ಚಿತ್ರರಂಗದಲ್ಲಿ ಇದ್ದಕ್ಕಿದ್ದಂತೆ ಒಂದು ವಿವಾದ ಎದ್ದಿದೆ. ಪ್ರೀಮಿಯರ್‌ ಪದ್ಮಿನಿ ಚಿತ್ರದ ಕೆಲವು ಭಾಗಗಳನ್ನು ತನ್ನ ವರ್ಣಮಯ ಪ್ರಬಂಧ ಸಂಕಲನದ ಪ್ರಬಂಧದಿಂದ ಎತ್ತಿಕೊಂಡಿದ್ದಾರೆ. ಅದಕ್ಕೆ ತನಗೆ ಸಂಭಾವನೆ ಕೊಟ್ಟಿಲ್ಲ. ತನಗೆ ಕ್ರೆಡಿಟ್ಟನ್ನೂ ಕೊಟ್ಟಿಲ್ಲ ಎಂದು ಕತೆಗಾರ ವಸುಧೇಂದ್ರ ಹೇಳಿದ್ದಾರೆ.

ಈ ರಗಳೆಯಲ್ಲಿ ಬಯಲಾಗಿರುವುದು ನಿರ್ದೇಶಕ ರಮೇಶ್‌ ಇಂದಿರಾ ಅವರ ಕೃತಿಚೌರ್ಯ ಪ್ರತಿಭೆ. ಇಲ್ಲಿವರೆಗೂ ಪಕ್ಕದ ರಾಜ್ಯಗಳ ಹಾಗೂ ದೂರದ ದೇಶಗಳ ಭಾಷೆಗಳಿಂದ ಕದಿಯುತ್ತಿದ್ದವರಿಗೆ ರಮೇಶ್‌ ಇಂದಿರಾ, ಕನ್ನಡದ ಕತೆಗಾರರ ಬರಹಗಳನ್ನೇ ಕದಿಯಬಹುದು, ಕದ್ದ ಮೇಲೂ ಹೇಗೆ ಜಾರಿಕೊಳ್ಳಬಹುದು ಎಂಬುದನ್ನು ಹೊಸದಾಗಿ ಕಲಿಸಿಕೊಟ್ಟಿದ್ದಾರೆ. ‘ಪ್ರಿಮಿಯರ್‌ ಪದ್ಮಿನಿ’ ಚಿತ್ರದ ಹೀಗಾಗಿ ಕನ್ನಡದ ಕತೆಗಾರರು, ಸಾಹಿತಿಗಳು ಕೂಡಲೇ ತಮ್ಮ ಮನೆ ಬಾಗಿಲಿಗೆ ‘ಕತೆ ಕಳ್ಳರಿಗೆ ಪ್ರವೇಶ ನಿಷೇಧಿಸಲಾಗಿದೆ’ ಎನ್ನುವ ಬೋರ್ಡ್‌ ಹಾಕಿಕೊಳ್ಳಬೇಕಿದೆ. ಇಷ್ಟಕ್ಕೂ ಆಗಿದ್ದೇನು? ವಸುಧೇಂದ್ರ ಅವರ ಅರೋಪ ಏನು? ಶ್ರುತಿ ನಾಯ್ಡು ಅವರ ಉತ್ತರವೇನು?

‘ಪ್ರೀಮಿಯರ್ ಪದ್ಮಿನಿ’ ಸ್ವಂತದ್ದಲ್ಲ, ಕದ್ದಿದ್ದು: ವಸುಧೇಂದ್ರ

ವಸುಧೇಂದ್ರ ಹೇಳೋದೇನು?

