ಸ್ಟ್ಯಾಂಡ್‌ಅಪ್ ಕಾಮಿಡಿ ಶೋದಲ್ಲಿ ಮಹಿಳೆಯರ ಬಗ್ಗೆ ಮಾಡಿದ ವಿವಾದಾತ್ಮಕ ಕಾಮೆಂಟ್‌ಗೆ ನಟಿ ಪೂನಂ ಪಾಂಡೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 370 ರೂ. ಬಿರಿಯಾನಿ ವಿವಾದ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಪೂನಂ ಪಾಂಡೆ ಅಂದ್ರೆನೇ ವಿವಾದ ಅನ್ನೋದು ಮಾಮೂಲಿ. ಆದ್ರೆ ಈ ಸಲ ಅವರು ಸುದ್ದಿಯಾಗಿರೋದು ಬೇರೆ ಕಾರಣಕ್ಕೆ. ಮಹಿಳೆಯರ ಬಗ್ಗೆ ಕೀಳಾಗಿ ಮಾತಾಡಿದವನೊಬ್ಬನಿಗೆ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಬಿಗ್ ಬಾಸ್ ಹಿಂದಿ ಸೀಸನ್ 19ರ ಸ್ಪರ್ಧಿ, ಸ್ಟ್ಯಾಂಡ್-ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಅವರ ಲೈವ್ ಶೋ ಒಂದರಲ್ಲಿ ಈ ಘಟನೆ ನಡೆದಿದೆ. ಅಲ್ಲಿ ಪ್ರೇಕ್ಷಕನೊಬ್ಬ ಆಡಿದ ಮಾತು ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
ತಮಾಷೆಗಾಗಿ ಆ ಪ್ರೇಕ್ಷಕ, ತನಗಿಂತ ಸ್ವಲ್ಪ ಹಿರಿಯ ವಯಸ್ಸಿನ ಮಹಿಳೆ ಜೊತೆ ಡೇಟಿಂಗ್‌ಗೆ ಹೋಗೋ ಬಗ್ಗೆ ಮಾತಾಡಿದ್ದ. 'ಅವಳ ಜೊತೆ 370 ರೂಪಾಯಿ ಬಿರಿಯಾನಿ ಶೇರ್ ಮಾಡ್ತೀನಿ, ಆದ್ರೆ ಆ ದುಡ್ಡನ್ನು ವಾಪಸ್ ಪಡಿಲೇಬೇಕು' ಅಂತ ಹೇಳಿದ್ದ. ಆದರೆ, ಈ ಮಾತಿನ ಹಿಂದಿದ್ದ ಕೆಟ್ಟ ಉದ್ದೇಶವನ್ನು ಅರ್ಥಮಾಡಿಕೊಳ್ಳದೆ, ಕಾಮಿಡಿಯನ್ ಪ್ರಣೀತ್ ಮೋರೆ ಆತನ ಜೊತೆ ಸೇರಿ ನಕ್ಕಿದ್ದರು. ಈ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ, ಜನರಿಂದ ಭಾರೀ ಟೀಕೆ ವ್ಯಕ್ತವಾಯ್ತು.
ಈ ವಿವಾದದ ಬಗ್ಗೆ ಪೂನಂ ಪಾಂಡೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. '370 ರೂಪಾಯಿ ಬಿರಿಯಾನಿ ಕಥೆ ನಾನೂ ಕೇಳಿದೆ. ಸೂಪರ್ ಬ್ರದರ್. ನಾನೊಂದು ಮಾತು ಹೇಳ್ತೀನಿ. ನಮಗೆ, ಅಂದ್ರೆ ಮಹಿಳೆಯರಿಗೆ ಪ್ರತಿ ತಿಂಗಳು ಪೀರಿಯಡ್ಸ್ ಆಗುತ್ತೆ. ಅದಕ್ಕೆ ನಾವು ಸ್ಯಾನಿಟರಿ ಪ್ಯಾಡ್ ಬಳಸ್ತೀವಿ. ಅದರ ಬೆಲೆ 370 ರೂಪಾಯಿಗಿಂತ ಹೆಚ್ಚೇ ಇರುತ್ತೆ. ಬಳಸಿದ ಮೇಲೆ ನಾವು ಅದನ್ನ ಬಿಸಾಕ್ತೀವಿ ಅಷ್ಟೇ' ಅಂತ ಪೂನಂ ಪಾಂಡೆ ಖಡಕ್ ಆಗಿ ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್ ಅಕೌಂಟ್ ಡಿಆ್ಯಕ್ಟಿವೇಟ್
ತಮ್ಮ ಶೋನಲ್ಲಿ ನಡೆದ ಘಟನೆ ವಿವಾದವಾದ ಬೆನ್ನಲ್ಲೇ, ಪ್ರಣೀತ್ ಮೋರೆ ಕ್ಷಮೆ ಕೇಳಿದ್ದಾರೆ. ನಂತರ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಡಿಆ್ಯಕ್ಟಿವೇಟ್ ಮಾಡಿದ್ದಾರೆ. 'ನನ್ನ ಶೋನಲ್ಲಿ ಭಾಗವಹಿಸಿದ್ದ ಆ ಪ್ರೇಕ್ಷಕನ ಅಭಿಪ್ರಾಯ ನನ್ನದಲ್ಲ. ಈಗ ಯೋಚಿಸಿದರೆ, ಆ ಮಾತಿಗೆ ನಾನು ವಿರೋಧ ವ್ಯಕ್ತಪಡಿಸಬೇಕಿತ್ತು ಅನ್ನಿಸುತ್ತಿದೆ. ನಕ್ಕು ಸುಮ್ಮನಾಗುವ ಬದಲು ಹಾಗೆ ಮಾಡಬೇಕಿತ್ತು. ಸರಿಯಾದ ಸಮಯದಲ್ಲಿ ಅದನ್ನು ಗುರುತಿಸಲು ನಾನು ವಿಫಲನಾದೆ. ನಡೆದ ಘಟನೆಗೆ ನಾನು ಕ್ಷಮೆ ಕೇಳುತ್ತೇನೆ' ಎಂದು ಪ್ರಣೀತ್ ಮೋರೆ ಬರೆದುಕೊಂಡಿದ್ದರು.


