ಕಿಚ್ಚ ಸುದೀಪ್ ಅವರು ಸರಿಗಮಮಪ ಅಂತಿಮ ಸ್ಪರ್ಧಿಗಳಿಗೆ ಆಶೀರ್ವಾದ ನೀಡುತ್ತಲೇ ಮನೆಯ ದರ್ಶನ ಮಾಡಿಸಿದ್ದಾರೆ. ಇದೇ ವೇಳೆ ಉಡುಗೊರೆಯಾಗಿ ಬಂದ ಅಮ್ಮನ ಮೂರ್ತಿಯನ್ನೂ ತೋರಿಸಿದ್ದಾರೆ.
ಜೀ ಕನ್ನಡದಲ್ಲಿ ಕಳೆದ ಕೆಲವು ವಾರಗಳಿಂದ ಪ್ರಸಾರ ಆಗ್ತಿರೋ ಸರಿಗಮಪ ಸೀಸನ್-11ರ ಫಿನಾಲೆ ಇತ್ತೀಚೆಗಷ್ಟೇ ಪೂರ್ಣಗೊಂಡಿದ್ದು, ಟಿವಿಯಲ್ಲಿ ಈ ಬಗ್ಗೆ ಇನ್ನೂ ಪ್ರಸಾರ ಆಗಲಿಲ್ಲ. ಆದರೆ, ಜೀ 5ನಲ್ಲಿ ಜೂನ್ 5ರಂದು ಸರಿಗಮಪ ರಿಯಾಲಿಟಿ ಶೋ ನೇರ ಪ್ರಸಾರಗೊಂಡಿದೆ. ಫೈನಲ್ ಅಂಗಳದಲ್ಲಿದ್ದ ಬಾಳು ಬೆಳಗುಂದಿ, ಶಿವಾನಿ, ಆರಾಧ್ಯ ರಾವ್, ರಶ್ಮಿ, ಅಮೋಘ ವರ್ಷ ಹಾಗೂ ದ್ಯಾಮೇಶ ಇದ್ದರು. ಮೈಸೂರಿನ ರಶ್ಮಿ ಡಿ, ಹಾವೇರಿಯ ಬಾಳು ಬೆಳಗುಂದಿ, ಬೀದರ್‌ನ ಶಿವಾನಿ, ಉಡುಪಿಯ ಆರಾಧ್ಯ ರಾವ್, ದ್ಯಾಮೇಶ್ ಹಾಗೂ ಬೆಳಗಾವಿಯ ಅಮೋಘ ವರ್ಷ ಅವರ ಪೈಕಿ ಯಾರಿಗೆ ಪಟ್ಟ ಸಿಕ್ಕಿದೆ ಎನ್ನುವುದು ಇದಾಗಲೇ ರಿವೀಲ್ ಆಗಿದೆ. ಕಳೆದ ವಾರ ನಡೆದ ಟಿಕೆಟ್ ಟು ಫಿನಾಲೆ ರೌಂಡ್‌ನಲ್ಲಿ ಆರಾಧ್ಯಾ ರಾವ್ ಹಾಗೂ ಶಿವಾನಿ ಇಬ್ಬರೂ ನೇರವಾಗಿ ಫೈನಲ್‌ಗೆ ನೇರಪ್ರವೇಶ ಪಡೆದಿದ್ದರು. ಒಟ್ಟಾರೆ ಆರು ಮಂದಿಯ ಪೈಕಿ ಅಂತಿಮವಾಗಿ ಆರಾಧ್ಯಾ ರಾವ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಎರಡನೇ ರನ್ನರ್ ಅಪ್ ಆಗಿ ರಶ್ಮಿ ಹೊರಹೊಮ್ಮಿದ್ದಾರೆ. ಅದರ ಪ್ರಸಾರ ಇನ್ನಷ್ಟೇ ಆಗಬೇಕಿದೆ.
ಇದರ ನಡುವೆಯೇ, ಸ್ಪರ್ಧಿಗಳು ಸುದೀಪ್ ಅವರ ಮನೆಗೆ ಭೇಟಿ ಕೊಟ್ಟು ಆಶೀರ್ವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಸುದೀಪ್ ಅವರು ಸ್ಪರ್ಧಿಗಳಿಗೆ ಹಾಡಿಸಿ ಆನಂದಪಟ್ಟರು, ಜೊತೆಗೆ ಒಂದಿಷ್ಟು ಹಿತ ವಚನಗಳನ್ನು ನುಡಿದರು. ಬಳಿಕ ಮನೆಯಲ್ಲಿ ಇರುವ ಅಮ್ಮನ ಮೂರ್ತಿಯ ಬಗ್ಗೆ ವಿವರಿಸುತ್ತಲೇ ಸುದೀಪ್ ಅವರು ಭಾವುಕರಾದರು. ಕಳೆದ ಅಕ್ಟೋಬರ್ನಲ್ಲಿ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಮೃತಪಟ್ಟಿದ್ದಾರೆ. ಅಮ್ಮನನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಸುದೀಪ್ ಅವರು ತಮ್ಮ ಮನೆಯಲ್ಲಿ ಅಮ್ಮನ ಮೂರ್ತಿ ಇಟ್ಟುಕೊಂಡಿದ್ದಾರೆ. ಇದು ತಮಗೆ ಗಿಫ್ಟ್ ಬಂದಿರುವುದಾಗಿ ಹೇಳುತ್ತಲೇ ಅವರು ಭಾವುಕರಾಗಿದ್ದಾರೆ.
