Asianet Suvarna News Asianet Suvarna News

’ಹೇಗಿದೆ ಕೆಲವು ದಿನಗಳ ನಂತರ’ ಚಿತ್ರ?

’ಕೆಲವು ದಿನಗಳ ನಂತರ ಚಿತ್ರದಲ್ಲಿ’ ನಿರ್ದೇಶಕ  ಶ್ರೀನಿ, ರಸ್ತೆ ಅಪಘಾತಗಳ ಕಣ್ಣೀರ ಕತೆಯನ್ನೇ ಇಡೀ ಸಿನಿಮಾ ತುಂಬಾ ಹೇಳುವುದಕ್ಕೆ ಹೋಗಿಲ್ಲ. ಜತೆಗೆ ನೀವು ಎಂಥ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಯಾವುದೇ ಬೋಧನೆ ಇಲ್ಲದೆ ದೃಶ್ಯಗಳ ವಿವರಣೆಗಳನ್ನು  ಪ್ರೇಕ್ಷಕರ ಮುಂದಿಡುತ್ತಾರೆ. 

Kelavu dinagala Nantara Kannada latest movie review

ಒಂದು ಅಪಘಾತವಾಗುತ್ತದೆ. ಆ ದುರಂತಕ್ಕೆ ಸಿಕ್ಕಿ ಸಾವು ಬದುಕಿನ ಮಧ್ಯೆ ಜೀವಕ್ಕಾಗಿ ಅಂಗಲಾಚುವವರನ್ನು ನೋಡಿ ಕೊಂಡು ಉಳಿದವರು ಸುಮ್ಮನಿರುತ್ತಾರೆ. ಕೆಲವರು ಮೊಬೈಲ್‌ನಲ್ಲಿ ವೀಡಿಯೋ ಮಾಡಿಕೊಳ್ಳುತ್ತಾರೆ. ಆ ಯುವಕ ತನ್ನನ್ನು ಆಸ್ಪತ್ರೆಗೆ ಸೇರಿಸುವಂತೆ ಬೇಡಿಕೊಳ್ಳುತ್ತಿದ್ದ ದೃಶ್ಯಗಳು ಮರೆಯಲಾಗದು.

ತುಮಕೂರು ರಸ್ತೆಯಲ್ಲಿ ಹೀಗೆ ಒಂದು ಆ್ಯಕ್ಸಿ ಟೆಂಡ್ ಆಗಿ ಯುವಕನೊಬ್ಬನ ದೇಹ ಎರಡು ಭಾಗವಾಗಿ ರಸ್ತೆಯಲ್ಲಿ ಬಿದ್ದಾಗಲೂ ವಿಡಿಯೋ ಮಾಡಿದವರೇ ಹೆಚ್ಚು. ಇಂಥ ಪ್ರಕರಣಗಳು ಪ್ರತಿ ನಿತ್ಯ ನಡೆಯುತ್ತಿರುತ್ತವೆ. ಆದರೆ ಅವರನ್ನು ಕಾಪಾಡಬೇಕಾದ ಜಾಗದಲ್ಲಿರುವ ನಾವು ‘ನಮಗೆ ಯಾಕೆ ಬೇಕು’ ಎಂದು ನಿರ್ಲಕ್ಷ್ಯ ಮಾಡುತ್ತೇವೆ. ಹೀಗೆ ನಮಗೆ ಯಾಕೆ ಎಂದು ಅಪಾಯದಲ್ಲಿದ್ದವರನ್ನು ನಡು ದಾರಿಯಲ್ಲಿ ಬಿಟ್ಟು ಹೋದವರ ಸುತ್ತ ಒಂದು ಕತೆ ಮಾಡಿ ಅದನ್ನು ಸಿನಿಮಾ ಮಾಡಿದರೆ ಹೇಗಿರುತ್ತೆ? ಆ ಸಿನಿಮಾ ನೋಡುವುದಕ್ಕೆ ಸಾಧ್ಯವೆ? ಎನ್ನುವ ಕುತೂಹಲ ಇದ್ದವರು ‘ಕೆಲವು ದಿನಗಳ ನಂತರ’ ಸಿನಿಮಾ ನೋಡಲು ಹೋಗಿ.

