ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬದುಕು ಅನೇಕರಿಗೆ ಸ್ಫೂರ್ತಿ. ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದ ಅವರು ನಿಜ ಜೀವನದಲ್ಲಿ ಸಾಕಷ್ಟು ನೋವು, ಅವಮಾನ ಮತ್ತು ಸವಾಲುಗಳನ್ನು ಎದುರಿಸಿದ್ದರು. ಮರೆಯಲಾಗದ ಘಟನೆಗಳನ್ನು ಮಗಳು ಕೀರ್ತಿ ವಿಷ್ಣುವರ್ಧನ್ ಭಾವುಕವಾಗಿ ಹಂಚಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಬದುಕು ಅನೇಕರಿಗೆ ಸ್ಫೂರ್ತಿ. ಸಿನಿಮಾಗಳಲ್ಲಿ ನಾಯಕನಾಗಿ ಮಿಂಚಿದ್ದ ಅವರು ನಿಜ ಜೀವನದಲ್ಲಿ ಸಾಕಷ್ಟು ನೋವು, ಅವಮಾನ ಮತ್ತು ಸವಾಲುಗಳನ್ನು ಎದುರಿಸಿದ್ದರು. ಅವರ ಕಷ್ಟದ ದಿನಗಳಲ್ಲಿ ಬಹುತೇಕ ಯಾರೂ ಬೆಂಬಲಕ್ಕೆ ನಿಲ್ಲಲಿಲ್ಲ. ಆದರೆ ಪತ್ನಿ ಭಾರತಿ ವಿಷ್ಣುವರ್ಧನ್ ಮಾತ್ರ ಕೊನೆಯವರೆಗೂ ಅವರ ಬೆನ್ನಿಗೆ ನಿಂತಿದ್ದರು. ಇದೀಗ ತಂದೆಯ ಬದುಕಿನ ಹಲವು ಮರೆಯಲಾಗದ ಘಟನೆಗಳನ್ನು ಕಲಾಮಾಧ್ಯಮದೊಂದಿಗೆ ಅವರ ಮಗಳು ಕೀರ್ತಿ ವಿಷ್ಣುವರ್ಧನ್ ಭಾವುಕವಾಗಿ ಹಂಚಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಕೀರ್ತಿ ವಿಷ್ಣುವರ್ಧನ್, ತಮ್ಮ ತಂದೆಯ ವ್ಯಕ್ತಿತ್ವ, ಅವರ ಜೀವನದ ಹೋರಾಟ, ಚಿತ್ರರಂಗದಲ್ಲಿ ಎದುರಿಸಿದ ಸಂಕಷ್ಟಗಳು ಮತ್ತು ತಾಯಿ ಭಾರತಿ ಅವರು ನೀಡಿದ ಧೈರ್ಯದ ಬಗ್ಗೆ ಮಾತನಾಡಿದ್ದಾರೆ. ಅಪ್ಪ ತುಂಬಾ ಮೃದು ಸ್ವಭಾವದವರು, ಕರುಣಾಮಯಿ ಮತ್ತು ಎಲ್ಲರ ಮಾತನ್ನೂ ತಾಳ್ಮೆಯಿಂದ ಕೇಳಿಸಿಕೊಳ್ಳುವ ವ್ಯಕ್ತಿಯಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಅಪ್ಪನಿಗೆ ಚಿತ್ರರಂಗವೇ ಸಾಕಾಗಿತ್ತು, ಸಿನಿಮಾ ಬಿಡುವ ನಿರ್ಧಾರ ಮಾಡಿದ್ದರು
ವಿಷ್ಣುವರ್ಧನ್ ಅವರ ಬದುಕಿನಲ್ಲಿ ಸಾಕಷ್ಟು ಏಳುಬೀಳುಗಳಿದ್ದವು. ಒಂದು ಹಂತದಲ್ಲಿ ಅವರು ಚಿತ್ರರಂಗದಿಂದ ದೂರ ಉಳಿಯುವ ನಿರ್ಧಾರವನ್ನೂ ಮಾಡಿದ್ದರಂತೆ. 'ನಾನು ಇನ್ನು ಮುಂದೆ ಯಾವುದೇ ಸಿನಿಮಾ ಮಾಡುವುದಿಲ್ಲ. ಇದೇ ನನ್ನ ಕೊನೆಯ ಸಿನಿಮಾ' ಎಂದು ಹೇಳಿದ್ದರು. ಈ ನಿರ್ಧಾರವನ್ನು ಪತ್ರದ ಮೂಲಕವೂ ಪ್ರಕಟಿಸಿದ್ದರು ಎಂದು ಕೀರ್ತಿ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.
