Sri Sri First Look: ನಟ ದುಲ್ಕರ್ ಸಲ್ಮಾನ್ ಅವರ ಹೊಸ ಚಿತ್ರಕ್ಕೆ 'ಶ್ರೀ ಶ್ರೀ' ಎಂದು ಹೆಸರಿಡಲಾಗಿದೆ. ಇದರಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ನಟ ದುಲ್ಕರ್ ಸಲ್ಮಾನ್ ತಮ್ಮ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ನವ ನಿರ್ದೇಶಕ ರವಿ ನೆಲಕುಡಿಟಿ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ 'ಶ್ರೀ ಶ್ರೀ' ಎಂದು ಹೆಸರಿಡಲಾಗಿದೆ. ಚಿತ್ರತಂಡ ಇಂದು ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಎರಡನ್ನೂ ಬಿಡುಗಡೆ ಮಾಡಿದೆ. ಸುಧಾಕರ್ ಚೆರುಕುರಿ ಅವರು ಎಸ್‌ಎಲ್‌ವಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇದು ಅವರ ಬ್ಯಾನರ್‌ನ 10ನೇ ಸಿನಿಮಾವಾಗಿದೆ.

ದುಲ್ಕರ್ ಸಲ್ಮಾನ್ ಅವರ ವೃತ್ತಿಜೀವನದ 41ನೇ ಚಿತ್ರ ಇದಾಗಿದ್ದು, ಫಸ್ಟ್ ಲುಕ್ ನೋಡಿದರೆ ಇದೊಂದು ಫೀಲ್ ಗುಡ್ ಪ್ರೇಮಕಥೆ ಎನಿಸುತ್ತಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ದುಲ್ಕರ್ ಸಲ್ಮಾನ್ ಮತ್ತು ಪೂಜಾ ಹೆಗ್ಡೆ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ದುಲ್ಕರ್ ಮತ್ತು ಪೂಜಾ ಇಬ್ಬರೂ ಸ್ಕೂಲ್ ಯೂನಿಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಪೋಸ್ಟರ್ ಇವರಿಬ್ಬರ ಸ್ನೇಹ ಅಥವಾ ಪ್ರೀತಿಯ ಒಂದು ಸುಂದರ ಕ್ಷಣವನ್ನು ಪ್ರೇಕ್ಷಕರಿಗೆ ಪರಿಚಯಿಸುತ್ತಿದೆ. ಸದ್ಯ ಚಿತ್ರದ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ ಎಂದು ವರದಿಗಳು ಹೇಳಿವೆ. ನಿರ್ದೇಶಕ ರವಿ ನೆಲಕುಡಿಟಿ ಅವರೇ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದೀಕ್ಷಿತ್ ಶೆಟ್ಟಿ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.ದೊಡ್ಡ ಬಜೆಟ್‌ನಲ್ಲಿ, ಉನ್ನತ ತಾಂತ್ರಿಕ ಗುಣಮಟ್ಟದೊಂದಿಗೆ ಈ ಸಿನಿಮಾ ತಯಾರಾಗುತ್ತಿದೆ.

ಐದನೇ ತೆಲುಗು ಸಿನಿಮಾ

ದೊಡ್ಡ ತಾರಾಗಣ ಮತ್ತು ತಂತ್ರಜ್ಞರ ತಂಡವೇ ಚಿತ್ರದಲ್ಲಿದೆ. ಈ ಚಿತ್ರ 2026ರಲ್ಲಿ ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರಲಿದೆ ಎಂದು ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಚಿತ್ರತಂಡ ತಿಳಿಸಿದೆ. ಮಲಯಾಳಂ ಮತ್ತು ತೆಲುಗು ಎರಡೂ ಚಿತ್ರರಂಗಗಳಲ್ಲಿ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ದುಲ್ಕರ್ ಸಲ್ಮಾನ್‌ಗೆ ಇದು ಐದನೇ ತೆಲುಗು ಸಿನಿಮಾವಾಗಿದೆ. ಇದಲ್ಲದೆ, 'ಐ ಆ್ಯಮ್ ಗೇಮ್' ಎಂಬ ಬಿಗ್ ಬಜೆಟ್ ಮಲಯಾಳಂ ಆಕ್ಷನ್ ಥ್ರಿಲ್ಲರ್ ಮತ್ತು ಪವನ್ ಸಾದಿನೇನಿ ನಿರ್ದೇಶನದ 'ಆಕಾಶಂ ಲೋ ಒಕ ತಾರ' ಎಂಬ ತೆಲುಗು ಚಿತ್ರಗಳು ದುಲ್ಕರ್ ನಟನೆಯ ಮುಂದಿನ ಸಿನಿಮಾಗಳಾಗಿವೆ.