ಹಾಗಂತ ನಿರ್ದೇಶಕ ಶ್ರೀನಿ, ರಸ್ತೆ ಅಪಘಾತಗಳ ಕಣ್ಣೀರ ಕತೆಯನ್ನೇ ಇಡೀ ಸಿನಿಮಾ ತುಂಬಾ ಹೇಳುವುದಕ್ಕೆ ಹೋಗಿಲ್ಲ. ಜತೆಗೆ ನೀವು ಎಂಥ ತಪ್ಪು ಮಾಡುತ್ತಿದ್ದೀರಿ ಎಂಬುದನ್ನು ಯಾವುದೇ ಬೋಧನೆ ಇಲ್ಲದೆ ದೃಶ್ಯಗಳ ವಿವರಣೆಗಳನ್ನು ಪ್ರೇಕ್ಷಕರ ಮುಂದಿಡುತ್ತಾರೆ. ಇಂಥದ್ದೊಂದು ಕತೆಯನ್ನು ಹೇಳುವುದಕ್ಕೆ ಶ್ರೀನಿ ಆಯ್ಕೆ ಮಾಡಿಕೊಂಡಿರುವುದು ಹಾರರ್ ನೆರಳು. ಒಂದು ದುರಂತ, ಅದರ ನಿರ್ಲಕ್ಷತನದಿಂದ ಆಗುವ
ಪರಿಣಾಮ, ಮನುಷ್ಯನಿಗೆ ಏನಿಲ್ಲದಿದ್ದರೂ ಮಾನವೀತೆಯ ಇರಬೇಕೆಂಬ ಇಡೀ ಚಿತ್ರದ ಕಾಳಜಿ ನೋಡುಗನಿಗೆ ಹತ್ತಿರವಾಗುತ್ತದೆ. ಮೊದಲ ಚಿತ್ರದಲ್ಲೇ ಜವಾಬ್ದಾರಿಯುತ ಕತೆ ಮತ್ತು ಸಿನಿಮಾ ಮಾಡಿರುವ ಶ್ರೀನಿ, ತಮ್ಮ ಪ್ರತಿಭೆಯ ಗಟ್ಟಿತನವನ್ನು ತೋರುತ್ತಾರೆ.

ನಾಲ್ಕು ಮಂದಿ ಸ್ನೇಹಿತರು, ತಮ್ಮ ಮತ್ತೊಬ್ಬ ಸ್ನೇಹಿತೆಯ ಮದುವೆ ವಾರ್ಷಿಕೋತ್ಸವಕ್ಕೆ ಹೊರಡುತ್ತಾರೆ. ವೀಕೆಂಡ್ ಮೂಡ್‌ನಲ್ಲಿ ತೆರಳುವ ತಂಡಕ್ಕೆ ಪ್ರಯಾಣದ ನಡುವೆ ಒಂದು ದುರಂತ ಎದುರಾಗುತ್ತದೆ. ಅದೇನು? ಇದಕ್ಕೂ ನಾಲ್ಕು ಮಂದಿಗೂ ಸಂಬಂಧವೇನು ಎನ್ನುವ ಪ್ರಶ್ನೆ ಮುಂದಿಟ್ಟುಕೊಂಡು ಇಡೀ ಕತೆಗೆ ಭಯದ ನೆರಳು ಕೊಡುತ್ತಾರೆ ನಿರ್ದೇಶಕ. ಮೊದಲ ಭಾಗದಲ್ಲಿ ಒಂದಿಷ್ಟು ಸಸ್ಪೆನ್ಸ್‌ಗಳನ್ನು ಹುಟ್ಟು ಹಾಕಿ, ಅದಕ್ಕೆ ವಿರಾಮದ ನಂತರ ಉತ್ತರ ಹೇಳುತ್ತಾರೆ. ಹೀಗಾಗಿ ಮೊದಲ ಭಾಗ ನೋಡಿದವರು, ವಿರಾಮದ ನಂತರವೂ ನೋಡಬೇಕೆಂಬ ಕುತೂಹಲ ಕಾಯ್ದುಕೊಳ್ಳುವಲ್ಲಿ ನಿರ್ದೇಶಕರು ಜಾಣ್ಮೆ ತೋರುತ್ತಾರೆ.

