ರಾಜ್, ದಿಲೀಪ್ ಸೇರಿ ಪ್ರಮುಖ ಹೀರೋಗಳಿಗೆ ನಾಯಕಿಯಾಗಿ ಮಿಂಚಿದ ನಟಿ ಮೃತಪಟ್ಟ 6 ವರ್ಷ ಬಳಿಕ ಆಕೆಯ ಆಸ್ತಿಗಾಗಿ ಇದೀಗ ಬಡಿದಾಟ ಶುರುವಾಗಿದೆ. ದತ್ತು ಪುತ್ರ ಈ ಕುರಿತು ಕೋರ್ಟ್ ಮೆಟ್ಟಿಲೇರಿದ್ದು, ಇಡೀ ಪ್ರಕರಣ ಹೊಸ ತಿರುವು ಪಡೆದಿದೆ.
ಮುಂಬೈ (ನ.16) ನಟಿ ಹೆಸರಿನಲ್ಲಿರುವ ಎರಡು ಫ್ಲ್ಯಾಟ್, ಎಸ್ಬಿಐ ಸೇರಿ ಇತರ ಬ್ಯಾಂಕ್ನಲ್ಲಿರುವ 1.77 ಕೋಟಿ ರೂಪಾಯಿ ಫಿಕ್ಸೆಡ್ ಡೆಪಾಸಿಟ್, ಚಿನ್ನಾಭರಣ, ಕಾರು ಸೇರಿದಂತೆ 20 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಗಾಗಿ ಜಗಳ ತೀವ್ರಗೊಂಡಿದೆ. ಹಿರಿಯ ನಟಿಯನ್ನು ನೋಡಿಕೊಂಡ ಕುಟುಂಬ ಹಾಗೂ ನಟಿಯ ದತ್ತು ಪುತ್ರನ ಕುಟುಂಬದ ನಡುವೆ ಆಸ್ತಿ ಹೋರಾಟ ತೀವ್ರಗೊಂಡಿದ್ದು, ಹೈಕೋರ್ಟ್ ಮೆಟ್ಟಿಲೇರಿದೆ. ಹೌದು ಖ್ಯಾತ ನಟಿ ನಿಮ್ಮಿಯ ಆಸ್ತಿ ಇದೀಗ ವಿವಾದ ಕೇಂದ್ರ ಬಿಂದುವಾಗಿದೆ. ಕೋಟಿ ಕೋಟಿ ರೂಪಾಯಿ ಆಸ್ತಿಗಾಗಿ ಬಡಿದಾಟಗಳು ಹೆಚ್ಚಾಗಿದೆ.
ಬಾಲಿವುಡ್ನ ನಿಮ್ಮಿ ಆಸ್ತಿ ವಿವಾದ
ಬಾಲಿವುಡ್ನ ಹಿರಿಯ ನಟಿ ನಿಮ್ಮಿ ಸೂಪರ್ ಹಿಟ್ ಸಿನಿಮಾ ನೀಡಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ರಾಜ್ ಕಪೂರ್, ದಿಲೀಪ್ ಕುಮಾರ್ ಸೇರಿದಂತೆ ಬಾಲಿವುಡ್ನ ಸೂಪರ್ ಸ್ಟಾರ್ಗಳಿಗೆ ನಾಯಕಿಯಾಗಿ ಮಿಂಚಿದ ನಿಮ್ಮಿ 2020ರಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾಗಿದ್ದರು. ನಟಿ ನಿಮ್ಮಿಯ ಮೂಲ ಹೆಸರು ನವಾಬ್ ಬಾನೋ. ನಿಮ್ಮಿ ಎಂದೇ ಖ್ಯಾತಿ ಗೊಂಡಿರುವ ನವಾಬ್ ಬಾನೋ ಕೋಟಿ ಕೋಟಿ ರೂಪಾಯಿ ಆಸ್ತಿ ವಿವಾದದ ಕೇಂದ್ರಬಿಂದುವಾಗಿದೆ.
ಎರಡು ಮನೆ, ಫಿಕ್ಸೆಡ್ ಡೆಪಾಸಿಟ್, ಚಿನ್ನಾಭರಣ
ಮುಂಬೈನ ಪ್ರತಿಷ್ಠಿತ ಜುಹು ತಾರಾ ರಸ್ತೆಯಲ್ಲಿರುವ ನೇಹಾ ಅಪಾರ್ಟ್ಮೆಂಟ್ನಲ್ಲಿ ಎರಡು ಫ್ಲ್ಯಾಟ್ ಹೊಂದಿದ್ದಾರೆ. ಪ್ರತಿ ಫ್ಲ್ಯಾಟ್ ಬೆಲೆ 7 ರಿಂದ 8 ಕೋಟಿ ರೂಪಾಯಿ. ಇನ್ನು ಎಸ್ಬಿಐ ಹಾಗೂ ಸಾರಸ್ವತ್ ಬ್ಯಾಂಕ್ನಲ್ಲಿ 1.77 ಕೋಟಿ ರೂಪಾಯಿ ಮೊತ್ತದ ಫಿಕ್ಸೆಡ್ ಡೆಪಾಸಿಟ್ ಮೊತ್ತವಿದೆ. ಇನ್ನು ಚಿನ್ನಾಭರಣ ಹಾಗೂ ಒಂದು ಕಾರು ನಿಮ್ಮಿಯ ಆಸ್ತಿ. ಈ ಪೈಕಿ ಕಾರನ್ನು ನಿಮ್ಮಿ ಕೇರ್ಟೇಕರ್ ಈಗಾಗಲೇ ಮಾರಾಟ ಮಾಡಿದ್ದಾರೆ. ನಿಮ್ಮಿ ಆಸ್ತಿಯ ಒಟ್ಟು ಮೌಲ್ಯ 20 ಕೋಟಿ ರೂಪಾಯಿಗೂ ಅಧಿಕ.