ಆದರೆ ಆ ಸಂದರ್ಭದಲ್ಲಿ ತಾಯಿ ಭಾರತಿ ವಿಷ್ಣುವರ್ಧನ್ ತೆಗೆದುಕೊಂಡ ನಿರ್ಧಾರ ಮಹತ್ವದ್ದಾಗಿತ್ತು. ಪತ್ರಿಕಾಗೋಷ್ಠಿಯಲ್ಲಿ ಸ್ವತಃ ಮಾತನಾಡಿದ್ದ ಭಾರತಿ ಅವರು, ವಿಷ್ಣುವರ್ಧನ್ ಚಿತ್ರರಂಗ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಪತಿಯ ನಿರ್ಧಾರವನ್ನು ಹಿಂದಕ್ಕೆ ಪಡೆಯುವಂತೆ ಮಾಡಿ, ಅವರ ಪರವಾಗಿ ಗಟ್ಟಿಯಾಗಿ ನಿಂತಿದ್ದರು. 'ಅದು ನನ್ನ ಅಮ್ಮ' ಎಂಬ ಭಾವನಾತ್ಮಕ ಮಾತುಗಳ ಮೂಲಕ ತಾಯಿ ಎಂತಹ ಧೈರ್ಯಶಾಲಿ ವ್ಯಕ್ತಿ ಎಂಬುದನ್ನು ಕೀರ್ತಿ ವಿವರಿಸಿದ್ದಾರೆ.
ಅಪ್ಪ ತುಂಬಾ ಮೃದು ಸ್ವಭಾವದವರು, ಅಮ್ಮ ಮಾತ್ರ ಗಟ್ಟಿಗಿತ್ತಿ
ತಂದೆಯ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಕೀರ್ತಿ, ವಿಷ್ಣುವರ್ಧನ್ ತುಂಬಾ ಮೃದು ಮನಸ್ಸಿನವರು ಮತ್ತು ಒಳ್ಳೆಯ ಹೃದಯ ಹೊಂದಿದ್ದವರು ಎಂದಿದ್ದಾರೆ. ಕೆಲವರು ಅವರ ಒಳ್ಳೆಯತನದ ದುರುಪಯೋಗ ಪಡೆಯುವ ಸಾಧ್ಯತೆಯೂ ಇತ್ತು. ಆದರೆ ತಾಯಿ ಭಾರತಿ ಮಾತ್ರ ತುಂಬಾ ಗಟ್ಟಿಯಾದ ವ್ಯಕ್ತಿತ್ವ ಹೊಂದಿದ್ದರು. ತಂದೆಯ ಕಷ್ಟದ ದಿನಗಳಲ್ಲಿ ಅವರ ಜೊತೆ ನಿಂತು ಧೈರ್ಯ ತುಂಬಿದ್ದರು.
ವಿಷ್ಣುವರ್ಧನ್ ಅವರು ಯಾರೇ ಏನೇ ಹೇಳಿದರೂ ಹೆಚ್ಚು ಪ್ರತಿಕ್ರಿಯಿಸುತ್ತಿರಲಿಲ್ಲ. ತಮ್ಮ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದರು. ಎಷ್ಟೇ ನೋವಾದರೂ ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಬದುಕನ್ನು ಎದುರಿಸುತ್ತಿದ್ದರು ಎಂದು ಕೀರ್ತಿ ಹೇಳಿದ್ದಾರೆ.
24-25ನೇ ವಯಸ್ಸಿನಲ್ಲೇ ಅದೆಷ್ಟು ನೋವು ಅನುಭವಿಸಿದ್ದರು
ತಂದೆ ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದರು ಎಂದು ಕೀರ್ತಿ ನೆನಪಿಸಿಕೊಂಡಿದ್ದಾರೆ. ಸುಮಾರು 24-25ನೇ ವಯಸ್ಸಿನಲ್ಲಿಯೇ ಜೀವನದಲ್ಲಿ ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು. ಅವರು ಅನುಭವಿಸಿದ ನೋವು ಮತ್ತು ಹೋರಾಟವನ್ನು ನೆನಪಿಸಿಕೊಂಡರೆ, ತಾವು ಅನುಭವಿಸಿದ ಕಷ್ಟಗಳು ಏನೂ ಅಲ್ಲ ಎನಿಸುತ್ತದೆ ಎಂದು ಭಾವುಕರಾಗಿದ್ದಾರೆ.
ತಂದೆಯ ಫೋಟೋವನ್ನು ನೋಡಿದಾಗಲೆಲ್ಲ ಅವರು ಅನುಭವಿಸಿದ ನೋವುಗಳ ಬಗ್ಗೆ ಯೋಚಿಸುತ್ತೇನೆ. ನಾವು ಅನುಭವಿಸಿದ ನೋವಿಗಿಂತ ಅಪ್ಪ ಇನ್ನೂ ಹೆಚ್ಚಿನ ನೋವನ್ನು ಅನುಭವಿಸಿದ್ದರು ಎಂಬ ಭಾವನೆ ಬರುತ್ತದೆ ಎಂದು ಕೀರ್ತಿ ಹೇಳಿದ್ದಾರೆ.