ಪ್ರೀಮಿಯರ್‌ ಪದ್ಮಿನಿ ಸಿನಿಮಾದಲ್ಲಿರುವ ನಂಜುಂಡಿ ಪಾತ್ರವು ನನ್ನ ವರ್ಣಮಯ ಪುಸ್ತಕದಲ್ಲಿರುವ ಸುದೀರ್ಘ ಪ್ರಬಂಧ ನಂಜುಂಡಿಯಿಂದ ತೆಗೆದುಕೊಂಡದ್ದು. ಅದರ ಬಹುತೇಕ ವಿವರಗಳನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ನಿರ್ದೇಶಕರು ಮೊದಲಿಗೆ ನನ್ನನ್ನು ಭೇಟಿಯಾಗಿ, ನನ್ನ ಎರಡು ಪ್ರಬಂಧಗಳನ್ನು ಬಳಸಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಸಂಭಾವನೆಯನ್ನೂ ನಿಗದಿ ಪಡಿಸಲಾಗಿತ್ತು. ಅನಂತರ ಕರಾರು ಪತ್ರವನ್ನು ಶುಭದಿನದಂದು ಮಾಡಿಕೊಳ್ಳೋಣ ಎಂದು ಹೇಳಿ ಹೋದವರು ಮತ್ತೆ ವಾಪಾಸಾಗಲಿಲ್ಲ. ಸಿನಿಮಾ ಬಿಡುಗಡೆಗೆ ಮುಂಚೆ ಕರೆ ಮಾಡಿ, ‘ಸಿನಿಮಾ ಮಾಡಿಬಿಟ್ಟೆಸಾರ್‌. ಆ ಪ್ರಬಂಧದ ಪ್ರೇರಣೆ ನನಗೆ ಸಾಕಷ್ಟಿದೆ. ಅದನ್ನು ಟೈಟಲ್‌ ಕಾರ್ಡ್‌ನಲ್ಲಿ ಹಾಕಬಹುದೆ?’ ಎಂದು ವಿಚಾರಿಸಿದರು. ನನ್ನ ಒಪ್ಪಿಗೆ ಇಲ್ಲದೆ ಸಿನಿಮಾ ಆಗಿರುವುದು ನನಗೆ ಇಷ್ಟವಾಗಲಿಲ್ಲ. ಪ್ರೇರಣೆಯನ್ನು ಪಡೆದುಕೊಂಡಿದ್ದರೆ ನನಗೆ ಸಮಸ್ಯೆಯಿಲ್ಲ. ಆದರೆ ಪ್ರಬಂಧದ ದೃಶ್ಯಗಳನ್ನು ತೆಗೆದಕೊಳ್ಳುವಂತಿಲ್ಲ. ಯಾವುದೋ ಮತ್ತೊಂದು ಕತೆಯ ಭಾಗವಾಗಿ ನನ್ನ ಪಾತ್ರಗಳು ಬರುವುದು ನನಗೆ ಇಷ್ಟವಿಲ್ಲ ಎಂದು ಹೇಳಿದ್ದೆ. ಅನಂತರ ಅವರು ಸುಮ್ಮನಾಗಿಬಿಟ್ಟರು. ಈಗ ಸಿನಿಮಾದಲ್ಲಿ ಬಹುತೇಕ ನಂಜುಂಡಿ ಪಾತ್ರದ ದೃಶ್ಯಗಳು ನನ್ನ ಪ್ರಬಂಧದಿಂದ ನೇರವಾಗಿ ತೆಗೆದುಕೊಳ್ಳಲಾಗಿದೆ.

