ನಟ ವಿಷ್ಣುವರ್ಧನ್ ಅವರು ಕೆಲವು ದರ್ಶಕಗಳ ಹಿಂದೆ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆಯಾದವರು. ತೆರೆಯ ಮೇಲೆ ಸಾಹಸಸಿಂಹ ಇಮೇಜ್ ಇದ್ದರೂ ತೆರೆಮರೆಯಲ್ಲಿ ಅವರು ಮಮತಾಮಯಿ ಜೊತೆಗೆ 'ಕರುಣಾಮಯಿ' ಆಗಿದ್ದರು. ಜೊತೆಗೆ, ಅವರು ಆಧ್ಯಾತ್ಮಿಕ ಹಾಗೂ ಧಾರ್ಮಿಕದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು

ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Vishnuvardhan) ಅವರ ಬಗ್ಗೆ ಈಗ ಹೆಚ್ಚು ಸಂಗತಿಗಳು ಓಡಾಡತೊಡಗಿವೆ. ಈಗ ಸೋಷಿಯಲ್ ಮೀಡಿಯಾಗಳು ಹಾಗೂ ಯೂಟ್ಯೂಬ್ ಕಾಲ ಬಂದಿದೆ. ಹಳೆಯ ಜಮಾನದಲ್ಲಿ ನಡೆದ ಸ್ಟೋರಿಗಳೆಲ್ಲಾ ಈಗ ಹೊರಗೆ ಓಡೋಡಿ ಬರುತ್ತಿವೆ. ಅದರಲ್ಲೊಂದು ಕತೆ ತುಂಬಾ ಆಸಕ್ತಿದಾಯಕ ಎನ್ನಿಸುತ್ತಿದೆ, ನೋಡಿ.. ಇವೆಲ್ಲಾ ನಟ ವಿಷ್ಣುವರ್ಧನ್ ಅವರ ಮಾತೃ ಹೃದಯ ಹಾಗೂ ಸಮಾಜಮುಖಿ ಕೆಲಸಕ್ಕೆ ಹಿಡಿದ ಕನ್ನಡಿ ಎನ್ನಬಹುದು.

ಹೌದು, ನಟ ವಿಷ್ಣುವರ್ಧನ್ ಅವರು ಕೆಲವು ದರ್ಶಕಗಳ ಹಿಂದೆ ಸೂಪರ್ ಸ್ಟಾರ್ ಆಗಿ ಮಿಂಚಿ ಮರೆಯಾದವರು. ತೆರೆಯ ಮೇಲೆ ಸಾಹಸಸಿಂಹ ಇಮೇಜ್ ಇದ್ದರೂ ತೆರೆಮರೆಯಲ್ಲಿ ಅವರು ಮಮತಾಮಯಿ ಜೊತೆಗೆ 'ಕರುಣಾಮಯಿ' ಆಗಿದ್ದರು. ಜೊತೆಗೆ, ಅವರು ಆಧ್ಯಾತ್ಮಿಕ ಹಾಗೂ ಧಾರ್ಮಿಕದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದವರು ಆಗಿದ್ದರು. ಮನೆಯಲ್ಲಿ ತಮ್ಮದೇ ಪೂಜೆ, ಸತ್ಕಾರ್ಯಗಳನ್ನು ಮಾಡುತ್ತಿದ್ದರು. ವಿಷ್ಣುವರ್ಧನ್ ಪತ್ನಿ ಭಾರತಿ ಕೂಡ ಆಧ್ಯಾತ್ಮ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು ಅನ್ನೋದು ಬಹುತೇಕರಿಗೆ ಗೊತ್ತು.

ಆದರೆ, ನಟ ವಿಷ್ಣುವರ್ಧನ್ ಹಾಗೂ ನಟಿ ಭಾರತಿ (Bharathi Vishnuvardhan) ದಂಪತಿಗಳಲ್ಲಿ ಯಾರು ಹೆಚ್ಚು ದೇವರನ್ನು ನಂಬುತ್ತಾರೆ, ಮನಸ್ಸಿಟ್ಟು ಪೂಜೆ ಮಾಡುತ್ತಾರೆ ಅನ್ನೋದನ್ನ ಮಗಳು ಕೀರ್ತಿ ಹೇಳಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಮಾತನ್ನಾಡಿರುವ ವಿಷ್ಣುವರ್ಧನ್-ಭಾರತಿ ದತ್ತು ಪುತ್ರಿ ಕೀರ್ತಿ ವಿಷ್ಣುವರ್ಧನ್, 'ಅಪ್ಪಾಜಿಗಿಂತ ಅಮ್ಮನೇ ಹೆಚ್ಚು ದೇವರನ್ನು ನಂಬುತ್ತಾರೆ, ಪೂಜೆ ಮಾಡುತ್ತಾರೆ' ಎಂದಿದ್ದಾರೆ. ಅವರಿಬ್ಬರ ಆಚಾರ-ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ನಟ ಅನುರುದ್ಧ ಅವರ ಪತ್ನಿ ಆಗಿರುವ ಕೀರ್ತಿ ವಿಷ್ಣುವರ್ಧನ್ 'ಅಪ್ಪಾಜಿ (ವಿಷ್ಣುವರ್ಧನ್) ಅವರಿಗಿಂತ ಅಮ್ಮ (ಭಾರತಿ) ಹೆಚ್ಚು ದೇವರನ್ನು ನಂಬುತ್ತಾರೆ, ಹೆಚ್ಚು ಪೂಜಿಸುತ್ತಾರೆ. ಅಮ್ಮ ಧಾರ್ಮಿಕ ಕಾರ್ಯ ಮಾಡುವುದು, ದೇವಸ್ಥಾನಗಳಿಗೆ ಹೋಗುವುದು ಹೆಚ್ಚು. ಸಮಯ ಸಿಕ್ಕಾಗಲೆಲ್ಲಾ ನಮ್ಮ ಅಮ್ಮ ಈಗಲೂ ದೇವಸ್ಥಾನಗಳಿಗೆ ಹೋಗುತ್ತಾರೆ. ಆದರೆ, ಅಪ್ಪ ಹೆಚ್ಚು ಅಂತರ್ಮುಖಿ, ಆಧ್ಯಾತ್ಮದತ್ತ ಒಲವು ಹೊಂದಿದ್ದರು. ಅವರು ಪೂಜೆ ಮಾಡುತ್ತಿದ್ದರು, ಆದರೆ ಜನರ ಜೊತೆಗೆ ಹೆಚ್ಚು ಬೆರೆಯುವುದನ್ನು ಅವರು ಇಷ್ಟಪಡುತ್ತಿದ್ದರು.