ಕೆಲವು ದಿನಗಳ ಹಿಂದೆ, ಅಮ್ಮನ ಬಗ್ಗೆ ಬರೆದುಕೊಂಡಿದ್ದ ಸುದೀಪ್ ಅವರು, ನನ್ನ ತಾಯಿ ಪ್ರೀತಿಯನ್ನು ತೋರಿಸುವಳು, ಕ್ಷಮಾ ಗುಣವನ್ನು ಹೊಂದಿದ ವ್ಯಕ್ತಿ. ಪ್ರೀತಿ, ಕ್ಷಮೆ, ಕಾಳಜಿ, ಕೇಳಿದ್ದನ್ನು ಎಲ್ಲವನ್ನು ಕೊಡುವ, ಜೀವನದ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದು ಅಮ್ಮ. ನಾನು ಅಮ್ಮನನ್ನು ಯಾವಾಗಲೂ ಆನಂದಿಸುತ್ತೇನೆ. ಅಮ್ಮ ಹೇಳಿಕೊಟ್ಟ ಪಾಠಗಳನ್ನು ಇಂದಿಗೂ ಪಾಲನೆ ಮಾಡಿಕೊಂಡು ಬಂದಿದ್ದೇನೆ. ನನ್ನ ಜೊತೆಯಲ್ಲಿ ಜೀವಂತವಾಗಿದ್ದ ದೇವರು ನನ್ನಮ್ಮ. ಆಕೆ ನನ್ನ ಗುರು, ನಿಜವಾದ ಹಿತೈಷಿ ಮತ್ತು ನನ್ನ ಮೊದಲ ಅಭಿಮಾನಿ. ನನ್ನ ಕೆಲಸವನ್ನು ಇಷ್ಟಪಟ್ಟ ಮೊದಲ ಹೃದಯ. ಈಗ ಅಮ್ಮ ಎಂಬುವುದು ಸುಂದರ ನೆನಪು ಆಗಿದೆ ಎಂದು ಭಾವುಕರಾಗಿದ್ದರು.
ಈ ಸಂದರ್ಭದಲ್ಲಿ ನಾನು ಅನುಭವಿಸುತ್ತಿರುವ ನೋವನ್ನು ವ್ಯಕ್ತಪಡಿಸಲು ನನ್ನ ಬಳಿ ಪದಗಳೇ ಇಲ್ಲ. ಅಮ್ಮನಿಲ್ಲದ ಈ ಒಂಟಿತನ ನನ್ನಿಂದ ಒಪ್ಪಿಕೊಳ್ಳಲು ಆಗುತ್ತಿಲ್ಲ. ನನ್ನ ಸುತ್ತಲು ಏನಾಗಿದೆ ಎಂಬುವುದೇ ತಿಳಿಯುತ್ತಿಲ್ಲ. 24 ಗಂಟೆಯಲ್ಲಿ ಎಲ್ಲವೂ ಬದಲಾಯ್ತು. ಪ್ರತಿದಿನ ಬೆಳಗ್ಗೆ 5.30ಕ್ಕೆ ಸರಿಯಾಗಿ 'ಶಭೋದಯ ಕಂದಾ' ಎಂಬ ಮೆಸೇಜ್ ಬರುತ್ತಿತ್ತು. ಅಕ್ಟೋಬರ್ 18ರ ಶುಕ್ರವಾರ ನಾನು ಕೊನೆಯ ಬಾರಿ ಅಮ್ಮನ ಮೆಸೇಜ್ ಬಂದಿತ್ತು. ಮರದಿನ ಬಿಗ್‌ಬಾಸ್‌ನಲ್ಲಿದ್ದಾಗ ಅಮ್ಮನಿಂದ ನನಗೆ ಮೆಸೇಜ್ ಬಂದಿರಲಿಲ್ಲ. ಹಲವು ವರ್ಷಗಳಲ್ಲಿ ನನಗೆ ಬೆಳಗ್ಗೆ ಅಮ್ಮನಿಂದ ಬೆಳಗ್ಗೆ ಮೆಸೇಜ್ ಬಂದಿರದ ದಿನ ಅದಾಗಿತ್ತು ಎಂದು ನೋವು ತೋಡಿಕೊಂಡಿದ್ದರು. ಸದ್ಯ ಸುದೀಪ್ ಅವರು ಬಿಗ್ಬಾಸ್ ಪಯಣದಿಂದ ದೂರವಾಗಿದ್ದು, ಸಿನಿಮಾದಲ್ಲಿ ಬಿಜಿಯಾಗಿದ್ದಾರೆ.