ಸುನಾಮಿ ಸಂತ್ರಸ್ತರ ನೆರವಿಗೆ ಧಾವಿಸಿದ್ದ ವಿಷ್ಣುವರ್ಧನ್
ವಿಷ್ಣುವರ್ಧನ್ ಅವರ ಮಾನವೀಯ ಗುಣಗಳನ್ನೂ ಕೀರ್ತಿ ನೆನಪಿಸಿಕೊಂಡಿದ್ದಾರೆ. ಸುನಾಮಿ ಸಂಭವಿಸಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ನೆರವಾಗಲು ಅವರು ತೆರಳಿದ್ದರು. ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರಲ್ಲಿತ್ತು. ವೈಯಕ್ತಿಕ ಬದುಕಿನಲ್ಲಿ ಹಲವು ಒತ್ತಡಗಳಿದ್ದರೂ ಸಮಾಜದ ಬಗ್ಗೆ ಕಾಳಜಿ ಹೊಂದಿದ್ದರು ಎಂದು ತಿಳಿಸಿದ್ದಾರೆ.
ತಂದೆಯ ಕೊನೆಯ ದಿನಗಳ ನೆನಪು ಹಂಚಿಕೊಂಡ ಮಗಳು
ಸಂದರ್ಶನದಲ್ಲಿ ವಿಷ್ಣುವರ್ಧನ್ ಅವರ ಕೊನೆಯ ದಿನಗಳ ಬಗ್ಗೆಯೂ ಕೀರ್ತಿ ಮಾತನಾಡಿದ್ದಾರೆ. ತಂದೆಗೆ ಮಧುಮೇಹದ ಸಮಸ್ಯೆ ಇತ್ತು. ಕಾಲಿನಲ್ಲಿ ಸೋಂಕು ಕಾಣಿಸಿಕೊಂಡಿದ್ದರೂ, ಅದನ್ನು ಹೊರತುಪಡಿಸಿ ಅವರು ಆರೋಗ್ಯವಾಗಿಯೇ ಇದ್ದರು ಎಂದು ತಿಳಿಸಿದ್ದಾರೆ.
ತಂದೆಯ ರಕ್ತದಲ್ಲಿನ ಸಕ್ಕರೆ ಪ್ರಮಾಣ ಪರೀಕ್ಷಿಸುವುದಾಗಿ ಕುಟುಂಬದವರು ಮಾತನಾಡಿಕೊಂಡಿದ್ದರಂತೆ. ರಾತ್ರಿ ಸುಮಾರು 12.30ರಿಂದ 1 ಗಂಟೆಯವರೆಗೆ ಒಟ್ಟಿಗೆ ಸಮಯ ಕಳೆದಿದ್ದರು. ಆದರೆ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಅವರಿಗೆ ಹೃದಯ ಬಡಿತದಲ್ಲಿ ಏರುಪೇರಾಗಿತ್ತು. ಕೇವಲ ಮೂರುರಿಂದ ಐದು ನಿಮಿಷಗಳ ಅವಧಿಯಲ್ಲಿ ಎಲ್ಲವೂ ನಡೆದುಹೋಯಿತು ಎಂದು ಕೀರ್ತಿ ನೋವಿನಿಂದ ನೆನಪಿಸಿಕೊಂಡಿದ್ದಾರೆ.
ತಂದೆಯ ಅಗಲಿಕೆ ಕುಟುಂಬಕ್ಕೆ ದೊಡ್ಡ ಆಘಾತವಾಗಿತ್ತು. ಅವರ ಜೀವನದ ಒತ್ತಡಗಳು, ಮಧುಮೇಹ ಮತ್ತು ಆರೋಗ್ಯದ ಏರುಪೇರುಗಳ ಬಗ್ಗೆಯೂ ಸಂದರ್ಶನದಲ್ಲಿ ಪ್ರಸ್ತಾಪಿಸಿದ್ದಾರೆ.
ಅಪ್ಪನಂತೆ ಬದುಕುವುದು ಸುಲಭವಲ್ಲ!
ವಿಷ್ಣುವರ್ಧನ್ ಅವರು ಕುಟುಂಬದ ಪಾಲಿಗೆ ಕೇವಲ ತಂದೆಯಾಗಿರಲಿಲ್ಲ. ಎರಡನೇ ತಂದೆಯಂತೆ ಪ್ರೀತಿಸುತ್ತಿದ್ದರು, ಕಾಳಜಿ ವಹಿಸುತ್ತಿದ್ದರು ಮತ್ತು ಮಕ್ಕಳನ್ನು ರಕ್ಷಿಸುತ್ತಿದ್ದರು ಎಂದು ಕೀರ್ತಿ ನೆನಪಿಸಿಕೊಂಡಿದ್ದಾರೆ. ಕುಟುಂಬದೊಂದಿಗೆ ಅವರು ಕಳೆದ ಕ್ಷಣಗಳು ಇಂದಿಗೂ ಮರೆಯಲಾಗದ ನೆನಪುಗಳಾಗಿವೆ.












