ಉದ್ಯಮಿ ವೈಶಾಕ್ ಉಪಾಧ್ಯಾಯ, ನಟಿ ಕೃಷಿ ತಾಪಂಡ ಅವರ ಆರ್.ಆರ್. ನಗರದ ಫ್ಲಾಟ್‌ನಲ್ಲಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ 'ಬದುಕಲು ಇಷ್ಟವಿಲ್ಲ' ಎಂದು ವೈಶಾಕ್ ಕೃಷಿಗೆ ಸಂದೇಶ ಕಳುಹಿಸಿದ್ದು, ಕೌಟುಂಬಿಕ ಕಲಹ ಮತ್ತು ಹಿಂದಿನ ಕ್ರಿಮಿನಲ್ ಪ್ರಕರಣದಿಂದ ಅವರು ಖಿನ್ನತೆಗೆ ಒಳಗಾಗಿದ್ದರು ಎಂಬುದು ತಿಳಿದುಬಂದಿದೆ. ಈ ಘಟನೆ ನಡೆದಾಗ ಕೃಷಿ ಅವರು ಕ್ಷೇಮವನದಲ್ಲಿದ್ದರು.
ಬೆಂಗಳೂರು: ರಾಜರಾಜೇಶ್ವರಿ ನಗರದ ಬಂಗಾರಪ್ಪ ಗುಡ್ಡೆ ಬಳಿ ಇರುವ 'ಎಲಿಗಂಟ್ ಟೆರೆಸ್ ಅಪಾರ್ಟ್‌ಮೆಂಟ್'ನ (Elegant Terrace Apartment) 4ನೇ ಮಹಡಿಯ 401ನೇ ನಂಬರಿನ ನಟಿಗೆ ಸೇರಿದ ಫ್ಲಾಟ್‌ನಲ್ಲಿ ನಡೆದ ಉದ್ಯಮಿ ವೈಶಾಕ್ ಉಪಾಧ್ಯಾಯ (45) ಸಾವಿಗೆ ಸಂಬಂಧಿಸಿ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಾವಿಗೂ ಮುನ್ನ ನಟಿ ಕೃಷಿ ತಾಪಂಡ ಹಾಗೂ ವೈಶಾಕ್ ನಡುವೆ ನಡೆದ ಕೊನೆಯ ಕ್ಷಣದ ಮಾತುಕತೆಗಳು ಹಾಗೂ ಅವರ ಕೌಟುಂಬಿಕ ಕಲಹದ ಮತ್ತಷ್ಟು ಸ್ಪೋಟಕ ಮಾಹಿತಿ ಈಗ ಹೊರಬಿದ್ದಿದೆ.
ಕೃಷಿ ತಾಪಂಡ ಫ್ಲಾಟ್‌ನಲ್ಲೇ ಈ ಹಿಂದೆ ಅರೆಸ್ಟ್ ಆಗಿದ್ದ ವೈಶಾಕ್!
ಕಾರಿನ ಆಟೋಮೊಬೈಲ್ ಉದ್ಯಮಿಯಾಗಿದ್ದ ವೈಶಾಕ್, ವೀರಭದ್ರ ಸಿಗ್ನಲ್ ಬಳಿ ತಮ್ಮ ಕಚೇರಿಯನ್ನು ಹೊಂದಿದ್ದರು. ಪ್ರಸಿದ್ಧ ಉದ್ಯಮಿ ಹಾಗೂ ಎವಿಆರ್ (AVR) ಗ್ರೂಪ್ ಮಾಲೀಕರಿಗೆ ₹7 ಕೋಟಿ ದಂಡ ಕೇಳಿ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಹೆಚ್.ಎ.ಎಲ್ (HAL) ಪೊಲೀಸರು ಈ ಹಿಂದೆ ವೈಶಾಕ್‌ನನ್ನು ಇದೇ ಕೃಷಿ ತಾಪಂಡ ಅವರ ಫ್ಲಾಟ್‌ನಿಂದಲೇ ಬಂಧಿಸಿದ್ದರು. ಬೇಲ್ ಪಡೆದು ಬಂದ ನಂತರ ವೈಶಾಕ್ ಜೀವನ ಸಂಪೂರ್ಣ ಹಳಿ ತಪ್ಪಿತ್ತು. ಈ ಕೇಸ್‌ನಿಂದಾಗಿ ಪತಿ-ಪತ್ನಿ ನಡುವಿನ ಜಗಳ ತಾರಕಕ್ಕೇರಿತ್ತು. ಕಳೆದ ಒಂದು ತಿಂಗಳಿನಿಂದ ವೈಶಾಕ್ ಪತ್ನಿಯೊಂದಿಗೆ ಸಂಪೂರ್ಣವಾಗಿ ಮಾತು ಬಿಟ್ಟಿದ್ದರು ಹಾಗೂ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದರು.