ಕತೆಯನ್ನು ತೀರಾ ಎಳೆದಿಲ್ಲ. ಕೆಲವು ಸನ್ನಿವೇಶಗಳನ್ನು ಹಿನ್ನೆಲೆ ಸಂಗೀತದೊಂದಿಗೆ ಹೇಳುವುದನ್ನು ನೋಡಿದಾಗ ಪ್ರೇಕ್ಷಕ ಖಂಡಿತ ಹೆದರಿಕೊಳ್ಳುತ್ತಾನೆ. ಆ ಮೂಲಕ ಸಂಕಲನ ಹಾಗೂ ಕ್ಯಾಮೆರಾ ತಾಂತ್ರಿಕವಾಗಿ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಸಾಥ್ ನೀಡುತ್ತದೆ. ನಟನೆಯಲ್ಲಿ ಶುಭಾ ಪೂಂಜಾ, ಪವನ್, ಸೋನು ಪಾಟೀಲ್ ಗಮನ ಸೆಳೆಯುತ್ತಾರೆ. ನೆನಪಿನಲ್ಲಿ ಉಳಿಯುವಂತಹ ಸಂಭಾಷಣೆಗಳು, ವಿರಾಮದ ನಂತರ ಬರುವ ಸನ್ನಿವೇಶಗಳ ನಿರೂಪಣೆ ಶೈಲಿಯಲ್ಲಿ ಇನ್ನೊಂದಿಷ್ಟು ಹೊಸತನ ತೋರುವ ಅವಕಾಶಗಳು ಇತ್ತು. ಆ ಮೂಲಕ ಮತ್ತೊಬ್ಬ ಹೊಸ ಕನಸುಗಳ ನಿರ್ದೇಶಕನೊಬ್ಬ ಚಿತ್ರರಂಗಕ್ಕೆ ಬಂದಿದ್ದಾರೆ.

ಪ್ರಭುದೇವ ಅವರ ಮೂಕಿ ಸಿನಿಮಾ ‘ಮರ್ಕ್ಯೂರಿ’ ನೋಡಿ ಮೆಚ್ಚಿದವರಿಗೆ ಅಂಥದ್ದೇ ಕತೆಯನ್ನು ಒಳಗೊಂಡ ಮಾತಿನ ಸಿನಿಮಾ ‘ಕೆಲವು ದಿನಗಳ ನಂತರ’ ಮೆಚ್ಚುಗೆ ಆಗುತ್ತದೆ. ಇದು ನಾವು ನೋಡುತ್ತಿರುವ ಘಟನೆಗಳ ಒಟ್ಟು ಚಿತ್ರಣ.

ಚಿತ್ರ: ಕೆಲವು ದಿನಗಳ ನಂತರ ತಾರಾಗಣ: ಶುಭಾ ಪೂಂಜಾ, ಸೋನು ಪಾಟೀಲ್, ದ್ರವ್ಯ ಶೆಟ್ಟಿ, ಲೋಕೇಶ್, ಮಜಾ ಟಾಕೀಸ್ ಪವನ್, ಶರಣಯ್ಯ, ಜಗದೀಶ್
ನಿರ್ದೇಶನ: ಶ್ರೀನಿ ನಿರ್ಮಾಣ: ಮುತ್ತುರಾಜ್ ಎಚ್ ಪಿ ಛಾಯಾಗ್ರಾಹಣ: ಮುರಳಿಧರ್, ನವೀನ್ ಕುಮಾರ್ ಸಂಗೀತ: ರಾಕಿ ಸೋನು ರೇಟಿಂಗ್: ***

 

-ವಿಮರ್ಶೆ: ಆರ್ ಕೇಶವಮೂರ್ತಿ 

Follow Us:
Download App:
  • android
  • ios