ವೈದ್ಯನ ಖೆಡ್ಡಾಗೆ ಬೀಳಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿ ಐಫೋನ್ ದೋಚಿದ ಪ್ರಕರಣದಲ್ಲಿ ಖ್ಯಾತ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಿನಿಮಾ ಮೂಲಕ ಜನಪ್ರಿಯವಾಗಿದ್ದ ನಟಿಯ ಮತ್ತೊಂದು ಮುಖ ಬಯಲಾಗಿದೆ.
ಕೊಚ್ಚಿ (ನ.05) ಸಿನಿಮಾ ಮೂಲಕ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡ ಖ್ಯಾತ ನಟಿ ಇದೀಗ ಅರೆಸ್ಟ್ ಆಗಿ ಕಂಬಿ ಎಣಿಸುತ್ತಿದ್ದಾರೆ. ವೈದ್ಯನ ಹನಿ ಟ್ರಾಪ್ ಮಾಡಿ ಹಣ ದೋಚಲು ಪ್ರಯತ್ನಿಸಿದ ಖ್ಯಾತ ನಟಿ ಅತುಲ್ಯ ಚಂದ್ರನ್ ಅರೆಸ್ಟ್ ಆಗಿದ್ದಾರೆ. ವೈದ್ಯನಿಗೆ ಹಲ್ಲೆ ಹಾಗೂ ಐಫೋನ್ ದೋಚಿತ ಪ್ರಕರಣ ಸಂಬಂಧ ನೈಜ ಅಭಿನಯಕ್ಕೆ ಹೆಸರಾಗಿದ್ದ ಅತುಲ್ಯ ಚಂದ್ರನ್ ಸೇರಿದಂತೆ 12 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಪ್ರಮುಖ ಆರೋಪಿ ಅತುಲ್ಯ ಚಂದ್ರನ್ ಬಂಧನವಾಗಿದ್ದಾರೆ.
ಸಿನಿಮಾ ಮೂಲಕ ಜನಪ್ರಿಯ, ಅಸಲಿಗೆ ವಿಲನ್
ಮಲೆಯಾಳಂ ಸಿನಿಮಾದ ಯುವ ಹಾಗೂ ಪ್ರತಿಭಾವಂತ ನಟಿಯಾಗಿ ಗುರುತಿಸಿಕೊಂಡಿದ್ದ ಅತುಲ್ಯ ಚಂದ್ರನ್ ಪ್ಲಾನ್ ಮಾಡಿ ಯುವ ವೈದ್ಯನಿಗೆ ಖೆಡ್ಡಾ ತೋಡಿದ್ದರು. ಚಿಕಿತ್ಸೆಯ ನೆಪವೊಡ್ಡಿ ವೈದ್ಯನ ಕ್ಲೀನಿಕ್ಗೆ ತೆರಳಿದ ಅತುಲ್ಯ ಚಂದ್ರನ್, ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾಳೆ. ವೃತ್ತಿಯಲ್ಲಿ ವಕೀಲೆಯಾಗಿರುವ ಅತುಲ್ಯ ಚಂದ್ರನ್, ಸಿನಿಮಾ ಮೂಲಕವೂ ಗಮನಸೆಳೆದಿದ್ದಾರೆ. ನಟಿ ಮಾತಿಗೆ ಮರಳಾದ ಯುವ ವೈದ್ಯ, ಆಕೆ ಹೇಳಿದಂತೆ ನಿರ್ಜನ ಪ್ರದೇಶಕ್ಕೆ ತೆರಳಿದ್ದಾನೆ. ಈ ವೇಳೆ ಇತರ 11 ಮಂದಿ ತಂಡದವರು ವಿಡಿಯೋ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಿ ಹಣ ದೋಚಲು ಪ್ಲಾನ್ ಮಾಡಿದ್ದಾರೆ.
ವೈದ್ಯ ಹಣ ನೀಡಲು ನಿರಾಕರಿಸಿದಾಗ ಅತುಲ್ಯ ಚಂದ್ರನ್ ಗ್ಯಾಂಗ್ ವೈದ್ಯನ ಮೇಲೆ ಹಲ್ಲೆ ಮಾಡಿದೆ. ಬಳಿಕ ವೈದ್ಯನ ಬಳಿ ಇದ್ದ 3 ಲಕ್ಷ ರೂಪಾಯಿ ಬೆಲೆಯ ಐಫೋನ್ ದೋಚಿ ಪರಾರಿಯಾಗಿದೆ. ಘಟನೆ ಬಳಿಕ ಕೊಚ್ಚಿ ಪೊಲೀಸರಿಗೆ ದೂರು ನೀಡಿದ ವೈದ್ಯ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಸಿಟಿವಿ, ಮೊಬೈಲ್ ಕರೆ, ಟವರ್ ಲೋಕೇಶನ್ ಸೇರಿದಂತೆ ಎಲ್ಲಾ ಮಾಹಿತಿ ಸಂಗ್ರಹಿಸಿದ ಪೊಲೀಸರು ನಟಿ ಅತುಲ್ಯ ಚಂದ್ರನ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
12 ಮಂದಿ ತಂಡ, ಹಣ ವಸೂಲಿ ದಂಧೆ
ಅತುಲ್ಯ ಚಂದ್ರನ್ ಐಷಾರಾಮಿ ಜೀವನ ನಡೆಸುತ್ತಿರುವುದು ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದೆ. ಈ 12 ಮಂದಿ ಗ್ಯಾಂಗ್ ಹಲವು ಉದ್ಯಮಿಗಳನ್ನು ಹನಿ ಟ್ರಾಪ್ ಮಾಡಿ ಹಣ ವಸೂಲಿ ಮಾಡಿರುವ ಅನುಮಾನಗಳು ಕಾಡತೊಡಗಿದೆ. ಇದೇ ಹಣದಲ್ಲಿ ಸಿನಿಮಾ ನಟಿ ಸ್ಟೇಟಸ್ ಕಾಪಾಡಿಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಮೂವರನ್ನು ಬಂಧಿಸಿದ್ದಾರೆ. ಇನ್ನುಳಿದ 9 ಆರೋಪಿಗಳಿಗಾಗಿ ಹುಡುಕಾಟ ತೀವ್ರಗೊಂಡಿದೆ.
ವೃತ್ತಿಯಲ್ಲಿ ವಕೀಲೆಯಾಗಿದ್ದ ಅತುಲ್ಯ, ನಟಿಯಾಗಿಯೂ ಜನರ ಗೌರವಕ್ಕೆ ಪಾತ್ರರಾಗಿದ್ದರು. ಆದರೆ ಅತುಲ್ಯ ನಡೆ ಹಾಗೂ ವರ್ತನೆ ಇದೀಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಘಟನೆ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ.