ಒಂದೇ ಫ್ಲಾಟ್, ಎರಡು ಕೀಲಿ ಕೈ: ಕೃಷಿ ಮನೆಯಿಂದಲೇ ಕೆಲಸಕ್ಕೆ ಹೋಗುತ್ತಿದ್ದ ವೈಶಾಕ್
ಪತ್ನಿಯೊಂದಿಗಿನ ತೀವ್ರ ಜಗಳದಿಂದ ಬೇಸತ್ತಿದ್ದ ವೈಶಾಕ್, ಕಳೆದ ಒಂದು ವಾರದಿಂದ ಸತತವಾಗಿ ನಟಿ ಕೃಷಿ ತಾಪಂಡ ಅವರ ಫ್ಲಾಟ್‌ನಲ್ಲೇ ವಾಸವಿದ್ದರು. ಈ ಫ್ಲಾಟ್‌ಗೆ ಒಟ್ಟು ಎರಡು ಕೀಗಳಿದ್ದು, ಒಂದನ್ನು ಕೃಷಿ ಹಾಗೂ ಮತ್ತೊಂದನ್ನು ವೈಶಾಕ್ ಹೊಂದಿದ್ದರು. ಕೃಷಿ ಮನೆಯಿಂದಲೇ ವೈಶಾಕ್ ಪ್ರತಿದಿನ ತಮ್ಮ ವೀರಭದ್ರ ಸಿಗ್ನಲ್ ಬಳಿ ಇರುವ ಆಟೋಮೊಬೈಲ್ ಕಚೇರಿಗೆ ಕೆಲಸಕ್ಕೆ ಹೋಗಿ ಬರುತ್ತಿದ್ದರು ಎನ್ನಲಾಗಿದೆ.
ಕ್ಷೇಮವನದಲ್ಲಿದ್ದ ನಟಿ: ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಕೃಷಿ
ಕಳೆದ ಮೂರು ದಿನಗಳಿಂದ ನಟಿ ಕೃಷಿ ತಾಪಂಡ ಅವರು ಮಾನಸಿಕ ನೆಮ್ಮದಿ ಹಾಗೂ ಚಿಕಿತ್ಸೆಗಾಗಿ ನೆಲಮಂಗಲದ ಬಳಿ ಇರುವ ಪ್ರಸಿದ್ಧ ಪ್ರಕೃತಿ ಚಿಕಿತ್ಸಾ ಕೇಂದ್ರ 'ಕ್ಷೇಮವನ'ದಲ್ಲಿ ತಂಗಿದ್ದಾರೆ. ತಾವು ಕ್ಷೇಮವನದಲ್ಲಿ ಇರುವ ಕುರಿತು ಎರಡು ದಿನದಿಂದ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ ಹಲವಾರು ವಿಡಿಯೋ ಹಾಗೂ ಸ್ಟೋರಿಗಳನ್ನು ಕೃಷಿ ಹಂಚಿಕೊಂಡಿದ್ದರು. ಆದರೆ, ಅದೇ ಸಮಯದಲ್ಲಿ ಬೆಂಗಳೂರಿನ ತಮ್ಮ ಫ್ಲಾಟ್‌ನಲ್ಲಿ ಇಂತಹದ್ದೊಂದು ದುರಂತ ಸಂಭವಿಸುತ್ತದೆ ಎಂಬ ಕಲ್ಪನೆ ನಟಿಗೆ ಇರಲಿಲ್ಲ.
