ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮದೇ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಪ್‌ಡೇಟ್‌ಗಿಂತ..

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮದೇ ಛಾಪು ಮೂಡಿಸಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ಬಾರಿ ಯಾವುದೇ ಸಿನಿಮಾ ಅಪ್‌ಡೇಟ್‌ಗಿಂತ, ತಮ್ಮ ವೈಯಕ್ತಿಕ ಬದುಕಿನ ಮುದ್ದಾದ ಕ್ಷಣವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಮಗಳು ಮಾಲ್ತಿ ಮೇರಿ ಜೊತೆಗಿನ ತಾಯಿಯ ಮಮತೆಯ ಕ್ಷಣದ ಜೊತೆಗೆ ಸ್ನೇಹಿತರೊಂದಿಗೆ ಪ್ರಿಯಾಂಕಾ ಎಂಜಾಯ್ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಪ್ರಿಯಾಂಕಾ ತಮ್ಮ ಈ ವಿಡಿಯೋವನ್ನು ‘ನನ್ನ ಎರಡು ವ್ಯಕ್ತಿತ್ವಗಳು’ ಎಂಬ ಅರ್ಥ ಬರುವ ರೀತಿಯಲ್ಲಿ ಹಂಚಿಕೊಂಡಿದ್ದು, ತಾಯಿಯಾಗಿ ಅವರ ಮುದ್ದಾದ ಮತ್ತೊಂದು ಮುಖ ಹಾಗೂ ಸ್ನೇಹಿತರೊಂದಿಗೆ ಸಖತ್ ಎಂಜಾಯ್ ಮಾಡುವ ಅವರ ಚಿಲ್ ಅವತಾರ ಎರಡನ್ನೂ ಒಂದೇ ವಿಡಿಯೋದಲ್ಲಿ ತೋರಿಸಿದ್ದಾರೆ.

ಮಗಳು ಮಾಲ್ತಿ ಜೊತೆ ಮಂತ್ರ ಪಠಿಸಿದ ಪ್ರಿಯಾಂಕಾ!

ವಿಡಿಯೋ ಆರಂಭವಾಗುವುದು ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿಯನ್ನು ಮಡಿಲಲ್ಲಿ ಹಿಡಿದುಕೊಂಡಿರುವ ಮುದ್ದಾದ ದೃಶ್ಯದಿಂದ. ತಾಯಿ-ಮಗಳು ಇಬ್ಬರೂ ಒಟ್ಟಿಗೆ ಮೃತ್ಯುಂಜಯ ಮಂತ್ರವನ್ನು ಪಠಿಸುತ್ತಿರುವ ಕ್ಷಣವನ್ನು ವಿಡಿಯೋದಲ್ಲಿ ಕಾಣಬಹುದು. ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದ್ದು, ಪ್ರಿಯಾಂಕಾ ತಮ್ಮ ಮಗಳೊಂದಿಗೆ ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಕ್ಷಣವನ್ನು ಹಂಚಿಕೊಂಡಿದ್ದಾರೆ.

ಆದರೆ ಕೆಲವೇ ಕ್ಷಣಗಳಲ್ಲಿ ವಿಡಿಯೋ ಸಂಪೂರ್ಣವಾಗಿ ಬೇರೆ ಮೂಡ್‌ಗೆ ತಿರುಗುತ್ತದೆ. ನಂತರ ಪ್ರಿಯಾಂಕಾ ತಮ್ಮ ಸ್ನೇಹಿತರೊಂದಿಗೆ ಖುಷಿಯಿಂದ ಡ್ಯಾನ್ಸ್ ಮಾಡುತ್ತಾ, ಪಾರ್ಟಿ ಮೂಡ್‌ನಲ್ಲಿ ಎಂಜಾಯ್ ಮಾಡುತ್ತಿರುವ ದೃಶ್ಯಗಳು ಕಾಣಿಸಿಕೊಳ್ಳುತ್ತವೆ. ಅಂದರೆ ಒಂದು ಕಡೆ ಮಗಳ ಮುದ್ದಿನ ‘ಮಮ್ಮಾ’, ಮತ್ತೊಂದೆಡೆ ಸ್ನೇಹಿತರ ಜೊತೆ ಫುಲ್ ಎನರ್ಜಿ ಇರುವ ‘ಮಾಮಾಸಿಟಾ’! ಪ್ರಿಯಾಂಕಾ ತಮ್ಮ ಎರಡೂ ಮುಖಗಳನ್ನು ಒಂದೇ ವಿಡಿಯೋದಲ್ಲಿ ತೋರಿಸಿದ್ದಾರೆ.

‘ದೇಸಿ ಗರ್ಲ್’ನಿಂದ ‘ದೇಸಿ ಮಮ್ಮಾ’!

