ನಾನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಸದ್ಯ ಮೂಕಿ ರೀತಿಯಲ್ಲಿ ನಟನೆ ಮಾಡಿ ಎಲ್ಲರನ್ನೂ ಮೋಡಿ ಮಾಡ್ತಿರೋ ಪುಟಾಣಿ ಹಿತಾ ಉರ್ಫ್​ ಮಹಿತಾ ಸುಮಧುರ ಕಂಠದಿಂದ 'ಮುಕ್ತ ಮುಕ್ತ' ಟೈಟಲ್​ ಸಾಂಗ್ ಹಾಡಿದ್ದಾಳೆ ಕೇಳಿ... 

ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ...ನೀಡಿ ನೀಡಿ ಮುಕ್ತಾ... ಹಾಡು ಸೀರಿಯಲ್​ ವೀಕ್ಷಕರಿಗೆ ತೀರಾ ಚಿರಪರಿಚಿತ. ಆರಂಭದಲ್ಲಿ ಮುಕ್ತ ಸೀರಿಯಲ್​ ಹಾಗೂ ನಂತರದಲ್ಲಿ ಮುಕ್ತ ಮುಕ್ತ ಧಾರಾವಾಹಿ ಮೂಲಕ ಎಲ್ಲರ ಮನಸ್ಸನ್ನು ಗೆದ್ದ ಸುಂದರ ಟೈಟಲ್​ ಸಾಂಗ್​ ಇದು. ಟಿ.ಎನ್​.ಸೀತಾರಾಮ್​ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸೀರಿಯಲ್​ನ ಈ ಟೈಟಲ್​ ಸಾಂಗ್​ ಬರೆದವರು ಈಚೆಗಷ್ಟೇ ಎಲ್ಲರನ್ನೂ ಬಿಟ್ಟು ಅಗಲಿದ ಕವಿ ಎಚ್​ಎಸ್​ವಿ ಎಂದೇ ಖ್ಯಾತಿ ಪಡೆದಿರುವ ಎಚ್​.ಎಸ್​.ವೆಂಕಟೇಶಮೂರ್ತಿ. ಅವರಿಗೆ ಗೀತನಮನ ಸಲ್ಲಿಸುವ ಸಲುವಾಗಿ ನಡೆದ ಕಾರ್ಯಕ್ರಮದಲ್ಲಿ ನಾನಿನ್ನ ಬಿಡಲಾರೆ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರುವ ಪುಟಾಣಿ ಹಿತಾ ಉರ್ಫ್​ ಮಹಿತಾ, ಇದೇ ಟೈಟಲ್​ ಸಾಂಗ್​ ಹಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ. ಈಕೆಯ ಹಾಡಿನ ಮೋಡಿಗೆ ಖುದ್ದು ಟಿ.ಎನ್​.ಸೀತಾರಾಮ್​ ಅವರೇ ಭೇಷ್​ ಎಂದಿದ್ದಾರೆ.

ಅಷ್ಟಕ್ಕೂ ಪುಟಾಣಿ ಹಿತಾ ಎಂದರೆ ಸಾಕು, ಸೀರಿಯಲ್​ ಪ್ರೇಮಿಗಳ ಗಮನ ಹೋಗುವುದು ನಾನಿನ್ನ ಬಿಡಲಾರೆ ಸೀರಿಯಲ್​ಗೆ. ಇದರಲ್ಲಿ ಸದ್ಯ ಮೂಕಿಯಾಗಿ ಆ್ಯಕ್ಟ್​ ಮಾಡುತ್ತಿರುವ ಹಿತಾಳ ಆ್ಯಕ್ಟಿಂಗ್​ಗೆ ಮನ ಸೋಲದವರೇ ಇಲ್ಲ. ಶರತ್ ಮತ್ತು ಅಂಬಿಕಾ ದಂಪತಿಗೆ ಮಗಳು ಹಿತಾಳೇ ಸರ್ವಸ್ವ. ಆದರೆ, ಈ ಮುದ್ದಾದ ಸಂಸಾರಕ್ಕೆ ಕೊಳ್ಳಿ ಇಟ್ಟವಳು ಮಾಯಾ. ಶರತ್‌ನನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಆಕೆ ಅಂಬಿಕಾಳನ್ನು ಮಾಯಾ ಸಾಯಿಸುತ್ತಾಳೆ. ಅಮ್ಮನ ಸಾವನ್ನು ಕಂಡ ಹಿತಾ, ಅದೇ ಶಾಕ್​ನಲ್ಲಿ ಮೂಕಿಯಾಗುತ್ತಾಳೆ. ಅಮ್ಮನ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ತನ್ನ ಅಮ್ಮನ ಸಾವಿಗೆ ತಂದೆಯೇ ಕಾರಣ ಎಂದುಕೊಂಡು ಮಾತು ಬಿಡುತ್ತಾಳೆ. ಇತ್ತ ಮಾಯಾ ತನ್ನ ದಾರಿಗೆ ಹಿತಾ ಅಡ್ಡವಾಗಿದ್ದಾಳೆ ಎಂದು ಅವಳನ್ನು ಕೊಲ್ಲುವುದಕ್ಕೆ ಸಂಚು ರೂಪಿಸುತ್ತಾಳೆ. ಯಾವಾಗ ಹಿತಾಳಿಗೆ ತೊಂದರೆಯಾಗುತ್ತದೆ ಅಂತ ಗೊತ್ತಾಗುತ್ತದೋ, ಆಗ ಸತ್ತುಹೋದ ತಾಯಿ ಅಂಬಿಕಾ ಆಕೆಯ ರಕ್ಷಣೆಗೆ ನಿಲ್ಲಿತ್ತಾಳೆ. ಆತ್ಮವಾಗಿ ಮಗಳ ರಕ್ಷಣೆಯಲ್ಲಿ ತೊಡಗುತ್ತಾಳೆ.