ಹೆಚ್ಚಾಗಿ ಅಪ್ಪ ಮನೆಯವರೊಂದಿಗೆ ಹೊರಗೆ ಹೋಗಲು ಬಯಸುತ್ತಿದ್ದರು. ಕೇವಲ ಮನೆಯವರು ಮಾತ್ರವಲ್ಲ, ಅವರ ಆಪ್ತರು, ಸ್ನೇಹಿತರು, ಸಂಬಂಧಿಕರು ಹಾಗೂ ಅವರ ಕುಟುಂಬದೊಟ್ಟಗೆ ಅಪ್ಪಾಜಿ ಹೆಚ್ಚು ನಂಬಿಕೆ, ಆಪ್ತತೆ ಬಯಸುತ್ತಿದ್ದರು. ಅಪ್ಪಾಜಿ ಎಲ್ಲಾದರೂ ಹೊರಗೆ ಹೊರಟರೆ ಅವರ ಜೊತೆ ಮನೆಯವರು, ಸ್ನೇಹಿತರು ಹಾಗೂ ಅವರ ಕುಟುಂಬ ಕೂಡ ಜೊತೆಗೇ ಇರುವಂತೆ ನೊಡಿಕೊಳ್ಳುತ್ತಿದ್ದರು. ಅವರು ಪೂಜೆಗಿಂತ ಹೆಚ್ಚಾಗಿ ಜನರ ಜೊತೆ ಒಡನಾಟವನ್ನು ಬಯಸುತ್ತಿದ್ದರು. ಅಮ್ಮ ಜನರೊಟ್ಟಿಗೆ ದೇವರನ್ನು ಕೂಡ ಹೆಚ್ಚು ನಂಬುತ್ತಾರೆ, ಆರಾಧಿಸುತ್ತಾರೆ' ಎಂದಿದ್ದಾರೆ ಕೀರ್ತಿ ವಿಷ್ಣುವರ್ಧನ್.

ಹೌದು, ನಟ ವಿಷ್ಣುವರ್ಧನ್ ಅವರು ತಾವು ಬದುಕಿದ್ದಾಗ ಬಹಳಷ್ಟು ಜನರಿಗೆ, ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಅವರೆಲ್ಲರ ಆಶೀರ್ವಾದ ಅವರ ಕುಟುಂಬವನ್ನು ಇಂದಿಗೂ ಕಾಪಾಡುತ್ತಿದೆ ಎನ್ನಬಹುದು. ಅವರು ಮಾಡಿದ್ದ ಅದೆಷ್ಟೂ ಸಹಾಯ ಹೊರಜಗತ್ತಿಗೆ ಬಂದೇ ಇಲ್ಲ. ಕಾರಣ, ಸ್ವತಃ ಅವರೇ 'ಎಲ್ಲೂ ಹೇಳಬಾರದು' ಎಂದು ಮಾತು ತೆಗೆದುಕೊಂಡೇ ಮಾಡಿರುವ ಸಹಾಯ ಅದು. ಆದರೆ, ಕೆಲವರು ಒಳ್ಳೆಯ ಕಾರಣಕ್ಕೆ ಕೊಟ್ಟ ಮಾತನ್ನು ಮೀರಿ ಅವರ ಒಳ್ಳೆಯತನವನ್ನು ಜಗತ್ತಿಗೆ ತಿಳಿಸಿದ್ದಾರೆ.

ಕೆಲವರು ಹೇಳುವ ಪ್ರಕಾರ, 'ಮಾತು ಕೊಟ್ಟಿದ್ದರೂ ಕೂಡ ಮಾಡಿದ್ದ ಒಳ್ಳೆಯ ಕೆಲಸವನ್ನು ಹೇಳಿಕೊಳ್ಳುವುದು ಅಪರಾಧ ಅಲ್ಲ'. ಈ ಕಾರಣಕ್ಕೆ ನಟ ವಿಷ್ಣುವರ್ಧನ್ ಅವರಿಂದ ಸಹಾಯ ಪಡೆದ ಕೆಲವರು ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ಹೊರಜಗತ್ತಿಗೆ ಈ ಸಂಗತಿ ಹೇಳಿದ್ದಾರೆ. ಇಲ್ಲಂತೂ ಸ್ವತಃ ಅವರ ಮಗಳೇ ಹೇಳಿದ್ದಾರೆ. ನಟ ವಿಷ್ಣುವರ್ಧನ್ ಅವರಿಂದ ಸಹಾಯ ಪಡೆದು ಬದುಕನ್ನು ಚೆನ್ನಾಗಿ ಕಟ್ಟಿಕೊಂಡ ಅದೆಷ್ಟೋ ಮಂದಿ ಇಂದಿಗೂ ಇದ್ದಾರೆ.