ವಿವಾದ ಯಾಕೆ?
ನಟಿ ನಿಮ್ಮಿ ಅವರ ದತ್ತು ಪುತ್ರ ಸೈಯದ್ ಪರ್ವೇಜ್ ಕೂಡ ನಿಧನರಾಗಿದ್ದಾರೆ. ಇದೀಗ ಪರ್ವೇಜ್ ಪತ್ನಿ ಸಲ್ಮಾ ನೆಲ್ಡಿ ಪರ್ವೀನ್ ಅವರಿಂದ ಪವರ್ ಆಫ್ ಅಟಾರ್ನಿ ಪಡೆದಿರುವ ಆಪ್ತ ಸಂಬಂಧಿ ಯೂನಸ್ ಸಲೀಂ ದುರಾನಿ ದೂರು ಸಲ್ಲಿಸಿದ್ದಾರೆ. ನಿಮ್ಮಿ ಅವರ ಅಂತಿಮ ದಿನಗಳಲ್ಲಿ ಅಸ್ರಾರ್ ಅಹಮ್ಮದ್ ಶೇಕ್ ನೋಡಿಕೊಂಡಿದ್ದರು. ಕೇರ್ ಟೇಕರ್ ಆಗಿದ್ದ ಅಸ್ರಾರ್ ಅಹಮ್ಮದ್ ಶೇಕ್ ನಿಮ್ಮಿ ಆಸ್ತಿ ವಿಲ್ ಸೇರಿದಂತೆ ಇತರ ದಾಖಲೆ ಮುಚ್ಚಿಟ್ಟಿದ್ದಾರೆ ಎಂದು ದತ್ತು ಪುತ್ರನ ಕುಟುಂಬ ಆರೋಪಿಸಿದೆ. ಆಸ್ತಿ ವಿಲ್ನಲ್ಲಿ ಸಂಪೂರ್ಣ ಆಸ್ತಿ ಸೈಯದ್ ಪರ್ವೇಜ್ಗೆ ಸೇರಿದ್ದು ಎಂದು ಬರೆಯಲಾಗಿದೆ ಎಂದು ಕುಟುಂಬ ಆರೋಪಿಸಿದೆ.
ಅಂತಿಮ ದಿನಗಳಲ್ಲಿದ್ದ ಅಸ್ರಾರ್ ಅಹಮ್ಮದ್ ಶೇಕ್ ನಿಮ್ಮಿ ಜೊತೆ ಜಾಯಿಂಟ್ ಅಕೌಂಟ್ ಮಾಡಿಕೊಂಡು ಫಿಕ್ಸೆಡ್ ಡೆಪಾಸಿಟ್ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ. ನಿಮ್ಮಿಯ ಕಾರು ಮಾರಾಟ ಮಾಡಿ ಈ ಹಣವನ್ನು ಬಳಸಿಕೊಂಡಿದ್ದಾರೆ. ಆದರೆ ನಿಯಮದ ಪ್ರಕಾರ ಹಾಗೂ ನಿಮ್ಮಿ ಆಸೆಯಂತೆ ಈ ಎಲ್ಲಾ ಆಸ್ತಿ ದತ್ತು ಪುತ್ರ ಪರ್ವೇಜ್ ಹಾಗೂ ಅವರ ಕುಟುಂಬಕ್ಕೆ ಸೇರಬೇಕು ಎಂದು ಕುಟಂಬ ಬಾಂಬೈ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.ಅರ್ಜಿ ಸಲ್ಲಿಕೆ ಬೆನ್ನಲ್ಲೇ ಅಸ್ರಾರ್ ಕುಟುಂಬ ಫ್ಲ್ಯಾಟ್ ಮಾರಾಟ ಮಾಡಿ ಮೊತ್ತವನ್ನು ಸಮನಾಗಿ ಹಂಚಿಕೊಳ್ಳುವ ಸಂಧಾನ ಸೂತ್ರ ಮುಂದಿಟ್ಟಿತ್ತು. ಆದರೆ ಈ ಸಂಧಾನ ಸೂತ್ರವನ್ನು ನಿಮ್ಮಿ ದತ್ತು ಪುತ್ರನ ಕುಟುಂಬ ನಿರಾಕರಿಸಿದೆ. ಇದೀಗ ಕೇರ್ಟೇಕರ್ ಅಸ್ರಾರ್ ಹಾಗೂ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಮ್ಮಿ ಬಾಲಿವುಡ್ನ ಬರ್ಸಾತ್, ಆನ್, ಉಡಾನ್ ಖಟೋಲಾ, ಮೇರೆ ಮೆಹಬೂಬ್ ಸೇರಿದಂತೆ ಹಲವು ಬ್ಲಾಕ್ ಬಸ್ಟರ್ ಸಿನಿಮಾದಲ್ಲಿ ನಾಯಕಿಯಾಗಿದ್ದರು. ರಾಜ್ ಕಪೂರ್ ಹಾಗೂ ದಿಲೀಪ್ ಕುಮಾರ್ ಅವರ ಹಲವು ಸಿನಿಮಾಮಗಳಲ್ಲಿ ನಿಮ್ಮಿ ನಾಯಕಿಯಾಗಿದ್ದರು.














