"ಬಾಲಿವುಡ್ ನಟ ಟೈಗರ್ ಶ್ರಾಫ್ ಬೆನ್ನಲ್ಲೇ ಮತ್ತೊಬ್ಬ ಸ್ಟಾರ್ ನಟನಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಹಾಕಿದ ಆಡಿಯೋ ಕ್ಲಿಪ್ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಸಂಪೂರ್ಣ ವಿವರ ಇಲ್ಲಿದೆ.

ಬಾಲಿವುಡ್‌ ಯುವತಾರೆ ಶ್ರಾಫ್‌ ಮೇಲೆ ನಡೆದ ಗುಂಡಿನ ದಾಳಿ ಬೆನ್ನಲ್ಲೇ ನಟ ಆಯುಷ್ಮಾನ್ ಖುರಾನಾ ವಿರುದ್ಧದ ಬೆದರಿಕೆ ಕರೆಯೊಂದು ಬಂದಿದ್ದು ಇದೀಗ ಬೆಳಕಿಗೆ ಬಂದಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಖುರಾನಾಗೆ ಬೆದರಿಕೆ ಸಂದೇಶ ಬಂದಿದ್ದು, ಕಳುಹಿಸಿದವರು, ತಮ್ಮನ್ನು ಲಾರೆನ್ಸ್ ಬಿಷ್ಣೋಯ್ ಕಿರಿಯ ಸಹೋದರ ಅನಿಲ್ ಪಂಡಿತ್ ಎಂದು ಹೇಳಿಕೊಂಡಿರುವ ಅಡಿಯೋ ಕ್ಲಿಪ್‌ ಒಂದು ಇದೀಗ ಔಟ್‌ ಆಗಿದೆ. ಆಡಿಯೋದಲ್ಲಿ, ಆಯುಷ್ಮಾನ್ ರೊಂದಿಗೆ ಮಾತನಾಡಿ ವಿಷಯ ಪರಿಹರಿಸುವಂತೆ ಮಾನಾಡಿರುವುದಾಗಿ ಕಂಡುಬಂದಿದೆ. ಇದಲ್ಲದೆ, ಟೈಗರ್ ಶ್ರಾಫ್ ಅವರ ಘಟನೆ ಕುರಿತು ಹೇಳಿ ನಿನಗೂ ಅದೇ ಸ್ಥಿತಿ ಎದುರಾಗಲಿದೆ ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಆಯುಷ್ಮಾನ್ ಖುರಾನಾಗೆ ಬೆದರಿಕೆ!

ಆಡಿಯೊ ಕ್ಲಿಪ್‌ನಲ್ಲಿ, "ಅನ್ಶುಮಾನ್ ಸರ್, ಇದು ಅನಿಲ್ ಪಂಡಿತ್, ಲಾರೆನ್ಸ್ ಬಿಷ್ಣೋಯ್ ಅವರ ಕಿರಿಯ ಸಹೋದರ. ನಾನು ನಿಮಗೆ ಕರೆ ಮಾಡಿದೆ, ಆದರೆ ನೀವು ಫೋನ್ ತೆಗೆದುಕೊಳ್ಳಲಿಲ್ಲ ಮತ್ತು ನಂತರ ಸಂಪರ್ಕ ಕಡಿತಗೊಳಿಸಲಾಯಿತು. ಪರವಾಗಿಲ್ಲ. ನಾನು ನಿಮಗೆ ಒಂದು ಸಂದೇಶವನ್ನು ಕಳುಹಿಸಲು ಬಯಸುತ್ತೇನೆ. ದಯವಿಟ್ಟು ನಮ್ಮೊಂದಿಗೆ ಮಾತನಾಡಿ. ಒಪ್ಪಂದ ಮಾಡಿಕೊಳ್ಳಬೇಕು. ನೀವು ಈ ರೀತಿಯ ಮನೋಭಾವ ತೋರಿಸಲು ಹೋದರೆ, ಟೈಗರ್ ಶ್ರಾಫ್‌ಗೆ ಸಂಭವಿಸಿದಂತೆಯೇ ಮುಂದೆ ನಿಮಗೂ ಸಂಭವಿಸಬಹುದು ಎಂದು ಹೇಳಿದ್ದಾರೆ. ಚಂಡೀಗಢದಲ್ಲಿ ನಿಮ್ಮ ಮನೆ ಎಲ್ಲಿದೆ ಎಂದು ನಮಗೆ ಗೊತ್ತು. ನೀವು ಮುಂಬೈನಲ್ಲಿ ಎಲ್ಲಿ ವಾಸಿಸುತ್ತಿದ್ದೀರಿ, ನಿಮ್ಮ ಬೈಕ್ ಸಂಖ್ಯೆಯೂ ನಮಗೆ ಗೊತ್ತು. ಇನ್ನು ಮುಂದಿನ ದಾರಿ ನಿಮ್ಮದು ಎಂದು ಸಂದೇಶ ಕಳುಹಿಸಿದ್ದಾರೆ.