ಪ್ರಿಯಾಂಕಾ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವಾಗ ‘Sound on’ ಎಂದು ಮಾತ್ರ ಕ್ಯಾಪ್ಶನ್ ನೀಡಿದ್ದಾರೆ. ಜೊತೆಗೆ ಕಣ್ಣು ಮತ್ತು ಸ್ಪೀಕರ್ ಎಮೋಜಿಗಳನ್ನು ಹಾಕಿದ್ದಾರೆ. ವಿಡಿಯೋ ಪೋಸ್ಟ್ ಆಗುತ್ತಿದ್ದಂತೆ ಅಭಿಮಾನಿಗಳು ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಪ್ರಿಯಾಂಕಾ ಅವರ ತಾಯಿಯ ಪಾತ್ರ ಹಾಗೂ ಅವರ ಎನರ್ಜಿಟಿಕ್ ಪರ್ಸನಾಲಿಟಿಯನ್ನು ಮೆಚ್ಚಿಕೊಂಡಿರುವ ಅಭಿಮಾನಿಗಳು, ಅವರ ಎರಡೂ ಅವತಾರಗಳನ್ನು ಹೊಗಳಿದ್ದಾರೆ.

ಒಬ್ಬ ಅಭಿಮಾನಿ, “Desi Girl to Desi Mamma” ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು “ಎರಡೂ ಪಾತ್ರಗಳಲ್ಲೂ ನೀವು ಅತ್ಯುತ್ತಮ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬ ಅಭಿಮಾನಿ ಪ್ರಿಯಾಂಕಾ ಅವರ ಭಾರತೀಯ ಸಂಸ್ಕೃತಿ ಮತ್ತು ಫ್ಯಾಷನ್ ಮೇಲಿನ ಪ್ರೀತಿಯನ್ನು ಹೊಗಳಿದ್ದು, ಮತ್ತೊಬ್ಬರು ಅವರನ್ನು ‘ಕ್ವೀನ್’ ಎಂದು ಕರೆದಿದ್ದಾರೆ.

‘ವಾರಣಾಸಿ’ ಶೂಟಿಂಗ್‌ನಲ್ಲಿ ಪ್ರಿಯಾಂಕಾ ಬ್ಯುಸಿ

ಸದ್ಯ ಪ್ರಿಯಾಂಕಾ ಚೋಪ್ರಾ ಭಾರತದಲ್ಲಿದ್ದಾರೆ. ಪತಿ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಮೇರಿ ಜೊತೆ ಭಾರತಕ್ಕೆ ಆಗಮಿಸಿರುವ ಅವರು, ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬಹುನಿರೀಕ್ಷಿತ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಮಹೇಶ್ ಬಾಬು ನಾಯಕನಾಗಿ ನಟಿಸುತ್ತಿರುವ ಈ ಬಹುಕೋಟಿ ಸಿನಿಮಾಗೆ ಸದ್ಯ ‘ವಾರಣಾಸಿ’ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಮೂಡಿದೆ.

ಕುಟುಂಬದ ಫೋಟೋಗಳನ್ನು ಹಂಚಿಕೊಂಡಿದ್ದ ನಿಕ್ ಜೋನಸ್

ಇತ್ತೀಚೆಗಷ್ಟೇ ನಿಕ್ ಜೋನಸ್ ಕೂಡ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಜುಲೈ ತಿಂಗಳ ತಮ್ಮ ಕುಟುಂಬದ ಕೆಲವು ವಿಶೇಷ ಕ್ಷಣಗಳನ್ನು ಒಳಗೊಂಡ ಫೋಟೋಗಳ ಸರಣಿಯನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. “July was one for the books” ಎಂಬ ಕ್ಯಾಪ್ಶನ್‌ನೊಂದಿಗೆ ಹಂಚಿಕೊಂಡಿದ್ದ ಆ ಫೋಟೋಗಳಲ್ಲಿ ಪ್ರಿಯಾಂಕಾ ಹಾಗೂ ಮಾಲ್ತಿ ಜೊತೆಗಿನ ಮುದ್ದಾದ ಕ್ಷಣಗಳು, ಕುಟುಂಬದ ಖಾಸಗಿ ಸಮಯ ಮತ್ತು ಪ್ರವಾಸದ ಸುಂದರ ದೃಶ್ಯಗಳು ಕಾಣಿಸಿಕೊಂಡಿದ್ದವು.

2027ರಲ್ಲಿ ‘ವಾರಣಾಸಿ’ ಬಿಡುಗಡೆ

ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ, ಪ್ರಿಯಾಂಕಾ ಚೋಪ್ರಾ ಬಹುದಿನಗಳ ಬಳಿಕ ಭಾರತೀಯ ಸಿನಿಮಾರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಿಯಾಂಕಾ ಚೋಪ್ರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರೀ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಬಹುನಿರೀಕ್ಷಿತ ಸಿನಿಮಾ 2027ರ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಿಗೆ ಬರಲಿದೆ ಎನ್ನಲಾಗಿದೆ. ಹೀಗಾಗಿ ‘ವಾರಣಾಸಿ’ ಮೂಲಕ ಪ್ರಿಯಾಂಕಾ ಚೋಪ್ರಾ ಅವರ ಕಂಬ್ಯಾಕ್‌ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.