ಮುಂಬೈ(ಅ.05): ಮಹೇಂದ್ರ ಸಿಂಗ್​ ಧೋನಿ ಬಯೋಪಿಕ್​​ ಸದ್ಯ ಸಖತ್​ ಸುದ್ದಿ ಮಾಡುತ್ತಿದೆ. ಬಾಕ್ಸ್​ ಆಫಿಸ್​ನಲ್ಲಿ ಗಲ್ಲಾಪೆಟ್ಟಿಗೆ ದೋಚುವಲ್ಲಿ ಸಫಲವಾಗಿದೆ. ಆದರೆ ಸಿನಿಮಾದಲ್ಲಿ ಧೋನಿಗೆ ಸಂಬಂಧಿಸಿದ ಹಲವು ಸಂಗತಿಗಳು ಮಿಸ್ಸಾಗಿವೆ. ಅದ್ಯಾವ್​ ಅಂತೀರಾ ಈ ವರದಿ ನೋಡಿ.

 ‘ಎಂ.ಎಸ್​​ ಧೋನಿ ದಿ ಅನ್​ಟೋಲ್ಡ್​ ಸ್ಟೋರಿ’ ಚಿತ್ರ ಈಗಾಗ್ಲೇ ನಿರೀಕ್ಷೆಯಂತೆ ಕಲೆಕ್ಷನ್​ ಮಾಡುತ್ತಿದೆ. ಮಹೇಂದ್ರ ಸಿಂಗ್ ಧೋನಿ ಜೀವನಾಧರಿತ ಕಥೆಯಾದ ಈ ಸಿನಿಮಾ, ಅವರ ಬಗೆಗಿನ ಹಲವು ಸಂಗತಿಗಳು ಬಿಚ್ಚಿಟ್ಟಿದೆ. ಇಷ್ಟಾದ್ರೂ ಸಿನಿಮಾದಲ್ಲಿ ಹಲವು ಪ್ರಮುಖವಾದ ಸಂಗತಿಗಳು ಮಿಸ್ಸಾಗಿವೆ. ಧೋನಿಯ ಸಂಪೂರ್ಣ ಚರಿತ್ರೆಯನ್ನು ಸೆರೆಹಿಡಿಯುವಲ್ಲಿ ಸಿನಿಮಾ ವಿಫಲವಾಗಿದೆ.

ಸಿನಿಮಾದಲ್ಲಿ ಮಿಸ್ಸಾದ ಧೋನಿ ಅಣ್ಣ
ಮಹೇಂದ್ರ ಸಿಂಗ್​ ಧೋನಿಯ ಅಣ್ಣ ನರೇಂದ್ರ ಸಿಂಗ್​ ಧೋನಿ, ಮಹಿಗೆ ಹಲವು ವರ್ಷಗಳಿಂದ ಪೋತ್ಸಾಹಿಸುತ್ತಾ ಬಂದವರು. ಧೋನಿ ಕ್ರಿಕೆಟ​​ರ್​​ ಆಗಲು ಅವರ ಪಾತ್ರವೂ ಪ್ರಮುಖವಾದದ್ದು. ಸದ್ಯ ರಾಜಕೀಯ ರಂಗದಲ್ಲಿರುವ ನರೇಂದ್ರ ಸಿಂಗ್​ ಧೋನಿ, ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಅವರಿಗೆ 2007ರಲ್ಲಿ ಮದುವೆಯಾಗಿದ್ದು, ಒಂದು ಗಂಡು ಮಗುವಿದೆ. ಹಲವು ವರ್ಷಗಳ ಕಾಲ ಧೋನಿ ಜೊತೆಗಿದ್ದು, ಈಗ ಇವರಿಬ್ಬರು ಬೇರೆಯಾಗಿದ್ದಾರೆ. ಅವರನ್ನು ಸಿನಿಮಾದಲ್ಲಿ ಎಲ್ಲೂ ತೋರಿಸಿಲ್ಲ.

ಲಕ್ಷ್ಮಿ ರೈ ಪ್ರಸ್ತಾಪವಿಲ್ಲ
ಧೋನಿಗೆ ದಕ್ಷಿಣ ಭಾರತದ ನಟಿ, ಲಕ್ಷ್ಮಿ ರೈ ಜೊತೆ ಸಂಬಂಧವಿತ್ತು. 2008ರಲ್ಲಿ ಹಲವು ಸಲ ಈ ಜೋಡಿ ಆಗಾಗ ಅಲ್ಲಲ್ಲಿ ಕಾಣಿಸಿಕೊಂಡು ಸುದ್ದಿಯಾಗಿತ್ತು. ಅನಂತರ ಇಬ್ಬರು ಈ ವಿಷಯವನ್ನು ಸ್ಪಷ್ಟಪಡಿಸಿ ನಮ್ಮಿಬ್ಬರ ನಡುವೆ ಯಾವುದೇ ಸಂಬಂಧವಿಲ್ಲವೆಂದು ಹೇಳಿ ದೂರವಾಗಿದ್ರು. ಈಡೀ ಸಿನಿಮಾದಲ್ಲಿ ಲಕ್ಷ್ಮಿ ರೈ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ.

