'ಸರ್ವಂ ಮಾಯಾ' ಚಿತ್ರದ ಕಥೆಗೆ ಪ್ರೇರಣೆಯಾದ ನೈಜ ಘಟನೆಯನ್ನು ನಿರ್ದೇಶಕ ಅಖಿಲ್ ಸತ್ಯನ್ ಬಹಿರಂಗಪಡಿಸಿದ್ದಾರೆ. ಕಾಲೇಜು ದಿನಗಳಲ್ಲಿ ಕಮ್ಯುನಿಸ್ಟ್ ವಿಚಾರಧಾರೆ ಹೊಂದಿದ್ದ ತಮ್ಮ ಜೂನಿಯರ್ ಒಬ್ಬರು..
‘ಕೋವಿಡ್ ಸಮಯದಲ್ಲಿ ಶೂಟಿಂಗ್ ನಿಂತಿದ್ದಾಗ ತಾಯಿಯ ಒತ್ತಾಯಕ್ಕೆ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಪೂಜೆ ಮಾಡುತ್ತಿದ್ದ ಅರ್ಚಕನನ್ನು ಕಂಡು ಅಚ್ಚರಿಯಾಯಿತು. 15 ವರ್ಷಗಳ ಹಿಂದೆ ಕಾಲೇಜಿನಲ್ಲಿ ನನ್ನ ಜೂನಿಯರ್ ಆಗಿದ್ದ ಆತ, ಬಸ್ ಕಂಡಕ್ಟರ್ ಒಂದು ರೂಪಾಯಿ ನಾಣ್ಯ ಎಸೆದಿದ್ದಕ್ಕೆ, ‘ನಾನು ಕಮ್ಯುನಿಸ್ಟ್, ನನ್ನ ಹತ್ತಿರ ಜನಿವಾರವಿಲ್ಲ’ ಎಂದು ಜಗಳವಾಡಿದ್ದ. ಈಗ ಅರ್ಚಕನಾಗಿದ್ದ ಆತನನ್ನು ವಿಚಾರಿಸಿದಾಗ, ‘ನನಗೂ ಹಣ ಬೇಕಲ್ಲ’ ಎಂದಿದ್ದ. ಈ ನೈಜ ಘಟನೆಯೇ ‘ಸರ್ವಂ ಮಾಯಾ’ ಚಿತ್ರದ ಕಥೆಗೆ ಪ್ರೇರಣೆ’ ಎಂದು ನಿರ್ದೇಶಕ ಅಖಿಲ್ ಸತ್ಯನ್ ಹೇಳಿದರು.
ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗದಲ್ಲಿ ಚಿತ್ರ ಪ್ರದರ್ಶನಗೊಂಡ ಬಳಿಕ ಅವರು ಮಾತನಾಡಿದರು. ಹಿರಿಯ ನಿರ್ದೇಶಕ ಸತ್ಯನ್ ಅಂತಿಕ್ಕಾಡ್ ಅವರ ಪುತ್ರರಾದ ಅಖಿಲ್, ತಂದೆ ಮತ್ತು ಸಹೋದರನ ಬಳಿಕ ಇಫಿಯಲ್ಲಿ ಸಿನಿಮಾ ಪ್ರದರ್ಶಿಸಿದ ಕುಟುಂಬದ ಮೂರನೇ ಸದಸ್ಯ.
ನಾಯಕನಿಗೆ ಆ ಹೆಸರಿಟ್ಟೆ
ನಿವಿನ್ ಪೌಲಿ ನಿರ್ವಹಿಸಿರುವ ನಾಸ್ತಿಕ ಅರ್ಚಕ ಪ್ರಭೇಂದು ಮತ್ತು ಕ್ರಿಶ್ಚಿಯನ್ ಯುವತಿ ಮಾಯಾ ನಡುವಿನ ಕಥೆಗೆ ತಮ್ಮ ಕಾಲೇಜು ದಿನಗಳ ನೆನಪೂ ಕಾರಣವಾಯಿತು. ‘45 ಹುಡುಗಿಯರ ನಡುವೆ ಐವರು ಹುಡುಗರಿದ್ದ ತರಗತಿಯಲ್ಲಿ ಪ್ರಭೇಂದು ಎಂಬ ಹೆಸರಿನ ಹುಡುಗನಿದ್ದ. ಅಧ್ಯಾಪಕರು ಆ ಹೆಸರು ಕರೆದಾಗ ಹುಡುಗಿಯರ ಸಾಲಿನತ್ತ ನೋಡುತ್ತಿದ್ದೆವು. ಆದರೆ ಹುಡುಗರ ಸಾಲಿನಿಂದ ಆತ ಕೈ ಎತ್ತುತ್ತಿದ್ದ. ಆ ನೆನಪಿನಿಂದಲೇ ನಾಯಕನಿಗೆ ಆ ಹೆಸರಿಟ್ಟೆ’ ಎಂದರು.
