ರಾಮನಗರ [ಆ.18] : ಮಾಸ್ತಿಗುಡಿ ಚಲನಚಿತ್ರ ಖಳನಟರ ದುರಂತ ಸಾವಿನ ಪ್ರಕರಣದಿಂದ ಕೈಬಿ​ಡು​ವಂತೆ ಕೋರಿ ಸಲ್ಲಿ​ಸ​ಲಾ​ಗಿದ್ದ 6 ಅರ್ಜಿ​ಗ​ಳಲ್ಲಿ 5 ಮಂದಿ ಆರೋ​ಪಿ​ಗಳ ಅರ್ಜಿ​ಯನ್ನು ರಾಮ​ನ​ಗ​ರದ 3ನೇ ಜಿಲ್ಲಾ ಸತ್ರ ನ್ಯಾಯಾಲಯ ವಜಾ​ಗೊ​ಳಿ​ಸಿದೆ.

2016ರ ನವೆಂಬರ್‌ 7ರಂದು ತಿಪ್ಪ​ಗೊಂಡ​ನ​ಹಳ್ಳಿ ಜಲಾ​ಶ​ಯ​ದಲ್ಲಿ ಮಾಸ್ತಿ​ಗುಡಿ ಚಲ​ನ​ಚಿ​ತ್ರದ ಕ್ಲೈಮ್ಯಾಕ್ಸ್‌ ವೇಳೆ ಹೆಲಿಕಾಪ್ಟರ್‌ನಿಂದ ಜಲಾಶಯಕ್ಕೆ ಹಾರಿದ ​ನ​ಟ​ರಾದ ಅನಿಲ್‌ ಮತ್ತು ಉದಯ್‌ ಮುಳುಗಿ ಸಾವ​ನ್ನ​ಪ್ಪಿ​ದ್ದರು. ಈ ಘಟನೆ ಸಂಬಂಧ ನಿರ್ಮಾ​ಪಕ ಸುಂದರ್‌ ಪಿ.ಗೌಡ, ನಿರ್ದೇ​ಶಕ ರಾಜ​ಶೇ​ಖರ್‌, ಸಿದ್ಧಾರ್ಥ್ ಅಲಿ​ಯಾಸ್‌ ಸಿದ್ದು, ಸಾಹಸ ನಿರ್ದೇಶಕ ರವಿ​ವರ್ಮಾ, ಎ.ಪಿ.​ಭ​ರತ್‌ ರಾವ್‌ ಹಾಗೂ ಪೈಲೆಟ್‌ ಪ್ರಕಾಶ್‌ ಬಿರಾ​ದರ್‌ ವಿರುದ್ಧ ಪ್ರಕ​ರಣ ದಾಖ​ಲಾ​ಗಿ​ತ್ತು.

ಈ ಪ್ರಕ​ರ​ಣ​ದಿಂದ ತಮ್ಮನ್ನು ಕೈಬಿ​ಡು​ವಂತೆ ಕೋರಿ ಆರು ಮಂದಿ ಆರೋ​ಪಿ​ಗಳು ಸಲ್ಲಿ​ಸಿದ ಅರ್ಜಿ ವಿಚಾ​ರಣೆ 3ನೇ ಜಿಲ್ಲಾ ಸತ್ರ ನ್ಯಾಯಾ​ಲ​ಯ​ ಕೈಗೆ​ತ್ತಿ​ಕೊಂಡಿತು. 6ನೇ ಆರೋ​ಪಿ​ಯಾ​ಗಿದ್ದ ಪೈಲೆಟ್‌ ಪ್ರಕಾಶ್‌ ಬಿರಾ​ದರ್‌ ಅವ​ರ ಅರ್ಜಿ​ಯನ್ನು ಮಾನ್ಯ ಮಾಡಿದ ನ್ಯಾಯಾ​ಧೀಶ ಸಿದ್ದ​ಲಿಂಗ​ಪ್ರಭು ಅವರು ಉಳಿದ ಐದು ಮಂದಿ ಆರೋ​ಪಿ​ಗ​ಳ ಅರ್ಜಿ​ಯನ್ನು ವಜಾ​ಗೊ​ಳಿಸಿ ಆದೇಶ ಹೊರ​ಡಿ​ಸಿ​ದ್ದಾರೆ.