ಮಹಾಭಾರತದಲ್ಲಿ ಅರ್ಜುನ ಪಾತ್ರ ಮಾಡಿದ ಈ ನಟ ಬಳಿಕ ತನ್ನ ಹೆಸರನ್ನೇ ಅರ್ಜುನ ಎಂದು ಬದಲಾಯಿಸಿದ್ದಾರೆ. ವಿಶೇಷ ಅಂದರೆ ಈತನ ತಾಯಿ ಕೂಡ ಅರ್ಜುನ ಎಂದೇ ಕರೆಯುತ್ತಾರೆ. ಅಷ್ಟಕ್ಕೂ ಮುಸ್ಲಿಂ ನಟನ ಮೇಲೆ ಅರ್ಜುನ ಪ್ರಭಾವ ಬೀರಿದ್ದು ಹೇಗೆ?
ಮುಂಬೈ (ನ.18) ಪಾತ್ರಕ್ಕೆ ಜೀವ ತುಂಬಿದ ಬಳಿಕ ಆ ಪಾತ್ರವೇ ತಾವಾಗುತ್ತಾರೆ. ಇದೀಗ ಮುಸ್ಲಿಂ ನಟ ಮಹಭಾರತದ ಅರ್ಜುನ ಪಾತ್ರ ಮಾಡಿದ್ದರು. ಅರ್ಜುನ ಪ್ರಭಾವ ಎಷ್ಟಿತ್ತು ಎಂದರೆ ಕೊನೆಗೆ ತನ್ನ ಹೆಸರನ್ನೇ ಬದಲಾಯಿಸಿ ಅರ್ಜುನ ಎಂದು ಮಾಡಿಕೊಂಡಿದ್ದಾರೆ. ಹೌದು, ದೂರದರ್ಶನದಲ್ಲಿ ಪ್ರಸಾರವಾದ ಮಹಾಭಾರತ ಧಾರವಾಹಿಯಲ್ಲಿ ಫಿರೋಜ್ ಖಾನ್ ಅರ್ಜುನನ ಪಾತ್ರ ಮಾಡಿದ್ದರು. ಈ ಪಾತ್ರವನ್ನು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ ಫಿರೋಜ್ ಖಾನ್ ನಿರ್ವಹಿಸಿದ್ದರು. ಬಳಿಕ ಎಲ್ಲೇ ಹೋದರು ಜನ ಫಿರೋಜ್ ಖಾನ್ ಬದಲು ಅರ್ಜುನ ಎಂದು ಕರೆಯಲು ಆರಂಭಿಸಿದ್ದರು. ಅರ್ಜುನ ಪಾತ್ರದಿಂದ ಪ್ರಭಾವಿತನಾದ ಫಿರೋಜ್ ಖಾನ್ ತಮ್ಮ ಹೆಸರನ್ನು ಅರ್ಜುನ್ ಎಂದು ಬದಲಾಯಿಸಿದ್ದಾರೆ.
23 ಸಾವಿರ ಮಂದಿ ಆಡಿಷನ್ ಬಳಿಕ ಸಿಕ್ಕ ಪಾತ್ರ
1988-90ರ ಸಮಯದಲ್ಲಿ ದೂರದರ್ಶನದಲ್ಲಿ ಮಹಾಭಾರತ ಸೀರಿಯಲ್ ಪ್ರಸಾರವಾಗಿತ್ತು. ಇಡೀ ದೇಶವನ್ನು ಮಹಾಭಾರತ ಸೀರಿಯಲ್ ಮೋಡಿ ಮಾಡಿತ್ತು. ಈ ಧಾರವಾಹಿಯಲ್ಲಿ ಅರ್ಜುನ ಪಾತ್ರವನ್ನು ಹಿಂದಿ ಸೀರಿಯಲ್ನಲ್ಲಿ ನಟಿಸುತ್ತಿದ್ದ ಫಿರೋಜ್ ಖಾನ್ ಮಾಡಿದ್ದರು. ಹಲವು ನಟರು ಅರ್ಜುನ ಪಾತ್ರ ಮಾಡಲು ಬಯಸಿದ್ದರು. ಬರೋಬ್ಬರಿ 23 ಸಾವಿರ ಮಂದಿ ಆಡಿಷನ್ ನೀಡಿದ್ದರು. ಘಟಾನುಘಟಿ ನಟರ ಹಿಂದಿಕ್ಕಿ ಫಿರೋಜ್ ಖಾನ್ಗೆ ಅರ್ಜುನ ಪಾತ್ರ ಸಿಕ್ಕಿತ್ತು. ಫಿರೋಜ್ ಖಾನ್ ಅತ್ಯುತ್ತಮವಾಗಿ ಅರ್ಜುನ ಪಾತ್ರ ಮಾಡಿದ್ದರು. ಮಹಾಭಾರತ ಸೀರಿಯಲ್ ಪ್ರಸಾರವಾದ ಬಳಿಕ ಎಲ್ಲರೂ ಅರ್ಜನ ಎಂದೇ ಕರೆಯಲು ಆರಂಭಿಸಿದ್ದರು.