ತಾವು ಮತ್ತು ನಿವಿನ್ ಪೌಲಿ ಇಬ್ಬರೂ ದೆವ್ವಗಳಿಗೆ ಹೆದರುವವರು. ‘ಕಾಂಜುರಿಂಗ್’ ಸಿನಿಮಾ ನೋಡಿ ಇಡೀ ರಾತ್ರಿ ನಿದ್ದೆ ಮಾಡಿರಲಿಲ್ಲ. ಆದರೂ ಮಾಯಾ ಪಾತ್ರದ ಮೇಲಿನ ಪ್ರೀತಿ ತಮ್ಮ ಭಯವನ್ನು ಮರೆಸಿತು ಎಂದು ನಗುತ್ತಾ ಹೇಳಿದರು. ತಮ್ಮ ಬರವಣಿಗೆಯ ಅಭ್ಯಾಸದ ಬಗ್ಗೆ ಹೇಳಿದ ಅವರು, ಕಚೇರಿಗಳಲ್ಲಿ ಬಳಸಿ ಬಿಸಾಡಿದ ಎ4 ಹಾಳೆಗಳನ್ನು ಸಂಗ್ರಹಿಸಿ, ಅವುಗಳ ಹಿಂಭಾಗದಲ್ಲಿ ಕಥೆ ಬರೆಯುತ್ತೇನೆ. ಒಂದು ಹಾಳೆಯ ಎರಡೂ ಬದಿಗಳಲ್ಲಿ 40 ಪಾಯಿಂಟ್ಗಳನ್ನು ಬರೆದು ಚಿತ್ರಕಥೆ ಸಿದ್ಧಪಡಿಸುತ್ತೇನೆ ಎಂದರು.
ಇತ್ತೀಚೆಗೆ ನಿಧನರಾದ ಮಲಯಾಳಂ ನಟ, ನಿರ್ದೇಶಕ ಶ್ರೀನಿವಾಸನ್ ಅವರನ್ನು ಸ್ಮರಿಸಿದ ಅಖಿಲ್, ‘ನಮ್ಮ ತಂದೆ ಮತ್ತು ಶ್ರೀನಿವಾಸನ್ ಅಂಕಲ್ 20 ವರ್ಷ ಒಟ್ಟಿಗೆ ಕೆಲಸ ಮಾಡಿದ್ದರು. ಒಮ್ಮೆ ಕಥೆ ಹೊಳೆಯದೆ ಒದ್ದಾಡುತ್ತಿದ್ದಾಗ, ಸಿನಿಮಾ ನೋಡಿ ಹೋಟೆಲ್ಗೆ ನಡೆದುಬರುವಷ್ಟರಲ್ಲಿ ‘ಸಂದೇಶಂ’ ಚಿತ್ರದ ಇಡೀ ಕಥೆಯನ್ನು ಹೆಣೆದಿದ್ದರು’ ಎಂದು ನೆನಪಿಸಿಕೊಂಡರು.
ಯಾರ ಶಿಫಾರಸೂ ಬೇಕಿಲ್ಲ
ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಅಖಿಲ್, ತಂದೆಯ ವಿರೋಧದ ನಡುವೆಯೂ ಚಿತ್ರರಂಗಕ್ಕೆ ಬಂದವರು. ‘ಇಂದು ಸಿನಿಮಾ ಮಾಡಲು ಯಾರ ಶಿಫಾರಸೂ ಬೇಕಿಲ್ಲ. ಚಿತ್ರದ ನಾಯಕಿ ಡೆಲುಲು ಪಾತ್ರವನ್ನೂ ಇನ್ಸ್ಟಾಗ್ರಾಮ್ ಮೂಲಕವೇ ಆಯ್ಕೆ ಮಾಡಿಕೊಂಡೆ. ಪೆನ್ಸಿಲ್, ಪೇಪರ್ ಮತ್ತು ಮೊಬೈಲ್ ಇದ್ದರೆ ಸಾಕು. ಒಳ್ಳೆಯ ಎರಡು ನಿಮಿಷದ ದೃಶ್ಯವೊಂದನ್ನು ಮಾಡಿ ಇನ್ಸ್ಟಾಗ್ರಾಮ್ಗೆ ಹಾಕಿ. ನಿರ್ದೇಶಕರೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ’ ಎಂದು ಯುವ ಪ್ರತಿಭೆಗಳಿಗೆ ಕಿವಿಮಾತು ಹೇಳಿದರು.
