ಸಿನಿಮಾದ ಬಹುತೇಕ ಮಂದಿಗೆ ಲೇಖಕರು ಮತ್ತು ಕತೆಗಾರರ ಬಗ್ಗೆ ಇರುವ ಅಲಕ್ಷ್ಯ ಈ ಘಟನೆಯಿಂದ ಗೊತ್ತಾಗುತ್ತದೆ. ಇಲ್ಲಿ ಸಮಸ್ಯೆ ಇರುವುದು ಹಣದ್ದಲ್ಲ. ಅಂತಹ ದೊಡ್ಡ ಹಣದ ವ್ಯವಹಾರವೇನೂ ಸಾಹಿತಿಗಳ ಮಧ್ಯೆ ನಡೆಯುವುದಿಲ್ಲ. ಆದರೆ ಯಾವುದೋ ನನಗೆ ಒಪ್ಪಿಗೆಯಾಗದ ಅಸೂಕ್ಷ್ಮ ಕತೆಯ ಸಿನಿಮಾವೊಂದರ ಭಾಗವಾಗಿ ನನ್ನ ಪಾತ್ರಗಳನ್ನು ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ. ಇದು ಮತ್ತೊಬ್ಬ ಕತೆಗಾರನಿಗೆ ಆಗಬಾರದು ಎನ್ನುವ ಕಾಳಜಿಯೇ ಈ ವಿರೋಧದ ಮೂಲ ಉದ್ದೇಶ. ಸಿನಿಮಾದ ಮೂಲಕ ಜನಪ್ರಿಯತೆ ಗಳಿಸುವ ಹಪಹಪಿಯೂ ನನಗಿಲ್ಲ. ಏಕೆಂದರೆ ಈಗಾಗಲೇ ನನ್ನ ಪುಸ್ತಕಗಳು ಹಲವಾರು ಮುದ್ರಣಗಳನ್ನು ಕಂಡು ಓದುಗರ ಮನ್ನಣೆ ಗಳಿಸಿವೆ. ಅದಕ್ಕೆ ಸಿನಿಮಾ ಮಂದಿಯ ಮುದ್ರೆ ಬೇಕಿಲ್ಲ. ಈಗ ನನ್ನ ಸುದೀರ್ಘ ಪ್ರಬಂಧವನ್ನು ಮತ್ತೊಬ್ಬರು ಸಿನಿಮಾ ಮಾಡುವುದಕ್ಕೂ ಸಾಧ್ಯವಿಲ್ಲ. ಅದನ್ನು ಅರ್ಧಂಬರ್ಧ, ತಮ್ಮ ಮನಸ್ಸಿಗೆ ತೋಚಿದಂತೆ ಈ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ. ಇಂತಹ ಘಟನೆಗಳು ಕನ್ನಡದಲ್ಲಿ ಮತ್ತೆ ನಡೆಯದಿರಲಿ ಎನ್ನುವುದಷ್ಟೇ ನನ್ನ ಕಳಕಳಿ. ಪ್ರೀತಿ ಅಭಿಮಾನ ತೋರಿಸುವ ನನ್ನೆಲ್ಲ ಓದುಗರು ನನಗೆ ಸಾಕು. ಅವರಿಗೆ ಯಾವತ್ತೂ ಋುಣಿ.

ಜಗ್ಗೇಶ್‌ ಮಾತಿಗೆ ಕಣ್ಣೀರಿಟ್ಟ ಸುದೀಪ್‌!

ಶ್ರುತಿ ನಾಯ್ಡು ಉತ್ತರ ಏನು?

ನಮ್ಮ ಪ್ರಿಮಿಯರ್‌ ಪದ್ಮಿನಿ ಚಿತ್ರವನ್ನು ಎಲ್ಲರು ನೋಡುತ್ತಿದ್ದಾರೆ. ಆದರೆ, ಅನಗತ್ಯ ಅರೋಪಗಳು ನಮ್ಮ ಚಿತ್ರದ ಮೇಲೆ ಬರುತ್ತಿವೆ. ಮೊದಲು ಈ ಚಿತ್ರವನ್ನು ತಮಿಳಿನ ರೀಮೇಕ್‌ ಎಂದರು. ಈಗ ಹೊಸ ಡ್ರಾಮಾ. ಶ್ರೀಯುತ ವಸುಧೇಂದ್ರ ಅಂತ ಒಬ್ಬರು ಕನ್ನಡದ ಬರಹಗಾರರು ಇದ್ದಾರೆ. ಅವರ ಒಂದು ಪ್ರಬಂಧವನ್ನು ತೆಗೆದುಕೊಂಡು ನಾನು ‘ಪ್ರಿಮಿಯರ್‌ ಪದ್ಮಿನಿ’ ಸಿನಿಮಾ ಮಾಡಿದ್ದೇವೆಂಬ ಹೊಸ ಆರೋಪ ಬರುತ್ತಿದೆ.

