ಮಮ್ಮುಟ್ಟಿ ಪುತ್ರ ದುಲ್ಕರ್ ಸಲ್ಮಾನ್ ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ದುಬೈನ ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆಯೇ ಅವರ ತೀರ್ಮಾನ ಬದಲಿಸಲು ಬಲವಾದ ಕಾರಣವಿತ್ತು. ಏನು ಆ ಕಾರಣ ಇಲ್ಲಿದೆ ಅವರ ಬದುಕಿನ ಜರ್ನಿ.

ಮಲಯಾಳಂ ಚಿತ್ರರಂಗದ ದಿಗ್ಗಜ ಮಮ್ಮುಟ್ಟಿ ಅವರ ಪುತ್ರನಾಗಿದ್ದರೂ, ತಮ್ಮದೇ ಆದ ವಿಶಿಷ್ಟ ನಟನೆ ಮತ್ತು ವಿಭಿನ್ನ ಸಿನಿಮಾ ಆಯ್ಕೆಗಳ ಮೂಲಕ ಬಹುಭಾಷಾ ತಾರೆಯಾಗಿ ಬೆಳೆದು ನಿಂತವರು ದುಲ್ಕರ್ ಸಲ್ಮಾನ್. ಸದ್ಯ ದುಲ್ಕರ್ ಅಭಿನಯದ ಬಹುನಿರೀಕ್ಷಿತ ತೆಲುಗು ಚಿತ್ರ 'ಆಕಾಶಂಲೋ ಒಕ ತಾರಾ' ಇದೇ ನವೆಂಬರ್ 20ರಂದು ತೆರೆಗೆ ಬರಲು ಸಜ್ಜಾಗಿದೆ. ಇದರ ಜೊತೆಗೆ ಗೋಲಿ ಎಂಬ ತಮ್ಮ ಮುಂಬರುವ ತಮಿಳು ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಸಂಭ್ರಮದ ನಡುವೆ, ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ದುಲ್ಕರ್ ಸಲ್ಮಾನ್ ದುಬೈನ ಕನ್‌ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಅಪರೂಪದ ಸಂಗತಿ ಮತ್ತೆ ಮುನ್ನಲೆಗೆ ಬಂದಿದೆ.

ದುಬೈ ಉದ್ಯೋಗ ಆಯ್ಕೆ ಮಾಡಿಕೊಂಡಿದ್ದ ದುಲ್ಕರ್

2022ರಲ್ಲಿ 'ಕರ್ಲಿ ಟೇಲ್ಸ್' ವಾಹಿನಿಗೆ ನೀಡಿದ್ದ ವಿಶೇಷ ಸಂದರ್ಶನವೊಂದರಲ್ಲಿ ದುಲ್ಕರ್ ಸಲ್ಮಾನ್ ತಮ್ಮ ಆರಂಭಿಕ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ತಂದೆ ಸೂಪರ್‌ಸ್ಟಾರ್ ಆಗಿದ್ದರೂ, ಆರಂಭದಲ್ಲಿ ದುಲ್ಕರ್ ಅವರಿಗೆ ಕ್ಯಾಮೆರಾ ಎದುರಿಸುವುದೆಂದರೆ ಒಂದು ರೀತಿಯ ಭಯ ಮತ್ತು ಹಿಂಜರಿಕೆ ಇತ್ತಂತೆ. ಇದೇ ಕಾರಣಕ್ಕೆ ಅವರು ಸಿನಿಮಾ ಕ್ಷೇತ್ರದ ಬದಲು ಬೇರೆ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡು ದುಬೈಗೆ ತೆರಳಿದ್ದರು. ಅಲ್ಲಿನ ನಿರ್ಮಾಣ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ ದುಲ್ಕರ್, ಕಾರ್ಪೊರೇಟ್ ಶೈಲಿಯ ವೃತ್ತಿಜೀವನ ನಡೆಸುತ್ತಿದ್ದರು.

9 ರಿಂದ 5ರ ಕೆಲಸಕ್ಕೆ ಗುಡ್‌ಬೈ

ದುಬೈನಲ್ಲಿ ಕೆಲಸ ಮಾಡುತ್ತಿದ್ದಾಗ ತನ್ನ ನಿಜವಾದ ಆಸಕ್ತಿ ಏನೆಂಬುದರ ಅರಿವಾದ ದುಲ್ಕರ್ ಸಾಂಪ್ರದಾಯಿಕವಾದ ಬೆಳಿಗ್ಗೆ 9 ರಿಂದ ಸಂಜೆ 5ರವರೆಗಿನ ಕಚೇರಿ ಕೆಲಸ ತಮಗೆ ಸರಿಹೊಂದುವುದಿಲ್ಲ ಎಂಬುದನ್ನು ಅರಿತುಕೊಂಡರು. ನಿಧಾನವಾಗಿ ಕ್ಯಾಮೆರಾ ಭಯದಿಂದ ಹೊರಬಂದ ಅವರು, ಬಿಡುವಿನ ವೇಳೆಯಲ್ಲಿ ತಮ್ಮ ಸ್ನೇಹಿತರೊಂದಿಗೆ ಸೇರಿ ಕಿರುಚಿತ್ರಗಳನ್ನು ನಿರ್ಮಿಸಲು ಆರಂಭಿಸಿದರು. ಈ ಅನುಭವವು ಅವರೊಳಗಿದ್ದ ಕಲಾವಿದನನ್ನು ಬಡಿದೆಬ್ಬಿಸಿತು. ಜೀವನದಲ್ಲಿ ತಾವು ಏನು ಮಾಡಬೇಕು ಎಂಬ ಸ್ಪಷ್ಟತೆ ಸಿಕ್ಕ ತಕ್ಷಣ, ದುಬೈನ ಕೈತುಂಬಾ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ ನಟನೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಮುಂಬೈಗೆ ಪ್ರಯಾಣ ಬೆಳೆಸಿದರು.

