17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ, ವಿಮರ್ಶಕ ಪ್ರೊ. ಮನು ಚಕ್ರವರ್ತಿ ಅವರು ದೇಶಪ್ರೇಮ ಕೆಲವರ ಪೇಟೆಂಟ್ ಆಗಿದ್ದು, 'ಉರಿ'ಯಂತಹ ಚಿತ್ರಗಳು ದ್ವೇಷ ಹರಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.  

ಬೆಂಗಳೂರು: ‘ಸದ್ಯದ ಪರಿಸ್ಥಿತಿಯಲ್ಲಿ ದೇಶಪ್ರೇಮ ಎಂಬುದು ಕೆಲವೇ ಜನರ ಪೇಟೆಂಟ್ ಆಗಿಬಿಟ್ಟಿದೆ. ಶಾಂತಿ, ಪ್ರೀತಿ ಮತ್ತು ಕರುಣೆಯನ್ನು ಬಯಸುವವರನ್ನು ದೇಶವಿರೋಧಿಗಳಂತೆ ಬಿಂಬಿಸಲಾಗುತ್ತಿದೆ. ಉರಿ ಮತ್ತು ಧುರಂಧರ್‌ನಂಥಾ ಸಿನಿಮಾಗಳು ದ್ವೇಷ ಮತ್ತು ಅಸಹನೆಯನ್ನು ಹರಡುತ್ತಿವೆ. ಇಂತಹ ಚಿತ್ರಗಳನ್ನು ಪ್ರಶ್ನಿಸುವವರನ್ನು ಅರ್ಬನ್ ನಕ್ಸಲ್ ಅಥವಾ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿ ಹೀಯಾಳಿಸಲಾಗುತ್ತಿದೆ’ ಎಂದು ರಾಷ್ಟ್ರಪ್ರಶಸ್ತಿ ವಿಜೇತ ವಿಮರ್ಶಕ ಪ್ರೊ. ಮನು ಚಕ್ರವರ್ತಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ನಡೆಯುತ್ತಿರುವ 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಗೋಷ್ಠಿಯೊಂದರಲ್ಲಿ ಮಾತನಾಡಿ, ‘ಇಂದು ಕ್ರಿಯೇಟಿವ್‌ ಫ್ರೀಡಂ ಅನ್ನು ನಂಬುವ ಚಿತ್ರಕರ್ಮಿಗಳು ಮತ್ತು ವಿಮರ್ಶಕರನ್ನು ತೀವ್ರವಾಗಿ ತುಳಿಯುವ ಕೆಲಸಗಳಾಗುತ್ತಿವೆ. ಈ ಅಪಾಯ ಕೇವಲ ಕಲಾರಂಗಕ್ಕಷ್ಟೇ ಸೀಮಿತವಲ್ಲ. ಇದು ಸಮಸ್ತ ನಾಗರಿಕತೆಗೇ ಎದುರಾಗಿರುವ ಬಿಕ್ಕಟ್ಟು’ ಎಂದರು. 

‘ಸಿನಿಮೋತ್ಸವಗಳಲ್ಲೂ ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’ ನಂಥಾ ಚಿತ್ರಗಳನ್ನು ಪ್ರದರ್ಶಿಸಲು ಬಿಡುತ್ತಿಲ್ಲ. ಇಂತಹ ಮಾನವೀಯ ಸಂಬಂಧಗಳನ್ನು ಎತ್ತಿಹಿಡಿಯುವ ಚಿತ್ರಗಳನ್ನು ಬೆಂಬಲಿಸುವುದು ಮತ್ತು ಅದರ ಪರವಾಗಿ ಧೈರ್ಯದಿಂದ ಮಾತನಾಡುವ ಕೆಲಸವನ್ನು ವಿಮರ್ಶಕರು ಮಾಡಬೇಕು’ ಎಂದೂ ಅವರು ಹೇಳಿದರು.

ಇಂದು ಚಿತ್ರೋತ್ಸವಕ್ಕೆ ತೆರೆ 

ಬೆಂಗಳೂರಿನ ಲುಲು ಮಾಲ್‌ನಲ್ಲಿ ನಡೆಯುತ್ತಿರುವ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಇಂದು (ಫೆ.6) ತೆರೆ ಬೀಳಲಿದೆ. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ನಟಿ, ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹಾಗೂ ಹಿರಿಯ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. ಇಂದು ಖ್ಯಾತ ನಿರ್ದೇಶಕ ರಿಚರ್ಡ್‌ ಲಿಂಕ್ಲೇಟರ್‌ ನಿರ್ದೇಶನದ ಫ್ರೆಂಚ್‌ ಚಿತ್ರ ‘ನೌವೆಲ್‌ ವಾಗ್‌’, ಡಾ.ರಾಜ್‌ಕುಮಾರ್‌ ನಟನೆಯ ‘ಶಂಕರ್‌ ಗುರು’, ಐತಿಹಾಸಿಕ ಸಿನಿಮಾ ‘ಮ್ಯಾನ್‌ ಆಫ್‌ ಮಾರ್ಬಲ್‌’ ಸೇರಿದಂತೆ ವಿವಿಧ ದೇಶ, ಭಾಷೆಗಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಜೀವಮಾನ ಪ್ರಶಸ್ತಿಗೆ ಹಂಸಲೇಖಾ ಭಾಜನ

ಬೆಂಗಳೂರು: ಬೆಂಗಳೂರು 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ‘ಜೀವಮಾನದ ಸಾಧನೆ’ ಗೌರವಕ್ಕೆ ಗೀತರಚನಕಾರ, ಸಂಗೀತ ನಿರ್ದೇಶಕ ಡಾ.ಹಂಸಲೇಖ ಭಾಜನರಾಗಿದ್ದಾರೆ. ಇಂದು (ಫೆ.6) ನಡೆಯುವ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಈ ಸಂಬಂಧ ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್‌ ವಿನೋದ್‌ ಚಂದ್ರ ಮತ್ತು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಅವರು ಹಂಸಲೇಖ ಅವರನ್ನು ಭೇಟಿ ಮಾಡಿ, ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಹ್ವಾನಿಸಿದರು.