ಅದ್ಬುತ ನಾಟಕ, ಸುರೇಂದ್ರನಾಥ್ ಕಾಂತ ಮತ್ತು ಕಾಂತ ಬಗ್ಗೆ ಜೋಗಿ ಮಾತು
ಸುರೇಂದ್ರನಾಥ್ ಯಾನೆ ಸೂರಿ ಬರೆದು ನಿರ್ದೇಶಿಸಿದ ಕಾಂತ ಮತ್ತು ಕಾಂತ ನಾಟಕ ಹಿತವಾದ ಅಚ್ಚರಿ. ಇಬ್ಬರು ನಟರ ನಡುವಿನ ಮೆಚ್ಚುಗೆ, ಅಸೂಯೆ, ಅಸಹನೆ ಮತ್ತು ಗೌರವಾದರಗಳನ್ನು ಇದಕ್ಕಿಂತ ಸೊಗಸಾಗಿ ಹಿಡಿಯುವುದು ಕಷ್ಟ.
ಜೋಗಿ
ಸೂರಿಯ ತಮಾಷೆ ಮತ್ತು ವಿಷಾದ ಬೆರೆತ ಭಾಷೆ ಈ ನಾಟಕವನ್ನು ಮತ್ತಷ್ಟು ಹುರಿಗೊಳಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ನಾಟಕ ಪ್ರಕಾರದ ಸೂತ್ರಗಳನ್ನೆಲ್ಲ ಧಿಕ್ಕರಿಸಿ ಕಟ್ಟಿದಂಥ ನಾಟಕ. ಇಲ್ಲಿ ಪಾತ್ರಧಾರಿಗಳು ನಿಜರೂಪದಲ್ಲಿ, ಪಾತ್ರಗಳಾಗಿ, ಪಾತ್ರದೊಳಗಿನ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತಾರೆ.
ನನಗೆ ಸಿಹಿಕಹಿ ಚಂದ್ರು ಅಷ್ಟು ಅದ್ಭುತ ನಟ ಎಂದು ಗೊತ್ತಿರಲಿಲ್ಲ. ಮುಖ್ಯಮಂತ್ರಿ ಚಂದ್ರು ತಮಾಷೆಯಲ್ಲೇ ದಕ್ಕುವವರು ಅಂದುಕೊಂಡಿದ್ದೆ. ಇಬ್ಬರೂ ತಮ್ಮ ಪ್ರತಿಭೆಯ ಸೆಲೆ ಬೇರೆಲ್ಲೋ ಇದೆ. ನೀವು ಇಲ್ಲೀತನಕ ನೋಡಿರುವುದು ಬರೀ ಸೊನ್ನೆ ಅಂತ ತೋರಿಸಿಕೊಟ್ಟರು.
ಈ ಇಬ್ಬರೂ ಚಿತ್ರರಂಗ, ರಂಗಭೂಮಿಯಲ್ಲಿ ದಶಕಗಳನ್ನೇ ಕಳೆದವರು. ಅಂಥವರು ಒಂದಾಗಿ ನಾಟಕ ಮಾಡುವುದು ಅಂದರೆ ಅದೊಂದು ಚಾರಿತ್ರಿಕ ಘಟನೆ ಕೂಡ. ಬಹುಶಃ ಮತ್ತೊಮ್ಮೆ ಇಂಥದ್ದೊಂದು ಸಂಗತಿ ಘಟಿಸಲಿಕ್ಕಿಲ್ಲ. ಹೀಗಾಗಿ ಈ ನಾಟಕ ನೋಡುವುದಕ್ಕೆ ನಾಟಕವನ್ನೂ ಮೀರಿದ ಕಾರಣಗಳೂ ಇವೆ.
ಆದರೆ....
ರಂಗಶಂಕರದಲ್ಲಿ ನಾಟಕ ನೋಡುವುದು ಅಂದರೆ ನರಕ ಯಾತನೆ. ನಿಮಗೆ ಎರಡು ಕೋವಿಡ್ ಲಸಿಕೆ ಆಗಿರುವುದಕ್ಕೆ ಪುರಾವೆ ತೋರಿಸಿ ಅಂತ ಕೇಳುತ್ತಾರೆ. ತೋರಿಸಿದರೆ ಟಿಕೆಟ್ಟಿನ ಮೇಲೆ ಸೀಲು ಒತ್ತುತ್ತಾರೆ. ಫೋನು ತರದ ಹಿರಿಯರು, ಒಂದೇ ಲಸಿಕೆ ಹಾಕಿಸಿಕೊಂಡವರಿಗೆ ಟಿಕೆಟ್ ಕೊಂಡರೂ ಒಳಗೆ ಪ್ರವೇಶವಿಲ್ಲ. ಹಾಗಂತ ಕತ್ತಿನಪಟ್ಟಿ ಹಿಡಿದು ಹೇಳುವಂತೆ ಹೇಳುತ್ತಾರೆ. ಕನಿಷ್ಟ ಸೌಜನ್ಯವೂ ಅಲ್ಲಿಯ ಸಿಬ್ಬಂದಿಗಳಿಗೆ ಇಲ್ಲ.
