ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾಕ್ಕೆ ವಿವಾದಗಳು ಬೆನ್ನು ಬಿಡುತ್ತಿಲ್ಲ. ಜಾನ್ವಿ ನಟನೆಯ ದೃಶ್ಯವೊಂದರ ಬಗ್ಗೆ ಎದ್ದಿದ್ದ ಗಲಾಟೆ ತಣ್ಣಗಾಗುವ ಮುನ್ನವೇ, ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಕೊರಿಯೋಗ್ರಾಫರ್ ಚಿತ್ರತಂಡದಲ್ಲಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಸೂಪರ್‌ಸ್ಟಾರ್ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಅಭಿನಯದ 'ಪೆದ್ದಿ' ಸಿನಿಮಾ ಬಿಡುಗಡೆಯಾದಾಗಿನಿಂದ ಒಂದಲ್ಲ ಒಂದು ವಿವಾದದಿಂದ ಸುದ್ದಿಯಲ್ಲಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ಅವರ ಎಂಟ್ರಿ ಸೀನ್, ಅವರ ಲುಕ್ ಮತ್ತು ಬಾಡಿ ಲ್ಯಾಂಗ್ವೇಜ್ ಮೇಲೆ ಕ್ಯಾಮೆರಾ ಫೋಕಸ್ ಮಾಡಿದ ರೀತಿಯ ಬಗ್ಗೆ ಭಾರೀ ಗಲಾಟೆಯೇ ನಡೆದಿತ್ತು. ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿ, ಆ ದೃಶ್ಯವನ್ನು ತೆಗೆದುಹಾಕುವುದಾಗಿ ಹೇಳಿದರೂ ವಿವಾದ ನಿಂತಿಲ್ಲ. ಇದರ ನಡುವೆಯೇ 'ಪೆದ್ದಿ' ಚಿತ್ರಕ್ಕೆ ಮತ್ತೊಂದು ದೊಡ್ಡ ವಿವಾದ ಅಂಟಿಕೊಂಡಿದ್ದು, ಭಾರಿ ಸದ್ದು ಮಾಡುತ್ತಿದೆ. ಅಂದಹಾಗೆ, ಬುಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ರಾಮ್ ಚರಣ್ 'ಪೆದ್ದಿ'ಗೆ ಹೊಸ ತಲೆನೋವು
ಸೌತ್ ಸೂಪರ್‌ಸ್ಟಾರ್ ರಾಮ್ ಚರಣ್ ಸದ್ಯ 'ಪೆದ್ದಿ' ಸಿನಿಮಾ ವಿಚಾರವಾಗಿ ಸದಾ ಸುದ್ದಿಯಲ್ಲಿದ್ದಾರೆ. ಬಿಡುಗಡೆಯಾದ ದಿನದಿಂದ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ಈ ಸಿನಿಮಾ, ಅಷ್ಟೇ ದೊಡ್ಡ ಮಟ್ಟದಲ್ಲಿ ವಿವಾದಗಳಿಗೂ ಸಿಲುಕಿದೆ. ಜಾನ್ವಿ ಕಪೂರ್ ಅವರ ಕೆಲವು ದೃಶ್ಯಗಳ ಬಗ್ಗೆ ಎದ್ದಿದ್ದ ಆಕ್ಷೇಪಕ್ಕೆ ಚಿತ್ರತಂಡ ಕ್ಷಮೆ ಕೇಳಿತ್ತು. ಇದೀಗ ಚಿತ್ರದ ಕೊರಿಯೋಗ್ರಾಫರ್ ವಿಚಾರವಾಗಿ ನಿರ್ಮಾಪಕರು ಟೀಕೆಗೆ ಗುರಿಯಾಗಿದ್ದಾರೆ. ಈ ಪ್ರಕರಣವು ಕೊರಿಯೋಗ್ರಾಫರ್ ಶೇಖ್ ಜಾನಿ ಬಾಷಾ ಅಲಿಯಾಸ್ ಜಾನಿ ಮಾಸ್ಟರ್‌ಗೆ ಸಂಬಂಧಿಸಿದ್ದು. ಅಸಲಿಗೆ, ಜಾನಿ ಮಾಸ್ಟರ್ ವಿರುದ್ಧ 2024ರಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿ, ಅವರನ್ನು ಬಂಧಿಸಲಾಗಿತ್ತು. ನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. 'ಪೆದ್ದಿ' ಸಿನಿಮಾದ 'ಚಿಕಿರಿ ಚಿಕಿರಿ' ಹಾಡಿಗೆ ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ಅವರಿಗೆ ಕ್ರೆಡಿಟ್ ಕೂಡ ನೀಡಲಾಗಿದೆ. ಇದೇ ವಿಚಾರವಾಗಿ ಕೊರಿಯೋಗ್ರಾಫರ್ ಮತ್ತು ಬಿಗ್ ಬಾಸ್ ತೆಲುಗು 9ರ ಸ್ಪರ್ಧಿ ಶ್ರಷ್ಟಿ ವರ್ಮಾ ಚಿತ್ರತಂಡದ ವಿರುದ್ಧ ಕಿಡಿಕಾರಿದ್ದಾರೆ.