ಪೊಲೀಸರು ಎಷ್ಟು ದಿನ ರಕ್ಷಿಸುತ್ತಾರೆ?

ಆಡಿಯೋ ಹೀಗೆ ಮುಂದುವರಿಯುತ್ತದೆ, ನೋಡಿ, ನಾವು ನಿಮ್ಮೊಂದಿಗೆ ಒಮ್ಮೆ ಮಾತನಾಡಬೇಕು. ನೀವೊಮ್ಮೆ ಮಾತನಾಡಿದರೆ, ನಾವು ನಿಮಗೆ ಮುಂದೆ ತೊಂದರೆ ನೀಡುವುದಿಲ್ಲ. ನೀವು ಮಾತನಾಡಲು ಸಿದ್ಧರಿದ್ದರೆ, ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಮಾತನಾಡಲು ಮಾತ್ರ ನಿಮಗೆ ಕರೆ ಮಾಡಿದ್ದೇವೆ. ಆದ್ದರಿಂದ, ನಮ್ಮ ಸಂದೇಶ ಕೇಳಿದ ನಂತರ, ನಮಗೆ ಮತ್ತೆ ಕರೆ ಮಾಡಿ. ಒಂದು ವೇಳೆ ಹಾಗೆ ಮಾಡದಿದ್ದರೆ, ನೀವು ಬೇರೆ ಮಾರ್ಗ ಅನುಸರಿಸಿ ಪೊಲೀಸರ ಬಳಿಗೆ ಹೋಗಲು ಬಯಸುತ್ತೀರಿ ಎನ್ನುವುದು ನಮಗೆ ಅರ್ಥವಾಗುತ್ತದೆ. ನೀವು ಪೊಲೀಸರ ಬಳಿಗೆ ಹೋಗಬಹುದು. ನಮಗೆ ಯಾವುದೇ ಸಮಸ್ಯೆ ಇಲ್ಲ. ನಿಮಗೆ ಭದ್ರತೆ ಒದಗಿಸಿದವರು ಎಷ್ಟು ದಿನ ನಿಮ್ಮನ್ನು ರಕ್ಷಿಸಲು ಸಾಧ್ಯವಾಗುತ್ತದೆ? ನಮ್ಮಿಂದ ತಪ್ಪಿಸಿಕೊಳ್ಳಲು ನಿಮಗೆ ಪ್ರತಿದಿನ ಅದೃಷ್ಟ ಬೇಕು, ಆದರೆ ನಿಮಗೆ ಹಾನಿ ಮಾಡಲು ನಮಗೆ ಕೇವಲ ಒಂದು ದಿನದ ಅದೃಷ್ಟ ಸಾಕು ಎನ್ನುವುದು ದಾಖಲಾಗಿದೆ.

ಕುಟುಂಬಕ್ಕೂ ಸಹ ಬೆದರಿಕೆ!

ನಾವು ನಿಮ್ಮನ್ನು, ನಿಮ್ಮ ಕುಟುಂಬದ ಯಾವುದೇ ಸದಸ್ಯರನ್ನು ಕೈಗೆ ಸಿಕ್ಕವರನ್ನು ಕೊಲ್ಲುತ್ತೇವೆ. ಆದ್ದರಿಂದ, ನಮ್ಮೊಂದಿಗೆ ಮಾತನಾಡಿ ಮಾತುಕತೆಯ ಮೂಲಕ ವಿಷಯ ಬಗೆಹರಿಸಿಕೊಳ್ಳುವುದು ಉತ್ತಮ ಎಂದಿದ್ದಾರೆ. ನಿಮ್ಮ ಕರೆಗಾಗಿ ನಾವು ಕಾಯುತ್ತೇವೆ ಎಂದು ಆಡಿಯೋ ಮುಕ್ತಾಯವಾಗುತ್ತದೆ. ಮುಂಬೈ ಅಪರಾಧ ವಿಭಾಗವು ಈ ಪ್ರಕರಣದಲ್ಲಿ ಕ್ರಮ ಕೈಗೊಂಡಿದ್ದು, ಬೆಂಗಳೂರಿನ 30 ವರ್ಷದ ವೈಭವ್ ಚಂದ್ರ ಮಿಶ್ರಾ ಅವರನ್ನು ಬಂಧಿಸಿದೆ. ಅವರು ಐಟಿ ಎಂಜಿನಿಯರ್ ಆಗಿದ್ದು, ಬಿಹಾರದ ದರ್ಭಾಂಗಾ ನಿವಾಸಿ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಆರೋಪಿಯು ಆಯುಷ್ಮಾನ್ ಖುರಾನಾಗೆ ಇನ್‌ಸ್ಟಾಗ್ರಾಮ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ. ತರುವಾಯ, ಪೊಲೀಸರು ತಾಂತ್ರಿಕ ತನಿಖೆ ಬಳಸಿಕೊಂಡು ಆತನನ್ನು ಪತ್ತೆಹಚ್ಚಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.