ಧೋನಿ -ಸಾಕ್ಷಿ ತಂದೆ ಸ್ನೇಹಿತರು
ಮಹೇಂದ್ರ ಸಿಂಗ್​ ಧೋನಿ ಮತ್ತು ಪತ್ನಿ ಸಾಕ್ಷಿ ಸಿಂಗ್​ ರವಾತ್​ ಇಬ್ಬರ ತಂದೆ ಸ್ನೇಹಿತರಾಗಿದ್ರು. ರಾಂಚಿಯಲ್ಲಿ ಇಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಎರಡು ಪರಿವಾರಗಳು ಚಿರಪರಿಚಿತರಾಗಿದ್ರು. ಹಾಗಾಗಿಯೇ ಮಹಿ ಮದುವೆಗೆ ಉಭಯ ಕುಟುಂಬದಿಂದ ಸಹಮತಿ ಸಿಕ್ತು. ಆದರೆ ಸಿನಿಮಾದಲ್ಲಿ ಒಂದು ದೃಶ್ಯದಲ್ಲೂ ಈ ಎರಡು ಮೆನೆತನದ ಬಗ್ಗೆ ಪ್ರಸ್ತಾಪವಿಲ್ಲ.

ಥಟ್​ ಅಂತ ನಾಯಕನಾಗುವ ಮಹಿ
ಧೋನಿ ಯಾವಾಗ ನಾಯಕನಾದ್ರು. ಹೇಗೆ ಅವರಿಗೆ ನಾಯಕನ ಪಟ್ಟ ಕಟ್ಟಲಾಯ್ತು. ಅನ್ನುವುದು ಚಿತ್ರದಲ್ಲಿ ಮಿಸ್ಸಾಗಿದೆ. 2006 ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸುವ ಮಹಿ, ನೇರವಾಗಿ 2007ರ ಟಿ20 ವಿಶ್ವಕಪ್​ ನಾಯಕನಾಗಿ ಕಾಣಿಸಿಕೊಳ್ತಾರೆ. ಆದರೆ ಅವರು ಹೇಗೆ ನಾಯಕನಾದ್ರು ಅನ್ನುವುದೇ ಅಲ್ಲಿ ಮಿಸ್ಸಾಗಿದೆ.

ಕೇವಲ ಬ್ಯಾಟಿಂಗ್​ ಮಾಡುವ ಮಹಿ
ಸಂಪೂರ್ಣ ಚಿತ್ರದಲ್ಲಿ ಧೋನಿ ಎಲ್ಲೂ ಕೀಪಿಂಗ್​ ಮಾಡುವುದಿಲ್ಲ. ಪ್ರತಿ ಪಂದ್ಯದಲ್ಲೂ ಅವರು ಬ್ಯಾಟಿಂಗ್​ ಮಾಡುವುದರಲ್ಲೇ ಬ್ಯೂಸಿಯಾಗಿದ್ದಾರೆ. ವಿಕೆಟ್​ ಕೀಪರ್​​​ ಕಮ್​ ಬ್ಯಾಟ್ಸ್​ಮನ್​ ಆಗಿರುವ ಮಹಿ, ಕೇವಲ ಬ್ಯಾಟಿಂಗ್​ನಲ್ಲಿ ವಿಜೃಂಭಿಸುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ವಿಶ್ವ ಕಂಡ ಬೆಸ್ಟ್​ ವಿಕೆಟ್​ ಕೀಪರ್​ ಆಗಿದ್ರೂ ಸಿನಿಮಾದಲ್ಲಿ ಅದು ಕಂಡು ಬಂದಿಲ್ಲ.

ಆರ್​.ಪಿ. ಸಿಂಗ್​ ಮರೆತ ನಿರ್ದೇಶಕ
ಚಿತ್ರದ ನಿರ್ದೇಶಕ ನೀರಜ್​ ಪಾಂಡೆ, ಮಹಿ ಆಪ್ತ ಗೆಳೆಯ ಆರ್​.ಪಿ ಸಿಂಗ್​ ಅವರನ್ನು ಮರೆತಿದ್ದಾರೆ. ಧೋನಿ ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ರು. ಎಲ್ಲ ರೀತಿಯ ವ್ಯವಸ್ಥೆಯನ್ನು ಆರ್​.ಪಿ. ಸಿಂಗ್​ ಮಾಡಿದ್ರು. ಚಿತ್ರದಲ್ಲಿ ಎಲ್ಲೂ ಆರ್​ಪಿ-ಧೋನಿ ಸ್ನೇಹದ ಒಂದು ತುಣುಕು ಸಹ ಕಂಡುಬಂದಿಲ್ಲ.

ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ರೂ ಕೆಲ ಮಹತ್ವದ ವಿಷಯಗಳನ್ನು ಅಲ್ಲಿ ಕೈಬಿಡಲಾಗಿದೆ. ಮಹಿ ಜೀನನಾಧರಿತ ಕತೆಯಾದ್ರೂ ಅವರ ಜೀವನಕ್ಕೆ ಆಧಾರವಾದ ಹಲವರನ್ನು ತೆರೆಯ ಮೇಲೆ ತೋರಿಸುವಲ್ಲಿ ನಿರ್ದೇಶಕ ವಿಫಲವಾಗಿದ್ದಾರೆ.