ಬದುಕೋಕೆ ಇಷ್ಟ ಇಲ್ಲ ಎಂದಿದ್ದ ವೈಶಾಕ್: ಕುಕ್ಕೆ ಸುಬ್ರಮಣ್ಯಕ್ಕೆ ಹೋಗೋಣ ಎಂದಿದ್ದ ನಟಿ!
ನಿನ್ನೆ ಸಂಜೆ ಸಾವಿಗೆ ಶರಣಾಗುವ ಮುನ್ನ ವೈಶಾಕ್ ನಟಿ ಕೃಷಿ ಅವರಿಗೆ ವಾಟ್ಸಾಪ್‌ನಲ್ಲಿ ಸಂದೇಶಗಳನ್ನು ಕಳುಹಿಸಿದ್ದರು. ನನಗೆ ಈ ಜೀವನವೇ ಸಾಕಾಗಿದೆ, ನನಗೆ ಇನ್ನು ಬದುಕಲು ಇಷ್ಟವಿಲ್ಲ ಎಂದು ವೈಶಾಕ್ ಮೆಸೇಜ್ ಮಾಡಿದ್ದರು. ಇದನ್ನು ಕಂಡು ತೀವ್ರ ಆತಂಕಕ್ಕೊಳಗಾದ ನಟಿ ಕೃಷಿ, ತಕ್ಷಣವೇ ಅವರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದರು. ಆ ರೀತಿ ಯಾವುದೇ ತಪ್ಪು ನಿರ್ಧಾರ ಮಾಡಿಕೊಳ್ಳಬೇಡ. ನಾನು ಕ್ಷೇಮವನದಿಂದ ಈಗಲೇ ಹೊರಟು ಮನೆಗೆ ಬರುತ್ತೇನೆ, ನಾನು ಬರುವವರೆಗೂ ಅಲ್ಲೇ ಇರು. ನಾವಿಬ್ಬರೂ ಸೇರಿ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಬರೋಣ, ದೇವರ ದರ್ಶನ ಪಡೆದರೆ ಮನಸ್ಸು ಹಗುರವಾಗುತ್ತದೆ ಎಂದು ತಿಳಿಸಿದ್ದರು. ಕೃಷಿ ಅವರ ಮಾತಿಗೆ ವೈಶಾಕ್ ಮೊದಲು 'ಓಕೆ' (OK) ಎಂದು ರಿಪ್ಲೈ ಮಾಡಿದ್ದರು.
ಮನೆಗೆ ಬರುವಷ್ಟರಲ್ಲೇ ಮುಗಿದಿತ್ತು ಕಥೆ
ವೈಶಾಕ್ ಒಪ್ಪಿಗೆ ನೀಡಿದ ತಕ್ಷಣ ನಟಿ ಕೃಷಿ ತಾಪಂಡ ಕ್ಷೇಮವನದಿಂದ ಬೆಂಗಳೂರಿನ ಆರ್.ಆರ್. ನಗರದ ತಮ್ಮ ಫ್ಲಾಟ್‌ನತ್ತ ಧಾವಿಸಿದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಕೃಷಿ ತಾಪಂಡ ಅಪಾರ್ಟ್‌ಮೆಂಟ್‌ಗೆ ತಲುಪುವ ಮುನ್ನವೇ ತೀವ್ರ ಖಿನ್ನತೆಯಲ್ಲಿದ್ದ ವೈಶಾಕ್, 401ನೇ ನಂಬರಿನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಕೊನೆಯುಸಿರೆಳೆದಿದ್ದರು. ಕೃಷಿ 11 ಗಂಟೆಗೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸದ್ಯಕ್ಕೆ ವೈಶಾಕ್ ಅವರ ಮೊಬೈಲ್ ಚಾಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕೌಟುಂಬಿಕ ಕಲಹ ಹಾಗೂ ಆರ್ಥಿಕ ಮುಗ್ಗಟ್ಟಿನಿಂದ ಉಂಟಾದ ತೀವ್ರ ಮಾನಸಿಕ ಖಿನ್ನತೆಯೇ ಅಥವಾ ಇನ್ನೇನಾದರೂ ಕಾರಣ ಇದೆಯೇ ಎಂದು ಆರ್.ಆರ್. ನಗರ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.