ಪತಿಯ ಕಚೇರಿಯಲ್ಲಿ ಕೆಲಸ ಮಾಡುವ ದುರ್ಗಾಳ ಗುಣ ಇಷ್ಟವಾಗಿ ಹಿತಾಳಿಗೆ ಅಮ್ಮನ ಪ್ರೀತಿ ಅವಳು ಕೊಡಲು ಸಾಧ್ಯ ಎಂದು ಅವಳಿಗೆ ಮಾತ್ರ ಕಾಣಿಸಿಕೊಳ್ಳುತ್ತಾಳೆ ಅಂಬಿಕಾ. ಆದರೆ ಇದರ ಅರಿವು ದುರ್ಗಾಗೆ ಇರುವುದೇ ಇಲ್ಲ. ಆದರೆ ಆಕೆ ಹಿತಾಳಿಗೆ ಅಮ್ಮನ ಪ್ರೀತಿ ಕೊಡುತ್ತಾಳೆ. ಇದೀಗ ಹಿತಾಳನ್ನು ಅಪಘಾತದಿಂದ ತಪ್ಪಿಸಲು ಹೋಗಿ ತಾನೇ ಅಪಘಾತದಲ್ಲಿ ಸಿಲುಕಿಕೊಳ್ಳುತ್ತಾಳೆ. ಸದ್ಯ ಆಕೆ ಸೇಫ್​ ಆಗಿದ್ದಾಳೆ. ಅಂದಹಾಗೆ ಮಗಳು ಹಿತಾ ಆಗಿ ನಟನೆ ಮಾಡ್ತಿರೋ ಬಾಲಕಿ ಹೆಸರು ಮಹಿತಾ. ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್​ ಕೂಡ. ಈಕೆ ಇನ್​ಸ್ಟಾಗ್ರಾಮ್​ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್​ನ ಟೈಟಲ್ ಸಾಂಗ್​ ಅನ್ನು ಅದ್ಭುತವಾಗಿ ಹಾಡಿರುವುದನ್ನು ನೋಡಬಹುದು.

ಈಚೆಗಷ್ಟೇ ಮಹಿತಾ, ಈ ಸೀರಿಯಲ್​ನಲ್ಲಿ ಮಾತನಾಡಲು ಪ್ರಯತ್ನ ಪಡುವ ರೀತಿ, ಕೊನೆಗೆ ಅಮ್ಮಾ ಎಂದು ಕೂಗುವ ರೀತಿ ಎಂಥವರ ಕಣ್ಣಲ್ಲೂ ನೀರು ತರಿಸುವಂತಿತ್ತು. ಅಂದಹಾಗೆ ಮಹಿತಾ, ಸ್ಕೂಲ್ ಮತ್ತು ಸೀರಿಯಲ್‌ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ. ಈ ಕುರಿತು ಹಿಂದೊಮ್ಮೆ ಈಕೆಯ ಅಮ್ಮ ತನುಜಾ ಮಾಧ್ಯಮದ ಜೊತೆ ಮಾತನಾಡಿದ್ದರು. 'ಚಿಕ್ಕ ವಯಸ್ಸಿನಲ್ಲಿ ಮಹಿತಾಗೆ ಹಾಡಿನಲ್ಲಿ ತುಂಬಾ ಆಸಕ್ತಿ ಇತ್ತು. ಕೋವಿಡ್​ ಸಮಯದಲ್ಲಿ ನಾನು ಜನರಿಗೆ ಅರಿವು ಮೂಡಿಸುವ ವಿಡಿಯೋ ಮಾಡುತ್ತಿದ್ದ ವೇಳೆ ಅವಳಲ್ಲಿ ಇದ್ದ ನಟನೆಯ ಕಲೆಯನ್ನು ಗುರುತಿಸಿದೆ. ಮಗಳು ಬರೀ ಓದಬೇಕು ಎಂದು ನಾನು ಯಾವತ್ತೂ ಒತ್ತಡ ಹಾಕುವುದಿಲ್ಲ. ಆಕೆಗೆ ಯಾವುದೇ ಟ್ಯಾಲೆಂಟ್ ಇದ್ದರೂ ಸಪೋರ್ಟ್ ಮಾಡಬೇಕು ಅನ್ನೋ ಆಸೆ ನನಗೆ ಇತ್ತು. ಅದರಂತೆಯೇ ಅವಳ ಆಸಕ್ತಿಗೆ ನೀರೆರೆದೆ. ಅವರಿಗೆ ಒಳ್ಳೆಯ ವೇದಿಕೆಯೂ ಸಿಗುತ್ತಾ ಹೋಯಿತು ಎಂದಿದ್ದರು. ಅವಳ ಹಣೆಯಲ್ಲಿ ನಟಿಯಾಗುವುದೇ ಬರೆದಿದ್ದರೆ ಅದೇ ಆಗುತ್ತಾಳೆ. ಅವಳಿಗೆ ಏನೇ ಆಸಕ್ತಿ ಇದ್ದರೂ ಆ ಕ್ಷೇತ್ರದಲ್ಲಿ ನಾವು ಮುಂದುವರೆಯಲು ಬಿಡುತ್ತೇವೆ ಎಂದಿದ್ದರು.

View post on Instagram