ಬಹುಭಾಷಾ ಸ್ಟಾರ್ , ಯಶಸ್ವಿ ನಿರ್ಮಾಪಕ

ಮುಂಬೈನಲ್ಲಿ ನಟನೆಯ ಪಟ್ಟುಗಳನ್ನು ಕಲಿತ ಬಳಿಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ ದುಲ್ಕರ್, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವೃತ್ತಿಜೀವನದ ಆರಂಭದಲ್ಲಿ ಉಸ್ತಾದ್ ಹೋಟೆಲ್, ಬೆಂಗಳೂರು ಡೇಸ್, 'ಚಾರ್ಲಿ'ಯಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಯುವಜನತೆಯ ನೆಚ್ಚಿನ ನಟನಾದರು. ಇತ್ತೀಚಿನ ವರ್ಷಗಳಲ್ಲಿ 'ಸೀತಾ ರಾಮಂ' ಮತ್ತು 'ಲಕ್ಕಿ ಭಾಸ್ಕರ್' ಚಿತ್ರಗಳ ಅಭೂತಪೂರ್ವ ಯಶಸ್ಸಿನ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದರು. ಅಭಿಮಾನಿಗಳು ಇವರನ್ನು ಪ್ರೀತಿಯಿಂದ ಡಿಕ್ಯೂ, ಕುಂಜಿಕ್ಕ , ಸಾಲು, ಎಂದು ಕರೆಯುತ್ತಾರೆ

ನಟನೆ ಮಾತ್ರವಲ್ಲದೆ ನಿರ್ಮಾಪಕರಾಗಿಯೂ ಯಶಸ್ಸು ಕಂಡಿರುವ ದುಲ್ಕರ್, 2025ರಲ್ಲಿ ಬಿಡುಗಡೆಯಾಗಿ ಮಲಯಾಳಂ ಚಿತ್ರರಂಗದ ಅತಿ ದೊಡ್ಡ ಹಿಟ್ ಹಾಗೂ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ದಾಖಲೆ ಬರೆದ 'ಲೋಕಾ: ಅಧ್ಯಾಯ 1'ಸಿನಿಮಾಗೆ ಬಂಡವಾಳ ಹೂಡಿದ್ದರು. ಸದ್ಯ 'ಐಯಾಮ್ ಗೇಮ್' ಸೇರಿದಂತೆ ಹಲವು ಪ್ರತಿಷ್ಠಿತ ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ.

ಅಲ್ಲು ಅರ್ಜುನ್ ಮೆಚ್ಚುಗೆ

ದುಲ್ಕರ್ ಸಲ್ಮಾನ್ ಅಭಿನಯದ ಮುಂದಿನ ಚಿತ್ರ 'ಆಕಾಶಂಲೋ ಒಕ ತಾರಾ' ಇದೇ ನವೆಂಬರ್ 20, 2026ರಂದು ಬಹುಭಾಷೆಗಳಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಪವನ್ ಸಾದಿನೇನಿ ನಿರ್ದೇಶನದ ಈ ಸ್ಪೂರ್ತಿದಾಯಕ ಕಥಾಹಂದರದ ಚಿತ್ರದಲ್ಲಿ ಸಾತ್ವಿಕಾ ವೀರವಳ್ಳಿ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದಾರೆ.

ಬಾಹ್ಯಾಕಾಶ ವಿಜ್ಞಾನವನ್ನು ಅಭ್ಯಸಿಸಿ ಗಗನಯಾತ್ರಿಯಾಗುವ ಕನಸು ಕಾಣುವ ಯುವತಿಯ ಸ್ಫೂರ್ತಿದಾಯಕ ಪಯಣವೇ ಈ ಚಿತ್ರದ ಜೀವಾಳವಾಗಿದೆ. ಇತ್ತೀಚೆಗಷ್ಟೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಕೂಡ ದುಲ್ಕರ್ ಸಲ್ಮಾನ್ ಅವರ ಸಿನಿಮಾ ಆಯ್ಕೆ ಮತ್ತು ಸರಳತೆಯನ್ನು ಕೊಂಡಾಡಿದ್ದು, 'ಆಕಾಶಂಲೋ ಒಕ ತಾರಾ' ಚಿತ್ರದ ಕಥೆ ಅತ್ಯದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.