Lata Mangeshkar 4 ಪೀಳಿಗೆಗೆ ಗ್ಲೋಬಲ್‌ ಸಿಂಗರ್‌: ಲೇಖಕ ಜೋಗಿ

ಲತಾ ಹಾಡಿದ ಒಂದು ಗೀತೆ ಅವರ ವ್ಯಕ್ತಿತ್ವವನ್ನೇ ಕಟ್ಟಿಕೊಡುವಂತಿದೆ; ನಾಮ್‌ ಗೂಮ್‌ ಜಾಯೇಗಾ, ಚೆಹರಾ ಯೇ ಬದಲ್‌ ಜಾಯೇಗಾ, ಮೇರಿ ಆವಾಜ್‌ ಹೀ ಪೆಹಚಾನ್‌ ಹೈ ಗರ್‌ ಯಾದ್‌ ರಹೇ. ಹೆಸರು, ಮುಖ ಬದಲಾಗಬಹುದು. ಆದರೆ ಸ್ವರ ಮಾತ್ರ ಅದೇ. 

Kannada Writer Jogi Pays Last Tributes to Lata Mangeshkar gvd

ಜೋಗಿ, ಕನ್ನಡಪ್ರಭ ಪುರವಣಿ ಸಂಪಾದಕ

ನಾವೆಂದೂ ಲತಾ ಮಂಗೇಶ್ಕರ್‌ ಅವರನ್ನು ಬಹುವಚನದಲ್ಲಿ ಕರೆದದ್ದಿಲ್ಲ. ಅವರು ಲತಾ ದೀದಿ ಆಗಿದ್ದು ತೀರಾ ಇತ್ತೀಚೆಗೆ. ಲತಾ ಮಂಗೇಶ್ಕರ್‌ ಅನ್ನುವುದು ಹೊರಗಿರುವ ಮತ್ಯಾರದೋ ಹೆಸರಾಗಿರದೆ, ನಮ್ಮ ಅಂತರಂಗದ ಒಂದು ಭಾಗವೇ ಎಂದು ಅವರ ಹಾಡುಗಳನ್ನು ಕೇಳುತ್ತಿದ್ದಾಗಲೆಲ್ಲ ಅನ್ನಿಸುತ್ತಿತ್ತು. ಅವರು ಹಾಡುತ್ತಿದ್ದದ್ದು ನಮಗಾಗಿ, ಹಾಡಿದ್ದು ನಮ್ಮ ಹಾಡುಗಳನ್ನು, ಅವರ ಹಾಡುಗಳ ಮೂಲಕವೇ ನಾವು ನಮ್ಮ ಪ್ರೀತಿ, ದೇಶಭಕ್ತಿ, ಸೋದರಪ್ರೇಮ, ಗೆಳೆತನ, ವಿರಹ ಮತ್ತು ಭಗ್ನಪ್ರೇಮದ ಕ್ಷಣಗಳನ್ನು ಅನುಭವಿಸಿದ್ದು. ಅಷ್ಟೇ ಅಲ್ಲ, ಅಪ್ರತಿಮ ಕಂಠಸಿರಿಯ ಹಾಡೊಂದು ಕೇಳಿಬರುತ್ತಿದ್ದರೆ ಅದು ಲತಾ ಮಂಗೇಶ್ಕರ್‌ ದನಿ ಅಂತ ಹಿಂದಿ ಅರ್ಥವಾಗದವರು ಕೂಡ ಥಟ್ಟನೆ ಹೇಳಿಬಿಡುತ್ತಿದ್ದರು. ಭಾಷೆ ಗೊತ್ತಿಲ್ಲದವರಿಗೂ ಕೂಡ ಹಾಡಿನ ಭಾವವನ್ನು ದಾಟಿಸಬಲ್ಲ ಮಾಂತ್ರಿಕ ಸ್ವರ ಅವರದ್ದಾಗಿತ್ತು.