ಶ್ರಷ್ಟಿ ವರ್ಮಾ ಮಾಡಿದ ಶಾಕಿಂಗ್ ಆರೋಪ
ಕೊರಿಯೋಗ್ರಾಫರ್ ಶ್ರಷ್ಟಿ ವರ್ಮಾ 'ಪೆದ್ದಿ' ಚಿತ್ರತಂಡದ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅವರು ತಮ್ಮ ಪೋಸ್ಟ್‌ನಲ್ಲಿ, 'ಪೆದ್ದಿ' ಸಿನಿಮಾದಲ್ಲಿ ಜಾನಿ ಮಾಸ್ಟರ್ ಇರುವುದು ನನ್ನ ಆತಂಕವನ್ನು ಹೆಚ್ಚಿಸಿದೆ. ಅವರ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ದೂರು ನೀಡಿದ್ದೇ ನಾನು. ಇಷ್ಟೊಂದು ಗಂಭೀರ ಆರೋಪಗಳಿದ್ದರೂ ಮತ್ತು ಇಂಡಸ್ಟ್ರಿಯ POSH ತನಿಖೆಯಲ್ಲಿ ಲೈಂಗಿಕ ಕಿರುಕುಳ ಸಾಬೀತಾಗಿದ್ದರೂ, ಹಲವು ದೊಡ್ಡ ಸ್ಟಾರ್‌ಗಳು ಮತ್ತು ಚಿತ್ರರಂಗದವರು ಅವರ ಜೊತೆ ಕೆಲಸ ಮಾಡುತ್ತಿರುವುದು ಆಘಾತಕಾರಿ," ಎಂದು ಬರೆದುಕೊಂಡಿದ್ದಾರೆ. "ನಾನು ಕಾನೂನಿನ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿದ್ದೇನೆ. ಇಂತಹ ಸಮಯದಲ್ಲಿ ಜನರು ಅವರಿಗೆ ಸತತವಾಗಿ ಬೆಂಬಲ ನೀಡುತ್ತಿರುವುದು ನನಗೆ ತೊಂದರೆಯುಂಟುಮಾಡುತ್ತಿದೆ. ಮನರಂಜನಾ ಉದ್ಯಮವು ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಸಂತ್ರಸ್ತರ ರಕ್ಷಣೆ ಮಾಡಬೇಕು," ಎಂದು ಅವರು ಆಗ್ರಹಿಸಿದ್ದಾರೆ.
ಯಾರು ಈ ಜಾನಿ ಮಾಸ್ಟರ್?
ಜಾನಿ ಮಾಸ್ಟರ್ ಒಬ್ಬ ಜನಪ್ರಿಯ ಕೊರಿಯೋಗ್ರಾಫರ್. 'ಅಲಾ ವೈಕುಂಠಪುರಮುಲೋ' ಸಿನಿಮಾದ ಹಿಟ್ ಹಾಡು 'ಬುಟ್ಟ ಬೊಮ್ಮ' ಸೇರಿದಂತೆ ಹಲವು ಹಿಟ್ ಹಾಡುಗಳಿಗೆ ಇವರು ನೃತ್ಯ ಸಂಯೋಜಿಸಿದ್ದಾರೆ. 2024ರಲ್ಲಿ ಹೈದರಾಬಾದ್‌ನ ರಾಯದುರ್ಗಂ ಪೊಲೀಸ್ ಠಾಣೆಯಲ್ಲಿ ಜಾನಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯದ ಆರೋಪದ ಮೇಲೆ ಪೋಕ್ಸೋ (POCSO) ದೂರು ದಾಖಲಾಗಿತ್ತು. ಅಪ್ರಾಪ್ತೆಯ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ತೆಲಂಗಾಣ ಪೊಲೀಸರು ಅವರನ್ನು ಸೆಪ್ಟೆಂಬರ್ 19, 2024ರಂದು ಗೋವಾದಲ್ಲಿ ಬಂಧಿಸಿದ್ದರು. ನಂತರ ಅಕ್ಟೋಬರ್ 24, 2024ರಂದು ತೆಲಂಗಾಣ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು.
ಜಾನ್ವಿ ದೃಶ್ಯದ ಬಗ್ಗೆ ಎದ್ದಿದ್ದ ಗಲಾಟೆ ಏನು?
ಚಿತ್ರದಲ್ಲಿ ಜಾನ್ವಿ ಕಪೂರ್ ಅವರ 'ಅಚಿಯಮ್ಮ' ಪಾತ್ರದ ಎಂಟ್ರಿ ದೃಶ್ಯದ ಬಗ್ಗೆಯೇ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ವಿವಾದ ಜೋರಾಗುತ್ತಿದ್ದಂತೆ, ನಿರ್ದೇಶಕ ಬುಚಿ ಬಾಬು ಸನಾ ಒಂದು ಹೇಳಿಕೆ ಬಿಡುಗಡೆ ಮಾಡಿ, ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕುವುದಾಗಿ ಖಚಿತಪಡಿಸಿದ್ದರು. ಈ ಬಗ್ಗೆ ಜಾನ್ವಿ ಕಪೂರ್ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ. ಕೆಲವು ಮೂಲಗಳ ಪ್ರಕಾರ, ಜಾನ್ವಿಗೆ ಈ ದೃಶ್ಯಗಳ ಬಗ್ಗೆ ಅಸಮಾಧಾನವಿತ್ತು ಮತ್ತು ದೃಶ್ಯಗಳನ್ನು ಬದಲಿಸುವಂತೆ ಅವರು ಮನವಿ ಮಾಡಿದ್ದರು. ಆದರೆ, ಚಿತ್ರತಂಡ ಅವರ ಮಾತಿಗೆ ಬೆಲೆ ನೀಡಿರಲಿಲ್ಲ ಎನ್ನಲಾಗಿದೆ. ಇಷ್ಟೆಲ್ಲಾ ವಿವಾದಗಳ ನಡುವೆಯೂ 'ಪೆದ್ದಿ' ಸಿನಿಮಾ ಮೂರು ದಿನಗಳಲ್ಲಿ ಭಾರತದಲ್ಲಿ 125.25 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ವಿಶ್ವಾದ್ಯಂತ ಇದರ ಗ್ರಾಸ್ ಕಲೆಕ್ಷನ್ 191.07 ಕೋಟಿ ರೂ. ಆಗಿದೆ.