ಇದರ ಬಗ್ಗೆ ವಿವರಣೆ ಹೇಳಬೇಕಿದೆ. ರಮೇಶ್‌ ಇಂದಿರಾ ಅವರು ಹಲವು ನಿರ್ದೇಶಕರು, ಪುಸ್ತಕಗಳ ಓದು, ಪತ್ರಿಕಾ ಲೇಖನಗಳು ಹಾಗೂ ಸಿನಿಮಾಗಳನ್ನು ನೋಡಿದ್ದಾರೆ. ಹಾಗೆ ಮಿ. ವಸುಧೇಂದ್ರ ಅವರ ಪ್ರಬಂಧದಿಂದ ಮೂರು ದೃಶ್ಯಗಳು ಬರುತ್ತವೆ. ಅದು ಕಾರಿನ ಡ್ರೈವರ್‌ ಹಾಗೂ ಮಾಲೀಕನ ನಡುವೆ ನಡೆಯುವಂತದ್ದು. ಹೀಗಾಗಿ ನಾವೇ ಕತೆಗಾರ ವಸುಧೇಂದ್ರ ಅವರ ನಂಬರ್‌ ತೆಗೆದುಕೊಂಡು ಅವರ ಪ್ರಬಂಧದಿಂದ ಬಳಸಿಕೊಳ್ಳುತ್ತಿರುವ ಮೂರು ದೃಶ್ಯಗಳ ಬಗ್ಗೆ ಹೇಳಿ, ಬೇಕಿದ್ದರೆ ಹಣ ನೀಡುವುದಾಗಿ ಹೇಳಿದ್ವಿ. ಆಗ ವಸುಧೇಂದ್ರ ಅವರು ನಿಮ್ಮ ಸಿನಿಮಾ ಪೂರ್ತಿ ನನ್ನ ಪ್ರಬಂಧವನ್ನೇ ಆಧರಿಸಿ ಮಾಡಿದ್ದರೆ ಒಂದು ಲಕ್ಷ ರುಪಾಯಿ ಕೊಡುವಂತೆ ಕೇಳಿದರು. ಆದರೆ, ಅವರು ಹೇಳಿದಂತೆ ನಾವು ಇಡೀ ಪ್ರಬಂಧವನ್ನು ಸಿನಿಮಾ ಮಾಡಿಲ್ಲ. ಬಳಸಿಕೊಂಡಿರುವ ಮೂರು ಸನ್ನಿವೇಶಗಳಿಗೆ ಟೈಟಲ್‌ ಕಾರ್ಡ್‌ನಲ್ಲಿ ಕ್ರೆಡಿಟ್‌ ಕೊಟ್ಟಿದ್ದೇವೆ. ಬೇಕಿದ್ದರೆ ಅವರ ‘ವರ್ಣಮಯ’ ಪ್ರಬಂಧ ಓದಿ. ಸಿನಿಮಾ ನೋಡಿ. ಸತ್ಯ ತಿಳಿಯಿರಿ.

ಒಂದು ವೇಳೆ ಇದೇ ಸಿನಿಮಾ ಫ್ಲಾಪ್‌ ಆಗಿದ್ದರೆ ಯಾರೂ ಬರುತ್ತಿರಲಿಲ್ಲ. ಬಹುಶಃ ಯಶಸ್ಸಿಗೆ ಅಪ್ಪಂದಿರು ಹಲವರು. ಇರಲಿ, ವಸುಧೇಂದ್ರ ಅವರ ಪ್ರಬಂಧವನ್ನು ಪ್ರಮೋಟ್‌ ಮಾಡುತ್ತಿದ್ದೇವೆ.

ಇದುವರೆಗೂ ಈ ಕುರಿತು ರಮೇಶ್‌ ಇಂದಿರಾ ಪ್ರತಿಕ್ರಿಯಿಸಿಲ್ಲ. ಮತ್ತೊಬ್ಬರ ಕತೆಯನ್ನು ಅವರಿಗೆ ಹೇಳದೇ ಎತ್ತಿಕೊಂಡು ಸಿನಿಮಾ ಮಾಡುವುದು ಅವರನ್ನು ಪ್ರಮೋಟ್‌ ಮಾಡುವ ರೀತಿಯೆಂದು ಅವರೂ ಭಾವಿಸಿದ್ದಾರೇನೋ?