ಲತಾ ಹಾಡಿದ ಒಂದು ಗೀತೆ ಅವರ ವ್ಯಕ್ತಿತ್ವವನ್ನೇ ಕಟ್ಟಿಕೊಡುವಂತಿದೆ; ನಾಮ್‌ ಗೂಮ್‌ ಜಾಯೇಗಾ, ಚೆಹರಾ ಯೇ ಬದಲ್‌ ಜಾಯೇಗಾ, ಮೇರಿ ಆವಾಜ್‌ ಹೀ ಪೆಹಚಾನ್‌ ಹೈ ಗರ್‌ ಯಾದ್‌ ರಹೇ. ಹೆಸರು, ಮುಖ ಬದಲಾಗಬಹುದು. ಆದರೆ ಸ್ವರ ಮಾತ್ರ ಅದೇ. ಲತಾ ಬರಬರುತ್ತಾ ಪ್ರಬುದ್ಧರಾದರು, ಹಿರಿಯರಾದರು. ಆದರೆ ಆ ಸ್ವರಮಾಧುರ್ಯ ಬದಲಾಗಲಿಲ್ಲ. ಇನಿದನಿಗೆ ಕಾಲದ ಸೋಂಕಿಲ್ಲ, ಧ್ವನಿಯ ಬಳುಕಿಗೆ, ಆಲಾಪದ ಪಲುಕಿಗೆ ವಯಸ್ಸಿನ ಹಂಗು ಇರಲೇ ಇಲ್ಲ. ಕಣ್ಮುಚ್ಚಿಕೊಂಡು ಕೇಳುತ್ತಿದ್ದರೆ ಲತಾ, ಅದೇ ಎರಡು ಜಡೆಯ, ಬೆರಗುಗಣ್ಣಿನ, ಆಗಷ್ಟೇ ಮೊದಲ ಹಾಡಿಗೆ ದನಿಯಾದ ಪುಟ್ಟಹುಡುಗಿಯಂತೆ, ಮನಸ್ಸನ್ನು ಮುಟ್ಟುತ್ತಿದ್ದರು.

RIP Lata Mangeshkar ಬೀದರ್‌ನ ಮಾಣಿಕಪ್ರಭು ಸಂಸ್ಥಾನ ಜತೆ ಲತಾ ಮಂಗೇಶ್ಕರ್ ನಂಟು!

ಲತಾ ದೀದಿ ಹಾಡಲು ಬಂದಾಗ ಹಿಂದಿ ಚಿತ್ರರಂಗದಲ್ಲಿ ಶಂಷಾದ್‌ ಬೇಗಮ್‌ ಮತ್ತು ನೂರ್‌ಜಹಾನ್‌ ಹೆಸರಾಗಿದ್ದರು. ಅವರ ವಿಶಿಷ್ಟಸ್ವರವಿನ್ಯಾಸಕ್ಕೆ ಚಿತ್ರರಸಿಕರು ಮರುಳಾಗಿದ್ದರು. ಸಪೂರ ದನಿಯ ಲತಾ ಹಾಡಿಗೆ ತಕ್ಷಣ ಮನ್ನಣೆ ಸಿಗಲಿಲ್ಲ ಎಂಬುದು ಅವರ ಕುರಿತು ಜನಜನಿತ ದಂತಕತೆ. ಆದರೆ ಒಂದೇ ಒಂದು ದಶಕದ ಒಳಗೆ ಆ ತೆಳುವಾದ ಸ್ವರ ಎಲ್ಲರ ಮೆಚ್ಚಿನ ದನಿಯಾಗಿ ಮಾರ್ಪಟ್ಟಿತು. ಲತಾ ಅವರ ತಂದೆ ದೀನಾನಾಥ್‌ ಉಸುರಿದ ಆ ಮಾತು, ನಮ್ಮ ಮನೆಯಲ್ಲೇ ಒಬ್ಬಳು ಗಾಯಕಿ ಇದ್ದಾಳೆ ಎಂಬುದು ನಿಜವಾಯಿತು. 1942ರಲ್ಲಿ ಮೊದಲ ಗೀತೆ ಹಾಡಿದ ಲತಾ 2022ರ ತನಕದ ಎಂಬತ್ತು ವರುಷಗಳಲ್ಲಿ ಏನಿಲ್ಲವೆಂದರೂ ನಾಲ್ಕು ತಲೆಮಾರುಗಳ ನಟಿಯರಿಗೆ ಹಾಡಿದ್ದಾರೆ. ನಾಲ್ಕು ತಲೆಮಾರುಗಳ ಚಿತ್ರರಸಿಕರ ತುಟಿಯಲ್ಲಿ ಹಾಡಾಗಿ ನೆಲೆಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ವಿಷಾದ ಗೀತೆಗಳ ಮುಕೇಶ್‌, ಉಲ್ಲಾಸದ ಗೀತೆಗಳ ಕಿಶೋರ್‌, ಮೆಲಂಕಲಿ ಹಾಡುಗಳ ಮಹಮ್ಮದ್‌ ರಫಿ- ಸೇರಿದಂತೆ ಎಲ್ಲ ಗಾಯಕರ ಜತೆಗೂ ಯುಗಳ ಗೀತೆ ಹಾಡಿದ್ದಾರೆ. ಅವೆಲ್ಲವೂ ಅಮರ ಗೀತೆಗಳೇ.