ಅರ್ಜುನ್ ಫಿರೋಜ್ ಖಾನ್
ಮಹಾರಾಭಾರತ ಧಾರವಾಹಿ ಪ್ರಸಾರವಾಗುತ್ತಿದ್ದಂತೆ ಈ ಧಾರವಾಹಿಯ ಪ್ರತಿ ಪಾತ್ರಗಳು ಜನರಿಗೆ ಅತ್ಯಂತ ಪ್ರಿಯವಾಗಿತ್ತು. ಜೊತೆಗೆ ಅರ್ಜುನ, ಶೀಕೃಷ್ಣ, ಪಾಂಡವರು, ಕೌರವರ ಪಾತ್ರ ಮಾಡಿದ ಎಲ್ಲಾ ನಟರನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತಿತ್ತು. ಮಹಾಭಾರತದಲ್ಲಿ ಅರ್ಜುನ ಪಾತ್ರ ಅತ್ಯಂತ ಬಲಶಾಲಿ ಹಾಗೂ ಜನರಿಗೆ ಕನೆಕ್ಟ್ ಆಗುವ ಪಾತ್ರ. ಹೀಗಾಗಿ ಫಿರೋಜ್ ಖಾನ್ಗೆ ಎಲ್ಲರೂ ಅರ್ಜುನ ಎಂದೇ ಕರೆಯಲು ಆರಂಭಿಸಿದ್ದರು. ಫಿರೋಜ್ ಖಾನ್ ತಾಯಿ ಕೂಡ ಫಿರೋಜ್ ಬದಲು ಅರ್ಜುನ ಎಂದೇ ಕರೆಯುತ್ತಿದ್ದರು. ಪಾತ್ರ ನೀಡಿದ ಯಶಸ್ಸು, ಜನರು ನೀಡಿದ ಪ್ರೀತಿಯಿಂದ ಫಿರೋಜ್ ಖಾನ್ ಮುಂದಿನ ಎಲ್ಲಾ ಸಿರಿಯಲ್ , ಸಿನಿಮಾಗಳಲ್ಲಿ ಅರ್ಜುನ್ ಫಿರೋಜ್ ಖಾನ್ ಎಂದು ಬದಲಾಯಿಸಿದರು.
ಹಿಂದಿ ಸೀರಿಯಲ್ ಮಾತ್ರವಲ್ಲ, ಬಾಲಿವುಡ್ನ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲೂ ಅರ್ಜುನ್ ಫಿರೋಜ್ ಖಾನ್ ನಟಿಸಿದ್ದಾರೆ. ಸ್ಕ್ರೀನ್ ಮೇಲಿನ ಹೆಸರು ಈಗಲೂ ಅರ್ಜುನ್ ಫಿರೋಜ್ ಖಾನ್. ಅರ್ಜುನ್ ತನ್ನ ಗುರುತು ಎಂದು ಹಲವು ಬಾರಿ ಪಿರೋಜ್ ಖಾನ್ ಹೇಳಿದ್ದಾರೆ. ಅರ್ಜುನ ಪಾತ್ರ ತನಗೆ ಎಲ್ಲವನ್ನು ನೀಡಿದೆ. ಪ್ರಮುಖವಾಗಿ ಜನರ ಪ್ರೀತಿ ವಿಶ್ವಾಸ ನೀಡಿದೆ. ಹೀಗಾಗಿ ಸ್ಕ್ರೀನ್ ಹೆಸರು ಅರ್ಜನ್ ಫಿರೋಜ್ ಖಾನ್ ಎಂದು ನಟ ಹೇಳಿದ್ದಾರೆ.
ಮಹಾಭಾರತ ಧಾರವಾಹಿಗೆ ಚಿತ್ರಕತೆ ಹಾಗೂ ಸಂಭಾಷಣೆಕಾರರಾಗಿದ್ದ ಬರಹಗಾರ ಡಾ.ರಾಹಿ ಮಾಸೂಮ್ ರಜಾ ಕೂಡ ಫಿರೋಜ್ ಖಾನ್ಗೆ ಸಲಹೆ ನೀಡಿದ್ದರು. ಇಂಡಸ್ಟ್ರಿಯಲ್ಲಿ ಅರ್ಜುನ್ ಹೆಸರಿನಲ್ಲಿ ಯಾರು ಇಲ್ಲ, ಇಷ್ಟೇ ಅಲ್ಲ 23 ಸಾವಿರ ಜನರ ಆಡಿಶನ್ ಮಾಡಿ ನೀವು ಅರ್ಜುನ ಪಾತ್ರಕ್ಕೆ ಆಯ್ಕೆಯಾಗಿದ್ದೀರಿ. ಇದು ಅದೃಷ್ಟ, ಹೀಗಾಗಿ ಅರ್ಜುನನ ಹೆಸರೇ ಇಟ್ಟುಕೊಳ್ಳಿ ಎಂದು ರಜಾ ಸಲಹೆ ನೀಡಿದ್ದರು. ಅಷ್ಟರಲ್ಲಾಗಲೇ ಪಿರೋಜ್ ಖಾನ್ ಅರ್ಜನನಾಗಿ ಬದಲಾಗಿದ್ದರು.












