ಬೆಂಗಳೂರು (ಡಿ. 12): ಕೆಲವು ತಿಂಗಳುಗಳ ಹಿಂದೆ ವಾರಕ್ಕೆ ಮೂರು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. - ಹೀಗೆ ಹೇಳಿರುವುದು ಶ್ರುತಿ ಹರಿಹರನ್. ಮಾಧ್ಯಮಗಳ ಜತೆ ಈ ಕುರಿತು ಮಾತನಾಡಿರುವ ಅವರು ತಮಗೆ ಆಫರ್ ಕಡಿಮೆಯಾಗಿರುವುದನ್ನು ತಿಳಿಸಿದ್ದಾರೆ.

’ನಾತಿ ಚರಾಮಿ’ ಚಿತ್ರದ ಟ್ರೇಲರ್ ರಿಲೀಸ್

ಇತ್ತೀಚೆಗೆ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಮಾಡಿದ ನಂತರ ಶ್ರುತಿ ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಕಾಣಿಸಿ ಕೊಂಡಿದ್ದು ಅಪರೂಪ. ಕಳೆದ ವಾರ ನಡೆದ ಅವರು ಅಭಿನಯಿಸಿರುವ ‘ನಾತಿಚರಾಮಿ’ ಚಿತ್ರದ ಆಡಿಯೋ ಬಿಡುಗಡೆಗೂ ಆಗಮಿಸಿರಲಿಲ್ಲ. ಸಂದರ್ಭ ಹೀಗಿರುವಾಗ ಶ್ರುತಿ ಅವರಿಗೆ ಯಾರೂ ಸಿನಿಮಾ ಆಫರ್ ಮಾಡುತ್ತಿಲ್ಲ ಎಂಬ ಮಾತು ಚರ್ಚೆಗೆ ಬಂದಿತ್ತು. ಇದೀಗ ಅವರೇ ತಮಗೆ ಆಫರ್ ಇಲ್ಲದೇ ಇರುವುದನ್ನು ಒಪ್ಪಿಕೊಂಡಿದ್ದಾರೆ. ಈ ಮಾತುಕತೆಯಲ್ಲಿ ಅವರು ಹೇಳಿಕೊಂಡ ಮಾತುಗಳು ಇಲ್ಲಿವೆ. 

- ಸಿನಿಮಾ ಆಫರ್‌ಗಳು ಬರುವುದು ಕಡಿಮೆಯಾಗಿದೆ. ಬಹುಶಃ ಅನೇಕರು ಇನ್ನು ನನ್ನ ಜೊತೆ ಯಾವತ್ತೂ ಕೆಲಸ ಮಾಡುವುದಿಲ್ಲ ಅನ್ನಿಸುತ್ತಿದೆ. ನನ್ನ ಜೊತೆ ಕೆಲಸ ಮಾಡಲು ಇಚ್ಛೆ ಇರುವ ನಿರ್ದೇಶಕರು ಇನ್ನೂ ಬರವಣಿಗೆ ಹಂತದಲ್ಲಿದ್ದಾರೆ. ನಾನು ಕೆಲವರ ದ್ವೇಷ ಕಟ್ಟಿಕೊಳ್ಳುತ್ತೇನೆ ಅನ್ನುವುದು ಗೊತ್ತಿತ್ತು. ಇದರಲ್ಲಿ ಸರ್ಪೈಸ್ ಏನೂ ಇಲ್ಲ. ನಾನು ಇದನ್ನೆಲ್ಲಾ ಒಪ್ಪಿಕೊಂಡೇ ನನ್ನ ಹೋರಾಟ ಮುಂದುವರಿಸುತ್ತೇನೆ.

- ನಾನು ಆಶಾವಾದಿ. ನನ್ನ ಮೇಲೆ ನನಗೆ ನಂಬಿಕೆ ಇದೆ. ಬಹುಶಃ ನಟಿಯಾಗಿಯೇ ಇರುವುದರ ಹೊರತಾಗಿ ನನ್ನ ಬೇರೆಲ್ಲಾ ಕನಸುಗಳನ್ನು ನನಸು ಮಾಡುವ ಸಮಯ ಇದು. ಹಾಗಂತ ನಟನೆ ಬಿಟ್ಟುಬಿಡುವುದಿಲ್ಲ. ನನಗೆ ಖುಷಿಕೊಡುವ ಪಾತ್ರಗಳು ಸಿಕ್ಕರೆ ಖಂಡಿತಾ ನಾನು ನಟಿಸುತ್ತೇನೆ.