ಆ ಕಾಲಕ್ಕೇ ಬಾಲಿವುಡ್‌ ಕೊಂಚ ಅಹಮ್ಮಿನ ಚಿತ್ರರಂಗವೇ ಆಗಿತ್ತು. ದಕ್ಷಿಣ ಭಾರತೀಯ ಚಿತ್ರರಂಗದ ಕುರಿತು ಅದಕ್ಕಿದ್ದ ಗೌರವ ಅಷ್ಟಕ್ಕಷ್ಟೆ. ಆದರೆ ಕಲಾವಿದರು ಭಾಷೆಯನ್ನು ಮೀರಿ ತಮ್ಮನ್ನು ಕೊಟ್ಟುಕೊಳ್ಳುತ್ತಿದ್ದರು ಅನ್ನುವುದಕ್ಕೆ ಸಾಕ್ಷಿಯಾದವರ ಪಟ್ಟಿಯಲ್ಲಿ ಲತಾ ಮಂಗೇಶ್ಕರ್‌ ಇದ್ದಾರೆ. ಕನ್ನಡದ ಸಂಗೊಳ್ಳಿ ರಾಯಣ್ಣ ಚಿತ್ರಕ್ಕೆ ಅವರನ್ನು ಕರೆದುಕೊಂಡು ಬಂದದ್ದು ಕೊಲ್ಹಾಪುರದ ನಿರ್ಮಾಪಕರು. ಗೀತೆ ಬರೆದವರೂ ಕೊಲ್ಹಾಪುರದವರೇ. ಅದಕ್ಕಾಗಿ ಅವರು ಹಾಡಿದ ಎರಡು ಹಾಡುಗಳು, ತೆಲುಗಿನಲ್ಲಿ, ತಮಿಳಿನಲ್ಲಿ, ಮರಾಠಿಯಲ್ಲಿ, ಬೆಂಗಾಲಿಯಲ್ಲಿ ಅವರು ಹಾಡಿದ ಹಾಡುಗಳು ಅವರನ್ನು ಆ ಕಾಲಕ್ಕೇ ಗ್ಲೋಬಲ್‌ ಸಿಂಗರ್‌ ಮಾಡಿದ್ದವು. ಅವರನ್ನು ಅಕ್ಷರಶಃ ಹಾಗೇ ಕರೆಯುತ್ತಿದ್ದರು.

ಮುಂದಿನ ಜನ್ಮದಲ್ಲಿ ಶಾಸ್ತ್ರೀಯ ಸಂಗೀತಗಾರ್ತಿ ಆಗುವೆ, ಲತಾಜಿ ಬಯಕೆ ನೆನಪಿಸಿದ ಗಂಗೂಬಾಯಿ ಮೊಮ್ಮಗಳು!

ಈಗ ಕ್ರಿಕೆಟ್‌ ಇಡೀ ದೇಶವನ್ನು ಬೆಸೆಯುವ ಹಾಗೆ, ಆ ಕಾಲಕ್ಕೆ ಇಡೀ ರಾಷ್ಟ್ರವನ್ನೇ ಬೆಸೆಯುತ್ತಿದ್ದದ್ದು ಚಿತ್ರಗೀತೆಗಳು. ಒಂದೊಂದು ಕಾಲಘಟ್ಟದಲ್ಲಿ ಆ ತಲೆಮಾರಿನ ಎಲ್ಲ ತರುಣ ತರುಣಿಯರ ರಾಷ್ಟ್ರೀಯ ಪ್ರೇಮಗೀತೆ ಒಂದೇ ಆಗಿರುತ್ತಿತ್ತು. ಅಂಥ ನೂರೆಂಟು ಗೀತೆಗಳಿಗೆ ದನಿಯಾದವರು ಲತಾ ಮಂಗೇಶ್ಕರ್‌. ಅಸಂಖ್ಯಾತ ಹೆಣ್ಮಕ್ಕಳಿಗೆ ಭರವಸೆ, ನಟಿಯರಿಗೆ ಸ್ವರದ ತಾರುಣ್ಯ, ಹುಡುಗರಿಗೆ ಅಮರಪ್ರೇಮದ ಗುಂಗು, ನಡುವಯಸ್ಕರಿಗೆ ಒಂದು ಸೊಗಸಾದ ಸ್ಪಪ್ನಯಾನ, ವೃದ್ಧಾಪ್ಯದಲ್ಲಿ ಹಿತವಾದ ಕನವರಿಕೆ ಕೊಟ್ಟಲತಾ ಅವರ ಗೀತೆಗಳು ಇನ್ನೂ ಐದು ತಲೆಮಾರು ಕಳೆದರೂ ಮುಕ್ಕಾಗದಂಥವು. ಎಲ್ಲವೂ ಬದಲಾಗುತ್ತದೆ. ಆದರೆ ಪ್ರೀತಿ, ವಿರಹ ಮತ್ತು ಲತಾದೀದಿ ಹಾಡಿದ ಗೀತೆಗಳು ಹರೆಯದ ಕನಸುಗಳಲ್ಲಿ ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತವೆ!

Latest Videos
Follow Us:
Download App:
  • android
  • ios