೀಗ ಮೂರನೇ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದೇನೆ. ಅದರಲ್ಲೂ ಹೊಸಬರೇ ಇದ್ದಾರೆ. ಸದ್ಯಕ್ಕೆ ಅವರೆಲ್ಲ ಯಾರು ಎಂದು ಈಗಲೇ ಬಹಿರಂಗ ಪಡಿಸುವುದು ತಾಂತ್ರಿಕ ಕಾರಣದಿಂದ ಸರಿಯಲ್ಲ. ಆದರೆ, ಈಗಾಗಲೇ ಕತೆ ಕೇಳಿದ್ದೇನೆ. ಚೆನ್ನಾಗಿದೆ. ಶುರು ಮಾಡೋಣ ಅಂತ ಹೇಳಿದ್ದೇನೆ.
ಅಮೆರಿಕದಲ್ಲಿ ‘ಕವಲುದಾರಿ’ ಟೀಸರ್ ಲಾಂಚ್ ಆಗಿದ್ದು ಕಾಕತಾಳೀಯ. ಅಕ್ಕ ಸಮ್ಮೇಳನಕ್ಕೆ ನಾನು ಅತಿಥಿಯಾಗಿದ್ದೆ. ಅಲ್ಲಿಗೆ ಹೋಗುತ್ತಿದ್ದೇನೆ ಅಂತ ವಿಷಯ ಗೊತ್ತಾಗಿ, ಟೀಸರ್ ಲಾಂಚ್ ಪ್ಲ್ಯಾನ್ ಮಾಡಿದ್ದೇ ನಿರ್ದೇಶಕ ಹೇಮಂತ್ ರಾವ್. ನನ್ನದು ಸಿನಿಮಾ ಎನ್ನುವುದಕ್ಕಿಂತ ಹೇಮಂತ್ ಸಲಹೆಯಂತೆ ನಾನಲ್ಲಿ ಟೀಸರ್ ಲಾಂಚ್ ಮಾಡಿದೆ. ಅಲ್ಲಿದ್ದವರು ನೋಡಿ, ಮೆಚ್ಚುಗೆ ಹೇಳಿದಾಗ ಖುಷಿಯೂ ಆಯಿತು. ಅಲ್ಲಿಂದ ಇಲ್ಲಿಗೆ ಬರುವ ಹೊತ್ತಿಗೆ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಒಂದು ಸಿನಿಮಾ ಗೆಲ್ಲೋದಕ್ಕೆ ಸೋಷಲ್ ಮೀಡಿಯಾದಲ್ಲಿನ ರೆಸ್ಪಾನ್ಸ್ ಸಾಕೇ? ಸೋಷಲ್ ಮೀಡಿಯಾ ಪಬ್ಲಿಸಿಟಿ ಒಂದು ಸಿನಿಮಾ ಪ್ರಚಾರಕ್ಕೆ ಹೇಗೆಲ್ಲ ವರ್ಕ್ ಆಗುತ್ತೆ ಅನ್ನೋದು ನನಗಿನ್ನು ಸರಿಯಾಗಿ ಗೊತ್ತಿಲ್ಲ. ಅಂತಿಮವಾಗಿ ಸಿನಿಮಾ ಚೆನ್ನಾಗಿದ್ದರೆ ಮಾತ್ರ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆನ್ನುವುದಷ್ಟೇ ನನಗೆ ಗೊತ್ತಿರುವ ವಿಚಾರ. ಅದನ್ನೇ ಗಮನದಲ್ಲಿಟ್ಟುಕೊಂಡು ‘ಕವಲುದಾರಿ’ ಸಿನಿಮಾ ಮಾಡಿದ್ದೇವೆ.
ಕಾಲಿವುಡ್ ನಿರ್ದೇಶಕ ವೆಟ್ರಿಮಾರನ್ ಒಂದಲ್ಲ, ಹಲವು ಬಾರಿ ಭೇಟಿ ಮಾಡಿದ್ದಾರೆ. ಒಂದು ವರ್ಷದಿಂದ ನಮ್ಮಿಬ್ಬರ ಭೇಟಿ ನಡೆಯುತ್ತಲೇ ಇದೆ. ಇದು ಸಿನಿಮಾಕ್ಕಾಗಿಯೇ ಎನ್ನುವುದು ನಿಜವೇ. ಆದರೆ ಅದು ಯಾವಾಗ ಎನ್ನುವುದು ನನಗೂ ಗೊತ್ತಿಲ್ಲ.
ಸ್ಟಾರ್‌ಗಳು ವರ್ಷಕ್ಕೆ ಕನಿಷ್ಠ ಮೂರು ಸಿನಿಮಾಗಳಲ್ಲಾದ್ರೂ ಅಭಿನಯಿಸುವಂತೆ ಕೇಳಿಕೊಳ್ಳುವಂತೆ ವಾಣಿಜ್ಯ ಮಂಡಳಿ ಅಧ್ಯಕ್ಷರು ನೀಡಿದ ಹೇಳಿಕೆಯನ್ನು ನಾನೂ ಕೂಡ ಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡೆ. ಹಾಗಾದ್ರೆ ಒಳ್ಳೆಯದು ಕೂಡ. ಆದ್ರೆ ಪ್ರತಿಯೊಬ್ಬರಿಗೂ ಸಮಯ, ಸಂದರ್ಭಗಳು ವಿಚಿತ್ರವಾಗಿರುತ್ತವೆ. ನನ್ನದೇ ವಿಷಯಕ್ಕೆ ಬಂದರೆ, ಈ ವರ್ಷದಲ್ಲಿ ಎಷ್ಟು ಸಿನಿಮಾ ತೆರೆಗೆ ಬರಬಹುದು ಅಂತ ನನಗೆ ಗೊತ್ತಿಲ್ಲ. ಆದರೆ ಒಪ್ಪಿಕೊಂಡ ಸಿನಿಮಾಗಳೇ ಐದಾರು ಇವೆ. ಎಲ್ಲವೂ ಹಂತ ಹಂತವಾಗಿ ಚಿತ್ರೀಕರಣ ಮುಗಿಸಬೇಕು, ಆನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸ. ನಾವು ನಟಿಸಬಹುದು ಅಷ್ಟೇ, ಅವುಗಳನ್ನು ತೆರೆಗೆ ತರಬೇಕಾದವರು ನಿರ್ಮಾಪಕರು. ಅಂತಿಮವಾಗಿ ಅದು ಅವರಿಗೆ ಸಂಬಂಧಿಸಿದ್ದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.