ಕಿಚ್ಚ ಸುದೀಪ್ ಈಗ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯುದ್ಧಕ್ಕೆ ಸಿದ್ಧ ಎಂದಿದ್ದು ಪೈರಸಿಯ ಬಗ್ಗೆ. ಚಿತ್ರ ನಟ ದರ್ಶನ್ ಜೈಲಿಗೆ ಹೋಗುವ ವೇಳೆಯಲ್ಲೇ ಸುಮ್ಮನಿದ್ದ ನಾನು ಈಗ ಯಾಕೆ ಅವರ ವಿರುದ್ಧ ಮಾತನಾಡಲಿ ಎಂದು ಹೇಳಿದ್ದಾರೆ.
ಬೆಂಗಳೂರು : ‘ನಾನು ಯುದ್ಧಕ್ಕೆ ಸಿದ್ಧ, ಮಾತಿಗೆ ಬದ್ಧ. ಹೊರಗೆ ಒಂದು ಪಡೆಯೇ ಯುದ್ಧಕ್ಕೆ ಸಜ್ಜಾಗುತ್ತಿದೆ’ ಎಂದು ಹುಬ್ಬಳ್ಳಿಯಲ್ಲಿ ನಡೆದ ‘ಮಾರ್ಕ್’ ಸಿನಿಮಾದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಅಬ್ಬರಿಸಿದ್ದ ಕಿಚ್ಚ ಸುದೀಪ್ ಈಗ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಯುದ್ಧಕ್ಕೆ ಸಿದ್ಧ ಎಂದಿದ್ದು ಪೈರಸಿಯ ಬಗ್ಗೆ. ಚಿತ್ರ ನಟ ದರ್ಶನ್ ಜೈಲಿಗೆ ಹೋಗುವ ವೇಳೆಯಲ್ಲೇ ಸುಮ್ಮನಿದ್ದ ನಾನು ಈಗ ಯಾಕೆ ಅವರ ವಿರುದ್ಧ ಮಾತನಾಡಲಿ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಿಂದ ದೂರವೇ ಉಳಿಯುವ ಸುದೀಪ್ ಅವರು ತಾವು ಆಡಿದ್ದ ಮಾತು ದರ್ಶನ್‌ರತ್ತ ತಿರುಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ಕೊಟ್ಟಿರುವುದು ವಿಶೇಷ.
ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಸುದೀಪ್ ಆಡಿದ್ದ ಮಾತು ಭಾರಿ ವೈರಲ್ ಆಗಿ, ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದಕ್ಕೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮೀ, ‘ದರ್ಶನ್ ಇದ್ದಾಗ ಸದ್ದಿಲ್ಲದೇ ಇರುತ್ತಿದ್ದವರು ಈಗ ಏನೇನೋ ಮಾತನಾಡುತ್ತಿದ್ದಾರೆ’ ಎಂದು ಕಿಡಿಕಾರಿದ್ದರು. ಅದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ದರ್ಶನ್- ಸುದೀಪ್ ಅಭಿಮಾನಿಗಳ ‘ಯುದ್ಧ’ ಆರಂಭವಾಗಿತ್ತು. ಇದರ ಬೆನ್ನಲ್ಲೇ ಸುದೀಪ್ ತಮ್ಮ ವೀರಾವೇಶ ದರ್ಶನ್ ವಿರುದ್ಧ ಅಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಗಮನಾರ್ಹ ಎಂದರೆ, ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಅವರು ಪೈರಸಿ ಎಂಬ ಪದವನ್ನೇ ಬಳಸಿರಲಿಲ್ಲ!
ಸುದೀಪ್ ಸ್ಪಷ್ಟನೆ:
‘ನಾನು ಯುದ್ಧ ಎಂಬ ಮಾತು ಹೇಳಿದ್ದು ಪೈರಸಿ ಬಗ್ಗೆ. ದರ್ಶನ್ ಜೈಲಿಗೆ ಹೋಗುವ ವೇಳೆಯಲ್ಲೇ ಸುಮ್ಮನಿದ್ದ ನಾನು ಈಗ ಯಾಕೆ ಅವರ ವಿರುದ್ಧ ಮಾತನಾಡಲಿ, ಫ್ಯಾನ್ಸ್‌ಗೆ ಈ ಕ್ಲಾರಿಟಿ ಸಿಕ್ಕಿಲ್ಲ. ನಮ್ಮ ಸಿನಿಮಾ ಪೈರಸಿ ಮಾಡಲು ದೊಡ್ಡ ಯೋಜನೆ ಸಿದ್ಧವಾಗುತ್ತಿರುವ ವಿಚಾರ ಇಂಟಲಿಜೆನ್ಸ್‌ನವರ ಮೂಲಕ ಗೊತ್ತಾಯಿತು. ಪೈರಸಿ ಬಗ್ಗೆ ಸುಮ್ಮನಿದ್ದು ಸಾಕಾಗಿದೆ. ಅದರ ವಿರುದ್ಧ ಹೋರಾಟಕ್ಕೆ ಯೋಚಿಸುತ್ತಿದ್ದೇನೆ. ಅದೇ ರೀತಿ ಇತರರ ಬಗ್ಗೆ ಮಾತನಾಡಬೇಕಾಗಿ ಬಂದಾಗ ನೇರವಾಗಿಯೇ ಮಾತನಾಡುತ್ತೇನೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
ವಿಜಯಲಕ್ಷ್ಮೀ ಅವರು ನನ್ನ ಹೆಸರು ಪ್ರಸ್ತಾಪಿಸಿಲ್ಲ
ಜೊತೆಗೆ ವಿಜಯಲಕ್ಷ್ಮೀ ಅವರು ನನ್ನ ಹೆಸರು ಪ್ರಸ್ತಾಪಿಸಿಲ್ಲ. ವೇದಿಕೆ ಹತ್ತಿದವರು, ಮೀಡಿಯಾದಲ್ಲಿ ಮಾತನಾಡಿದವರು ಸಾಕಷ್ಟು ಮಂದಿ ಇದ್ದಾರೆ. ಹೀಗಿರುವಾಗ ಅವರು ನನ್ನ ಬಗ್ಗೆಯೇ ಮಾತನಾಡಿದ್ದಾರೆ ಎಂದುಕೊಳ್ಳುವುದು ತಪ್ಪು. ನಾನಿಲ್ಲಿ ಪ್ರಾರ್ಥನೆ ಮಾಡುವಾಗ ಯಾವುದೋ ದೇವಸ್ಥಾನದಲ್ಲಿ ಗಂಟೆ ಹೊಡೆದರೆ ಅದಕ್ಕೆ ನಾನು ಹೇಗೆ ಜವಾಬ್ದಾರನಾಗುತ್ತೇನೆ ಎಂದು ಖಡಕ್ ಪ್ರತಿಕ್ರಿಯೆ ನೀಡಿದರು.


