ಗಣೇಶ್ ಅಭಿನಯದ ‘ಗೀತಾ’ ಚಿತ್ರಕ್ಕೆ ಮತ್ತೊಬ್ಬ ಮಲಯಾಳಿ ಕುಡಿ ಜತೆಯಾಗಿದ್ದಾರೆ. ಹೆಸರು ಪ್ರಯಾಗ ಮಾರ್ಟಿನ್. 

ಈಗಾಗಲೇ ಪಾರ್ವತಿ ಅರುಣ್ ಎಂಬುವವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಇಬ್ಬರೂ ಕೂಡ ಮಲಯಾಳಿ ನಟಿಯರು ಅನ್ನುವುದು ವಿಶೇಷ. ಈ ಚಿತ್ರಕ್ಕೆ ಮತ್ತೊಬ್ಬ ನಾಯಕಿಯೂ ಬರಲಿದ್ದಾರೆ. ಅಲ್ಲಿಗೆ ವಿಜಯ್ ನಾಗೇಂದ್ರ ನಿರ್ದೇಶನದ ‘ಗೀತಾ’ ಚಿತ್ರಕ್ಕೆ ಮೂವರು ನಾಯಕಿಯರು ಎನ್ನುವುದು ಸ್ಪಷ್ಟವಾಗಿದೆ. ‘ಕತೆಗೆ ತಕ್ಕಂತೆ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಈ ಪೈಕಿ ಈಗ ಇಬ್ಬರನ್ನು ಆಯ್ಕೆ ಮಾಡಿಕೊಂಡಿದ್ದು, ಉಳಿದ ಮತ್ತೊಬ್ಬ ನಟಿಗಾಗಿ ಹುಡುಕಾಟ ಮಾಡುತ್ತಿದ್ದೇವೆ. ಪಾತ್ರಕ್ಕೆ ಯಾರೂ ಸೂಕ್ತ ಅನಿಸುತ್ತಾರೋ ಅವರನ್ನು ತೆಗೆದುಕೊಳ್ಳಲಾಗುವುದು.

ಪ್ರಯಾಗ ಮಾರ್ಟಿನ್ ಹಾಗೂ ಪಾರ್ವತಿ ಅರುಣ್ ಇಬ್ಬರು ಹೊಸ ನಟಿಯರೇ’ ಎನ್ನುತ್ತಾರೆ ನಿರ್ದೇಶಕ ವಿಜಯ್ ನಾಗೇಂದ್ರ. ‘ಗೀತಾ’ ಚಿತ್ರಕ್ಕೆ ಡಿಸೆಂಬರ್ ಮೂರನೇ ವಾರದಿಂದ ಚಿತ್ರೀಕರಣ ನಡೆಯಲಿದೆ. ಈಗಾಗಲೇ ನಾಗಣ್ಣ ನಿರ್ದೇಶನದ ‘ಗಿಮಿಕ್’ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ. ಇದರ ಶೂಟಿಂಗ್ ಡಿಸೆಂಬರ್ ಹೊತ್ತಿಗೆ ಮುಗಿಯಲಿದ್ದು, ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿರುವ ‘ಆರೆಂಜ್’ ಸಿನಿಮಾ ಕೂಡ ತೆರೆಗೆ ಬರಲಿದೆ. ಈ ಎಲ್ಲ ಮುಗಿಯುತ್ತಿದಂತೆಯೇ ‘ಗೀತಾ’ ಚಿತ್ರಕ್ಕೆ ಶೂಟಿಂಗ್ ಪ್ರಾರಂಭಗೊಳ್ಳಲಿದೆ.