Lata Mangeshkar 4 ಪೀಳಿಗೆಗೆ ಗ್ಲೋಬಲ್ ಸಿಂಗರ್: ಲೇಖಕ ಜೋಗಿ(ಅಂದಹಾಗೆ, ಇದು ಸೋಗಲಾಡಿತನ. ಯಾಕೆಂದರೆ ನೀವು ತೋರಿಸುವ ಸರ್ಟಿಫಿಕೇಟು ನಿಮ್ಮದೇ ಅಂತ ಅವರೇನೂ ಖಾತ್ರಿ ಮಾಡಿಕೊಳ್ಳುವುದಿಲ್ಲ. ಯಾರ ಸರ್ಟಿಫಿಕೇಟು ತೋರಿಸಿದರೂ ಸೀಲು ಒತ್ತುತ್ತಾರೆ) ಮೆಟ್ಟಿಲು ಹತ್ತುವ ಮೊದಲು ಒಬ್ಬಾತ ಬಂದು ನಿಮ್ಮ ನಂಬರ್ ಕೊಡಿ ಅಂತ ನೂರೆಂಟು ವಿವರ ಕೇಳಿ ಬರೆದುಕೊಳ್ಳುತ್ತಾನೆ. (ನೀವು ಸುಳ್ಳು ನಂಬರ್ ಕೊಟ್ಟರೂ ನಡೆಯುತ್ತದೆ. ಇದೂ ಅಪ್ಪಟ ಸೋಗಲಾಡಿತನ) ಮೆಟ್ಟಿಲ ಹತ್ತಿರ ನಿಂತ ಹಿರಿಯರೊಬ್ಬರು, ಒಂದೊಂದೇ ಟಿಕೆಟ್ ಹಿಡಕೊಂಡು ಹತ್ತಿ. ಮೇಲೆ ಹೋಗಿ ಯಾರಿಗೂ ಕಾಯಬೇಡಿ. ಮತ್ತೊಬ್ಬರ ಟಿಕೆಟ್ ಜತೆಗೆ ತೆಗೆದುಕೊಂಡು ಹೋಗಬೇಡಿ ಅಂತ ಕಟ್ಟುಪಾಡು ಹಾಕುತ್ತಾರೆ.
ಒಳಗೆ ಹೋದರೆ ಅಲ್ಲೊಬ್ಬರು ನಿಮ್ಮನ್ನು ಗುರಾಯಿಸುತ್ತಾ ಮಾಸ್ಕ್ ಮೂಗಿನ ಕೆಳಗಿದೆ. ಸರಿಯಾಗಿ ಹಾಕಿಕೊಳ್ಳಿ ಅಂತ ಮಕ್ಕಳನ್ನು ಗದರಿಸುವ ಧಾಟಿಯಲ್ಲಿ ಗದರಿಸುತ್ತಾನೆ. ಅದು ಬೌನ್ಸರ್ ಹೇಳುವ ಧಾಟಿಯಲ್ಲಿರುತ್ತದೆಯೇ ಹೊರತು, ಅದರಲ್ಲಿ ವಿನಂತಿಯ ನೆರಳೂ ಇರುವುದಿಲ್ಲ.
ಒಂದು ಒಳ್ಳೆಯ ನಾಟಕದ ಅನುಭವವನ್ನು ಕೊಲ್ಲಲಿಕ್ಕೆ ರಂಗಶಂಕರದ ಇಂಥ ಪ್ರಭೃತಿಗಳೇ ಸಾಕು. ಒಳ್ಳೆಯ ರಂಗಮಂದಿರ ಕಟ್ಟಿದರೆ ಸಾಲದು, ಪ್ರೇಕ್ಷಕರನ್ನು ಅಕ್ಕರೆಯಿಂದ ಕಾಣಬೇಕು ಅನ್ನುವುದು ಮೂಲಭೂತ ಸೌಜನ್ಯ. cultural arrogance spoils a good play.